ಅರಿಶಿನ ಸೋಂಕು ನಿವಾರಕ-ಸೌಂದರ್ಯ ಸಾಧನ.ಶತಮಾನಗಳಿಂದ ಅರಿಶಿನ ನಮ್ಮ ದೇಶ ಹೆಚ್ಚಾಗಿ ಬಳಸುವ ಮಸಾಲೆ.ಚರ್ಮದ ಆರೋಗ್ಯ ದೃಷ್ಟಿಯಿಂದ ಅರಿಶಿನ ಬಹಳ ಸಹಾಯಕವಾಗಿದೆ.
ಅರಿಶಿನ ಅಥವಾ ಹಳದಿ, ನಮ್ಮ ದೇಶ ಹೆಚ್ಚಾಗಿ ಬಳಸುವ ಮಸಾಲೆ ಆಹಾರಕ್ಕೆ ರುಚಿ-ಬಣ್ಣ ಬರಲು ಕಾರಣವಾಗುವ ಇದು, ದೇಹ- ಮುಖಗಳಿಗೆ ಅಲಂಕಾರ ವಸ್ತುವೂ ಹೌದು. ಸಾಂಪ್ರದಾಯಿಕ ಭಾರತೀಯ ಮದುವೆ ಸಮಾರಂಭಗಳಲ್ಲಿ, ಅರಿಶಿನ ಧಾರಣೆಯೇ ಒಂದು ಮಹತ್ವದ ಸಮಾರಂಭ. ಮದುವೆ ಸಿದ್ಧತೆಗಾಗಿ, ವಧೂ ಹಾಗೂ ವರರ ದೇಹದ ಮೇಲೆ ಅರಿಶಿನ ಹಚ್ಚುತ್ತಾರೆ.
ಶತಮಾನಗಳಿಂದ ಅರಿಶಿನ ಸೌಂದರ್ಯ ಸಾಧನವಾಗಿದೆ. ಹಿಂದಿನ ಕಾಲದ ಮಹಿಳೆಯರು ಸಾಂಪ್ರದಾಯಿಕ ಸ್ನಾನದ ವಸ್ತುವಾಗಿ ಪ್ರತಿದಿನ ಕೆನ್ನೆ-ಕೈ-ಕಾಲುಗಳಿಗೆ ಅರಿಶಿನ ಹಚ್ಚುತ್ತಿದ್ದರು. ಪೂಜೆ- ಹಬ್ಬ –ಉತ್ಸವ, ಮದುವೆಗಳಲ್ಲಿ ದೇವರಿಗೆ ಅರಿಶಿನ ಕುಂಕುಮ ಹಚ್ಚುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಬಾಗಿನ-ಉಡುಗೊರೆ ಕೊಡುವಾಗ, ಹುಟ್ಟುಹಬ್ಬ -ಉಪನಯನ -ಮದುವೆ ಸಮಾರಂಭಗಳಲ್ಲಿ, ಎಲ್ಲ ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಡುವುದು ಸಾಮಾನ್ಯ. ಈಗಿನ ಆಧುನಿಕ ಜನ ಪ್ರತಿ ನಿತ್ಯ ಮುಖ ಕೈಕಾಲುಗಳಿಗೆ ಅರಿಶಿನ ಹಚ್ಚುವುದನ್ನೇ ಅಲಕ್ಷಿಸಿ, ಮರೆತಿದ್ದಾರೆ.ಅರಿಶಿನ ಆರೋಗ್ಯದ ದೃಷ್ಟಿಯಿಂದ ಸೋಂಕು ನಿವಾರಕ. ಕುಡಿಯುವ ಕಷಾಯದಲ್ಲಿ, ಸಸ್ಯಾಹಾರಿ ಅಡಿಗೆಯಲ್ಲಿ ಒಗ್ಗರಣೆಗೆ, ಅರಿಶಿನ ಬೇಕೇ ಬೇಕು. ಮನೆಯ ಇರುವೆ ಗೂಡಿನಿಂದ ಗೋಡೆಗುಂಟ ಇರುವೆ ಸಾಲು ಓಡಿಸಲು ಅರಿಶಿನ ಬೇಕಾಗುತ್ತದೆ.
ಚರ್ಮದ ಆರೋಗ್ಯಕ್ಕೆ ಅರಿಶಿನ ಸಹಾಯಕ:
1. ಚರ್ಮದ ಸತ್ತ ಕೋಶಗಳನ್ನು ತೊಲಗಿಸಲು ಇದು ಸಾಧನ. ವಯಸ್ಸಾಗುತ್ತಿರುವ ಲಕ್ಷಣಗಳನ್ನು ಸೋಲಿಸಲು ನಿಮಗೆ ನೆರವು ನೀಡುತ್ತದೆ ಎಂಬುದು ಗೊತ್ತೇ? ಕಡಲೆಹಿಟ್ಟು ಹಾಗೂ ಅರಿಶಿನ ಪುಡಿಯನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು, ನೀರು ಸೇರಿಸಿ, ಕಲಸಿ ಕಣಕ ಮಾಡಿಕೊಳ್ಳಿ. ಹಸಿಹಾಲು ಅಥವಾ ಮೊಸರಿನಲ್ಲೂ ಈ ಪೇಸ್ಟ್ ಮಾಡಬಹುದು ಇದನ್ನು ನಿಮ್ಮ ದೇಹ ಮುಖದ ಮೇಲೆ ಚೆನ್ನಾಗಿ ಹಚ್ಚಿ. ಅದು ಒಣಗಲು ಬಿಡಿ ನಂತರ ಬೆಚ್ಚನೆ ನೀರಿನಿಂದ ತೊಳೆದುಕೊಳ್ಳಿ, ನಂತರ ಮುಖದ ತುಂಬ ಮೃದುವಾಗಿ ವೃತ್ತಾಕಾರದಲ್ಲಿ ಉಜ್ಜಿ.
2. ಮುಖದ ಮೇಲೆ ನೆರಿಗೆಗಳು: ಹಸಿಹಾಲು ಟಮೋಟೋ ರಸ, ಅಕ್ಕಿಹಿಟ್ಟು ಅರಿಶಿನ ಬೆರಸಿ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಮುಖದ ಮೇಲೆ, ಕೈಕಾಲುಗಳ ಮೇಲೆ ಹಚ್ಚಿ ಒಣಗಲು ಬಿಡಿ. ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮದ ಸತ್ತ ಕೋಶಗಳು ಕಳಚಿ ಬೀಳಲು ಸಹಾಯ ಮಾಡುತ್ತದೆ. ಹಾಗೆಯೇ ಅರಿಶಿನ ಪುಡಿಯನ್ನು ಮಜ್ಜಿಗೆ ಹಾಗೂ ಕಬ್ಬಿನ ಹಾಲಿನಲ್ಲಿ ಬೆರಸಿ ಬಳಸಿ. ಮುಖದ ಸುಕ್ಕುಗಳು, ಗೆರೆಗಳು, ಕಪ್ಪು ವರ್ತುಲಗಳನ್ನು ಇದು ದೂರ ಮಾಡುತ್ತದೆ. ಅರಿಶಿನ -ಜೇನುತುಪ್ಪದ ಕಣಕ ಮುಖದ ಮೇಲೆ ಹಚ್ಚಿದರೆ. ಸತ್ತ ಚರ್ಮದ ಪದರಗಳು ಉದುರಿಹೋಗಲು, ರಂಧ್ರಗಳನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತವೆ.
3. ಕಲೆಗಳು, ಉರಿಯೂತಗಳ ಕಾಳಜಿ ತೆಗೆದುಕೊಳ್ಳುವ ಅರಿಶಿನ, ಕೊಬ್ಬಿನ ಕೋಶಗಳು ಸ್ರವಿಸುವ ಎಣ್ಣೆ ಪ್ರಮಾಣ ಕಡಿಮೆ ಮಾಡುತ್ತದೆ. ಮೈ ಉಜ್ಜುವ ಅರಿಶಿನದ ಕಣಕಕ್ಕೆ ಕೆಲವು ಹನಿ ನೀರು, ನಿಂಬೆರಸ ಹಾಗೂ ಅರಿಶಿನ ಬೆರಸಿ ಆಕಣಕವನ್ನು ಮೊಡವೆಯಿರುವ ಸ್ಥಳಕ್ಕೆ ಹಚ್ಚಿ, 15 ನಿಮಿಷ ಬಿಡಿ ನಂತರ ಮೃದುವಾಗಿ ಉಜ್ಜಿ, ಸ್ವಚ್ಛ ನೀರಿನಿಂದ ಮುಖ ತೊಳೆಯಿರಿ. ಅರಿಶಿನದ ಜೊತೆಗೆ ಶ್ರೀಗಂಧದ ಪುಡಿ ಮಿಶ್ರಣ ಮಾಡಿ, ಮೊಡವೆಯಿಂದ ರಕ್ಷಣೆಗಾಗಿ ಮುಖಕ್ಕೆ ಹಚ್ಚಿ, 10 ನಿಮಿಷ ಒಣಗಲು ಬಿಡಿ ನಂತರ ಅದನ್ನು ತೊಳೆದು ತೆಗೆಯಿರಿ.
4. ಮೊಡವೆ ಕಲೆಗಳನ್ನು ದೂರಮಾಡಲು, ಸ್ವಚ್ಛ ನೀರು ಹಾಗೂ ಅರಿಶಿನ ಬೆರಸಿ ಮಿಶ್ರಣ ಮಾಡಿ ಮುಖದ ಮೇಲೆ ಹಚ್ಚಿ 15 ನಿಮಿಷ ಹಾಗೇ ಬಿಡಿ. ಎಣ್ಣೆ ಸೂಸುವಿಕೆ ನಿಯಂತ್ರಿಸಲು ಶ್ರೀಗಂಧದ ಪುಡಿ, ನೆಲದ ಅರಿಶಿನ ಹಾಗೂ ಕಿತ್ತಳೆ ರಸ ಬೆರಸಿ. ಈ ಮಿಶ್ರಣ ಮುಖಕ್ಕೆ ಹಚ್ಚಿ 10 ನಿಮಿಷಗಳ ನಂತರ ಬೆಚ್ಚನೆಯ ನೀರಿನಲ್ಲಿ ತೊಳೆಯಿರಿ.
5.ಮಹಿಳೆಯ ಹೊಟ್ಟೆಯ ಮೇಲಿನ ಎಳೆಯಲ್ಪಟ್ಟ ಗುರುತುಗಳನ್ನು ಕಡಿಮೆ ಮಾಡಲು, ಕಡಲೆಹಿಟ್ಟು ಹಾಗೂ ಅರಿಶಿನವನ್ನು, ಮೊಸರು ಅಥವಾ ಹಸಿಹಾಲು ಅಥವಾ ನೀರಿನಲ್ಲಿ ಬೆರಸಿ ಹಚ್ಚಿರಿ. ಆಕಸ್ವಿಕವಾಗಿ ಚರ್ಮ ಸುಟ್ಟರೆ, ತಕ್ಷಣ ಪರಿಹಾರಕ್ಕಾಗಿ ಸೋಂಕು ತಡೆಯುವ ಶಕ್ತಿ ಇರುವ ಅರಿಶಿನ ತೆಗೆದುಕೊಳ್ಳಿ. ಇದರೊಂದಿಗೆ ಅಲೋವೆರಾ ದ್ರವ ಸೇರಿಸಿ ಇದನ್ನು ಸುಟ್ಟ ಗಾಯದ ಮೇಲೆ ಹಚ್ಚಿದರೆ ಕ್ರಮೇಣ ಗಾಯ ಮಾಯುತ್ತದೆ.
6. ಮುಖಕ್ಕೆ ಉಜ್ಜುವ ಅಲಂಕಾರ ಸಾಧನವಾಗಿ ಸತ್ತು ಅಥವ ಕಸ್ತೂರಿ ಅರಿಶಿನ ಬೆರೆಸಿದ ಕಡಲೆಹಿಟ್ಟನ್ನು ಬಳಸಬಹುದು. ಇದರಿಂದ ಗದ್ದ ಹಾಗೂ ಮುಖದ ಮೇಲೆ ಬೆಳೆಯುವ ಕೂದಲಿನ ಬೆಳವಣಿಗೆಯನ್ನು ತಡೆಯಬಹುದು. ಒಳ್ಳೆಯ ಪರಿಣಾಮ ಬರಲು ಈ ಕಣಕವನ್ನು ಸತತ ಒಂದು ತಿಂಗಳು ಹಚ್ಚಬೇಕು. ಸತತವಾಗಿ ಸಾಕಷ್ಟು ಕಾಲ ಬಳಸಿದರೆ ಮಾತ್ರ ಮನೆವೈದ್ಯ ಪರಿಣಾಮ ಬೀರುತ್ತದೆ.
7. ಬಿರಿದ ಅಂಗಾಲುಗಳಿಗೆ ಕೊಬ್ಬರಿಎಣ್ಣೆ ಅಥವಾ ಹರಳೆಣ್ಣೆ ಜೊತೆಗೆ ಅರಿಶಿನ ಸೇರಿಸಿ ಬಿರಿದಲ್ಲಿ ಹಚ್ಚಿಕೊಳ್ಳಿ. ಸ್ನಾನಕ್ಕೆ ಹೋಗುವ 15 ನಿಮಿಷ ಮೊದಲು ಇದನ್ನು ಹಚ್ಚಿಕೊಳ್ಳಿ. ಈ ಕೆಲವು ವಿಧಾನಗಳಿಂದ ಅರಿಶಿನದ ಲಾಭ ಚರ್ಮಕ್ಕೆ ಸ್ವಾಭಾವಿಕವಾಗಿ ಸಿಗುತ್ತದೆ.
ಎನ್.ವ್ಹಿ ರಮೇಶ್, ಮೈಸೂರು
ಮೊ: 9845565238