ಡಯಾಬಿಟಿಕ್ ರೆಟಿನೋಪಥಿ ವಿಶ್ವದಲ್ಲಿ ಅಂಧತ್ವಕ್ಕೆ ಕಾರಣವಾಗುತ್ತಿರುವ ಪ್ರಮುಖ ರೋಗವಾಗಿ ಕ್ಷಿಪ್ರವಾಗಿ ಹೊರಹೊಮ್ಮುತ್ತಿದೆ. ರೋಗದ ಬಗ್ಗೆ ಹಾಗೂ ಅದರ ನಿಯಂತ್ರಣದ ಬಗ್ಗೆ ವಿಶ್ವಾದ್ಯಂತ ಜಾಗೃತಿ ಮೂಡಿಸಲಾಗುತ್ತಿದ್ದರೂ ಮಧುಮೇಹ ಮತ್ತು ಅಂಧತ್ವಕ್ಕೆ ಸಂಬಂಧಪಟ್ಟ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸುತ್ತಾರೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಅಂದಾಜು ಮಾಡಿರುವಂತೆ, ಅಂಧತ್ವಕ್ಕೆ ಸಂಬಂಧಪಟ್ಟ ಜಾಗತಿಕ ನಮೂನೆಯಲ್ಲಿ ಡಯಾಬಿಟಿಕ್ ರೆಟಿನೋಪಥಿ ಶೇ.5ರಷ್ಟು ಕಾರಣವಾಗುತ್ತದೆ. ಎಲ್ಲ ಭೌಗೋಳಿಕ ಪ್ರಾಂತ್ಯಗಳ್ಲೂ ಡಯಾಬಿಟಿಸ್ ಪ್ರಕರಣಗಳಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ . ಈ ರೋಗ ತೀವ್ರ ಹದಗೆಟ್ಟು ಅಂಧತ್ವಕ್ಕೆ ಕಾರಣವಾಗುವುದನ್ನು ಹೇಗೆ ತಪ್ಪಿಸಬೇಕೆಂಬ ಬಗ್ಗೆ ಆತಂಕದಲ್ಲಿರುವಂತೆಯೇ, ಮಧುಮೇಹ ರೋಗಪೀಡಿತ ಜನರಲ್ಲಿ ಅರಿವಿನ ಕೊರತೆಯಿಂದಾಗಿ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡಿದೆ.
ಮಧುಮೇಹ ನೇತ್ರ ರೋಗವನ್ನು ಕಣ್ಣಿನ ಸಮಸ್ಯೆಗಳ ಒಂದು ಸಮೂಹವೆಂದು ಉಲ್ಲೇಖಿಸಬಹುದಾಗಿದೆ.ಡಯಾಬಿಟಿಸ್ ಹೊಂದಿರುವ ಜನರು ತುಂಬಾ ತೊಡಕಿನ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಹಾಗೂ ತೀವ್ರ ದೃಷ್ಟಿದೋಷ ಅಥವಾ ಅಂಧತ್ವಕ್ಕೆ ಒಳಗಾಗುತ್ತಾರೆ. ಸಕ್ಕರೆ ರೋಗ ಸ್ಥಿತಿಗಳಿಂದಾಗಿ ರೆಟಿನಾದಲ್ಲಿನ ರಕ್ತನಾಳಗಳಲ್ಲಿ ಬದಲಾವಣೆಗಳು ಕಂಡುಬರುವುದರಿಂದ ಡಯಾಬಿಟಿಕ್ ರೆಟಿನೋಪಥಿ ಉಂಟಾಗುತ್ತದೆ. ಈ ದೋಷವು ಭಾರತ ಮತ್ತು ಚೀನಾದಂಥ ಅಧಿಕ ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ತುಂಬಾ ವೇಗವಾಗಿ ಹಬ್ಬುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜುಗಳ ಪ್ರಕಾರ, ಸಕ್ಕರೆ ರೋಗದಿಂದ ನರಳುತ್ತಿರುವ ರೋಗಿಗಳ ಸಂಖ್ಯೆ 2030ರ ವೇಳೆಗೆ ಇಮ್ಮಡಿಯಾಗಲಿದೆ.
ಈ ಸಮಸ್ಯೆಯನ್ನು ನಿಯಂತ್ರಿಸಲು ಲಕ್ಷ್ಯ ಇಡಲಾದ ಕ್ರಿಯಾಯೋಜನೆ ಮತ್ತು ಅಂತರ್-ಶಿಸ್ತು ವಿಧಾನವನ್ನು ಅನುಸರಿಸಬೇಕಾದ ತುರ್ತು ಅಗತ್ಯವಿದೆ. ಡಯಾಬಿಟಿಕ್ ರೆಟಿನೋಪಥಿಯನ್ನು ನಿಯಂತ್ರಿಸುವುದು ಒಂದು ಸಂಕೀರ್ಣ ಸಮಸ್ಯೆಯಾಗಿದ್ದು, ರೋಗವನ್ನು ತಡೆಗಟ್ಟಲು ಆರೋಗ್ಯ ಶಿಕ್ಷಣ, ರೋಗವನ್ನು ಆರಂಭದಲ್ಲೇ ಪತ್ತೆ ಮಾಡುವಿಕೆ, ಸಮಗ್ರ ಹಾಗೂ ಲೇಸರ್ ಚಿಕಿತ್ಸೆ ಮೂಲಕ ಚಿಕಿತ್ಸೆಗೆ ಒಳಪಡಿಸಬಹುದಾದ ರೆಟಿನೋಪಥಿಯೊಂದಿಗೆ ಡಯಾಬಿಟಿಸ್ ರೋಗಿಯನ್ನು ಪತ್ತೆ ಮಾಡಲು ಕಡಿಮೆ ವೆಚ್ಚದ ತಪಾಸಣಾ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ.
ಡಯಾಬಿಟಿಕ್ ರೆಟಿನೋಪಥಿಯನ್ನು ನಿರ್ವಹಣೆ ಮಾಡಲು ವಿಶೇಷ ಪರಿಣಿತಿ ಪಡೆದ ನೇತ್ರತಜ್ಞರ ಅಗತ್ಯವಿದ್ದು, ಲಭ್ಯವಿರುವ ಸೂಕ್ತ ತಂತ್ರಜ್ಞಾನಗಳ್ನು ಅಳವಡಿಸಿಕೊಂಡು ಹೊಸ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಗೊಳಿಸಬೇಕು ಹಾಗೂ ಡಯಾಬಿಟಿಸ್ನನ್ನು ತಡೆಗಟ್ಟಲು ಸಾರ್ವಜನಿಕ ಆರೋಗ್ಯ ಶಿಕ್ಷಣ ನೀತಿಯನ್ನೂ ರೂಪಿಸಬೇಕಾದ ಅಗತ್ಯವಿದೆ. ತುಂಬಾ ಅವಧಿಗೆ ಮುನ್ನವೇ ಜನಿಸುವ ಶಿಶುಗಳಲ್ಲಿ ರೆಟಿನೋಪಥಿ ಆಫ್ ಪ್ರಿಮೆಚುರಿಟಿ (ಆರ್ಒಪಿ) ದೋಷ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಅದು ಹಸುಳೆಗಳಲ್ಲಿ ತಡೆಗಟ್ಟಬಹುದಾದ ಅಂಧತ್ವಕ್ಕೆ ಕಾರಣವಾಗುತ್ತದೆ.
ಡಯಾಬಿಟಿಸ್ನೊಂದಿಗೆ ಕಂಡುಬರುವ ಇತರೆ ನೇತ್ರ ದೋಷಗಳಲ್ಲಿ ಕಣ್ಣು ಮತ್ತು ಕಣ್ಣಿನ ಪೊರೆ ಮೇಲೆ ಅಧಿಕ ಒತ್ತಡದಿಂದ ದೃಷ್ಟಿ ನರಗಳಿಗೆ ಹಾನಿ ಮಾಡುವ ಗ್ಲಾಕೋಮಾ ಸಹ ಸೇರಿದೆ. ಸಕಾಲದಲ್ಲಿ ಡಯಾಬಿಟಿಕ್ ರೆಟಿನೋಪಥಿ ಚಿಕಿತ್ಸೆಗಾಗಿ ಲೇಸರ್ ಸರ್ಜರಿಯನ್ನು ನಡೆಸುವುದರಿಂದ ರೆಟಿನಾದಲ್ಲಿನ ಅಸಾಧಾರಣ ರಕ್ತ ನಾಳಗಳು ಕಿರಿದಾಗಲು ಸಹಕಾರಿಯಾಗುತ್ತದೆ. ಚಿಕಿತ್ಸೆಯನ್ನು ಪೂರ್ಣಗೊಳಿಸಲು ಸಾಮಾನ್ಯವಾಗಿ ಕನಿಷ್ಠ ನಾಲ್ಕು ಸೆಷನ್ಸ್ಗಳು ಬೇಕಾಗುತ್ತವೆ. ಇದು ಹೊರ ರೋಗಿ ಚಿಕಿತ್ಸೆ ವಿಧಾನವಾಗಿದೆ.
ತಡೆಗಟ್ಟುವ ಕ್ರಮಗಳು:
ಪರಿಣಾಮಕಾರಿ ನಿರ್ವಹಣೆ ಮೂಲಕ ಡಯಾಬಿಟಿಸ್ನ ಅನೇಕ ತೊಡಕುಗಳನ್ನು ತಡೆಗಟ್ಟಬಹುದು ಅಥವಾ ವಿಳಂಬ ಮಾಡಬಹುದು ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಆರೋಗ್ಯಕರ ಆಹಾರ, ವ್ಯಾಯಾಮ, ದೈಹಿಕ ಚಟುವಟಿಕೆಗಳು, ಅತಿಯಾದ ತೂಕವನ್ನು ತಪ್ಪಿಸುವಿಕೆ ಮತ್ತು ಸ್ಥೂಲಕಾಯ ತಡೆಗಟ್ಟುವಿಕೆ ಹಾಗೂ ಧೂಮಪಾನ ಮಾಡದಿರುವಿಕೆಯಂಥ ಕ್ರಮಗಳನ್ನು ಇದು ಒಳಗೊಂಡಿದೆ.
ಉತ್ತಮ ಆಹಾರ, ಆರೈಕೆ ಜ್ಞಾನ ಹಾಗೂ ಅಗಾಗ ಆರೋಗ್ಯ ತಪಾಸಣೆಗಳು ಡಯಾಬಿಟಿಸ್ ಚಿಕಿತ್ಸೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲದೇ, ರಕ್ತದೊತ್ತಡ ನಿಯಂತ್ರಣ ಹಾಗೂ ಬ್ಲಡ್ ಲಿಪಿಡ್ಗಳ ನಿಯಂತ್ರಣ ಒಳಗೊಂಡ ಡಯಾಬಿಟಿಸ್ ತೊಡಕುಗಳ ಗಂಡಾಂತರ ಅಂಶಗಳನ್ನು ಒಟ್ಟಾರೆಯಾಗಿ ಕಡಿಮೆ ಮಾಡಲು ಸಹ ನೆರವಾಗುತ್ತದೆ. ಇದಕ್ಕೆ ಜೀವನದುದ್ದಕ್ಕೂ ಆರೈಕೆ ಮತ್ತು ನಿರ್ವಹಣೆಯ ಅಗತ್ಯವಿದೆ. ಬಹುತೇಕ ಡಯಾಬಿಟಿಸ್ ಆರೈಕೆಯನ್ನು ವ್ಯಕ್ತಿಯೇ ಮಾಡುತ್ತಾನೆ ಹೊರತು ಆರೋಗ್ಯ ಪರಿಣಿತರಲ್ಲ. ವಾರಕ್ಕೆ ಕನಿಷ್ಠ 5 ದಿನಗಳ ಕಾಲ ಪ್ರತಿ ದಿನ 30 ನಿಮಿಷಗಳ ಕಾಲ ಸಾಧಾರಣ ವ್ಯಾಯಾಮವು ಉತ್ತಮ ಆರೋಗ್ಯವನ್ನು ವೃದ್ಧಿಸಿ, ಮಧುಮೇಹ ಬರುವ ಸಾಧ್ಯತೆಗಳನ್ನು ತಗ್ಗಿಸುತ್ತದೆ.
ಆರೋಗ್ಯಕರ ಆಹಾರ ಸೇವನೆ :
ಡಯಾಬಿಟಿಸ್ ರೋಗವನ್ನು ಆರೈಕೆ ಮಾಡುವಲ್ಲಿ ಆರೋಗ್ಯಕರ ಆಹಾರ ಸೇವನೆಯು ಮೊದಲ ಹೆಜ್ಜೆಯಾಗಿದೆ. ಇದಕ್ಕಾಗಿ ವಿಶೇಷ ಪಥ್ಯಾಹಾರಗಳು ಅಥವಾ ಆಹಾರಗಳು ಬೇಕಾಗಿಲ್ಲ. ಪ್ರತಿ ದಿನ ವೈವಿಧ್ಯಮಯ ಆಹಾರಗಳನ್ನು ಸೇವಿಸಿ. ಹೊಸ ಆಹಾರಗಳನ್ನು ಪ್ರಯತ್ನಿಸಿ. ಹಣ್ಣುಗಳು, ತರಕಾರಿಗಳು, ಎಲ್ಲ ಧಾನ್ಯಗಳು ಮತ್ತು ಕಾಳುಗಳಂಥ ಅಧಿಕ ಫೈಬರ್ಯುಕ್ತ ಆಹಾರಗಳನ್ನು ಸೇವಿಸಿ. ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಿ ಮತ್ತು ಆರೋಗ್ಯಕರ ಜೀವನದಿಂದ ಡಯಾಬಿಟಿಸ್ನನ್ನು ದೂರವಿಡಿ.
ಡಾ.ಕೆ.ಭುಜಂಗ ಶೆಟ್ಟಿ
ವ್ಯವಸ್ಥಾಪಕ ನಿರ್ದೇಶಕರು, ನಾರಾಯಣ ನೇತ್ರಾಲಯ
121/ಸಿ, ಪಶ್ಚಿಮ ಕಾರ್ಡ್ರಸ್ತೆ, ರಾಜಾಜೀನಗರ ಆರ್ ಬ್ಲಾಕ್, ಬೆಂಗಳೂರು-10, ದೂ: 080-23373311/66121300
Email : info@narayananethralaya.com ; info@nnmail.org Website : www.narayananethralaya.org