ಇಂದಿನ ದಿನಗಳಲ್ಲಿ ಹಲವರಲ್ಲಿ ಪದೇ ಪದೇ ಬಾಯಿಯಲ್ಲಿ
ಹುಣ್ಣಾಗುವಂತದ್ದು ಕಂಡುಬರುತ್ತದೆ. ನೋಡಲು ಅಷ್ಟು ದೊಡ್ಡ ಖಾಯಿಲೆ, ರೋಗದಂತೆ ಇದು ಕಂಡುಬರದಿದ್ದರೂ ಸಹ ಅತ್ಯಂತ ಕಿರಿಕಿರಿ ಮಾಡುವುದಲ್ಲದೆ ಕೆಲವೊಂದು ಸಲ ನೋವನ್ನುಂಟುಮಾಡುವುದು. ಆಹಾರ ಸೇವಿಸಲು, ಮಾತನಾಡಲು, ಹಲ್ಲುಜ್ಜಲು ಹೀಗೆ ತೊಂದರೆ ಮಾಡುವುದು. ಅಪರೂಪಕ್ಕೆ ಬಾಯಿಯಲ್ಲಿ ಹುಣ್ಣಾದಾಗ ನಮ್ಮ ಸಹಜ ಆಹಾರ ಬದಲಾವಣೆಯಿಂದ ಕಡಿಮೆಯಾಗುವುದು. ಆದರೆ ಪದೇ ಪದೇ ಆಗುವ ಬಾಯಿಯಲ್ಲಿನ ಹುಣ್ಣಿಗೆ ಪರಿಹಾರ ಕಂಡುಕೊಳ್ಳುವುದು ಅಗತ್ಯ.
ನಮ್ಮ ಹಿರಿಯರು ಹೇಳುವಂತೆ ‘ಮಲಬದ್ಧತೆ’ಯೇ ಇದಕ್ಕೆ ಕಾರಣ. ಇಂದಿನ ಆಧುನಿಕ ವಿಜ್ಞಾನಿಗಳೂ ಸಹ ಇದಕ್ಕೆ ಸಮ್ಮತಿ ಸೂಚಿಸಿರುವುದು ಗಮನೀಯ. ನಮ್ಮ ಕರುಳಿನಲ್ಲಿ ಎರಡು ರೀತಿಯ ಬ್ಯಾಕ್ಟೀರಿಯಾಗಳು ತಯಾರಾಗುತ್ತವೆ. ರಾಸಾಯನಿಕಗಳನ್ನು ಬಿಡುವ ಕೆಟ್ಟ ಬ್ಯಾಕ್ಟೀರಿಯಾಗಳಿಂದ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಈ ಕೆಟ್ಟ ಬ್ಯಾಕ್ಟೀರಿಯಾಗಳಿಂದ ಅಧಿಕವಾಗಿ ಸಮಸ್ಯೆಯುಂಟಾದಾಗ ಬಾಯಿಹುಣ್ಣು ಹೆಚ್ಚಾಗುತ್ತದೆ. ಆದ ಕಾರಣ ಉತ್ತಮ ಆಹಾರ ಪದ್ಧತಿಯ ಮೂಲಕ ಸುಯೋಚಿತ ಆಹಾರವನ್ನು ತೆಗೆದುಕೊಂಡಾಗ ಬಾಯಿಹುಣ್ಣಿನ ಸಮಸ್ಯೆಯನ್ನು ಕಡಿಮೆಮಾಡಿಕೊಳ್ಳಬಹುದು.
ತಜ್ಞವೈದ್ಯರ ಸಲಹೆಯ ಮೇರೆಗೆ ಪಡೆದ ಆಹಾರಪಟ್ಟಿಯು ಬಾಯಿಹುಣ್ಣು ಸಮಸ್ಯೆಯನ್ನು ನಿವಾರಿಸುವುದು. ದೇಹದಲ್ಲಿ ಅಥವಾ ಹೊಟ್ಟೆಯಲ್ಲಿ ಉಷ್ಣದ ಪ್ರಮಾಣ ಹೆಚ್ಚಾದಾಗ ಬಾಯಿಹುಣ್ಣು ಕಂಡುಬರುವುದು ಸಾಮಾನ್ಯ. ಆದರೆ ಪುನಃ ಪುನಃ ಬರುವ ಬಾಯಿಹುಣ್ಣಿನ ಬಗೆಗೆ ಗಮನವಹಿಸಿ ಅದನ್ನು ಕಡಿಮೆಮಾಡಿಕೊಳ್ಳಬೇಕು. ನಾವು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಮನೆಮದ್ದಿನ ಜೊತೆಯಲ್ಲಿ ನಿರ್ಬಂಧಿತ ಆಹಾರ ಪದ್ಧತಿಯು ಬಾಯಿಹುಣ್ಣಿನ ನಿವಾರಣೆಗೆಸಹಕಾರಿ. ದೇಹಕ್ಕೆ ಒಳಿತನ್ನು ಮಾಡುವ ಬ್ಯಾಕ್ಟೀರಿಯಾಗಳನ್ನು ಸಂರಕ್ಷಿಸಿ, ಕೆಟ್ಟ ಹಾಗೂ ಅಡ್ಡ ಪರಿಣಾಮಗಳನ್ನು ಮಾಡುವ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುವ ಸವಾಲನ್ನು ಎದುರಿಸುವ ಸಾಮಥ್ರ್ಯ ಆಹಾರಕ್ಕಿದೆ.
ಈ ಮೂಲಕ ಬಾಯಿಹುಣ್ಣಿನ ಮೂಲ ಕಾರಣಕ್ಕೆ ಪರಿಹಾರ ಸೂಚಿಸುವಂತಹ ಆಹಾರಪದ್ಧತಿಯನ್ನು ಅನುಸರಿಸೋಣ. ಉಪ್ಪನ್ನು ಹೆಚ್ಚು ಸೇವಿಸುವುದರಿಂದಾಗಿ ನಮ್ಮ ಕರುಳಿನಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳು ಬೆಳೆಯುವುದು. ಹಾಗಾಗಿ ಉಪ್ಪಿನ ಸೇವನೆ ಕಡಿಮೆ ಮಾಡುವುದೊಳಿತು. ಅನಿವಾರ್ಯತೆಯಿರುವಷ್ಟು ಮಾತ್ರ ಸೇವಿಸಿ ನಮ್ಮ ಅಗತ್ಯತೆಯನ್ನು ನೀಗಿಸಿಕೊಂಡು ಈ ಬಾಯಿಹುಣ್ಣಿನ ಸಮಸ್ಯೆಯನ್ನು ಕಡಿಮೆಮಾಡಿಕೊಳ್ಳಬೇಕು. ಉತ್ತಮ, ಅಗತ್ಯ, ಸುಯೋಚಿತ ಆಹಾರ ಸೇವನೆಯಿಂದ ಪರಿಪೂರ್ಣ ಆರೋಗ್ಯ ಸಾಧ್ಯ.