ಫಲವತ್ತತೆ ಹೆಚ್ಚಿಸಲು ಅಳವಡಿಸಿಕೊಳ್ಳಬೇಕಾದ ಜೀವನಶೈಲಿ. ನಮ್ಮ ಜೀವನಶೈಲಿಯು, ಪುರುಷರು ಮತ್ತು ಮಹಿಳೆಯರ, ಫಲವತ್ತತೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ಆಹಾರ, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಗೆ ಸಂಬಂಧಿಸಿದಂತೆ ನಮ್ಮ ಕ್ರಮಗಳು ಸಂತಾನೋತ್ಪತ್ತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.
ಒಂದು ವರ್ಷದ ಅಸುರಕ್ಷಿತ ಸಂಭೋಗದ ನಂತರವೂ ಗರ್ಭಧರಿಸಲು ಅಸಮರ್ಥರಾದರೆ ಬಂಜೆತನವೆಂದು ಪರಿಗಣಿಸಲಾಗುತ್ತದೆ. ಈಗ ಇದು ಹೆಚ್ಚು ದಂಪತಿಗಳನ್ನು ಕಾಡುತ್ತಿರುವ ವಿಶ್ವದ ಪ್ರಮುಖ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ.
• ಸಮತೋಲಿತ ಆಹಾರ: ಸಂತಾನೋತ್ಪತ್ತಿಗೆ ಅಗತ್ಯ ವಿರುವ ಪ್ರೋಟೀನ್ ಗಳು, ಪೋಷಕಾಂಶಗಳು, ವಿಟಮಿನ್ ಗಳು, ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳು (ಉದಾ: ವಿಟಮಿನ್ C ಮತ್ತು E) ಸಮೃದ್ಧವಾಗಿರುವ ಆಹಾರ ಸೇವಿಸಿ. ಮೀನು, ಅಗಸೆಬೀಜ ಮತ್ತು ವಾಲ್ನಟ್ಸ್ನಂತಹ ಒಮೆಗಾ – 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಇದು ವೀರ್ಯಾಣು ಮತ್ತು ಅಂಡಾಣುಗಳಿಗೆ ಹಾನಿ ಯಾಗದಂತೆ ರಕ್ಷಿಸುತ್ತದೆ. ಸಂಸ್ಕರಿಸಿದ ಆಹಾರಗಳು ಮತ್ತು ಪಾನೀಯಗಳು, ಕೆಂಪು ಮಾಂಸ, ಸಕ್ಕರೆ ಪದಾರ್ಥಗಳು ಮತ್ತು ಅತಿಯಾದ ಕೆಫೀನ್ ಸೇವನೆಯನ್ನು ಕಡಿಮೆ ಮಾಡಿ. ದಿನಕ್ಕೆ ಸುಮಾರು 3-3.5 ಲೀಟರ್ ನೀರನ್ನು ಕುಡಿಯುವುದು ಅಗತ್ಯ.
• ನಿಯಮಿತ ವ್ಯಾಯಾಮ: ವೇಗದ ನಡಿಗೆ, ಸೈಕ್ಲಿಂಗ್ ಮತ್ತು ಈಜು ಮುಂತಾದ ವ್ಯಾಯಾಮ ಮಾಡಿ, ಇದು ತೂಕ ಮತ್ತು ಹಾರ್ಮೋನ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚು ತೀವ್ರವಾದ ವ್ಯಾಯಾಮ ಬೇಡ, ಏಕೆಂದರೆ ಮುಟ್ಟಿ ನಲ್ಲಿ ವ್ಯತ್ಯಾಸವಾಗಬಹುದು. ಯೋಗ ಮತ್ತು ಸ್ಟ್ರೆಚಿಂಗ್ ವ್ಯಾಯಾಮಗಳು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದರಿಂದ ಸುಲಭವಾಗಿ ಸಂತಾನೋತ್ಪತ್ತಿ ಅಂಗಗಳಿಗೆ ರಕ್ತ ಸಂಚಾರವಾಗುತ್ತದೆ. ನಿಯಮಿತ ವ್ಯಾಯಾಮವು ವೀರ್ಯದ ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸುತ್ತದೆ.
• ಧೂಮಪಾನ ಮತ್ತು ಮದ್ಯಪಾನ ತ್ಯಜಿಸಿ: ಧೂಮಪಾನವನ್ನು ತ್ಯಜಿಸುವುದು ಮತ್ತು ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡುವುದು ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಪುರುಷರಲ್ಲಿ, ಇದು ವೀರ್ಯದ ಗುಣಮಟ್ಟ ಮತ್ತು ಚಲನಶೀಲತೆಯನ್ನು ಸುಧಾರಿಸುತ್ತದೆ., ಹಾಗೆಯೇ ಮಹಿಳೆಯರಲ್ಲಿ, ಇದು ಅಂಡಾಣುವಿನ ಗುಣಮಟ್ಟ ಮತ್ತು ಗರ್ಭಾಶಯದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಆರೋಗ್ಯಕರ ಗರ್ಭಧಾರಣೆಗೆ ಸಹಾಯ ಮಾಡುತ್ತದೆ.
• ಒತ್ತಡ ನಿರ್ವಹಣೆ: ನಿಯಮಿತ ದೈಹಿಕ ಚಟುವಟಿಕೆಯು ಒತ್ತಡಕ್ಕೆ ಕಾರಣವಾಗುವ ಹಾರ್ಮೋನುಗಳನ್ನು ಕಡಿಮೆ ಮಾಡಿ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ವಿಶ್ರಾಂತಿ, ಧ್ಯಾನ ಮತ್ತು ದೀರ್ಘವಾದ ಉಸಿರಾಟ ಒತ್ತಡವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಇದರಿಂದ ಹಾರ್ಮೋನ್ ಗಳ ಸಮತೋಲನವನ್ನು ಕಾಪಾಡಿಕೊಳ್ಳಬಹುದು. ಇವುಗಳ ಜೊತೆಗೆ, ಸಾಕಷ್ಟು ನಿದ್ರೆ ಅಗತ್ಯ. ಗೊಂದಲವಿಲ್ಲದೆ ಸಮಯವನ್ನು ನಿರ್ವಹಿಸುವುದು ಕೂಡ ಒತ್ತಡವನ್ನು ಕಡಿಮೆ ಮಾಡುತ್ತದೆ. ಒತ್ತಡವನ್ನು ನಿರ್ವಹಿಸಲು ನೀವು ಹೆಣಗಾಡುತ್ತಿದ್ದರೆ ವೈದ್ಯರು ಅಥವಾ ಸಲಹೆಗಾರರೊಂದಿಗೆ ಸಮಾಲೋಚಿಸಿ.
• ಸಾಕಷ್ಟು ನಿದ್ರೆ: ದೇಹದ ಹಾರ್ಮೋನ್ ನಿಯಂತ್ರಣಕ್ಕೆ ಸಾಕಷ್ಟು ನಿದ್ರೆಯ ಅಗತ್ಯವಿದೆ. ಮಲಗುವ ಕನಿಷ್ಠ 1-2 ಗಂಟೆಗಳ ಮೊದಲೇ ಮೊಬೈಲ್ ಅಥವಾ ಟಿವಿಯನ್ನು ನೋಡಬೇಡಿ. ಊಟದ ನಂತರ ಹೆಚ್ಚಿನ ವ್ಯಾಯಾಮವನ್ನು ಮಾಡಬೇಡಿ, ಏಕೆಂದರೆ ಇದು ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿ 8 ಗಂಟೆಗೆ ಮೊದಲೇ ಲಘುವಾದ ಊಟ ಮಾಡಿ. ಅಂದರೆ ನಿಮ್ಮ ಊಟ ಮತ್ತು ಮಲಗುವ ಸಮಯದ ನಡುವೆ ಕನಿಷ್ಠ 2 ಗಂಟೆಗಳ ಅಂತರವಿರಲಿ. ಇವೆಲ್ಲವೂ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಇದು ಪರೋಕ್ಷವಾಗಿ ನಿಮ್ಮ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿ ಸಂತಾನೋತ್ಪತ್ತಿ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
• ಮಾಲಿನ್ಯಕಾರಕಗಳು: ಕೆಲವು ಮಾಲಿನ್ಯಕಾರಕಗಳಿಗೆ ಒಡ್ಡಿಕೊಳ್ಳುವುದು ಫಲವತ್ತತೆಗೆ ತೊಂದರೆ ಯಾಗಬಹುದು. ಕೆಲವು ದೈನಂದಿನ ಬಳಕೆಯಲ್ಲಿರುವ ಪ್ಲಾಸ್ಟಿಕ್ ಕವರ್ಗಳು, ಪ್ಲಾಸ್ಟಿಕ್ ಆಹಾರದ ಕಂಟೈನರ್ ಗಳು ಮತ್ತು ಸಂಸ್ಕರಿಸಿದ ಆಹಾರಗಳು ಬಿಸ್ಫೆನಾಲ್ ಎ (Bisphenol A) ಅನ್ನು ಹೊಂದಿರುತ್ತವೆ. ಇದು ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡಿ, ಫಲವತ್ತತೆಯನ್ನು ಕಡಿಮೆ ಮಾಡುತ್ತದೆ. ಸೌಂದರ್ಯವರ್ಧಕಗಳು ಮತ್ತು ಇತರೆ ಆರೈಕೆ ಉತ್ಪನ್ನಗಳಲ್ಲಿ ಬಳಸಲಾಗುವ ಥಾಲೇಟ್ಗಳು(Phthalates) ವೀರ್ಯಾಣು ಉತ್ಪಾದನೆ ಮತ್ತು ಅದರ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತವೆ. ಆದುದರಿಂದ ಅಂತಹ ಉತ್ಪನ್ನಗಳನ್ನು ಆಯ್ಕೆಮಾಡುವಾಗ, ಕಡಿಮೆ ಪ್ರಮಾಣದ ಅಂತಃಸ್ರಾವಕ-ಅಡ್ಡಿಪಡಿಸುವ ರಾಸಾಯನಿಕಗಳಲ್ಲಿರುವ (endocrine disrupting chemicals – EDCs) ವಸ್ತುಗಳನ್ನು ಖರೀದಿಸಲು ಪ್ರಯತ್ನಿಸಿ. ಅಥವಾ EDC ಮುಕ್ತ ಉತ್ಪನ್ನಗಳನ್ನೇ ಖರೀದಿಸಿ. ನೀವು ಕಲುಷಿತ ಪರಿಸರದಲ್ಲಿ ವಾಸಿಸುತ್ತಿದ್ದರೆ, ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಏರ್ ಪ್ಯೂರಿಫೈಯರ್ ಗ ಳನ್ನು ಬಳಸುವುದು ಉತ್ತಮ. ಗರ್ಭಧಾರಣೆಯನ್ನು ಬಯಸುವ ಪುರುಷರು ಬಿಗಿಯಾದ ಒಳ ಉಡುಪು ಧರಿಸುವುದು ಅಥವಾ ಲ್ಯಾಪ್ಟಾಪ್ ಅನ್ನು ತೊಡೆಯ ಮೇಲೆ ಇರಿಸಿ ಕೆಲಸಮಾಡುವುದು ಒಳ್ಳೆಯದಲ್ಲ.
• ಋತುಚಕ್ರದ ಸಮಯ ಮತ್ತು ಲೆಕ್ಕಾಚಾರ : ನಿಮ್ಮ ಋತುಚಕ್ರವನ್ನು ಅರ್ಥಮಾಡಿಕೊಳ್ಳಿ ಮತ್ತು ಗರ್ಭಧಾರಣೆಯನ್ನು ಉತ್ತಮಗೊಳಿಸಲು ಅಂಡೋತ್ಪತ್ತಿಯ ಸಮಯವನ್ನು ಲೆಕ್ಕಾಚಾರ ಮಾಡಿ. ಅಂಡೋತ್ಪತ್ತಿಯ ಸಮಯವನ್ನು ಲೆಕ್ಕ ಮಾಡಲು ಅಪ್ಲಿಕೇಶನ್ಗಳನ್ನು ಬಳಸಿ ಅಥವಾ ಅಂಡೋತ್ಪತ್ತಿ ಲೆಕ್ಕ ಮಾಡುವ ಕಿಟ್ಗಳನ್ನು ಸಹ ಬಳಸಬಹುದು. ಋತುಚಕ್ರ ಅನಿಯಮಿತ ವಾಗಿದ್ದಲ್ಲಿ ಅಥವಾ ಯಾವುದೇ ಇತರ ಆರೋಗ್ಯ ಸಮಸ್ಯೆಗಳಿದ್ದಲ್ಲಿ ವೈದ್ಯರಿಂದ ಸಹಾಯ ಪಡೆಯಿರಿ. ಅಂಡೋತ್ಪತ್ತಿಯನ್ನು ಹೇಗೆ ಉತ್ತಮವಾಗಿ ಲೆಕ್ಕ ಮಾಡುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ಕೊನೆಯ ಮಾತು
ಜೀವನಶೈಲಿಯ ಆಯ್ಕೆಗಳು ಫಲವತ್ತತೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ . ಜೀವನಶೈಲಿಯ ಪ್ರಮುಖ ಅಂಶಗಳಾದ – ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಒತ್ತಡ ನಿರ್ವಹಣೆ ಮತ್ತು ಹಾನಿಕಾರಕ ಪದಾರ್ಥಗಳಿಂದ ದೂರವಿರುವುದು ಗರ್ಭಧಾರಣೆಗೆ ಭಹು ಮುಖ್ಯ. ತಿಳುವಳಿಕೆ, ಆಯ್ಕೆಗಳು ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಸಂತಾನೋತ್ಪತ್ತಿಯನ್ನು ಉತ್ತಮಗೊಳಿಸಬಹುದು.
ಡಾ.ವಂದನಾ ರಾಮನಾಥನ್
ರೆಪ್ರೊಡ್ಯೂಕ್ಟಿವ್ ಮೆಡಿಸಿನ್
ಮಿಲನ್ ಫರ್ಟಿಲಿಟಿ ಸೆಂಟರ್