ಮೈಸೂರು: ಅಕ್ಟೋಬರ್ 28ರಂದು ರಾಜ್ಯ ಹಾಗೂ ರಾಷ್ಟ್ರಮಟ್ಟದ ವಾಲಿಬಾಲ್ ಹಾಗೂ ಕ್ರಿಕೆಟ್ ಕ್ರೀಡಾಪಟು, ವಿಶೇಷ ಚೇತನ, ಮೈಸೂರಿನ ಎನ್.ಆರ್.ಅಶ್ವಿನ್‍ನ ಮೊದಲ ಪುಣ್ಯ ತಿಥಿ. ಈ ಸಂದರ್ಭದಲ್ಲಿ ಅಕ್ಟೋಬರ್ 28ರ ಮಧ್ಯಾಹ್ನ ಮೈಸೂರಿನ ಸೇಂಟ್ ಮಥಾಯಾಸ್ ಪ್ರೌಢಶಾಲೆಯಲ್ಲಿ, ಮಿನುಮಿನುಗುವ ನಕ್ಷತ್ರ ಎಂಬ ಪುಸ್ತಕದ ಬಿಡುಗಡೆಯಾಯಿತು.
ಮೈಸೂರಿನ ಹೆಸರಾಂತ ಕವಿ ಡಾ. ಜಯಪ್ಪ ಹೊನ್ನಾಳಿ ಅವರು ಪುಸ್ತಕ ಲೋಕಾರ್ಪಣೆ ಮಾಡಿ, “ಎನ್.ವ್ಹಿ.ರಮೇಶ್ ಅವರು ಮಿನುಮಿನುಗುವ ನಕ್ಷತ್ರಗಳು ಎಂಬೀ ಕೃತಿಯನ್ನು, ಬೆರಳಿನಿಂದ ಬರೆದೇ ಇಲ್ಲ; ಕರುಳಿನಿಂದ ಬರೆದಿದ್ದಾರೆ. ಕಣ್ಣೀರಿಗೂ ಕಣ್ಣೀರು ತರುವ ಕಥೆ. ನಿರಂತರ ಯಾತನಾಮಯವಾದ ಬದುಕಿನಲ್ಲಿಯೂ ಬೆಳೆದು, ಹೊಳೆದು ಮಾಯವಾದ ನೆಲದ ನಕ್ಷತ್ರವೊಂದರ ಕಥೆ. ನಿಶ್ಶಬ್ದದಿಂದ-ಶಬ್ದಕ್ಕೆ, ಶಬ್ದದಿಂದ-ನಿಶ್ಶಬ್ದಕ್ಕೆ ಸರಿದು ಹೋದ, ಮೌನಸಾಧಕನ ಕಥೆ ಎಂದರು”.
ತಮ್ಮ ಏಕೈಕ ಮಗನನ್ನು ಕಳೆದುಕೊಂಡಿರುವ, ಈ ಪುಸ್ತಕದ ಲೇಖಕ ಎನ್.ವ್ಹಿ.ರಮೇಶ್ ಪುಸ್ತಕದ ಬಗ್ಗೆ ನಿವೇದಿಸುತ್ತಾ, “ಮೈಸೂರಿನಲ್ಲಿ ಎರಡೂ ಕಿವಿಗಳ ಶ್ರವಣ ದೋಷ ಹೊಂದಿ ಹುಟ್ಟಿ, ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಸತತ ತರಬೇತಿ ಹೊಂದಿ, ಮಾತು ಕಲಿತು-ಮುಂದೆ ಸಂಜ್ಞಾ ಭಾಷೆ ಕಲಿತು, ಮಾತು ಬಾರದ ಹಾಗೂ ಕಿವಿ ಕೇಳದ ಸಾವಿರಾರು ವಿಕಲ ಚೇತನರಿಗೆ ಶಿಕ್ಷಣ, ಸಲಹೆ ಸೇವೆ ನೀಡಿದವ ಎನ್.ಆರ್.ಅಶ್ವಿನ್. ಮೈಸೂರಿನಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ, ವಾಲೀಬಾಲ್ ಹಾಗೂ ಕ್ರಿಕೆಟ್‍ಗಳಲ್ಲಿ ಆಲ್ ರೌಂಡರ್ ಆಟಗಾರ ಹಾಗೂ ನಾಯಕನಾಗಿ ಪಂದ್ಯಗಳನ್ನಾಡಿ, ನೂರಾರು ಪ್ರಶಸ್ತಿ ಪದಕ, ಬೆಳ್ಳೀಕಪ್ ಗಳಿಸಿ, ಇತರರಿಗೆ ಕೋಚಿಂಗ್ ಮಾಡಿದ್ದ ಈ ಮಹಾಸಾಧಕ, ಒಂದು ವರ್ಷದ ಕೆಳಗೆ ಲಿವರ್ ಕಾಹಿಲೆಯಿಂದ ದಿವಂಗತನಾದ. ಅವನ ನೆನಪಿನಲ್ಲಿ ಈ ಪುಸ್ತಕ ಬರೆಯಲಾಗಿದೆ.
ಫ್ಯಾಮಿಲಿ ಕೇರ್ ಎಂಬ ಕೊಯಮತ್ತೂರಿನ ಸಾಮಾಜಿಕ ಚಟುವಟಿಕೆಗಳ ಸಂಸ್ಥೆಯ ಸಹಯೋಗದಲ್ಲಿ, ಎನ.ವ್ಹಿ.ರಮೇಶ್ ಕುಟುಂಬ, ಆಸಕ್ತಿ ಪ್ರಕಾಶನ ಜಂಟಿಯಾಗಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ, ಮೈಸೂರಿನ ಕವಯತ್ರಿ ಹಾಗೂ ಸಂಸ್ಕತಿ ಪೋಷಕಿ ಎ. ಹೇಮಗಂಗಾ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, “ನೋವಿನಲ್ಲಿ ಹುಟ್ಟಿ ದುಃಖದಲ್ಲಿ ಬೆಳೆದು, ಮನೆಯವರ ಸಂಪೂರ್ಣ ಬೆಂಬಲದಿಂದ ಹಾಗೂ ಸ್ವಂತ ಪ್ರಯತ್ನದಿಂದ, ಮಹಾನ್ ಕ್ರೀಡಾಪಟುವಾಗಿ-ಸಾಮಾಜಿಕ ಕಾರ್ಯಕರ್ತನಾಗಿ ಅರಳಿ, ಜೀವನ ಸಾರ್ಥಕ ಮಾಡಿಕೊಂಡ ಅಶ್ವಿನ್ ನಿಜವಾದ ಹೀರೋ. ಅವನ ತಂದೆ-ತಾಯಿ ನಿಜವಾಗಿಯೂ ನಾಯಕರು” ಎಂದರು.
ಅಂಗವಿಕಲರ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ಎಸ್. ವೆಂಕಟಕೃಷ್ಣಯ್ಯ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, “ಹನಿಹನಿಯಾಗಿ ಆರಂಭಿಸಿ ಸಮುದ್ರದಂತೆ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿಕೊಂಡ ಅಶ್ವಿನ್ ಸಾವಿರಾರು ಜನರಿಗೆ ಬೆಳಕು ಕೊಟ್ಟ ಅಮರ ಜ್ಯೋತಿ”, ಎಂದರು. ದಕ್ಷಿಣ ಭಾರತ ಮಟ್ಟದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲ ವಿಕಲ ಚೇತನರಾಗಿದ್ದರಿಂದ, ಎಲ್ಲರ ಮಾತುಗಳನ್ನೂ ಸಂಜ್ಞಾ ಭಾಷೆಯಲ್ಲಿ ವಿವರಿಸಿದವರು ಫ್ಯಾಮಿಲಿ ಕೇರ್ ಸಂಸ್ಥೆಯ ವಿಶೇಷ ಶಿಕ್ಷಕರು ಹಾಗೂ ಸಂವಹನ ಸಂಯೋಜಕರಾದ ಕೆ. ದೇವಮನೋಹರಿ.
ಕಾರ್ಯಕ್ರಮದ ಆರಂಭದಲ್ಲಿ ಉಮಾರಮೇಶ್ ಸರ್ವರನ್ನೂ ಸ್ವಾಗತಿಸಿದರು. ಉಷಾ ಶೇಖರ್ ಎಲ್ಲರನ್ನೂ ಕಾರ್ಯಕ್ರಮದ ಕೊನೆಗೆ ವಂದಿಸಿದರು.
ಮಿನುಮಿನುಗುವ ನಕ್ಷತ್ರ ಪುಸ್ತಕದ ಕಿರು ಪರಿಚಯ
ಇದು ಅಶ್ವಿನ್ ಎಂಬ ಒಬ್ಬ ವಿಕಲಚೇತನನ ಸಾಧನೆಯ ಕಥೆ. ಅಷ್ಟೇ ಅಲ್ಲ, ಅಂಗವಿಕಲತೆಯಿಂದ ಜನಿಸಿದ ಮಕ್ಕಳ ತಾಯಿ ತಂದೆಯರಿಗೆ, ಅವರ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು, 9-10 ತಿಂಗಳಲ್ಲೇ ಕಿವಿ ಕೇಳಿಸುತ್ತಿಲ್ಲವೇನೋ ಎಂಬ ಸಂದೇಹ ಬಂದಾಗ ಮಗುವನ್ನು ತಕ್ಷಣ ವಾಕ್ – ಶ್ರವಣ ಪರೀಕ್ಷೆ ತರಬೇತಿ, ವಿಶೇಷ ಉಪಚಾರಗಳಿಂದ, ಹೇಗೆ ಬೆಳಸಿ, ಅವರನ್ನು ಸಾಮಾನ್ಯರ ಜೀವನಕ್ಕೆ ತರಬಹುದು ಎಂಬ ಪ್ರಾತ್ಯಕ್ಷಿಕೆ ಮಾರ್ಗದರ್ಶನವಿದೆ.
ವಿಶೇಷ ಚೇತನರು ಉತ್ಸಾಹ-ಶ್ರಮಗಳಿಂದ ಹೇಗೆ ಮುಂದೆ ಬರಬಹುದೆಂಬ ಅನುಭವ ದರ್ಶನವಿದೆ. ಹಾಗೆಯೇ ನಮ್ಮ ದೇಹದ ಅಂಗಗಳಲ್ಲಿ ಏನೇ ತೊಂದರೆಯಾದರೂ, ತಕ್ಷಣ ತಜ್ಞ ವೈದ್ಯರಲ್ಲಿ ಧಾವಿಸಬೇಕು, ಆರೋಗ್ಯವಂತ ಮಕ್ಕಳ ಆಹಾರ ಪದ್ಧತಿ, ಜೀವನಶೈಲಿ ಅಥವಾ ದಿಢೀರೆಂದು ಆಕಸ್ಮಿಕವಾಗಿ ಯಕೃತ್ತು ಅಥವಾ ಮೂತ್ರಪಿಂಡದ ತೊಂದರೆ ಬಂದರೆ, ಆಗ ಇಡಬೇಕಾಗ ಪ್ರತಿ ಹೆಜ್ಜೆಗಳು, ಕಾಮಾಲೆಯಿಂದ ಯಕೃತ್ತಿನ ತೊಂದರೆಗೆ ತಿರುಗಿದಾಗ, ಯಕೃತ್ತಿನ ಚಿಕಿತ್ಸೆ, ನಂತರ ಯಕೃತ್ತಿನ ಕಸಿ ಆಗಬೇಕಾದರೆ, ರೋಗಿ-ಆತನ ಕುಟುಂಬ ಮಾಡಿಕೊಳ್ಳಬೇಕಾದ ಸಿದ್ಧತೆ-ವೈದ್ಯಕೀಯ ತಪಾಸಣೆ-ಚಿಕಿತ್ಸೆ -ಖರ್ಚಿನ ವಿವರಗಳು-ಕಸಿಗಾಗಿ ಇರುವ ಸರಕಾರದ ಬಿಗಿ ಕಾನೂನು-ಕುಟುಂಬ ಅನುಭವಿಸಬೇಕಾದ ಒತ್ತಡಗಳಿಗೆ ಮೊದಲೇ ಸಿದ್ಧರಾಗಿರಬೇಕಾದ ರೀತಿ, ಕಸಿಯ ವೈದ್ಯಕೀಯ-ಆರ್ಥಿಕ ಆಯಾಮಗಳು, ಇವೆಲ್ಲವುಗಳ ಮೊದಲ ಪ್ರತ್ಯಕ್ಷ ಅನುಭವ ಕಥನ ಇಲ್ಲಿದೆ. ಯಾವುದೇ ಉತ್ಪ್ರೇಕ್ಷೆ ಇಲ್ಲದೇ, ವಾಸ್ತವಿಕ ಸತ್ಯ ಅನುಭವ ಕಥೆ ಇದು.