Health Vision

Health Vision

SUBSCRIBE

Magazine

Click Here

ಟೇಕಾಫ್ ಆಗದ ಹೆಲ್ತ್ ಕಿಯೋಸ್ಕ್ …!!

ಅನಾರೋಗ್ಯದಲ್ಲಿ ಆರೋಗ್ಯ ಇಲಾಖೆ..!?

ರಾಜ್ಯದಲ್ಲಿ ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವ ಹೆಲ್ತ್ ಕಿಯೋಸ್ಕ್ ಗೆ ತುಕ್ಕು ಹಿಡಿದಿದೆಯೇ..!? ಅಥವಾ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೆಲ್ತ್ ಕಿಯೋಸ್ಕ್ ಸ್ಥಾಪನೆ ಮಾಡಿದ್ದರೂ ಯಾರ ಪುರುಷಾರ್ಥಕ್ಕೋ..!? ಎಂಬೆಲ್ಲ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಎಲ್ಲೆಡೆ ಹರಿದಾಡುತ್ತಿವೆ.
ಕಾರಣ, ರಾಜ್ಯ ಆರೋಗ್ಯ ಇಲಾಖೆ, ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆ ಹಾಗೂ ಅಗತ್ಯ ಪರೀಕ್ಷೆಗಳನ್ನು ನಡೆಸುವುದಕ್ಕಾಗಿ ರಾಜ್ಯದ ಹಲವೆಡೆ ಹೆಲ್ತ್ ಕಿಯೋಸ್ಕ್ ಸ್ಥಾಪಿಸಿದ್ದು, ಆದರೆ, ಈಗ ಆ ಹೆಲ್ತ್ ಕಿಯೋಸ್ಕ್, ಜನರ ಉಪಯೋಗಕ್ಕಿಲ್ಲದ ಕೇಂದ್ರವಾಗಿ ಮಾರ್ಪಟ್ಟಿವೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಜನರಿಗೆ ಉತ್ತಮ ಆರೋಗ್ಯ ಸೇವೆ ದೊರಕಲಿ ಎಂಬ ಆಶಯದಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಮಹಾನಗರಗಳು ಹಾಗೂ ಪ್ರಮುಖ ನಗರಗಳಲ್ಲಿ ಹೆಲ್ತ್  ಕಿಯೋಸ್ಕ್ ಗಳನ್ನು ಸ್ಥಾಪಿಸಿತ್ತು.
ಅದರಲ್ಲೂ ಆಗಿನ ಆರೋಗ್ಯ ಸಚಿವ ಯು.ಟಿ. ಖಾದರ್ ಹೆಚ್ಚಿನ ಮುತುವರ್ಜಿ ವಹಿಸಿ ಜರೂರಾಗಿ ಪ್ರಾಥಮಿಕ ಆರೋಗ್ಯ ಸೇವೆಗಳು ತಮ್ಮ ಸಮೀಪದಲ್ಲೇ ದೊರೆಯಲಿ ಎಂಬ ಕಾಳಜಿಯಿಂದ ಎಲ್ಲೆಡೆ ಈ ಆರೋಗ್ಯ ಸೇವಾ ಕೇಂದ್ರಗಳನ್ನು ಸ್ಥಾಪಿಸಿದ್ದರು. ಆದರೆ, ಈಗ ಅವರ ತವರು ಜಿಲ್ಲೆ ಮಂಗಳೂರು ಸೇರಿದಂತೆ ಹಲವೆಡೆ ಹೆಲ್ತ್ ಕಿಯೋಸ್ಕ್ ಇದ್ದು ಇಲ್ಲದಂತಾಗಿವೆ. ಸ್ಥಾಪಿಸಿ 9 ತಿಂಗಳಾದರೂ ಇನ್ನೂ ಬಾಗಿಲುಗಳೇ ಓಪನ್ ಆಗಿಲ್ಲ.
ರೋಗಿಗಳ ಪರೀಕ್ಷೆಗೆ ಪ್ರತ್ಯೇಕ ಸ್ಥಳಾವಕಾಶ, ಬಿಪಿ, ಶುಗರ್, ಇತರೆ ಪರೀಕ್ಷೆ ಉಪಕರಣಗಳು, ತೂಕದ ಯಂತ್ರ, ತಾಯಿ-ಮಕ್ಕಳಿಗೆ ಆರೋಗ್ಯ ಸೇವೆ ಮತ್ತೆ, ಪ್ರಾಥಮಿಕ ಹಂತದ ಕ್ಯಾನ್ಸರ್ ಸೇವೆ ಕೂಡ ಈ ಹೆಲ್ತ್ ಕಿಯೋಸ್ಕ್ ನಲ್ಲಿ ದೊರೆಯುತ್ತವೆ. ಆದರೆ, ಈಗ ಆ ಸೇವೆ ಜನರಿಗೆ ದೊರೆಯದಂತಾಗಿವೆ.
ಪ್ರಮುಖವಾಗಿ ಈ ಕೇಂದ್ರ ಜವಾಬ್ದಾರಿಯನ್ನು ಸಮೀಪದ ವೈದ್ಯಕೀಯ ಮಹಾವಿದ್ಯಾಲಯಗಳು ನೋಡಿಕೊಳ್ಳಬೇಕಾಗುತ್ತದೆ. ಇಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಆರೋಗ್ಯ ಸೇವೆ ದೊರಕಿಸಲು ವ್ಯವಸ್ಥೆ ಮಾಡಲಾಗಿತ್ತು.
ಮುಖ್ಯವಾಗಿ ಕಿರಿಯ ಆರೋಗ್ಯ ಸಹಾಯಕಿಯವರನ್ನು ಕಾರ್ಯನಿರ್ವಹಣೆ ಮಾಡುವುದು; ಅವರು ಮಧ್ಯಾಹ್ನದವರೆಗೆ ಕ್ಷೇತ್ರ ಕಾರ್ಯನಿರ್ವಹಣೆ ಮಾಡುವುದರಿಂದ ಅಲ್ಲಿಯವರೆಗೆ ನಿಗದಿತ ವೈದ್ಯಕೀಯ ಮಹಾವಿದ್ಯಾಲಯದ ತಜ್ಞರು ನೋಡಿಕೊಳ್ಳಬೇಕಾಗುತ್ತದೆ ಎಂದು ಯೋಜನೆ ರೂಪಿಸಲಾಗಿತ್ತು. ಆದರೆ, ಈಗ ಆ ಯೋಜನೆಯೇ ಆರೋಗ್ಯ ಇಲಾಖೆ ಮರೆತಂತಿದೆ.
ಒಂದು ಹೆಲ್ತ್ ಕಿಯೋಸ್ಕ್ ಸ್ಥಾಪನೆಗೆ ಸರಿಸುಮಾರು ನಾಲ್ಕುವರೆ ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಮಂಗಳೂರು, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ಶಿವಮೊಗ್ಗ ಬೆಳಗಾವಿ ಸೇರಿದಂತೆ ಹಲವಡೆ ಈ ಹೆಲ್ತ್ ಕಿಯೋಸ್ಕ್ ಗಳನ್ನು ಸ್ಥಾಪಿಸಲಾಗಿದೆ. ಈಗ ಈ ಆರೋಗ್ಯ ಸೇವಾ ಕೇಂದ್ರಗಳು ಜನರಿಗೆ ಅಲಭ್ಯವಾಗಿರುವುದು ಸರ್ಕಾರದ ಕೋಟ್ಯಂತರ ಹಣ ಹೋಮಕ್ಕೆ ಹಾಕಿದಂತಾಗಿದೆ.
– ವರದಿ ಎನ್‍ಜಿಆರ್

Back To Top