ಸಂಕಲ್ಪ 2020-ಕೋವಿಡ್ 19 ಆರೋಗ್ಯ ಮಾರ್ಗದರ್ಶಿ ಡಾ: ಮುರಲೀ ಮೋಹನ್ ಚೂಂತಾರು ಅವರ ಹನ್ನೊಂದನೆಯ ಕೃತಿ.
ಮಂಗಳೂರು : ಖ್ಯಾತ ವೈದ್ಯ ಸಾಹಿತಿ ಮತ್ತು ಬಾಯಿ ಮುಖ ದವಡೆ ಶಸ್ತ್ರಚಿಕಿತ್ಸಕರಾದ ಡಾ: ಮುರಲೀ ಮೋಹನ್ ಚೂಂತಾರು ಅವರ ಹನ್ನೊಂದನೆಯ ಕೃತಿ ‘ಸಂಕಲ್ಪ – 2020’ ಕೋವಿಡ್ 19 ಆರೋಗ್ಯ ಮಾರ್ಗದರ್ಶಿ ಪುಸ್ತಕವನ್ನು ಕರ್ನಾಟಕ ವಿಧಾನ ಪರಿಷತ್‍ನ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಅವರು ಬಿಡುಗಡೆ ಮಾಡಿದರು. ನಗರದ ಪ್ರೆಸ್ ಕ್ಲಬ್‍ನಲ್ಲಿ ನಡೆದ ಸರಳ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಮತ್ತು ಕರ್ನಾಟಕ ವ್ಯದ್ಯಕೀಯ ಪರಿಷತ್ ಸದಸ್ಯರಾದ ಡಾ: ಜಿ.ಕೆ.ಭಟ್ ಸಂಕಬಿತ್ತಿಲು ಅವರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು.
ಅತ್ಯಂತ ಸರಳ ಭಾಷೆಯಲ್ಲಿ ವ್ಯದ್ಯಕೀಯ ವಿಷಯಗಳನ್ನು ಸುಲಭವಾಗಿ ಮನಮುಟ್ಟುವಂತೆ ಬರೆಯಬಲ್ಲ ಡಾ: ಮುರಲೀ ಮೋಹನ್ ಚೂಂತಾರು ಅವರು ‘ಸಂಕಲ್ಪ – 2020’ ಕೋವಿಡ್ 19 ಆರೋಗ್ಯ ಮಾರ್ಗದರ್ಶಿ ಕೃತಿಯನ್ನು ಸಮಾಜಕ್ಕೆ ಅರ್ಪಿಸಿದ್ದಾರೆ. ಜಗತ್ತಿನ ಎಲ್ಲ ವ್ಯವಹಾರಗಳನ್ನು ಜನಜೀವನವನ್ನು ಅಲ್ಲೋಲ ಕಲ್ಲೋಲಗೊಳಿಸಿರುವ ಕೊರೋನಾ ಮಾಹಾಮಾರಿ ಬೇಗನೆ ಬಿಟ್ಟುಹೋಗುವಂತದ್ದಲ್ಲ. ಅದರ ಜೊತೆಗೇ ಬದುಕಲು ನಾವು ಕಲಿಯಬೇಕಿದೆ ಅದಕ್ಕಾಗಿ ಯಾವಾವ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು ಎಂಬುದನ್ನು ಡಾ: ಚೂಂತಾರು ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ ಎಂದು ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಡಾ: ಚೂಂತಾರು ಅವರು ಈ ಕೃತಿಯನ್ನು ಲಾಕ್‍ಡೌನ್ ಅವಧಿಯಲ್ಲಿ ಬರೆದು ಮುಗಿಸಲಾಗಿದೆ. ಜನರಿಗೆ ಸರಿಯಾದ ಆರೋಗ್ಯ ಮಾರ್ಗದರ್ಶನ ಮಾಡುವುದೇ ಇದರ ಉದ್ದೇಶವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಈಗಾಗಲೇ ಈ ಪುಸ್ತಕದ 100 ಪ್ರತಿಗಳನ್ನು ಖರೀದಿಸಿ ಎಲ್ಲ ತಾಲ್ಲೂಕು ಅರೋಗ್ಯ ಕೇಂದ್ರಗಳು ಹಾಗೂ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿತರಿಸಲು ಮುಂದಾಗಿದೆ ಎಂದು ತಿಳಿಸಿದರು. ಔಷಧಿ ಮತ್ತು ಲಸಿಕೆ ಇಲ್ಲದ ಈ ಕೊರೋನಾ ಮಹಾಮಾರಿ ರೋಗವನ್ನು ಜಗತ್ತಿನಿಂದ ನಿರ್ನಾಮ ಮಾಡುವುದು ಸುಲಭವಲ್ಲ. ವ್ಯದ್ಯಲೋಕಕ್ಕೆ ಸವಾಲು ಹಾಕಿ ಮನುಕುಲವನ್ನು ಇನ್ನಿಲ್ಲದಂತೆ ಕಾಡುತ್ತಾ ಕಾಡ್ಗಿಚ್ಚಿನಂತೆ ಜಗತ್ತಿನಾದ್ಯಂತ ಪಸರಿಸುತ್ತಿರುವ ಈ ಕೊರೋನಾ ರೋಗ ಗೆಲ್ಲಲು ಎಚ್ಚರಿಕೆ ಒಂದೇ ಮದ್ದು ರೋಗದ ಸಂಕೋಲೆಯನ್ನು ತುಂಡರಿಸಬೇಕಾಗಿದೆ ಎಂದು ಡಾ: ಚೂಂತಾರು ಅಭಿಪ್ರಾಯಪಟ್ಟರು.
ಜನರೆಲ್ಲರೂ ಸಂಘಟಿತರಾಗಿ ಈ ಕೊರೋನಾ ರೋಗದ ವಿರುದ್ದ ಯುದ್ದ ಸಾರಬೇಕಾಗಿದೆ. ಔಷಧಿ ಕಂಡು ಹಿಡಿಯುವ ತನಕ ರೋಗ ಬರದಂತೆ ತಡೆಯುವುದರಲ್ಲಿಯೇ ಜಾಣತನ ಇದೆ ಎಂದರು. ಡಾ: ಜಿ.ಕೆ.ಭಟ್ ಸಂಕಬಿತ್ತಿಲು ಅವರು ಮಾತನಾಡಿ ಜನರಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಡಾ: ಚೂಂತಾರು ಅವರು ತಮ್ಮ ವ್ಯದ್ಯಕೀಯ ಕೃತಿಗಳ ಮೂಲಕ ಹಲವಾರು ವರ್ಷಗಳಿಂದ ಮಾಡುತ್ತಿದ್ದಾರೆ. ಸಂಕಲ್ಪ 2020 ಅವರ 11ನೇ ಕೃತಿಯಾಗಿದ್ದು ಜನರಲ್ಲಿ ಕೊರೋನಾ ರೋಗದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಬಹುಮುಖ್ಯ ಭೂಮಿಕೆ ವಹಿಸುವುದರಲ್ಲಿ ಯಾವುದೇ ಸಂದೇಹ ಇಲ್ಲ ಅವರ ವ್ಯದ್ಯಕೀಯ ಜ್ಞಾನ ಭಂಡಾರ ಇನ್ನಷ್ಟು ವೃದ್ದಿಸಲಿ ಮತ್ತು ಜನಸಾಮಾನ್ಯರಲ್ಲಿ ಅದರಿಂದ ಪ್ರಯೋಜನ ಉಂಟಾಗಲಿ ಎಂದು ಹಾರೈಸಿದರು. ಇದೇ ಸಂಧರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಗೆ ನೂರು ಪುಸ್ತಕಗಳನ್ನು ಉಚಿತವಾಗಿ ನೀಡಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಡಲಾಗುತ್ತದೆ ಎಂದು ಲೇಖಕರು ತಿಳಿಸಿದರು.