ವಿಶ್ವದ ಶೇ. 95ರಷ್ಟು ಜನರು ಅಶುದ್ಧ ಗಾಳಿಯನ್ನೇ ಉಸಿರಾಡುತ್ತಿದ್ದಾರೆ. ಮಾಲಿನ್ಯ ಉಂಟು ಮಾಡುವುದರಲ್ಲಿ ಭಾರತ ಮತ್ತು ಚೀನಾ ಪಾಲು ಅತಿ ಹೆಚ್ಚು ಎಂದು ಅಧ್ಯಯನ ವರದಿಯೊಂದು ಹೇಳಿದೆ.
`ಗಾಳಿಯಲ್ಲಿರುವ ದೂಳಿನಲ್ಲಿರುವ ಚಿಕ್ಕಚಿಕ್ಕ ಕಣಗಳನ್ನು ಉಸಿರಾಡಿ ಅನಾರೋಗ್ಯ ಪೀಡಿತರಾಗುತ್ತಿರುವ ವಿಶ್ವದ ಒಟ್ಟು ಜನ ಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಈ ಎರಡು ದೇಶದಲ್ಲೇ ಇದ್ದಾರೆ’ ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಅಮೆರಿಕದ `ಹೆಲ್ತ್ ಎಫೆಕ್ಟ್ ಇನ್‍ಸ್ಟಿಟ್ಯೂಟ್ ಸಂಶೋಧಕರು ಈ ಅಧ್ಯಯನವನ್ನು ನಡೆಸಿರುತ್ತಾರೆ.
`ಅಧಿಕ ರಕ್ತದೊತ್ತಡ, ಆಹಾರ ಕ್ರಮ ಮತ್ತು ಧೂಮಪಾನ ನಂತರ ವಿಶ್ವದಲ್ಲಿ ಅತಿಹೆಚ್ಚು ಜನರು ಸಾವನ್ನಪ್ಪುತ್ತಿರುವುದಕ್ಕೆ ವಾಯುಮಾಲಿನ್ಯ ಕಾರಣವಾಗಿದೆ. ಕಳೆದ ವರ್ಷ ಈ ಮಾಲಿನ್ಯದಿಂದಾಗಿ 60 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಮಾಲಿನ್ಯದಿಂದಾಗಿ ಪಾಶ್ವವಾಯು, ಹೃದಯಾಘಾತ, ಶ್ವಾಸಕೋಶ ಕ್ಯಾನ್ಸರ್ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚುತ್ತಿವೆ ಎಂದು ವರದಿಯು ತಿಳಿಸಿದೆ.
ಹೊರಗಿನ ವಾತಾವರಣ ಮಾತ್ರವಲ್ಲದೆ ಮನೆಯ ಒಳಗೂ ಮಲಿನ ವಾತಾವರಣದಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಅಡುಗೆಗೆ ಬಳಸುವ ಉರುವಲುಗಳು ಕೂಡ ಮನುಷ್ಯನನ್ನು ಮಾಲಿನ್ಯಕ್ಕೆ ಒಡ್ಡುತ್ತಿವೆ. 2016ರಲ್ಲಿ ವಿಶ್ವದಲ್ಲಿ 200 ಕೋಟಿಗೂ ಹೆಚ್ಚು ಜನರು ಇಂತಹ ಮಾಲಿನ್ಯಕ್ಕೆ ತೆರೆದುಕೊಂಡಿದ್ದಾರೆ ಎಂದು `ದಿ ಗಾರ್ಡಿಯನ್’ ವರದಿ ಮಾಡಿದೆ.
ಮನೆಯೊಳಗಿನ ವಾಯುಮಾಲಿನ್ಯವು ಸುತ್ತಲಿನ ಪ್ರದೇಶದ ವಾಯು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಭಾರತದಲ್ಲಿ ವಾಯುಮಾಲಿನ್ಯದಿಂದ ಮೃತಪಟ್ಟವರ ನಾಲ್ವರ ಪೈಕಿ ಒಬ್ಬರು ಇಂತಹ ಮಾಲಿನ್ಯಕ್ಕೆ ಬಲಿಯಾಗುತ್ತಿದ್ದಾರೆ. ಭಾರತದಲ್ಲಿ ಮನೆಯೊಳಗೆ ಅಡುಗೆ ಇಂಧನ ಎಲ್‍ಪಿಜಿ ಮತ್ತು ಎಲೆಕ್ಟ್ರಿಕ್ ಸ್ಟೌವ್‍ಗಳ ಬಳಕೆಯಿಂದ ಘನ ಇಂಧನದ ಬಳಕೆ ಕಡಿಮೆಯಾಗಿದೆ.