ಸಿರಿಧಾನ್ಯದಿಂದ ತಯಾರಿಸಿದ ತಿಂಡಿ ಸವಿಯಲು ಅವಕಾಶ
ಜೂನ್ 8ರಿಂದ ಪ್ರತಿದಿನ ಬೆಳಗ್ಗೆ 11 ರಿಂದ ನಾನಾ ತರಬೇತಿ
ಗ್ರಾಮೀಣ ಕುಟುಂಬ ಸಂಸ್ಥೆಯು ಜೂನ್ 8ರಿಂದ ಮೂರು ದಿನಗಳ ಕಾಲ ಲಾಲ್‍ಬಾಗ್‍ನಲ್ಲಿ ಸಿರಿಧಾನ್ಯ ಮೇಳ ಆಯೋಜಿಸಿದೆ.
ಲಾಲ್‍ಬಾಗ್‍ನ ಡಾ. ಎಂ.ಹೆಚ್. ಮರಿಗೌಡ ಹಾಲ್‍ನಲ್ಲಿ ನಡೆಯುತ್ತಿರುವ 6ನೇ ಮೇಳ ಇದಾಗಿದೆ. ಒಟ್ಟಾರೆ ಮೇಳದಲ್ಲಿ ಸುಮಾರು 100 ಮಳಿಗೆಗಳನ್ನು ತೆರೆಯಲಿದ್ದು, ಸಗಟು ಖರೀದಿದಾರರಿಗೆ ನೇರವಾಗಿ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಗ್ರಾಮೀಣ ಕುಟುಂಬ ಸಂಸ್ಥಾಪಕ ಅಧ್ಯಕ್ಷರಾದ ಎಂ.ಹೆಚ್. ಶ್ರೀಧರಮೂರ್ತಿ ತಿಳಿಸಿದರು.
ವಿವಿಧ ಬಗೆಯ ಸಿರಿಧಾನ್ಯಗಳು ಮತ್ತು ಮಹಿಳಾ ಸಂಘಗಳು ತಯಾರಿಸಿದ ಪದಾರ್ಥಗಳು, ಬಗೆ ಬಗೆಯ ಸಿರಿಧಾನ್ಯ ತಿಂಡಿಗಳು ಮೇಳದಲ್ಲಿ ದೊರೆಯಲಿವೆ. ಜೂ. 8 ರಂದು ಬೆಳಗ್ಗೆ 11 ಗಂಟೆಗೆ ಉತ್ತರ ಕರ್ನಾಟಕ, ಕರಾವಳಿ ಮತ್ತಿತರ ಭಾಗಗಳ 10 ಮಂದಿ ಸಿರಿಧಾನ್ಯ ಬೆಳೆಯುವ ರೈತರನ್ನು ಸನ್ಮಾನಿಸಲಾಗುವುದು. ಜೂ. 9ರಂದು ಬೆಳಗ್ಗೆ 11ಕ್ಕೆ ರೈತರಿಗೆ ಸಿರಿಧಾನ್ಯ ಬೆಳೆಗಳ ಕುರಿತು ತರಬೇತಿ ನೀಡಲಾಗುವುದು. ಅಂದು ಮಧ್ಯಾಹ್ನ 2:30ಕ್ಕೆ ಅಡುಗೆ ಆಸಕ್ತರಿಗೆ ಸಿರಿಧಾನ್ಯ ಅಡುಗೆ ಕುರಿತು ತರಬೇತಿ ನೀಡಲಾಗುವುದು. ಜೂ.10ರಂದು ಬೆಳಗ್ಗೆ 11 ಗಂಟೆಗೆ ಡಾ. ಖಾದರ್ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.
ಮೇಳದಲ್ಲಿ ಕೈಮಗ್ಗ, ಖಾದಿ ವಸ್ತ್ರಗಳು ಹಾಗೂ ಕರಕುಶಲ ಉತ್ಪನ್ನಗಳ ಮಾರಾಟವೂ ನಡೆಯಲಿದೆ. ಇದೇ ವೇಳೆ ಮೂರು ದಿನಗಳ ಮೇಳದಲ್ಲಿ ಮಣ್ಣಿನ ಅಡುಗೆ ಪಾತ್ರೆಗಳು, ತಾಮ್ರದ ಕುಡಿಯುವ ನೀರನ ಬಾಟಲಿಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ದುಬಾರಿ ಬೆಲೆ
ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಬೆಳೆದರೂ ಅವುಗಳನ್ನು ತಮಿಳುನಾಡು, ಮಹಾರಾಷ್ಟ್ರ, ಆಂಧ್ರ ಮತ್ತಿತರ ರಾಜ್ಯಗಳಿಗೆ ಅಕ್ಕಿ ಮಾಡಿಸಿಕೊಂಡು ಬಂದು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಈ ವಿಚಾರದಲ್ಲಿ ಸರಕಾರದ ಗಮನ ಸೆಳೆಯಲು ಮೇಳಗಳು ಸಹಾಯಕ, ಎಂದು ಎಂ.ಹೆಚ್. ಶ್ರೀಧರ್‍ಮೂರ್ತಿ ತಿಳಿಸಿದರು.
ಸ್ಥಳ : ಡಾ. ಎಂ.ಹೆಚ್. ಮರಿಗೌಡ ಸ್ಮಾರಕ ಭವನ, ಲಾಲ್‍ಬಾಗ್, ಸಮಯ : ಬೆಳಗ್ಗೆ 8 ರಿಂದ ಸಂಜೆ 7ರ ವರೆಗೆ. ಮಾಹಿತಿಗಾಗಿ ದೂರವಾಣಿ : 42096984, ಮೊಬೈಲ್ : 9980651786