Vydyaloka

ಜಲ ಚಿಕಿತ್ಸೆ

ಜಲ ಚಿಕಿತ್ಸೆ .“ಸರ್ವಂ ದ್ರವ್ಯಂ ಪಾಂಚಭೌತಿಕಂ” ಎಂದು ಭಾರತೀಯ ಶಾಸ್ತ್ರಗಳು ಹೇಳುತ್ತವೆ. ಅಂದರೆ, ಜಗತ್ತಿನಲ್ಲಿರುವ ಪ್ರತಿ ದ್ರವ್ಯವೂ ಪಂಚಮಹಾಭೂತಗಳಿಂದ ಆಗಿವೆ ಎಂದರ್ಥ. ಹೇಗೆ ಆಧುನಿಕ ವಿಜ್ಞಾನ ಪ್ರೋಟೋನ್, ಎಲೆಕ್ಟ್ರಾನ್ ಮತ್ತು ನ್ಯೂಟ್ರಾನ್ ಗಳಿಂದ ಪ್ರತಿ ಅಣುವೂ ಕೂಡಿರುತ್ತದೆ ಎಂದು ಹೇಳುತ್ತದೆಯೋ ಹಾಗೆಯೇ ಭಾರತೀಯ ವಿಜ್ಞಾನವು ಪ್ರತಿ ವಸ್ತುವೂ ಪಂಚಮಹಾಭೂತಗಳಿಂದ ಕೂಡಿರುತ್ತದೆ ಎಂದು ಹೇಳುತ್ತದೆ. ಹಾಗಾಗಿ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಯೋಗದಂತಹ ಚಿಕಿತ್ಸೆಗಳ ತಳಹದಿ ಈ ಪಂಚಮಹಾಭೂತಗಳೇ. ಪಂಚ ಮಹಾಭೂತಗಳಿಂದ ಆದ ಈ ದೇಹಕ್ಕೆ ಬರುವ ರೋಗಗಳಿಗೆ ಅವುಗಳಲ್ಲಾಗುವ ಏರುಪೇರೇ ಕಾರಣ. ಹಾಗಾಗಿ ಅವುಗಳನ್ನು ಸರಿದೂಗಿಸಲು ಆಕಾಶ, ಪೃಥ್ವಿ, ಜಲ, ವಾಯು, ಅಗ್ನಿ ತತ್ವಗಳಿಂದಲೇ ಚಿಕಿತ್ಸೆ ಕೊಡಲು ಸಾಧ್ಯ. ಇಂದು ನಾವು ಜಲ ಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳೋಣ.

ನೀರು, ರೋಗಿಯನ್ನು ನಿರೋಗಿಯಾಗಿಸುತ್ತದೆ; ನಿರೋಗಿಯನ್ನು ಶಕ್ತಿವಂತನನ್ನಾಗಿಸುತ್ತದೆ ಎಂದಿವೆ ನಮ್ಮ ಗ್ರಂಥಗಳು. ಹಾಗಾಗಿ ನೀರು ಕುಡಿಯುವುದು ಕೂಡಾ ಒಂದು ಚಿಕಿತ್ಸೆಯೇ. ನೀರಿನಿಂದ ಜೀವಕೋಶಗಳಿಗೆ ಪೋಷಣೆ ಸಿಗುವುದರ ಜೊತೆಗೆ ಅದರಲ್ಲಿರುವ ಕಲ್ಮಶಗಳನ್ನು ಹೊರಹಾಕುವ ಕೆಲಸವನ್ನೂ ಅದು ಮಾಡುತ್ತದೆ. ಆಯುರ್ವೇದದಲ್ಲಿ ಹದಿಮೂರು ರೀತಿಯ ವೇಗಗಳು ಅಂದರೆ ಪ್ರಕೃತಿಯ ಕರೆಗಳನ್ನು ತಡೆಯಬಾರದು ಎಂದಿದ್ದಾರೆ. ಅವುಗಳಲ್ಲಿ ಬಾಯಾರಿಕೆಯೂ ಒಂದು. ಅದನ್ನು ತಡೆಯುವುದರಿಂದ ಹಲವು ರೀತಿಯ ಖಾಯಿಲೆಗಳು ಬರುತ್ತವೆ. ಹಾಗಾಗಿ ಬಾಯಾರಿಕೆಯಾದಾಗಲೆಲ್ಲಾ ನೀರನ್ನು ಸೇವಿಸಲೇಬೇಕು. ಆದರೆ ನೀರಿನ ಸೇವನೆಯ ವಿಷಯದಲ್ಲಿ ಕೆಲವು ನಿಯಮಗಳನ್ನು ನಮ್ಮ ಶಾಸ್ತ್ರಗಳು ವಿಧಿಸುತ್ತವೆ.

ಅವುಗಳನ್ನು ಸರಿಯಾಗಿ ಪಾಲಿಸಲೇಬೇಕು. ಮಳೆಗಾಲದಲ್ಲಿನ ಮಳೆಯ ನೀರು ಅಮೃತ ಸಮಾನ ಎಂದಿದೆ ಆಯುರ್ವೇದ. ಹಾಗಾಗಿ ನೆಲಕ್ಕೆ ಬಿದ್ದ ನೀರು ಪಾತ್ರೆಯೊಳಗೆ ಸಿಡಿಯದಂತೆ ಅದನ್ನು ಸಂಗ್ರಹಿಸಿ ಸೋಸಿ 24 ಘಂಟೆಯ ಒಳಗೆ ಸೇವಿಸಬೇಕು. ಇದು ವಿವಿಧ ರೀತಿಯ ನೀರುಗಳಲ್ಲಿ ಅತ್ಯಂತ ಶ್ರೇಷ್ಠವಾದದ್ದು. ಊಟದ ಸಮಯದಲ್ಲಿ ನೀರಿನ ಸೇವನೆಯನ್ನು ಹೆಚ್ಚು ಜಾಗ್ರತೆಯಿಂದ ಮಾಡಬೇಕು. ಅವಶ್ಯವಾದಾಗ, ತುತ್ತುಗಳ ಮಧ್ಯದಲ್ಲಿ ಗುಟುಕಿನಷ್ಟು ನೀರನ್ನು ತೆಗೆದುಕೊಂಡರೆ ಅದು ಜೀರ್ಣಕಾರಿಯಾಗುತ್ತದೆ. ಕೊಬ್ಬಿನಂಶ ಹೆಚ್ಚಿರುವ ಆಹಾರ ಸೇವಿಸುವಾಗ ಬಿಸಿನೀರಿನ ಗುಟುಕುಗಳನ್ನು ತೆಗೆದುಕೊಳ್ಳುವುದು ಇನ್ನೂ ಹಿತಕಾರಿ.

ಆದರೆ ಅತಿಯಾಗಿ ನೀರನ್ನು ಸೇವಿಸಿದರೆ ಅದು ಅಜೀರ್ಣಕಾರಕವಾಗುತ್ತದೆ. ಊಟ ಮುಗಿಯುತ್ತಿದ್ದಂತೆ ಗಟಗಟನೇ ನೀರಿನ ಸೇವನೆ ಮಾಡಿದರೆ ಅದು ಬೊಜ್ಜಿಗೆ ಕಾರಣವಾಗುತ್ತದೆ. ಊಟದ ಪ್ರಾರಂಭದಲ್ಲಿ ಕುಡಿದರೆ ಅದು ಕೃಶತೆ ಮತ್ತು ದೌರ್ಬಲ್ಯವನ್ನು ತರುತ್ತದೆ ಎನ್ನುತ್ತದೆ ಆಯುರ್ವೇದ. ಬಿಸಿ ನೀರಿನ ಸೇವನೆ ಸರಿಯೋ ತಣ್ಣೀರಿನ ಸೇವನೆಯೋ ಎಂಬುದು ಹಲವರ ಪ್ರಶ್ನೆ. ಮದ್ಯಪಾನ ಮಾಡಿದಾಗ, ದಣಿದಾಗ, ವಾಂತಿ, ತಲೆಸುತ್ತು ಇದ್ದಾಗ, ಬಿಸಿಲಿನಿಂದ ಬಂದಾಗ, ಬಾಯಾರಿಕೆ ಇದ್ದಾಗ ಮತ್ತು ಪಿತ್ತಕ್ಕೆ ಸಂಬಂಧಿಸಿದ ರೋಗಗಳಿದ್ದಾಗ ತಣ್ಣೀರು ಸರಿ. ಅಜೀರ್ಣ, ಗಂಟಲಿನ ಸಮಸ್ಯೆ, ಅಸ್ತಮಾ, ಜ್ವರ, ಮೂತ್ರಾಶಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಕಫ ಹಾಗೂ ವಾತಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳಲ್ಲಿ ಬಿಸಿನೀರು ಹೆಚ್ಚು ಲಾಭದಾಯಕ.

ಭೈಷಜ್ಯ ರತ್ನಾವಳಿ ಮುಂತಾದ ಗ್ರಂಥಗಳ ಪ್ರಕಾರ, ಆರೋಗ್ಯವಂತ ವ್ಯಕ್ತಿ, ಪ್ರತಿದಿನ ಸೂರ್ಯೋದಯದ ಮೊದಲು ಮುಕ್ಕಾಲು ಲೀಟರ್ ನಷ್ಟು ನೀರನ್ನು ಸೇವಿಸುವುದರಿಂದ ಜ್ಞಾನೇಂದ್ರಿಯಗಳ ಶಕ್ತಿ ವೃದ್ಧಿಯಾಗುತ್ತದೆ; ಅಕಾಲಿಕವಾಗಿ ಚರ್ಮ ಸುಕ್ಕುಗಟ್ಟುವುದು, ಕೂದಲು ಬೆಳ್ಳಗಾಗುವುದು, ಧ್ವನಿ ಹಾಳಾಗುವ ಸಮಸ್ಯೆಗಳ ನಿವಾರಣೆಯಾಗುತ್ತದೆ. ಇದಕ್ಕೇ ಉಷಃಪಾನ ಎಂದು ಕರೆಯುವುದು. ಇನ್ನು ಪ್ರಕೃತಿ ಚಿಕಿತ್ಸೆಯಲ್ಲಂತೂ ಚಿಕ್ಕ ಪುಟ್ಟ ಖಾಯಿಲೆಗಳಿಂದ ಹಿಡಿದು ಸಂತಾನ ಹೀನತೆಯಂತಹ ಸಮಸ್ಯೆಗಳವರೆಗೆ ನೀರಿನಿಂದ ಚಿಕಿತ್ಸೆಯನ್ನು ಕೊಡಲಾಗುತ್ತದೆ. ಜಲನೇತಿ, ವಮನಧೌತಿ, ಕಟಿಸ್ನಾನ, ಪಾದಸ್ನಾನ, ಹಸ್ತ ಸ್ನಾನ, ಉಗಿಸ್ನಾನ ಮುಂತಾದ ಹಲವು ಚಿಕಿತ್ಸೆಗಳಲ್ಲಿ ನೀರೇ ಔಷಧ. ಆದರೆ, ಅತಿಯಾದರೆ ಅಮೃತವೂ ವಿಷ ಎಂಬಂತೆ, ನೀರಿನ ಅತಿಯಾದ ಸೇವನೆಯಿಂದ ಅಜೀರ್ಣಕ್ಕೆ ಸಂಬಂಧಿಸಿದ ಹಲವು ಖಾಯಿಲೆಗಳು ಬರುತ್ತವೆ ಎನ್ನುತ್ತದೆ ಆಯುರ್ವೇದ. ಹಲವು ರೀತಿಯ ಖಾಯಿಲೆಗಳಲ್ಲಿ ನೀರನ್ನು ತುಂಬಾ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು ಎಂದೂ ಹೇಳಿದೆ. ಒಟ್ಟಿನಲ್ಲಿ, ಸರಿಯಾಗಿ ಬಳಸಿಕೊಂಡರೆ ನೀರು ಔಷಧವಾಗುತ್ತದೆ; ಅಮೃತವೂ ಆಗುತ್ತದೆ.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.com; nisargamane6@gmail.com
http://nisargamane.com
Share this: