ಇರ್ಫಾನ್ ಖಾನ್ ಉತ್ತಮ ನಟ ಅದರಲ್ಲಿ ಎರಡು ಮಾತಿಲ್ಲ. ಆತನಿಗೆ ತೀವ್ರ ತರಹದ ಕ್ಯಾನ್ಸರ್ ಬಂದುದು ತಿಳಿದು ಬೇಸರವಾಗಿತ್ತು.ತೀವ್ರ ಹೋರಾಟದ ನಂತರ ಕ್ಯಾನ್ಸರ್ ಗೆದ್ದುಬಿಟ್ಟಿತ್ತು.
ಅಂದು ಬೆಳಿಗ್ಗೆ ಕ್ಲಿನಿಕ್‌ನತ್ತ ಧಾವಿಸುತಿದ್ದೆ. ಮಿತ್ರನೊಬ್ಬ ಕರೆಮಾಡಿ” ಒಂದು ತುಂಬಾ ಸಿರಿಯಸ್ ಕೇಸಿದೆ. ಡೆಮೋಕ್ರಾಟಿಕ್ ರಿಪಬ್ಲಿಕ್ ಆಫ ಕಾಂಗೋಗೆ ಒಯ್ಯಬೇಕು, ದಯವಿಟ್ಟು ಸಹಾಯ ಮಾಡು” ಎಂದು ಅಂಗಲಾಚತೊಡಗಿದ. “ನನ್ನತ್ರ ವಿಸಾ ಇಲ್ಲ ನಾ ಹೋಗಲಾರೆ” ಎಂದು ನುಣುಚಿಕೊಳ್ಳಲು ಪ್ರಯತ್ನಿಸಿದೆ. ಮಿತ್ರನ ಹೋಮ್‌ವರ್ಕ್ ಚನ್ನಾಗಿತ್ತು.
“ನಿನ್ ಡ್ರಾಮಾ ನಂಗೊತ್ತು, ನೀನು ಪೇಷಂಟ್ ಎತ್ಕೊಂಡು ಇಸ್ತಾಂಬುಲ್‌ಗೆ ಹೋಗು. ಅಲ್ಲಿಗೆ ಕಾಂಗೋದ ವೈದೈನೊಬ್ಬ ಬಂದಿಳಿತಾನೆ, ಅವನ ಕೈಗೆ ಇಸ್ತಾಂಬುಲ್ ಏರ್‌ಪೋರ್ಟ್ ಪೇಷಂಟ್ ಹ್ಯಾಂಡೋವರ್ ಮಾಡು. ಆತ ರೋಗಿನಾ ಮನೆ ಸೇರಿಸ್ತಾನೆ. ಇಸ್ತಾಂಬುಲ್ ಸುತ್ತಿ ಮಜಾ ಮಾಡಿ ಬಾ” ಎಂದಾಗ ಬಿಗುಮಾನದಿಂದಲೇ ಅಣಿಯಾದೆ.
“ಪೇಷಂಟ್‌ನದು ಕ್ಯಾನ್ಸರ್‌ನ ಲಾಸ್ಟ್ ಸ್ಟೇಜ್…!
“ಪೇಷಂಟ್‌ನದು ಕ್ಯಾನ್ಸರ್‌ನ ಲಾಸ್ಟ್ ಸ್ಟೇಜ್…! ಕಾಂಗೋದ ಸರ್ಜನ್ ಒಬ್ಬರು ಚೆನ್ನೈನಲ್ಲಿ ಕಿಮೋಥೆರಪಿ ಟ್ರೀಟ್ಮೆಂಟ್ ಮಾಡಿಸ್ತಾ ಇದ್ರು. ಕ್ಯಾನ್ಸರ್ ಮಿತಿ ಮೀರಿ ಹಬ್ಬಿದೆ. ಬೆರಳಣಿಕೆಯಷ್ಟು ದಿನಗಳು ಮಾತ್ರ. ಅಂತಿಮ ದಿನಗಳನ್ನು ಮನೆಯಲ್ಲೆ ಕಳೆಯಬೇಕಂತೆ. ಸುತ್ತಿ ಬಳಸಿ ಯಾಕೆ ಹೇಳೋದು. ಪೇಷಂಟು ತಮ್ಮೂರಲ್ಲೆ ಸಾಯ್ಬೇಕಂತೆ. ಕರ್ಕೊಂಡೋಗು ಮಾರಾಯಾ…!! ಆತನು ಡಾಕ್ಟ್ರೇ. ವೀಲ್ ಚೇರ್ ಮೇಲೆ ಇರ್ತಾನೆ. ಆಫ್ರಿಕನ್, ಸ್ವಲ್ಪ ಭಾರಾ ಇರಬಹುದು. ನೀನೆ ಎತ್ತಿ ಇಳಿಸಬೇಕು. ಸೇಕ್ರಮ್ ಫ್ರಾಕ್ಚರ್ ಆಗಿ ಕಾಲುಗಳೆರಡು ಪಾರಾಲೈಸ್ ಆಗಿದೆ. ನೋವಿಗೆ ಟ್ರಮಾಡಾಲ್ ಕೊಟ್ಕೋ ಸಾಕು. ಬಾಂಬೆ ಟು ಇಸ್ತಾಂಬುಲ್ ಡೈರೆಕ್ಟ್ ಫ್ಲೈಟು, ಅಪ್ ಅಂಡ್ ಡೌನ್ ಬಿಸಿನೇಸ್ ಕ್ಲಾಸು. ಈವತ್ತು ಈ – ವಿಸಾ ಅಪ್ಲಿಕೇಷನ್ ಹಾಕ್ತಿವಿ. ನಾಳೆ ನಾಡಿದ್ದಕ್ಕೆ ರೆಡಿಯಾಗು ” ಎಂದು ಕರೆಮುಗಿಸಿದ.
ಮರುದಿನ ವಿಮಾನ ಟಿಕಿಟು, ರೋಗಿಯ ವಿವರಗಳು ಎಲ್ಲಾ ಬಂದವು. ಬೆಂಗಳೂರಿನಿಂದ ಚೆನ್ನೈಗೆ ಹಾರಿ ಆಸ್ಪತ್ರೆಯ ಪಕ್ಕದ ಹೊಟೇಲಿನಂತಹ ಗೆಸ್ಟ್‌ಹೌಸನಲ್ಲಿದ್ದ ರೋಗಿಯ ಮಾತನಾಡಿಸಿದೆ. ಅಜಾನುಬಾಹು ಆಫ್ರಿಕನ್ ವೈದ್ಯನನ್ನು ಮೂತ್ರ ಪಿಂಡದ ಕ್ಯಾನ್ಸರ್ ತಿಂದುಹಾಕಿತ್ತು, ಕೆಲವೆ ದಿನಗಳಲ್ಲಿ ಅತ ಸಾಯುವವನಿದ್ದ. ಅಫ್ಘಾನಿಸ್ತಾನದ ಯುಧ್ದ ಭೂಮಿಯಲ್ಲಿ ಅಪಾರ ಸೇವೆ ಸಲ್ಲಿಸಿದ ಮಹಾನ್ ವೈದ್ಯ. ಆತನ ಕೆಲಸದ ಹಿನ್ನಲೆ ಕೇಳಿ ಕ್ಷಣದಲ್ಲಿ ಆತನ ಅಭಿಮಾನಿಯಾಗಿಬಿಟ್ಟೆ. ರೋಗಿ, ಆತನ ಮಡದಿಯೊಂದಿಗೆ ಹೊರಟು ಚೆನ್ನೈನಿಂದ ಮುಂಬೈಗೆ ಬಂದು ಇಳಿದಿದ್ದಾಯ್ತು, ಬಿಸಿನೆಸ್ ಲೌಂಜ್ನಲ್ಲಿ ಕೊಂಚ ವಿರಾಮದ ನಂತರ ಮಧ್ಯರಾತ್ರಿ ಟರ್ಕಿಷ್ ವಿಮಾನ ಸಂಸ್ಥೆಯ ವಿಮಾನದಲ್ಲಿ ಇಸ್ತಾಂಬುಲ್‌ವರೆಗೆ ಪಯಣ. ಟರ್ಕಿಷ್ ವಿಮಾನ ಹತ್ತಿ ರೋಗಿಯನ್ನು, ರೋಗಿಯ ಮಡದಿಯನ್ನು ಬಾಗಿಲಿನ ಹತ್ತಿರದ ಅಕ್ಕಪಕ್ಕದ ಆಸನಗಳಲ್ಲಿ ಕೂರಿಸಿ ತುಂಬ ಹಿಂದೆ ಇದ್ದ ನನ್ನ ಆಸನದತ್ತ ಹೋದೆ.
ಪಕ್ಕದ ಆಸನದಲ್ಲಿ ಸಿನಮಾ ನಟ ಇರ್ಫಾನ್ ಖಾನ್:
“ನೀನು ಸಿನೆಮಾ ನಟ ಇದ್ರೆ ಇರ್ತಿಯಾ? ನಾನೇನು ಕಮ್ಮಿನಾ? ನೀನು ಆಕ್ಟರ್ ಆದ್ರೆ ನಾ…. ನಾನು ಡಾಕ್ಟರ್..” ಎಂದು ಮನಸಿನಲ್ಲಿ ಬೈದುಕೊಂಡೆ. ಆತನ ಚಲನವಲನ ಗಮನಿಸುತ್ತ ರೋಗಿಯ ಇಂಜೆಕ್ಷನ್, ಬಿಪಿ ನೋಡಿಕೊಳ್ಳುತ್ತ ಪ್ರಯಾಣ ಮುಂದುವರೆಯಿತು. ಎಕಾನಮಿ ಕ್ಲಾಸಿನಿಂದ ಒಬ್ಬ ಹಿರೋಯಿನ್ ಹಾಗೂ ಇನ್ನೋಬ್ಬ ಸಹನಟನಂತಹ ವ್ಯಕ್ತಿ ಆಗಾಗ ಬಂದು ಇರ್ಫಾನ್‌ನನ್ನು ಮಾತನಾಡಿಸಿ ಹೋಗುತಿದ್ದರು. ಕೊನೆಗೂ ವಿಮಾನ ಟರ್ಕಿಯಲ್ಲಿ ಇಳಿದು ನಾನು ರೋಗಿಯನ್ನು ಕಾಂಗೋದ ವೈದ್ಯರಿಗೆ ಹಸ್ತಾಂತರಿಸಿದೆ. ಇರ್ಫಾನ್ ವರ್ತನೆ ನೆನಪಿಸಿಕೊಳ್ಳುತ್ತ ನನ್ನ ಹೋಟೆಲ್ ಸೇರಿದೆ. ಎರಡು ದಿನಗಳಲ್ಲಿ ಭಾರತಕ್ಕೆ ಮರಳಿದೆ. ಅಂದಿನಿಂದ ಇರ್ಫಾನ್‌ನ ಬಗ್ಗೆ ಪ್ರತಿ ವಾರ್ತೆಗಳತ್ತ ಕಣ್ಣು ಹೋಗಿಯೆ ಹೋಗುತಿತ್ತು. ಸಿನೆಮಾದ ಹುಚ್ಚೇನೂ ಇಲ್ಲದ ನಾನು ಆತ ನಟಿಸಿದ ಒಂದೆರಡು ಚಿತ್ರಗಳನ್ನು ನೋಡಿದೆ, ಆತ ಉತ್ತಮ ನಟ ಅದರಲ್ಲಿ ಎರಡು ಮಾತಿಲ್ಲ. ಆತನಿಗೆ ತೀವ್ರ ತರಹದ ಕ್ಯಾನ್ಸರ್ ಬಂದುದು ತಿಳಿದು ಬೇಸರವಾಗಿತ್ತು.
ಕ್ಯಾನ್ಸರ್ ರೋಗಿಗಳು, ಅವರ ಕುಟುಂಬದ ಪರದಾಟಗಳು ಅಪಾರ:
ಸರಕಾರದ ಒಂದು ಮುತ್ಸದ್ದಿ ಆರೋಗ್ಯ ಯೋಜನೆಯ ಅನುಷ್ಠಾನ ಮುಖ್ಯಸ್ಥನಾಗಿ ನಾನು ನೋಡಿದ ಕ್ಯಾನ್ಸರ್ ರೋಗಿಗಳು, ಅವರ ಕುಟುಂಬದ ಪರದಾಟಗಳು ಅಪಾರ. ಕ್ರಿಕೆಟ್, ಸಿನೆಮಾ, ರಾಜಕೀಯದವರಿಗೆ ಮಾತ್ರ ಕಾಯಿಲೆಬರುತ್ತದೆ ಎಂದುಕೊಂಡಂತಹ ದೇಶದಲ್ಲಿ ಬಡವರ ಕಾಯಿಲೆ, ಬವಣೆಗೆ ಬೆಲೆ ಇಲ್ಲವೇನೋ ಎನಿಸುತ್ತದೆ. ಅಂಜಿಲಿನಾ ಜೋಲಿಯೆಂಬ ನಟಿಯೊಬ್ಬಳು ಯಾವ ತೊಂದರೆ ಇಲ್ಲದೆ ತನಗೆ ಸ್ತನದ ಕ್ಯಾನ್ಸರ್ ಸಾಧ್ಯತೆ ಹೆಚ್ಚು , BRCA ಎಂಬ ಕ್ಯಾನ್ಸರ್ ಕಾರಕ ವಂಶವಾಹಿ ತನ್ನಲ್ಲಿದೆ ಎಂದು ಗೊತ್ತಾದ ಕ್ಷಣ ತನ್ನೆರಡು ಸ್ತನಗಳನ್ನು ತೆಗೆಸಿಕೊಂಡಳು. ಖಚಿತ ಸಾವನ್ನು ತಾತ್ಕಾಲಿಕವಾಗಿ ಗೆಲ್ಲುವ ಹುನ್ನಾರ.
ಹೋದವರ್ಷ ಕೇಪ್ ಟೌನನಲ್ಲಿ ಒಂದು ತರಬೇತಿ ಶಿಬಿರದಲ್ಲಿ ಸೋಮಾಲಿಯಾದ ವೈದ್ಯನೋಬ್ಬ ಪರಿಚಯನಾದ. ನನ್ನ ಕೆಲಸ, ನನ್ನ ಕಂಪನಿಯ ಹೆಸರು ಕೇಳಿ
“ಎರಡು ವರ್ಷದ ಹಿಂದೆ ನನ್ನ ಮಿತ್ರನೋಬ್ಬನು ಕ್ಯಾನ್ಸರ್‌ನ ಅಂತಿಮ ಹಂತದಲ್ಲಿದ್ದಾಗ, ನಿಮ್ಮ ಸಂಸ್ಥೆಯವರು ಆತನನ್ನು ಭಾರತದಿಂದ ಕಾಂಗೋಗೆ ತಂದು ಬಿಟ್ಟಿದ್ದರು. ತುಂಬ ಸುರಕ್ಷಿತವಾಗಿ ಬಂದಿದ್ದ .” ಎಂದು ನಮ್ಮ ಕಂಪನಿಯ ಕೆಲಸವನ್ನು ಶ್ಲಾಘಿಸಲಾರಂಭಿಸಿದ .
” ಆ ರೋಗಿ ಡಾ ಲ್ಯೂಕ್ ಅಲ್ವಾ ? ಅವರಿಗೆ ಮೂತ್ರ ಪಿಂಡದ ಕ್ಯಾನ್ಸರ್ ಅಂತಿಮ ಹಂತ ತಲುಪಿತ್ತು ? ” ಎಂದೆ.
” ಹೌದು. ನಿನಗೆ ಹೇಗೆ ಗೋತ್ತು? ಲ್ಯೂಕ್ ನನ್ನ ಆಪ್ತ ಮಿತ್ರನಾಗಿದ್ದ. ಯು ಎನ್ ಸಂಸ್ಥೆಯಲ್ಲಿದ್ದಾಗ ಇಬ್ಬರೂ ಸುಮಾರು ಕಡೆ ಒಟ್ಟಿಗೆ ಕೆಲಸ ಮಾಡಿದ್ದೆವೆ, ಆತ ಅದ್ಭುತ್ ಸರ್ಜನ್. ಮಿಗಿಲಾಗಿ ಮಾನವತಾವಾದಿ. ಅಫಘಾನಿಸ್ತಾನ್‌ಗೆ ಹೋದ, ನಾನು ಬೇರೆ ಕಡೆ ಹೋದೆ. ಆತ ರಿನಲ್ ಸೆಲ್ ಕಾರ್ಸಿನೋಮಾಗಿ ತುತ್ತಾದ. ಇಲ್ಲಿ ನೋಡಿ ಆತನ ಅಂತಿಮ ಯಾತ್ರೆಯ ಚಿತ್ರಗಳು .” ಎನ್ನುತ್ತ ಮೊಬೈಲಿನ ಪಟದ ಮೇಲೆ ಬೆರಳಾಡಿಸಿ ಶವಪಟ್ಟಿಗೆಯ ಮುಂದಿನ ರೋಗಿಯ ಭಾವಚಿತ್ರ ತೋರಿಸಿ ಭಾವುಕನಾದ. “ನಾನೆ ಡಾಕ್ಟರ್ ಲ್ಯೂಕ್ ನನ್ನು ಇಸ್ತಾಂಬುಲ್ ವರೆಗೂ ತಂದಿದ್ದೆ .” ಎಂದಾಗ, ಗಟ್ಟಿಯಾಗಿ ನನ್ನ ತಬ್ಬಿ ಗದ್ಗಿತನಾದ.
ತೀವ್ರ ಹೋರಾಟದ ನಂತರ ಕ್ಯಾನ್ಸರ್ ಗೆದ್ದುಬಿಟ್ಟಿತ್ತು:
ವಿಚಿತ್ರ ಕಾಕತಾಳಿಯ. ನಮ್ಮ ಚರ್ಚೆಯ ನಂತರ ಇರ್ಫಾನ್ ನೆನಪಾಗದಿರಲಿಲ್ಲ. ಅದೆ ರಾತ್ರಿ ಅಂತರ್ಜಾಲ ಜಾಲಡಿದೆ. ಇರ್ಫಾನ್ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲ. ಹೊರದೇಶದಲ್ಲಿ ಚಿಕಿತ್ಸೆ ನಡೆಯುತ್ತಿದೆ ಎಂದು ತಿಳಿಯಿತಷ್ಟೆ. ಸುಮಾರು ತಿಂಗುಳಗಳ ನಂತರ ಆತ ಭಾರತಕ್ಕೆ ಮರಳಿದ್ದು ಗೊತ್ತಾಯಿತು. ಆತನ ಕ್ಯಾನ್ಸರ್ ತೀವ್ರ ಪ್ರಮಾಣದ್ದು ಎಂಬ ಅಳುಕು ಮನದಲ್ಲಿತ್ತು, ಮತ್ತೆ ನಟಿಸುತಿದ್ದಾನೆ ಎಂದು ಕೇಳಿ ಸಮಾಧಾನವಾಗಿದ್ದೆ. ಈ ಕ್ಯಾನ್ಸರ್ ಚರ್ಚೆಯಲ್ಲಿ ಮರೆತುಹೋದ ಇನ್ನೊಬ್ಬ ವ್ಯಕ್ತಿಯೆಂದರೆ ಯುವರಾಜ್ ಸಿಂಗ್. ಆತನದೂ ಇರ್ಫಾನ್ ಖಾನ್ ನಂತಹ ತೀವ್ರ ಅಗ್ರೆಸಿವ್ ಕ್ಯಾನ್ಸರ್. ತುಂಬ ಚಿಗುರು ಹಂತದಲ್ಲಿ ಪತ್ತೆಯಾದ ಕಾರಣ ಯುವರಾಜ್ ಸಿಂಗ್ ಕ್ಯಾನ್ಸರ್ ಗೆದ್ದ. ಇರ್ಫಾನ್ ಖಾನ್‌ಗೆ ಯಾವ ಮುನ್ಸೂಚನೆಯೆ ಇರಲಿಲ್ಲ, ಗೊತ್ತಾದಾಗ ತುಂಬ ತಡವಾಗಿತ್ತು. ಸಾವು ಹೊಸ್ತಿಲು ದಾಟಿ ಒಳಬಂದಾಗಿತ್ತು. ಒಂದೆರಡು ವರ್ಷಗಳ ತೀವ್ರ ಹೋರಾಟದ ನಂತರ ಕ್ಯಾನ್ಸರ್ ಗೆದ್ದುಬಿಟ್ಟಿತ್ತು. ಮೇರು ನಟನೊಬ್ಬನ ಜೀವನ ನಾಟಕ ಮುಗಿದಿತ್ತು. ದೇವರು ಅಂತಿಮ ಪರದೆ ಎಳೆದು ಬಿಟ್ಟ.
-ಅಬುಯಾಹ್ಯಾ
ಡಾ. ಸಲೀಮ್ ನದಾಫ್
ಆರ್ ಪಿ ಮ್ಯಾನ್ಶನ್ ಕಾಡುಗೋಡಿ, ಬೆಂಗಳೂರು
ಮೊ: 8073048415