Vydyaloka

ಎದೆಹಾಲು – ಅಮಾಯಕ ಮಗು ಅಮೃತದಿಂದ ವಂಚಿತವಾಗಬೇಕೆ?

ಎದೆಹಾಲು ಮಗುವಿನ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಅನುಕೂಲವಾಗುವುದು.ಸಂಶೋಧನೆಗಳು ತಾಯಿ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಇರುವುದನ್ನು ಸಾದರ ಪಡಿಸಿವೆ.ಬದಲಿ ಹಾಲಿನ ಬಳಕೆ, ಬಾಟಲಿ ಹಾಲು ಕುಡಿಸುವುದು ಹೆಚ್ಚುತ್ತಿದೆ. ಇದೊಂದು ಅನಾರೋಗ್ಯಕರ ಬೆಳವಣಿಗೆ, ದುರಂತವೆಂದರೂ ತಪ್ಪಾಗಲಿಕ್ಕಿಲ್ಲ.
Breast-feeding
ಆದಿಶಂಕರಾಚಾರ್ಯರು “ತವಸ್ತನ್ಯಂಮನ್ಯೇಧರಣೀಧರಕನ್ಯೇ ಎಂದು ದೇವಿಯನ್ನು ಕುರಿತು “ನಿನ್ನ ಸ್ತನ್ಯಪಾನ ಮಾಡಿ ನಾನು ಸಾಹಿತ್ಯ ರಚಿಸುವಂತನಾದೆ ಎಂದು ಸ್ತುತಿಸಿದ್ದಾರಷ್ಟೆ. ನಮ್ಮ ಜನಪದರು ತಾಯಿಯ ಹಾಲಿನ ಬಗ್ಗೆ ಮನಮುಟ್ಟುವಂತೆ ತ್ರಿಪದಿಯಲ್ಲಿ ಹೇಳಿದ್ದಾರೆ. ಇದು ಸರ್ವಕಾಲಿಕ ಸತ್ಯ. ತಾಯಿಯ ಹಾಲು ಮಗುವಿಗೆ ಸರ್ವಶ್ರೇಷ್ಠ ಅಮೃತವೆಂಬುದು ವೈಜ್ಞಾನಿಕವಾಗಿ ಬೆಳಕಿಗೆ ಬಂದಿದೆ.
ಹಣ್ಣುಹಾಲಿಗಿಂತ, ಬೆಣ್ಣೆ ತುಪ್ಪಕ್ಕಿಂತ
ಚೆನ್ನಾಗಿ ಕಳಿತ ರಸಬಾಳೆ! ಹಣ್ಗಿಂತ
ಚೆನ್ನ ತಾಯಿಯ ಎದೆಹಾಲು…..”
ತಾಯಿ ಮಗುವಿಗೆ ಮೊಲೆಯುಣಿಸುವಾಗ ಆಕೆ ತನ್ನ ಮಗುವನ್ನು ಅಪ್ಯಾಯಮಾನವಾಗಿ ಅಪ್ಪಿ ಹಿಡಿದು ಅದಕ್ಕೆ ಆಹಾರ ಕೊಡುವುದಲ್ಲದೆ, ಪ್ರೀತಿ ವಾತ್ಸಲ್ಯವನ್ನೂ ಧಾರೆಯೆರೆಯುತ್ತಾಳೆ. ಅದು ಅವರಿಬ್ಬರ ಮದ್ಯೆ ಮಧುರ ಬಾಂಧವ್ಯವನ್ನು ಬೆಳೆಸುತ್ತದೆ. ಹಾಲಿನೊಡನೆ ಪ್ರೇಮರಸವ ಜೀವದಲ್ಲಿ ತುಂಬಿದೆ ಎಂದು ವರಕವಿ ಬೇಂದ್ರೆಯವರು ಹಾಡಿದ್ದಾರೆ. “ಶಿಶುವಿಗೂಡಿಸೆ ಶಿವಗೆ ನೈವೇದ್ಯ…” ಎಂದು ರಾಷ್ಟ್ರಕವಿ ಕುವೆಂಪು ಅವರು ವರ್ಣಿಸಿರುವುದು ಅತಿಶಯೋಕ್ತಿಯಲ್ಲ.
ಬಾಟಲಿ ಹಾಲು ಬೇಡ
ಇತ್ತೀಚೆಗೆ ನಾಗರಿಕತೆಯ ಸೋಗಿನಲ್ಲಿ, ಜಾಹೀರಾತುಗಳ ವ್ಯಾಮೋಹದಲ್ಲಿ, ಆರ್ಥಿಕ ಸ್ಥಿತಿಯ ಹಿನ್ನೆಲೆಯಲ್ಲಿ ತಾಯಿಯ ಸೌಂದರ್ಯ ಹಾಳಾಗುವುದೆಂಬ ಭಾವನೆ ಹೆಪ್ಪುಗಟ್ಟುತ್ತಿದೆ. ಬದಲಿ ಹಾಲಿನ ಬಳಕೆ, ಬಾಟಲಿ ಹಾಲು ಕುಡಿಸುವುದು ಹೆಚ್ಚುತ್ತಿದೆ. ಇದೊಂದು ಅನಾರೋಗ್ಯಕರ ಬೆಳವಣಿಗೆ, ದುರಂತವೆಂದರೂ ತಪ್ಪಾಗಲಿಕ್ಕಿಲ್ಲ. ಇದು ಅನೇಕ ಅನಾಹುತಗಳಿಗೆ ಆಸ್ಪದ ಮಾಡಿಕೊಡುವುದು. ಹೆರಿಗೆಯಾದ ಅರ್ಧ ತಾಸಿನ ನಂತರ ಶಿಶುವಿಗೆ ಮೊಲೆ ಹಾಲುಣಿಸಲು ಪ್ರಾರಂಭಿಸಬೇಕು. ಆಗ ಸ್ತನಗಳಿಂದ ಹಳದಿ ಹಸಿರು ವರ್ಣದ ‘ಗಿಣ್ಣುಹಾಲು’ ಗಟ್ಟಿಯಾಗಿ ಸ್ರವಿಸುವುದು. ಇದರಲ್ಲಿ ಪ್ರೋಟೀನ್ ವಿಫುಲವಾಗಿದ್ದು ಗ್ಲಾಬ್ಯುಲಿನ್ ಅಂಶಗಳನ್ನು ಒಳಗೊಂಡಿರುತ್ತದೆ. ಕೊಬ್ಬು ಮತ್ತು ಸಕ್ಕರೆ ಪ್ರಮಾಣ ಕಡಿಮೆ ಇರುತ್ತದೆ. ‘ಎ’ ಅನ್ನಾಂಗ ಹೇರಳವಾಗಿರುತ್ತದೆ.

ಇದು ಇರುಳುಗಣ್ಣು ಹಸುಗೂಸುಗಳ ಸಮೀಪ ಸುಳಿಯದಂತೆ ಮಾಡುತ್ತದೆ. ಗಿಣ್ಣು ಹಾಲು ರೋಗ ನಿರೋಧಕ ಶಕ್ತಿ ಮತ್ತು ಜೀವಕಣ ವಿಶೇಷವಾಗಿ ಹೊಂದಿರುವುದರಿಂದ ಬಾಲ್ಯದಲ್ಲಿ ಅನೇಕ ರೋಗಾಣುಗಳಿಂದ ಉದ್ಭವಿಸುವ ಸೋಂಕು ರೋಗಗಳ ವಿರುದ್ಧ ಸೆಣಸಬಲ್ಲ ಶಕ್ತಿ ಸಾಮಥ್ರ್ಯವನ್ನು ತಂದುಕೊಡುತ್ತದೆ. ಕೇಸಿನ್ ಪ್ರಮಾಣ ಹಸುವಿನ ಹಾಲಿನಲ್ಲಿ ಹೆಚ್ಚು ಇರುವುದರಿಂದ ಹಾಲು ಬೇಗ ಹೆಪ್ಪುಗಟ್ಟುತ್ತದೆ. ಇದರಿಂದ ಮಕ್ಕಳು ಅಜೀರ್ಣದ ತೊಡಕು ತೊಂದರೆಗಳನ್ನು ಹೊಂದಬಹುದು. ಹೊಟ್ಟೆ ಉಬ್ಬಬಹುದು, ಹೊಟ್ಟೆ ನುಲಿತದಿಂದ ನರಳಬಹುದು. ಮೊಲೆಹಾಲು ಕುಡಿದ ಮಕ್ಕಳಲ್ಲಿ ಇಂಥ ಸಾಧ್ಯತೆಗಳು ಕಡಿಮೆ. ಇದೀಗ ‘ಸ್ತನ್ಯಪಾನ ಸಪ್ತಾಹದಲ್ಲಿ ಸ್ತನಪಾನದ ಮಹತ್ವ ತಿಳಿಯುವ, ಅದರಿಂದ ತಾಯಿ-ಮಗು ಇಬ್ಬರಿಗೂ ಆಗುವ ಉಪಯುಕ್ತತೆಯ ಬಗ್ಗೆ ಮಾಹಿತಿ ಪಡೆಯುತ್ತ,  ತಾಯಂದಿರು ಎದೆಹಾಲು ಮಗುವಿಗೆ ನೀಡಲು ಮುಂದಾಗಬೇಕು.

ಎಚ್.ಐ.ವಿ ಸೋಂಕಿತ ತಾಯಂದಿರು ಎದೆಹಾಲು ಉಣಿಸಬೇಕೆ?
ಎಚ್.ಐ.ವಿ ಪಾಸಿಟಿವ್ ತಾಯಿ ಎದೆಹಾಲು ಉಣಿಸಬೇಕೆ ಅಥವಾ ಪರ್ಯಾಯ ಆಹಾರ ನೀಡಬೇಕೆ ಎನ್ನುವ ಪ್ರಶ್ನೆಗೆ ಉತ್ತರಿಸುವ ಮೊದಲು ಎದೆಹಾಲಿನಿಂದ ಎಚ್.ಐ.ವಿ ಸೋಂಕು ತಗಲುವ ಸಾದ್ಯತೆ ಎಷ್ಟು? ಪರ್ಯಾಯ ಹಾಲಿನಿಂದ ಮಗುವಿಗೆ ಆಗುವ ಅನಾರೋಗ್ಯ ಎಷ್ಟು? ಎಂಬುದನ್ನು ತಿಳಿದು ಕೊಳ್ಳುವುದು ಅತ್ಯಗತ್ಯ. ಎದೆಹಾಲು ಉಣಿಸುವುದರಿಂದ ಎಚ್.ಐ.ವಿ ಅಪಾಯ ಶೇ.5 ರಿಂದ 20. ಎದೆಹಾಲಿನ ಬದಲಾಗಿ ಪರ್ಯಾಯ ಆಹಾರ ಆರಂಭಿಸಿದಾಗ ಮಗು ಹಲವಾರು ತೊಂದರೆಗಳಿಂದ ಬಳಲುತ್ತದೆ. ಇವುಗಳಲ್ಲಿ ಮುಖ್ಯವಾದವುಗಳು ಅತಿಸಾರ, ಅಪೌಷ್ಟಿಕತೆ ಮತ್ತು ಶ್ವಾಸಕೋಶದ ಸೋಂಕು. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಕಾಯಿಲೆಗಳಿಂದ 5 ವರ್ಷದೊಳಗಿನ ಶೇ 54 ಮಕ್ಕಳು ಸಾಯುತ್ತಿದ್ದಾರಂತೆ. ಮೊದಲ ಎರಡು ತಿಂಗಳಲ್ಲಿ ಎದೆಹಾಲು ನೀಡದಿದ್ದಲ್ಲಿ ಇಂತಹ ಅಪಾಯಗಳು ಆರು ಪಟ್ಟು ಹೆಚ್ಚು. ಜಾಗತಿಕ ಆರೋಗ್ಯ ಸಂಸ್ಥೆ ನಿರಾತಂಕವಾಗಿ ಎದೆ ಹಾಲುಣಿಸಬಹುದು ಎಂದು ಕರೆ ನೀಡಿದ್ದರೂ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇದನ್ನು ತಡವಾಗಿಯೇ ಪ್ರಚಾರ ಮಾಡಲಾಗಿತ್ತು.
ಎಚ್.ಐ.ವಿ ಸೋಂಕಿತ ತಾಯಂದಿರು ಮೊದಲ ಆರು ತಿಂಗಳು ಎದೆಹಾಲನ್ನು ನೀಡುವುದು ಸುರಕ್ಷಿತ. ಒಮ್ಮೆ ಎದೆಹಾಲನ್ನು ಇನ್ನೊಮ್ಮೆ ಹಸುವಿನ ಹಾಲನ್ನು ನೀಡುವುದರಿಂದ ಎಚ್.ಐ.ವಿ ಮಗುವಿಗೆ ಬರುವ ಸಾಧ್ಯತೆ ತೀರಾ ಅಧಿಕ. ಹಸುವಿನ ಹಾಲನ್ನು ಬಾಟಲ್ ಫೀಡ್ ಮುಖಾಂತರ ನೀಡುವುದು ಸಾಮಾನ್ಯ. ಮಗು ರಬ್ಬರಿನ ನಿಪ್ಪಲ್‍ದಿಂದ ಹಾಲನ್ನು ಕುಡಿಯುವಾಗ, ಅತಿ ಸೂಕ್ಷ್ಮ ಮತ್ತು ಮೃದುವಾಗಿ ಇರುವ ಮಗುವಿನ ಬಾಯಿಯ ಲೋಳ್ಪರೆಯಲ್ಲಿ ಎದೆಹಾಲಿನಲ್ಲಿ ಸ್ರವಿತಗೊಂಡ ಎಚ್.ಐ.ವಿ ವೈರಸ್‍ಗಳು ಆ ಬಿರುಕುಗಳ ಮುಖಾಂತರ ಒಳಸೇರುವುದರಿಂದ ಸೋಂಕಿನ ಪ್ರಮಾಣ ಗಮನಾರ್ಹವಾಗಿ ಏರುವುದು. ಹೀಗಾಗಿ ಈ ಕುರಿತು ಹೆರಿಗೆಯ ಪೂರ್ವವೇ ಆಪ್ತ ಸಮಾಲೋಚನೆ ನಡೆಸಲಾಗುತ್ತದೆ. ಶಿಶುವಿಗೆ ಎದೆ ಹಾಲು ನೀಡದೇ ಇರುವ ಸಂದರ್ಭಗಳಲ್ಲಿ, ಪರ್ಯಾಯ ವ್ಯವಸ್ಥೆಯನ್ನು ಕನಿಷ್ಠ ಆರು ತಿಂಗಳವರೆಗೆ ಮಾಡಿಕೊಳ್ಳಬೇಕು. ಹಸುವಿನ ಹಾಲು ಅಥವಾ ಹಾಲಿನ ಪೌಡರನ್ನು ನಿರಂತರವಾಗಿ ಖರೀದಿಸುವ ಸಾಮಥ್ರ್ಯ ಆ ಕುಟುಂಬಕ್ಕೆ ಇದೆಯೋ ಎಂಬುದನ್ನು ಲಭ್ಯತೆ ಬಗ್ಗೆಯೂ ಆದ್ಯತೆಯ ಮೇಲೆ ಪರಿಗಣಿಸಲಾಗುತ್ತದೆ. ಪರ್ಯಾಯ ವ್ಯವಸ್ಥೆಯಲ್ಲಿ ಶುಚಿತ್ವಕ್ಕೆ ಅತೀ ಮಹತ್ವ ಇದೆ ಎಂಬುದನ್ನು ತಾಯಂದಿರು ಮರೆಯಬಾರದು. ಅಲಕ್ಷಿಸಿದರೆ ಇದೇ ಕೂಸಿನ ಕುತ್ತಿಗೆಗೆ ಹರಿತವಾದ ಕತ್ತಿಯಾಗಬಹುದು !
ರೋಗ ನಿರೋಧಕ ಶಕ್ತಿ
ಸಂಶೋಧನೆಗಳು ತಾಯಿ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಇರುವುದನ್ನು ಸಾದರ ಪಡಿಸಿವೆ. ಇದು ಕೊಲೆಸ್ಟ್ರಂನಲ್ಲಿ ಅತ್ಯಧಿಕ. ತಾಯಿ ಹಾಲಿನಲ್ಲಿ ಐಜಿಎ, ಐಜಿಜಿ ಮತ್ತು ಐಜಿಎಮ್ ಪ್ರತಿಕಾಯಗಳು ಇರುತ್ತವೆ. ಈ ರೋಗ ನಿರೋಧಕ ವಸ್ತುಗಳು ರೋಗಕಾರಕ ಸೂಕ್ಷ್ಮ ಜೀವಿಗಳಿಂದ ಬರಬಹುದಾದ ನೆಗಡಿ, ಕೆಮ್ಮು ಪೋಲಿಯೊ, ನ್ಯೂಮೋನಿಯಾ, ಭೇದಿಗಳಿಂದ ರಕ್ಷಣೆಯನ್ನೊದಗಿಸುತ್ತವೆ. ಮಗುವಿನ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಅನುಕೂಲವಾಗುವುದು . ತಾಯಿ ಅಪೌಷ್ಟಿಕತೆಯ ಕಪಿ ಮುಷ್ಟಿಯಲ್ಲಿ ತತ್ತರಿಸುತ್ತಿದ್ದರೂ, ಎಚ್.ಐ.ವಿ ಸೋಂಕಿನ ಸುಳಿಯಲ್ಲಿ ಸಿಕ್ಕು ಸದ್ದಿಲ್ಲದೆ ಸಾವಿನತ್ತ ಹೆಜ್ಜೆ ಹಾಕುತ್ತಿದ್ದರೂ ಉತ್ಪನ್ನವಾದ ಹಾಲು ನೀರಾದರೂ ಅಮೀಬ, ಜಿಯಾರ್ಡಿಯಾ ಮುಂತಾದ ಭೇದಿ ಕ್ರಿಮಿಗಳನ್ನು ಅದು ಯಶಸ್ವಿಯಾಗಿ ನಾಶಮಾಡುತ್ತದೆ. ಹೀಗಾಗಿ ತಾಯಿ ಹಾಲುಂಡ ಮಕ್ಕಳಲ್ಲಿ ಅವುಗಳ ಹಾವಳಿ ಅಪರೂಪ. ನಿರ್ಜಲೀಕರಣದಂಥ ಅಪಾಯ ತಲೆದೋರುವುದು ಅಸಮಾನ್ಯ.
ಎಳೆಯ ಮಕ್ಕಳಿಗೆ ಯೋಗ್ಯ ಆಹಾರ, ಪ್ರೀತಿ, ವಾತ್ಸಲ್ಯ, ಪ್ರೋತ್ಸಾಹ ಮತ್ತು ಸೋಂಕುಗಳ ವಿರುದ್ಧ ರಕ್ಷಣೆ ಬೇಕು. ಎದೆಹಾಲು ಎಲ್ಲ ಅಗತ್ಯಗಳನ್ನು ಪೂರೈಸಿ ಸೋಂಕಿತ ತಾಯಂದಿರ ಮಕ್ಕಳ ಜೀವನಕ್ಕೆ ಅತ್ಯುತ್ತಮ ಬುನಾದಿಯನ್ನು ಹಾಕುತ್ತದೆ. ಅದು ಜೈವಿಕ ಕಾರ್ಯಕ್ರಿಯೆಯ ಮೂಲಭೂತ ಭಾಗ ಎಂದು ಜಾಗತಿಕ ಆರೋಗ್ಯ ಸಂಸ್ಥೆ ಹೇಳಿದೆ.  ಎಚ್.ಐ.ವಿ ಸೋಂಕಿತ ತಾಯಂದಿರು ತಮ್ಮ ಮಕ್ಕಳಿಗೆ ಮೊಲೆಹಾಲು ಕುಡಿಸುವುದನ್ನು ಮರೆಯಬಾರದು. ಜಾಹಿರಾತುಗಳ ಮೋಡಿಗೆ ಮರುಳಾಗಬಾರದು. ಕರುಳಿನ ಕುಡಿಯಲ್ಲಿ ಬದುಕಿನ ಭರವಸೆಯ ಬೆಳ್ಳಿರೇಖೆಗಳು ಮೂಡಲು ಮೊದಲು ಆರು ತಿಂಗಳು ಮೊಲೆಹಾಲು ಕುಡಿಸಬೇಕು. ಇದು ಇಂದಿನ ಅವಶ್ಯಕತೆ ಕೂಡ.
ಡಾ.ಕರವೀರಪ್ರಭು ಕ್ಯಾಲಕೊಂಡ
ವಿಶ್ರಾಂತ ಜಿಲ್ಲಾ ಶಸ್ತ್ರ ಚಿಕಿತ್ಸಕರು

ಕ್ಯಾಲಕೊಂಡ ಆಸ್ಪತ್ರೆ , ಬಾದಾಮಿ. 587201
ಜಿಲ್ಲಾ: ಬಾಗಲಕೋಟೆ  Mob:9448036207
Share this: