ಪ್ರತಿದಿವಸ ಮನೆಯಲ್ಲಿ ನಾವು ಕೆಲಸ ಮಾಡುವಾಗ, ಕಾಯಿಪಲ್ಲೆ ಕತ್ತರಿಸುವಾಗ, ಉಗುರು ಕತ್ತರಿಸುವಾಗ, ಸಣ್ಣಪುಟ್ಟ ಗಾಯಗಳು ಆಗುವುದು ಮತ್ತು ಗಾಯದಿಂದ ರಕ್ತಸ್ರಾವವಾಗುವುದು ಸಾಮಾನ್ಯ. ಈ ರಕ್ತಸ್ರಾವವು 3 ರಿಂದ 5 ನಿಮಿಷಗಳಲ್ಲಿ ತನ್ನಷ್ಠಕ್ಕೆ ತಾನೆ ನಿಂತು ಹೋಗುತ್ತದೆ. ರಕ್ತಸ್ರಾವ ನಿಲ್ಲುವುದು ಸ್ವಾಭಾವಿಕ. ರಕ್ತವು ಹೆಪ್ಪುಗಟ್ಟಿ, ಗಟ್ಟಿ ಪದಾರ್ಥವಾಗಿ, ರಕ್ತನಾಳದಲ್ಲಿಯ ರಂಧ್ರವನ್ನು ಮುಚ್ಚಿ ಮತ್ತೆ ರಕ್ತಸ್ರಾವವಾಗದಂತೆ ಮಾಡುತ್ತದೆ. ರಕ್ತ ಗಟ್ಟಿಯಾಗುವುದನ್ನು ವಿರಕ್ತ ಹೆಪ್ಪುಗಟ್ಟುವುದು ಎಂದು ಕರೆಯುತ್ತೇವೆ.
ಪ್ರತಿದಿವಸ ನಾವು ನಡೆದು ಹೋಗುತ್ತೇವೆ, ಓಡಿ ಹೋಗುತ್ತೇವೆ, ಭಾರವಾದ ವಸ್ತುಗಳನ್ನು ಎತ್ತಿಕೊಂಡು ಹೋಗುತ್ತೇವೆ. ನಮ್ಮ ದೇಹದ ಭಾರವನ್ನು ನಮ್ಮ ಮೂಳೆಗಳು ಸಶಕ್ತವಾಗಿ ತಡೆದುಕೊಂಡು ಮುಂದೆ ಹೋಗುವಂತೆ ಮಾಡುತ್ತವೆ. ನಾವು ನಡೆದು ಹೋಗುವಾಗ ಬಿದ್ದರೆ, ಮೂಳೆಗಳು ಬಾಗುವುದಿಲ್ಲ ಮತ್ತು ಮುರಿಯುವುದಿಲ್ಲ. ಮೂಳೆಗಳಲ್ಲಿ ಶಕ್ತಿ ಬರಲು ಕಾರಣ ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಪ್ರೋಟಿನ್‍ಗಳು. ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಪ್ರೋಟೀನ್‍ಗಳು ಮೂಳೆಗಳ ಕೋಶಗಳಲ್ಲಿ ಸೇರಿಕೊಳ್ಳಲು ವಿಟಮಿನ್ ಕೆ ಅತ್ಯಅವಶ್ಯಕ. ವಿಟಮಿನ್ ಕೆ ಕಡಿಮೆಯಾದರೆ, ಮೂಳೆಗಳ ಸಾಂದ್ರತೆ ಕಡಿಮೆಯಾಗಿ, ಮೂಳೆಗಳು ಬಾಗುವವು, ಇಲ್ಲವಾದರೆ ಮುರಿಯುವವು.
ವಿಟಮಿನ್ ಕೆ ರಾಸಾಯನಿಕ ಗುಣಗಳು :
ವಿಟಮಿನ್ ಕೆ ಮೂಲಧಾತು ಕಾರ್ಬನ್ ಪಾಶ್ರ್ವ ಸಂಕೋಲೆಯಾಗಿರುತ್ತದೆ. ನಿಸರ್ಗದತ್ತವಾಗಿ ಇವುಗಳಲ್ಲಿ ಎರಡು ವಿಧ.
1. ವಿಟಮಿನ್ ಕೆ1- ಇದರಲ್ಲಿ ಮೂಲಧಾತು ಕಾರ್ಬನ್ ಕಣಗಳು 20 ಇರುತ್ತವೆ. ಇದಕ್ಕೆ ಪೈಲೋಕಿನೋನ ಎನ್ನುತ್ತಾರೆ. ಇದು ಹಸಿರು ಎಲೆಗಳಲ್ಲಿ ಇರುತ್ತದೆ. ಹಸಿರು ಎಲೆಗಳಲ್ಲಿ ವಿಟಮಿನ್ ಕೆ ಸೂರ್ಯನ ಪ್ರಕಾಶವನ್ನು ಬಳಸಿಕೊಂಡು ಗಿಡಗಳಿಗೆ ಬೇಕಾಗುವ ಆಹಾರ ವಸ್ತುಗಳನ್ನು ತಯಾರಿಸುತ್ತದೆ. ಇದಕ್ಕೆ ದ್ಯೂತಿ ಸಂಶ್ಲೇಷಣೆ – PHOTOSYNTHESIS ಎನ್ನುತ್ತಾರೆ. ವಿಟಮಿನ್ ಕೆ1 ಮಾನವರ ದೇಹದಲ್ಲಿ ರಕ್ತ ಹೆಪ್ಪು ಗಟ್ಟುವುದನ್ನು, ಮೂಳೆಗಳಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟಿನ್‍ಗಳು ಮೂಳೆಕೋಶಗಳನ್ನು ಸೇರುವಂತೆ ಮಾಡುವುದು ಮತ್ತು ರಕ್ತನಾಳಗಳನ್ನು ಮೃದುವಾಗಿರುವಂತೆ ಮಾಡುತ್ತವೆ.ರಾಸಾಯನಿಕ ಸೂತ್ರ : C31 H46 O2
2. ವಿಟಮಿನ್ ಕೆ2- ಇದನ್ನು ಮಿನಾಕಿನೋನ ಎಂದು ಕರೆಯುತ್ತಾರೆ. ನಮ್ಮ ಕರುಳಿನಲ್ಲಿರುವ ಅಣುಜೀವಿಗಳು ವಿಟಮಿನ್ ಕೆ2 ತಯಾರಿಸುತ್ತವೆ. ಆರೋಗ್ಯವಂತರ ಕರುಳಿನಲ್ಲಿ ಪ್ರತಿದಿನ ಬೇಕಾಗುವಷ್ಠು ವಿಟಮಿನ್ ಕೆ2 ತಯಾರು ಆಗುತ್ತದೆ. BROAD SPECTRUM ANTIBIOTICS ಮತ್ತು ಕರುಳು ರೋಗ ಇರುವವರು, ಅಣುಜೀವಿಗಳ ಕೊರತೆಯಿಂದ ನಮಗೆ ಬೇಕಾಗುವಷ್ಠು ವಿಟಮಿನ್ ಕೆ ತಯಾರು ಆಗುವುದಿಲ್ಲ.ರಾಸಾಯನಿಕ ಸೂತ್ರ : C41, H56, O2
ವಿಟಮಿನ್ ಕೆ3-ಇದನ್ನು ಕೃತ್ರಿಮವಾಗಿ ಪ್ರಯೋಗಾಲಯಗಳಲ್ಲಿ ತಯಾರಿಸುತ್ತಾರೆ.ಇದನ್ನು ಜಾನುವಾರುಗಳ ಆಹಾರವಸ್ತುಗಳಲ್ಲಿ ಉಪಯೋಗಿಸುತ್ತಾರೆ.
ವಿಟಮಿನ್ ಕೆ ಕಾರ್ಯ:
1. ರಕ್ತ ಹೆಪ್ಪುಗಟ್ಟುವಿಕೆ.
2.ಮೂಳೆಗಳನ್ನು ಗಟ್ಟಿ ಮಾಡುವುದು.
3. ರಕ್ತನಾಳಗಳನ್ನು ಮೃದುವಾಗಿಡುವುದು.
ವಿಟಮಿನ್ ಕೆ ನಮ್ಮ ಶರೀರಕ್ಕೆ ದೊರಕುವುದು :
ನಾವು ಊಟಮಾಡುವ ಆಹಾರದಲ್ಲಿಯ ಹಸಿರು ತಾಜಾ ಎಲೆಗಳುಳ್ಳ ಪಲ್ಲೆಗಳಲ್ಲಿ ಇರುವ ವಿಟಮಿನ್ ಕೆ, ಯಕೃತ್ತುದ ರಸದ ಸಹಾಯದಿಂದ ಮತ್ತು ಕೊಲೆಸ್ಟ್ರಾಲದ ಸಹಾಯದಿಂದ ಕರಳುಕೋಶಗಳು ಹೀರಿಕೊಂಡು, ಯಕೃತ್ತುದಿಂದ ದೇಹದ ಎಲ್ಲ ಕೋಶಗಳಿಗೆ ರವಾನೆಯಾಗುತ್ತವೆ.
ಪ್ರತಿದಿವಸ ಆರೋಗ್ಯವಂತರಿಗೆ ವಿಟಮಿನ್ ಕೆ ಬೇಕಾಗುವ ಪ್ರಮಾಣ:
50-100 ಮಿ. ಗ್ರಾಂ/ ಪ್ರತಿ ದಿವಸ. ವಿಟಮಿನ್ ಕೆ ದೊರಕುವ ಆಹಾರಗಳು : ಪಾಲಕ, ಮೆಂತೆಪಲ್ಲೆ, ರಾಜಗಿರಿ ಪಲ್ಲೆ, ಪುಂಡಿಪಲ್ಲೆ, ಸಬ್ಬಸಕಿ ಸೊಪ್ಪು, ದಂಟಿನ ಸೊಪ್ಪು, ಕರಿಬೇವು, ಕೊತ್ತಂಬರಿ, ನುಗ್ಗಿಸೊಪ್ಪು, ಬಸಳೆಸೊಪ್ಪು ಮತ್ತು ಮಾಂಸ ಪದಾರ್ಥಗಳು. ಅಣುಜೀವಿಗಳು ನಮಗೆ ಬೇಕಾಗುವಷ್ಟು ನಮ್ಮ ಕರುಳಿನಲ್ಲಿ ತಯಾರಿಸುತ್ತವೆ.
ಡಾ. ಕೆ. ಹನುಮಂತಯ್ಯ
ಚರ್ಮರೋಗ ವಿಭಾಗ, ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್
82, ಇಪಿಐಪಿ ಏರಿಯಾ, ವೈಟ್‍ಫೀಲ್ಡ್, ಬೆಂಗಳೂರು-560066.
ಫೋನ್ : 080-28413381/2/3/4/5
Email: info@vims.ac.in www.vims.ac.in