Vydyaloka

ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಾರಿ ಮನೋಭಾವನೆಗೆ ಕಡಿವಾಣ ಅಗತ್ಯ

ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಾರಿ ಮನೋಭಾವನೆ ಹೆಚ್ಚಾಗಿ ಬೆಳೆಯುತ್ತಿರುವುದು ವಿಷಾಧನೀಯ ವಿಚಾರ. ವೈದ್ಯ ಬಂಧುಗಳು ತಮ್ಮ ವೃತ್ತಿ ಜೀವನ ಮಜಲುಗಳತ್ತ ದೃಷ್ಟಿ ಹಾಯಿಸಿಕೊಂಡು ತಪ್ಪನ್ನು ತಿದ್ದಿಕೊಂಡು ಆತ್ಮಾವಲೋಕನ ಮಾಡಿಕೊಂಡು ಮಾನವಕುಲದ ಸೇವೆಗೆ ತಮ್ಮನ್ನು ಮಗದೊಮ್ಮೆ ಸಮರ್ಪಿಸಿಕೊಳ್ಳಬೇಕು.

ಶರೀರೇ ಜರ್ಜರೀ ಭೂತೇ ವ್ಯಾಧಿ ಗ್ರಸ್ಥೆ ಕಳೇಬರೇ ಔಷಧಂ ಜಾಹ್ನವೀಃ ತೋಯಂ, ವೈದ್ಯೋ ನಾರಾಯಣೋ ಹರಿಃ –
ಮನುಷ್ಯನ ದೇಹಕ್ಕೆ ರೋಗವು ತಗಲಿಕೊಂಡು, ಸರ್ವ ಕ್ರಿಯೆಗಳು ನಿಷ್ಕ್ರೀಯವಾಗಿ, ದೇಹವು ಕಳೇಬರಹದಂತಾದಾಗ ಸ್ವತಃ ನಾರಾಯಣನೇ ವೈದ್ಯನ ರೂಪದಲ್ಲಿ ಬರುತ್ತಾನೆ. ಮತ್ತು ಗಂಗಾಜಲವೇ ಅಮೃತವಾಗುತ್ತದೆ ಎಂಬುದು ಪುರಾತನ ಕಾಲದಿಂದಲೂ ನಾವು ನಂಬಿಕೊಂಡು ಬಂದ ಸಾರ್ವಕಾಲಿನ ಸತ್ಯ. ವೈದ್ಯ ಮತ್ತು ರೋಗಿಗಳ ಸಂಬಂಧದಲ್ಲಿ ನಂಬಿಕೆ ಎಂಬ ಪದಕ್ಕೆ ಬಹಳ ಅತ್ಯಮೂಲ್ಯವಾದ ಸ್ಥಾನವಿದೆ. ಹೆಚ್ಚಿನ ರೋಗಿಗಳ ಚಿಕಿತ್ಸೆ, ವೈದ್ಯ ರೋಗಿಯ ಸಂಬಂಧ ಮತ್ತು ನಂಬಿಕೆಯ ತಳಹದಿಯ ಮೇಲೆ ನಿಂತಿರುತ್ತದೆ.

ಮೊದಲೆಲ್ಲಾ ಊರಿಗೊಬ್ಬರೇ ವೈದ್ಯ. ಆತ ಕೊಟ್ಟಿದ್ದೇ ಮದ್ದು. ಆಗ ಈಗಿನಂತೆ ಹೊಸ ಹೊಸ ಏಬೋಲಾ, ಏಡ್ಸ್, ಹೆಪಟೈಟಿಸ್ ಮುಂತಾದ ಮಾರಣಾಂತಿಕ ಕಾಯಿಲೆಗಳಿರಲಿಲ್ಲ. ಸಕಲ ರೋಗಕ್ಕೂ ಒಬ್ಬನೇ ವೈದ್ಯ. ಒಂದೇ ಮದ್ದು. ಒಂದಷ್ಟು ಕಷಾಯ, ಔಷಧಿ, ಮಾತ್ರೆ. ವೈದ್ಯರು ಆತ್ಮೀಯವಾಗಿ ತಲೆ ಸವರಿ, ಮೈ ತಡವಿ, ನಾಡಿಬಡಿತ ನೋಡಿದಾಗಲೇ ಅರ್ಧ ರೋಗ ವಾಸಿಯಾಗುತ್ತಿತ್ತು. ಕುಟುಂಬ ವೈದ್ಯ ಪದ್ಧತಿ ಭಾರತದಲ್ಲಿ, ಅದೂ ಗ್ರಾಮೀಣ ಪ್ರದೇಶಗಳಲ್ಲಿ ಬಹಳ ಪ್ರಖ್ಯಾತಿ ಪಡೆದಿದೆ. ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರೆಂದರೆ ದೇವರು ಎಂಬ ಭಾವನೆ ಉಳಿದಿದೆ ಎಂಬುದಂತೂ ಸತ್ಯ. ಆದರೆ ನಗರ ಪ್ರದೇಶಗಳಲ್ಲಿ ವೈದ್ಯರು ದೇವರಾಗುವುದು ಬಿಡಿ, ಮನುಷ್ಯರೇ ಅಲ್ಲ ಎಂಬ ಸಂಧಿಗ್ಧ ಪರಿಸ್ಥಿತಿಯ ಬಂದೊದಗಿದೆ ಎನ್ನುವುದು ಬಹಳ ನೋವಿನ ಸಂಗತಿ.

ಬದಲಾಗುತ್ತಾ ಬಂದ ವೈದ್ಯ ರೋಗಿಯ ಸಂಬಂಧ 

ಕಾಲಕ್ರಮೇಣ ಜೀವನಶೈಲಿ, ಆಹಾರ ಪದ್ಧತಿ, ಪಾಶ್ಚಾತ್ತೀಕರಣ, ನಗರೀಕರಣ ಮತ್ತು ಅಧುನಿಕತೆ ಬೆಳೆದಂತೆಲ್ಲಾ ಹೊಸ ಹೊಸ ರೋಗಗಳು ರೋಗಿಗಳಲ್ಲಿ ಹುಟ್ಟಿಕೊಂಡಿತು. ವೈದ್ಯರ ಸಂಖ್ಯೆಯೂ ವೃದ್ಧಿಸಿತು. ಒಂದು ರೋಗಕ್ಕೆ ಒಬ್ಬ ವೈದ್ಯ ಎಂಬ ಪರಿಸ್ಥಿತಿ ಬಂದೊದಗುವ ಪ್ರಮೇಯ ಮತ್ತು ಕಾಲಘಟ್ಟದಲ್ಲಿ ನಾವು ಬಂದು ನಿಂತಿದ್ದೇವೆ!? ಅದರ ಜೊತೆಗೆ ವೈದ್ಯ ರೋಗಿಯ ಸಂಬಂಧವೂ ಬದಲಾಗುತ್ತಾ ಬಂದಿತು. ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಈ ಕಾಲಘಟ್ಟದಲ್ಲಿ ತಂದೆ-ಮಕ್ಕಳ, ಅಣ್ಣ-ತಮ್ಮಂದಿರ ಗಂಡ-ಹೆಂಡಿರ ಸಂಬಂಧಗಳಲ್ಲಿ ಮಾರ್ಪಾಡಾದಂತೆ ವೈದ್ಯರೋಗಿಯ ಸಂಬಂಧವೂ ವ್ಯಾಪಾರೀಕರಣವಾಗಿರುವುದು ಆಶ್ಚರ್ಯವಾದ ಸಂಗತಿಯೇನೂ ಅಲ್ಲ. ಮೊದಲೆಲ್ಲಾ ನಂಬಿಕೆ, ವಿಶ್ವಾಸದ ತಳಹದಿಯ ಮೇಲೆ ನಿಂತಿರುತ್ತಿದ್ದ ಚಿಕಿತ್ಸಾ ಪದ್ಧತಿ, ಈಗ ವ್ಯಾಪಾರೀಕರಣಗೊಂಡ ಸಮಾಜದಲ್ಲಿ ಕೇವಲ ನಂಬಿಕೆ ಮತ್ತು ವಿಶ್ವಾಸ ಎಂಬ ಪದ ಅರ್ಥ ಕಳಕೊಂಡಿದೆ ಎಂಬುದಂತೂ ಸತ್ಯ.

ಆರೋಗ್ಯವೇ ಭಾಗ್ಯ. ಪ್ರತಿಯೊಬ್ಬರು ಆರೋಗ್ಯವಂತರಾಗಿ ಬಾಳಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ. ಆದರೆ ಇಂದು ಪ್ರತಿಯೊಬ್ಬರೂ ಒತ್ತಡದ ಜೀವನದಿಂದಾಗಿ ಹತ್ತಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಪ್ರತಿಯೊಬ್ಬರು ಆರೋಗ್ಯವಂತರಾಗಿ ಇರುವುದು ಅವಶ್ಯ. ಜುಲೈ ಒಂದರಂದು ಭಾರತದಲ್ಲಿ ವೈದ್ಯರ ದಿನ ಆಚರಿಸಲಾಗುತ್ತದೆ. ಆಲೋಪತಿ, ಆಯುರ್ವೇದ, ಹೋಮಿಯೋಪತಿ, ಯುನಾನಿ ಹತ್ತಾರು ವಿಧಾನಗಳ ಮೂಲಕ ನಮ್ಮೆಲ್ಲರ ಆರೋಗ್ಯಕ್ಕಾಗಿ ತಮ್ಮ ಬದುಕನ್ನು ಮನುಕುಲದ ಏಳ್ಗೆಗೆ ಸಮರ್ಪಿಸಿಕೊಂಡಿರುವ ವೈದ್ಯರನ್ನು ಅಭಿನಂದಿಸುವ ಕೃತಜ್ಞತೆ ಸೂಚಿಸುವ ದಿನ. ನಮ್ಮ ದೇಹದ ಆರೋಗ್ಯದಲ್ಲಿ ವೈಪರೀತ್ಯ ಬಂದಾಗ ಜೀವನ್ಮರಣದ ನಡುವೆ ಬದುಕಲು ಹೆಣಗಾಡುತ್ತಿರುವಾಗ ನೋವು ಶಮನಗೊಳಿಸಿ, ಧೈರ್ಯ ತುಂಬಿ, ಆತ್ಮವಿಶ್ವಾಸ ತುಂಬಿ ಬಾಳಿಗೆ ಬೆಳಕು ನೀಡಿ ಹೊಸ ಜೀವನಕ್ಕೆ ರಹದಾರಿ ಮಾಡಿ ಕೊಟ್ಟ ನಮ್ಮ ನೆಚ್ಚಿನ ವೈದ್ಯರನ್ನು ಸ್ಮರಿಸುವ ನೆನಪಿಸಿಕೊಳ್ಳುವ ಮತ್ತು ಆಧರಿಸುವ ಸ್ಮರಣೀಯವಾದ ದಿನವಿದು.

ವ್ಯಾಪಾರಿ ಪ್ರವೃತ್ತಿಗೆ ಕಡಿವಾಣ ಅಗತ್ಯ

ವೈದ್ಯಕೀಯ ಕ್ಷೇತ್ರದಲ್ಲಿ ಅದ್ಭುತ ಕ್ರಾಂತಿಗಳು, ಅವಿಷ್ಕಾರ ನಡೆದಿದೆ. ಹೊಸ ಹೊಸ ರೋಗಗಳು ಹೊಸ ಹೊಸ ಔಷಧಿಗಳಾಗಿ ಹುಟ್ಟಿಕೊಂಡಿವೆ. ಇನ್ನೊಂದೆಡೆ ರೋಗಿ ಮತ್ತು ವೈದ್ಯರ ನಡುವಿನ ಭಾವಾನಾತ್ಮಕ ಸಂಬಂಧ ಶಿಥಿಲವಾಗುತ್ತಿದೆ. ಇಂದು ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಾರಿ ಮನೋಭಾವನೆ ಹೆಚ್ಚಾಗಿ ಬೆಳೆಯುತ್ತಿರುವುದು ವಿಷಾಧನೀಯ ವಿಚಾರ. ವೈದ್ಯ ಶಿಕ್ಷಣ ವೈದ್ಯಕೀಯ ವೃತ್ತಿ, ಸಂಶೋಧನೆಗಳೇ ಇರಲಿ ಎಲ್ಲ ಕಡೆಯೂ ಧನಬಲವೇ ವಿಜೃಂಭಿಸುತ್ತಿದೆ. ಪ್ರತಿಭೆ, ಪ್ರಾಮಾಣಿಕ ಪರಿಶ್ರಮಗಳಿಗೆ ಕಿಂಚಿತ್ತೂ ಬೆಲೆ ಸಿಗುತ್ತಿಲ್ಲ. ಇದು ಸುಂದರ, ಸ್ವಸ್ಥ ಸಮಾಜಕ್ಕೆ ಖಂಡಿತ ಮಾರಕ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಜನತೆ ಸಂಘ-ಸಂಸ್ಥೆಗಳು ಮತ್ತು ಸರ್ಕಾರ ತ್ವರಿತಗತಿಯಲ್ಲಿ ಸ್ಪಂದಿಸಬೇಕು.

ಅರ್ಹ ಪ್ರತಿಭಾವಂತರಿಗೆ ವೈದ್ಯಕೀಯ ಶಿಕ್ಷಣ ಅವಕಾಶ ದೊರೆತು, ಆರೋಗ್ಯ ಕ್ಷೇತ್ರದಲ್ಲು ಹೆಚ್ಚಿನ ಸಂಶೋಧನೆಗಳು ನಡೆಯಬೇಕು. ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ರೋಗಗಳಿಗೂ ಮತ್ತು ತಲೆತಲಾಂತರಗಳಿಂದ ಬಾಧಿಸುತ್ತಿರುವ ರೋಗಗಳಿಗೂ ಕಡಿವಾಣ ಹಾಕಬೇಕು. ಔಷಧ, ಶುಶ್ರೂಷೆ ಮತ್ತು ಎಲ್ಲಾ ಪ್ರಾಥಮಿಕ ಆರೋಗ್ಯ ಸೌಲಭ್ಯಗಳು ಬಡವರ ಮನೆ ಬಾಗಿಲಿಗೆ ತಲುಪಬೇಕು. ಈ ನಿಟ್ಟಿನಲ್ಲಿ ನಿಸ್ವಾರ್ಥದಿಂದ ಸೇವಾ ಮನೋಭಾವದಿಂದ ಹಗಲಿರುಳು ತಮ್ಮ ಜೀವನವನ್ನು ರೋಗಿಗಳ ಒಳಿತಿಗಾಗಿ ತೊಡಗಿಸಿಕೊಳ್ಳುವ ವೈದ್ಯರನ್ನು ಗುರುತಿಸುವ ಕಾರ್ಯ ನಡೆಯಬೇಕು.

ತಾಳ್ಮೆ, ಸಂಯಮ ಕಳೆದುಕೊಳ್ಳಬೇಡಿ, ಭರವಸೆ ಇಡಿ. 

ರೋಗಿಗಳಿಗೂ ಒಂದೆರಡು ಕಿವಿಮಾತು. ದಯವಿಟ್ಟು ತಾಳ್ಮೆ, ಸಂಯಮ ಕಳೆದುಕೊಳ್ಳಬೇಡಿ. ವೈದ್ಯರ ಮೇಲೆ ಪೂರ್ಣ ಭರವಸೆ ಇಡಿ. ಎಲ್ಲಾ ಸಮಸ್ಯೆಗಳನ್ನು ಮುಕ್ತವಾಗಿ ವೈದ್ಯರ ಬಳಿ ತೆರೆದಿಡಿ. ವೈದ್ಯರೂ ನಿಮ್ಮಂತೆಯೇ ಇರುವ ಇನ್ನೊಂದು ಜೀವ. ಅವರಿಗೆ ಆಸೆ, ಆಕಾಂಕ್ಷೆ, ವೈಯಕ್ತಿಕ ಸಮಸ್ಯೆ, ಭಾವನೆಗಳು ಇರುತ್ತವೆ. ಅವರ ಭಾವನೆಗಳಿಗೆ, ನೋವುಗಳಿಗೂ ರೋಗಿಗಳು ಸ್ಪಂದಿಸಬೇಕು. ಹಾಗಿದ್ದಲ್ಲಿ ಮಾತ್ರ ವೈದ್ಯ -ರೋಗಿಗಳ ನಡುವೆ ಸುಮಧುರ ಬಾಂಧವ್ಯ ಬೆಳೆದು ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ. ರೋಗಿಗಳು ಕೂಡ ವೈದ್ಯರಿಗೆ ರೋಗದ ಬಗ್ಗೆ ಸಂಪೂರ್ಣ ಪರಾಮರ್ಶೆ ಮಾಡಲು ಕಲಾವಕಾಶ ನೀಡಬೇಕು.

ದಿನ ಬೆಳಗಾಗುವುದರೊಳಗೆ ಕಾಯಿಲೆ ವಾಸಿಯಾಗಬೇಕು ಎಂದು ವೈದ್ಯರ ಮೇಲೆ ಅನಗತ್ಯ ಒತ್ತಡ ಹಾಕಬೇಡಿ. ಅನಗತ್ಯ ಪ್ರಶ್ನೆ ಕೇಳಿ ಅಂತರ್ಜಾಲದ ಮಾಹಿತಿಯನ್ನು ವೈದ್ಯರ ಬಳಿ ತಿಳಿಸಿ, ತಮ್ಮ ಅಲ್ಪ ಸ್ವಲ್ಪ ಜ್ಞಾನದಿಂದ ವೈದ್ಯರ ದಾರಿ ಕೆಡಿಸಬೇಡಿ. ಪ್ರತಿಶತ ಮೂವತ್ತರಷ್ಟು ರೋಗ, ವೈದ್ಯರ ಮೇಲಿನ ನಂಬಿಕೆಯ ತಳಹದಿಯಲ್ಲೇ ಗುಣವಾಗುತ್ತದೆ. ದೇಹದ ರೋಗವನ್ನು ವೈದ್ಯರು ಗುಣಪಡಿಸಬಹುದು. ಆದರೆ ಮನಸ್ಸಿನ ರೋಗ ಗುಣಪಡಿಸಲು ವೈದ್ಯರಿಂದ ಅಸಾಧ್ಯ ಎನ್ನುವುದನ್ನು ಅರಿತುಕೊಂಡರೆ, ವೈದ್ಯರ ಕೆಲಸ ಸರಳ. ವೈದ್ಯರೂ ಆತ್ಮವಿಮರ್ಶೆ ಮಾಡಿಕೊಂಡು ತಮ್ಮ ವೃತ್ತಿ ಪಾಲಿಸಿದಲ್ಲಿ ಸುಂದರ ಸದೃಢ ಸಮಾಜ ನಿರ್ಮಾಣ ಸಾಧ್ಯ.

 ವೈದ್ಯರ  ಸೇವೆಗೆ ಬೆಲೆಕಟ್ಟುವುದು ಖಂಡಿತಾ ಸಾಧ್ಯವಿಲ್ಲ:

ವೈದ್ಯಕೀಯ ವೃತ್ತಿ ಎನ್ನುವುದು ಸೇವಾ ಕ್ಷೇತ್ರದ ಪರಿಧಿಯೊಳಗೆ ಬರುವ ಪವಿತ್ರವಾದ ವೃತ್ತಿ. ವೈದ್ಯರು ನೀಡುವ ಸೇವೆಗೆ ಬೆಲೆಕಟ್ಟುವುದು ಖಂಡಿತಾ ಸಾಧ್ಯವಿಲ್ಲ. ರಕ್ತನಾಳಗಳು ತುಂಡಾಗಿ ತೀವ್ರ ರಕ್ತಸ್ರಾವವಾದಾಗ, ಹೃದಯ ಸ್ತಂಭನವಾಗಿ ಎದೆ ಬಡಿತ ನಿಂತುಹೋದಾಗ, ವೈದ್ಯರು ಸಾಕ್ಷಾತ್ ದೇವರಾಗಿ ಕಾಣುತ್ತಾರೆ. ಆದರೆ ಕೆಲವೊಮ್ಮೆ ವೈದ್ಯರ ತೀವ್ರ ಪ್ರಯತ್ನದ ಬಳಿಕವೂ ಸಾವು ಸಂಭವಿಸಿದಲ್ಲಿ, ವೈದ್ಯರನ್ನೇ ಸಾವಿಗೆ ಹೊಣೆಮಾಡಿ ಆಕ್ರಮಣ ಮಾಡುವುದು, ಹಿಂಸಾಚಾರ ಮಾಡುವುದು, ಆಸ್ಪತ್ರೆಗೆ ದಾಳಿ ಮಾಡುವುದು ಮಾನವೀಯತೆಯ ಲಕ್ಷಣವಲ್ಲ. ಯಾವೊಬ್ಬ ವೈದ್ಯರೂ ತನ್ನ ರೋಗಿ ಸಾಯಬೇಕೆಂದು ಇಚ್ಛಿಸುವುದಿಲ್ಲ. ಹಾಗೆಂದ ಮಾತ್ರಕ್ಕೆ ಎಲ್ಲಾ ವೈದ್ಯರು ಪ್ರಾಮಾಣಿಕವೆಂದು ತಿಳಿಯಬೇಕಿಲ್ಲ. ನೂರರಲ್ಲಿ ಒಬ್ಬರು ಅಪ್ರಾಮಾಣಿಕರು ಇರಲೂ ಬಹುದು.

ರೋಗಗಳನ್ನು ಪರಿಣಾಮಕಾರಿಯಾಗಿ ಗುಣಪಡಿಸಲು ವೈದ್ಯರು ನಿಡುವ ಔಷಧಿಗಳು ಎಷ್ಟು ಮುಖ್ಯವೋ ಅದೇ ರೀತಿ ವೈದ್ಯರ ಮೇಲಿನ ವಿಶ್ವಾಸ, ನಂಬಿಕೆಗಳು ಅತೀ ಅವಶ್ಯಕ. ವೈದ್ಯರು ಕೂಡಾ ನಿಮ್ಮಂತೆಯೇ ಒಬ್ಬ ಮನುಷ್ಯರು ಅವರಿಗೂ ತಮ್ಮದೇ ಆದ ಇತಿ ಮಿತಿಗಳಿವೆ, ಅವರದ್ದೇ ಆದ ವೈಯಕ್ತಿಕ ಬದುಕು ಇದೆ ಎಂಬುದನ್ನು ರೋಗಿಗಳು ಮನಗಾಣಬೇಕು. ಅಭಿವ್ಯಕ್ತಿ ಸ್ವಾತಂತ್ರ, ವೃತ್ತಿ ಗೌರವ ಮತ್ತು ರಾಜ ಧರ್ಮ ಎಲ್ಲಾ ವೃತ್ತಿಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಈ ನಿಟ್ಟಿನಲ್ಲಿ ವೈದ್ಯರು ಮತ್ತು ರೋಗಿಗಳು ತಮ್ಮ ಹೊಣೆಗಾರಿಕೆಯನ್ನು ಅರಿತು ನಿಭಾಯಿಸಿದಲ್ಲಿ ಸಮಾಜದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬಹುದು. ಮತ್ತು ವೈದ್ಯರೋಗಿಗಳ ನಡುವಿನ ಅನಾವಶ್ಯಕ ಸಂಘರ್ಷವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಬಲ್ಲದು.

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com

Share this: