ವೃದ್ಧರನ್ನು ಜೀವನೋತ್ಸಾಹದಲ್ಲಿರಿಸಿ. ವೃದ್ಧರು ಮನೆಗೆ, ಸಮಾಜಕ್ಕೆ ಹೊಣೆ ಅಲ್ಲ.ಕೋವಿಡ್-19 ವಯಸ್ಕರಲ್ಲಿ ಬಹಳಷ್ಟು ಮಾನಸಿಕ ವ್ಯಾಕುಲತೆ ಹುಟ್ಟು ಹಾಕಿದೆ. ಯಾವುದೇ ಕಾರಣಕ್ಕೂ ಅವರನ್ನು ಏಕಾಂಗಿಯಾಗಿರಲು ಬಿಡಬಾರದು.ನಿರಂತರವಾಗಿ ಅವರ ಮೇಲೆ ನಿಗಾ ಇದ್ದು, ನಿರ್ಲಕ್ಷ್ಯತೆಗೊಳಗಾಗದಂತೆ ನೋಡಿಕೊಳ್ಳಬೇಕು.
ಜೀನ್‍ಗಳಲ್ಲಿ ಸಹ ಬದಲಾವಣೆ ಕಂಡುಬರುತ್ತದೆ. ಬದಲಾವಣೆಗಳನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಇವುಗಳ ಜೊತೆ ಸರಿಯಾದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ಸಾಮಾನ್ಯವಾಗಿ ವೃದ್ಧಾಪ್ಯ ಎಂದ ಕೂಡಲೇ ರೋಗಗಳ ಪಟ್ಟಿಯೇ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಆದರೆ ರೋಗರಹಿತವಾದ ವೃದ್ಧಾಪ್ಯ ಸಾಧ್ಯವಿದೆ. ಆ ವಯಸ್ಸಿನಲ್ಲೂ ಯುವಕರಂತೆ ಲವಲವಿಕೆಯಿಂದ ಬಾಳಲು ಸಾಧ್ಯವಿದೆ. ಇದಕ್ಕೆ ಎರಡು ಪ್ರಮುಖ ಅಂಶಗಳು ಪೂರಕವಾಗಿರುತ್ತದೆ. ಒಂದು ವೃದ್ಧರ ಮಕ್ಕಳು, ಮೊಮ್ಮಕ್ಕಳು ಹಾಗೂ ಸಂಬಂಧಪಟ್ಟವರು ಮಾನಸಿಕ, ಭಾವನಾತ್ಮಕ ಸಹಕಾರ ನೀಡಬೇಕು. ಇನ್ನೊಂದು ವೃದ್ಧರ ಜೀವನಕ್ರಮದಲ್ಲಿ, ಆಹಾರ ವಿಹಾರದಲ್ಲಿ ಶಿಸ್ತನ್ನು ರೂಡಿಸಿಕೊಳ್ಳಬೇಕು.
ವೃದ್ಧರ ಆಹಾರ ಕ್ರಮ:
1. ಕನಿಷ್ಠ ಉಪ್ಪು: ದೇಹಕ್ಕೆ ಅವಶ್ಯವಿರುವ ಉಪ್ಪಿನಾಂಶ ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಪ್ರಕೃತಿದತ್ತವಾಗಿ ಇರುತ್ತದೆ. ಯಾವುದೇ ಆಹಾರ ಪದಾರ್ಥಕ್ಕೂ ಮೇಲುಪ್ಪು ಅವಶ್ಯಕತೆ ಇರುವುದಿಲ್ಲ. ಸೇವಿಸುವ ಉಪ್ಪಿನ ಪ್ರಮಾಣ ಅಧಿಕವಾದರೆ ಏರು ರಕ್ತದೊತ್ತಡ ಮತ್ತು ಮೂತ್ರಕೋಶದ ತೊಂದರೆಗಳು ಇನ್ನೂ ಅನೇಕ ತೊಂದರೆಗಳು ಕಾಣುತ್ತವೆ ಹಾಗೂ ಅವು ಉಲ್ಪಣಗೊಳ್ಳುತ್ತವೆ.
2. ಕನಿಷ್ಟ ಸಕ್ಕರೆ: ನಾವು ಪ್ರತಿದಿನ ಉಪಯೋಗಿಸುವ ಸಕ್ಕರೆಯಲ್ಲಿ ಪೋಷಕಾಂಶಗಳ ಪ್ರಮಾಣ ಕನಿಷ್ಠವಾಗಿರುತ್ತದೆ. ಸಂಸ್ಕರಿಸುವಾಗ ಎಲ್ಲ ಪೋಷಕಾಂಶಗಳು ನಷ್ಟವಾಗುತ್ತವೆ. ಇದರ ಬದಲಿಗೆ ಪೋಷಕಾಂಶಗಳು ಹೇರಳವಾಗಿರುವ ಕಬ್ಬಿಣಾಂಶ ಅಧಿಕವಾಗಿರುವ ಬೆಲ್ಲವನ್ನು ಉಪಯೋಗಿಸಬೇಕು. ಹಣ್ಣುಗಳಲ್ಲಿ ಪ್ರಕೃತಿದತ್ತ ಸಕ್ಕರೆ ಅಂಶ ಇರುವುದರಿಂದ ತಾಜಾ ಹಣ್ಣುಗಳನ್ನು ಹೆಚ್ಚು ಹೆಚ್ಚಾಗಿ ಉಪಯೋಗಿಸಬೇಕು.
3. ಟೀ ಕಾಫಿ ಬೇಡ: ಕೆಲವರು ಪ್ರತಿನಿತ್ಯ ಏಳೆಂಟು ಗ್ಲಾಸ್ ಟೀ ಕುಡಿಯುತ್ತಾರೆ. ಇಷ್ಟು ಟೀ, ಕಾಫಿ ಕುಡಿಯುವುದರಿಂದ ನಿದ್ದೆ ಬಾರದಿರುವಿಕೆ, ಹೈಪರ್ ಎಸಿಡಿಟಿ, ಮುಂತಾದ ತೊಂದರೆಗಳು ಪ್ರಾರಂಭವಾಗುತ್ತದೆ. ಉದಾಹರಣೆಗೆ ಒಬ್ಬ ದಿನಕ್ಕೆ ಎಂಟು ಗ್ಲಾಸ್ ಟೀ ಕುಡಿಯುತ್ತಾನೆಂದುಕೊಳ್ಳಿ. ಪ್ರತಿ ಕಪ್‍ಗೆ ಎರಡು ಚಮಚ ಸಕ್ಕರೆ ಹಾಕಿರುತ್ತಾರೆ. ಒಂದು ದಿನಕ್ಕೆ ಆತ 16 ಚಮಚ ಸಕ್ಕರೆ ತಿಂದ ಹಾಗಾಯಿತು.
4. ಬೇಕರಿ,ಕರಿದ ತಿಂಡಿ ತಿನಿಸುಗಳು ಬೇಡ: ಇತ್ತೀಚಿನ ಸಂಶೋಧನೆಗಳ ಪ್ರಕಾರ ಸಂಸ್ಕರಿಸಿದ ಆಹಾರ ಪದಾರ್ಥಗಳಾದ ಸಕ್ಕರೆ, ಮೈದಾ, ಉಪ್ಪಿನಕಾಯಿ, ಬೇಕರಿ ತಿನಿಸುಗಳು ಹೊಟ್ಟೆಯಲ್ಲಿ ಎಸಿಡಿಟಿಯನ್ನು ಹೆಚ್ಚು ಮಾಡುತ್ತೆ ಎಂಬ ಅಂಶ ದೃಡಪಟ್ಟಿದೆ. ಕರಿದ, ಸಂಸ್ಕರಿಸಿದ, ಕೃತ್ರಿಮ ಖಾರವಾದ ಆಹಾರ ಕಡಿಮೆ ಮಾಡಿ. ಕರಿದ ತಿಂಡಿ ತಿನಿಸುಗಳು ರಕ್ತದಲ್ಲಿ ಕೊಲೆಸ್ಟರಾಲ್ ಪ್ರಮಾಣವನ್ನು ಜಾಸ್ತಿ ಮಾಡಿ ಅನೇಕ ತೊಂದರೆಗಳಿಗೆ ದಾರಿ ಮಾಡಿಕೊಡುತ್ತವೆ. ಬೇಕರಿ ತಿಂಡಿಗಳಲ್ಲಿ ಐಸ್‍ಕ್ರೀಮ್‍ಗಳಲ್ಲಿ ಅನೇಕ ರಾಸಾಯನಿಕಗಳನ್ನು, ಬಣ್ಣಗಳನ್ನು ಉಪಯೋಗಿಸುತ್ತಾರೆ. ಇವು ದೇಹಕ್ಕೆ ಮಾರಕ ಪರಿಣಾಮ ಬೀರುತ್ತವೆ. ಜತೆಗೆ ಈ ಆಹಾರ ಪದಾರ್ಥಗಳಲ್ಲಿ ನಾರಿನಾಂಶ ಇರುವುದೇ ಇಲ್ಲ. ಇದರಿಂದ ಮಲಬದ್ಧತೆ, ಅಜೀರ್ಣ ಇನ್ನೂ ಅನೇಕ ತೊಂದರೆಗಳು ಪ್ರಾರಂಭವಾಗುತ್ತವೆ.
5. ಸಿಗರೇಟ್ ಸೇವನೆ, ಕುಡಿತ ಬಿಡಿ: ಇವೆರಡೂ ಕೆಟ್ಟ ಹವ್ಯಾಸಗಳು. ಇವು ಆರೋಗ್ಯ ಕೆಡಿಸುವ ರೀತಿಯ ಬಗೆಗೆ ನಮಗೆಲ್ಲ ಅರಿವಿದೆ. ವೃದ್ಯಾಪ್ಯದಲ್ಲಿ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗಿರುತ್ತದೆ. ಹೊತೆಗೆ ಸಿಗರೇಟ್, ಕುಡಿತದ ಅಭ್ಯಾಸ ಇದ್ದರೆ ದೇಹ ರೋಗಗಳ ಆಗರವಾಗಿ ಬಿಡುತ್ತದೆ. ನಗೆ ಕೂಟದಲ್ಲಿ ಭಾಗವಹಿಸುವುದು, ಪ್ರತಿನಿತ್ಯ ಯೋಗ, ಪ್ರಾರ್ಥನೆ, ಧ್ಯಾನದ ಮೂಲಕ ಮನಸ್ಸನ್ನು ಸೃಜನಾತ್ಮಕ ಕೆಲಸಗಳಲ್ಲಿ ಕೇಂದ್ರೀಕರಿಸಬಹುದು.
6. ಮಾನಸಿಕ ಒತ್ತಡವನ್ನು ಹತೋಟಿಯಲ್ಲಿಟ್ಟುಕೊಳ್ಳಿ: ಮಿತಿಮೀರಿದ ಮಾನಸಿಕ ಒತ್ತಡ ಅನೇಕ ರೋಗಗಳಿಗೆ ಕಾರಣ ಎನ್ನುವುದನ್ನು ಈ ಆಧುನಿಕ ಪ್ರಪಂಚದಲ್ಲಿ ನಾವು ಕಾಣುತ್ತಿದ್ದೇವೆ. ವೃದ್ಧಾಪ್ಯಗಳಲ್ಲಿ ಸಾಮಾನ್ಯವಾಗಿ ಕಾಣಿಸುವ ಏರು ರಕ್ತದೊತ್ತಡ, ಹೃದಯದ ತೊಂದರೆಗಳು, ಹೊಟ್ಟೆಉರಿ, ತಲೆನೋವು, ಮಲಬದ್ಧತೆ, ಮೂಲವ್ಯಾದಿ, ಹೊಟ್ಟೆಯ ಹುಣ್ಣು, ಬೆನ್ನುನೋವು ಮುಂತಾದ ಕಾಯಿಲೆಗಳಿಗೆ ಮಿತಿಮೀರಿದ ಮಾನಸಿಕ ಒತ್ತಡವೂ ಕಾರಣ.ಮಾನಸಿಕ ಒತ್ತಡವನ್ನು ಹತೋಟಿಯಲ್ಲಿಟ್ಟುಕೊಳ್ಳಿ
7. ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು: ಪ್ರೀತಿ, ಪ್ರೇಮ, ದಯೆ, ಅನುಕಂಪ, ಸ್ವಾಭಿಮಾನ, ಸಂತೋಷಗಳಂಥ ಸಕಾರಾತ್ಮಕ ಭಾವನೆಗಳನ್ನು ರೂಢಿಸಿಕೊಳ್ಳಬೇಕು. ದುಃಖ, ಕೋಪ, ಭಯ, ಮತ್ಸರ, ಕೀಳರಿಮೆ, ವಿಕೃತ ಕಾಮ, ಅತಿ ನಾಚಿಕೆ, ಆಕ್ರಮಣಕಾರಿ ಭಾವನೆಗಳನ್ನು ಹತೋಟಿಯಲ್ಲಿಡುವುದು ಬಹಳ ಮುಖ್ಯ.ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು.
ವೃದ್ಧರ ಆರೈಕೆಯಲ್ಲಿರುವವರಿಗೆ ಕಿವಿಮಾತು:
1. ವೃದ್ಧರು ಅಪ್ರಯೋಜಕರು ಎಂಬ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳಬೇಕು. ಯಾವುದೇ ವಿಷಯ ಯಾ ಸಮಸ್ಯೆ ಎದುರಿಸುವಾಗ ವೃದ್ಧರ ಅಭಿಪ್ರಾಯ, ಸಲಹೆ ಹಾಗೂ ಮಾರ್ಗದರ್ಶನಗಳನ್ನು ಪಡೆಯುವುದು ಅತ್ಯಗತ್ಯ.
2. ಅವರ ಆರೋಗ್ಯದ ಕಡೆ ತೀವ್ರ ಗಮನ ಕೊಡುವುದು ಅತೀ ಅವಶ್ಯ. ನಿಯಮಿತವಾಗಿ ಅವರನ್ನು ವೈದ್ಯರಿಂದ ತಪಾಸಣೆಗೊಳಿಸಿ ಸೂಕ್ತ ಔಷಧೋಪಚಾರ ಮಾಡುವುದು.
3. ಸದುಪಯೋಗಿಸದ ಬುದ್ಧಿಯು ರಾಕ್ಷಸನ ಕಾರ್ಖಾನೆಯಾಗುತ್ತದೆ. ಈ ಮಾತು ವೃದ್ಧರ ಪಾಲಿಗಂತೂ ನೂರಕ್ಕೆ ನೂರರಷ್ಟು ಸತ್ಯ. ಆದುದರಿಂದ ಅವರನ್ನು ಸರ್ವಥಾ ಕಾರ್ಯನಿರತರನ್ನಾಗಿರಿಸಬೇಕು. ಉದಾಹರಣೆಗೆ : ದಿನಸಿ ಸಾಮಾನು, ತರಕಾರಿ, ಹಾಲು ಇತ್ಯಾದಿಗಳನ್ನು ತರುವುದು, ಮಕ್ಕಳನ್ನು ಶಾಲೆಗೆ ಕಳಿಸುವುದು, ಅವರಿಗೆ ವಿದ್ಯೆ ಹೇಳಿಕೊಡುವುದು, ವಿದ್ಯುತ್ ಬಿಲ್, ಟೆಲಿಫೋನ್ ಬಿಲ್ ಇತ್ಯಾದಿಗಳನ್ನು ಕಟ್ಟುವುದು, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಕಳುಹಿಸುವುದು, ಸಣ್ಣ-ಪುಟ್ಟ ಹೂದೋಟದ ಕೆಲಸ ಮಾಡಲು, ಅವಕಾಶ ಕೊಡುವುದು ಇಂಥ ತ್ರಾಸದಾಯಕವಲ್ಲದ ಕೆಲಸಗಳಿಗೆ ವೃದ್ಧರನ್ನು ತೊಡಗಿಸಬಹುದು.
ರೋಗರಹಿತ ವೃದ್ಧಾಪ್ಯಕ್ಕಾಗಿ ಸರಳ ಸೂತ್ರಗಳು:
1. ಪ್ರತಿನಿತ್ಯ ಎರಡು-ಮೂರು ಲೀಟರುಗಳಷ್ಟು ಶುದ್ಧನೀರು ಕುಡಿಯಿರಿ. ಊಟ ಮಾಡುವಾಗ ನೀರು ಸೇವಿಸಬಾರದು. ಒಂದು ಗಂಟೆ ಮೊದಲು ಹಾಗೂ ಅರ್ಧಗಂಟೆ ಅನಂತರ ಯಥೇಚ್ಛವಾಗಿ ಸೇವಿಸಬಹುದು. ನೀರು ಹೆಚ್ಚು ಹೆಚ್ಚು ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಮೂತ್ರಕೋಶದ ಕಲ್ಲನ್ನು ಇದು ತಡೆಗಟ್ಟುತ್ತದೆ.
2. ಉಷಃಪಾನ- ಬೆಳಿಗ್ಗೆ ಎದ್ದು ಹಲ್ಲುಜ್ಜಿ ಮುಖ ತೊಳೆದು ನಾಲ್ಕೈದು ಗ್ಲಾಸ್ ನೀರು ಕುಡಿಯಿರಿ. ಮಲವಿಸರ್ಜಸಿ ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.
3. ಒಂದು ಗಂಟೆಯ ಯೋಗಾಭ್ಯಾಸ ರೂಡಿಸಿಕೊಳ್ಳಿ. ಯೋಗಾಭ್ಯಾಸ ಎಂದರೆ ಕೇವಲ ಭಂಗಿಗಳಲ್ಲಿ ನಿಲ್ಲುವುದು ಅಲ್ಲ. ಸರಳ ಯೋಗಾಸನಗಳು ವಿಶ್ರಾಂತಿ ಕ್ರಿಯೆಗಳು, ಪ್ರಾಣಾಯಾಮ, ಪ್ರಾರ್ಥನೆ, ಧ್ಯಾನ, ಇವೆಲ್ಲವನ್ನೂ ದಿನನಿತ್ಯದ ಯೋಗಾಭ್ಯಾಸ ಒಳಗೊಂಡಿರಬೇಕು.
4. ಪ್ರತಿದಿನ ಶುದ್ದವಾದ ಪರಿಸರದಲ್ಲಿ ಎರಡು ಮೂರು ಕಿ.ಮೀ.ನಷ್ಟಾದರೂ ನಡಿಗೆಯ ಅಭ್ಯಾಸ ಇಟ್ಟುಕೊಳ್ಳಿ.
5. ನೀವು ನಗಿರಿ – ಇತರರನ್ನೂ ನಗಿಸಿ. ಇದು ನಿಮ್ಮ ಆರೋಗ್ಯವನ್ನು ಖಂಡಿತವಾಗಿಯೂ ವರ್ಧಿಸುತ್ತದೆ. ಹತ್ತಿರದ ನಗೆಕೂಟಕ್ಕೆ ಸೇರಿಕೊಳ್ಳಿ.
6. ಓದುವ ಹವ್ಯಾಸ ಬೆಳೆಸಿಕೊಳ್ಳಿ. ಹತ್ತಿರದ ವಾಚನಾಲಯದ ಸಂಪೂರ್ಣ ಪ್ರಯೋಜನ ಪಡೆಯಿರಿ.
7. ಚಿಕ್ಕಮಕ್ಕಳನ್ನು ಪ್ರೀತಿಸಿ, ಅವರೊಡನೆ ಆಟವಾಡಿ, ಸಾಕುನಾಯಿ, ಬೆಕ್ಕು ಹಾಗು ಇತರ ಪ್ರಾಣಿಗಳ ಮೇಲೆ ಪ್ರೀತಿ ತೋರಿಸಿ ಅವುಗಳೊಂದಿಗೆ ಸಮಯ ಕಳೆಯಿರಿ.
8. ಇತರರ ಬಗೆಗೆ ನಿರೀಕ್ಷೆಗಳನ್ನು ಕಡಿಮೆ ಮಾಡಿ. ನೀವು ಅವರೊಂದಿಗೆ ಹೊಂದಿಕೊಳ್ಳಿ. ಎಲ್ಲರೊಡನೆ ಸ್ನೇಹದಿಂದಿರಿ. ಅವರನ್ನು ಅರ್ಥಮಾಡಿಕೊಳ್ಳಿ.
9. ಯಾವುದೇ ಸಮಸ್ಯೆ ಬರಲಿ ಇದರ ಪರಿಹಾರ ಮಾರ್ಗಗಳೇನು ಎಂದು ಚಿಂತಿಸಿ. ನಿಮಗೆ ಹೊಳೆಯದಿದ್ದರೆ ಇತರರ ನೆರವನ್ನು ಕೇಳಿ, ಪರಿಹಾರವಿಲ್ಲದ ಸಮಸ್ಯೆಯಾದರೆ ಅದರೊಂದಿಗೆ ಹೊಂದಿಕೊಂಡು ಬದುಕುವುದನ್ನು ಕಲಿಯಿರಿ.
10. ಭಕ್ತಿಭಾವ ಬೆಳೆಸಿಕೊಳ್ಳಿ. ಅದರಿಂದ ವಿಶೇಷವಾಗಿ ದುಗುಡ, ದುಃಖ, ದುಮ್ಮಾನಗಳಿಂದ ಹಾಗೂ ಚಿಂತೆಯಿಂದ ಬಹುಬೇಗ ಮನಸ್ಸನ್ನು ಮುಕ್ತಗೊಳಿಸಬಹುದು. ಶ್ರದ್ಧಾಭಕ್ತಿಯಿಂದ ಇಷ್ಟದೇವರಿಗೆ ಶರಣಾದಾಗ ಮನಸ್ಸಿನ ಒತ್ತಡಗಳು ದೂರವಾಗುತ್ತದೆ. ಎಲ್ಲವೂ ಇಷ್ಟ ದೇವರ ಇಚ್ಚೆಯಂತೆಯೇ ನಡೆಯುವುದು ಎಂದಾದಲ್ಲಿ ಸಂಕಟದಿಂದ ಪಾರು ಮಾಡುವವನೂ ಅವನೇ ಅಲ್ಲವೇ? ನಿತ್ಯ ಜೀವನದಲ್ಲಿ ಪೂಜೆ, ಭಜನೆ, ಪ್ರಾರ್ಥನೆಗಳನ್ನು ಅಳವಡಿಸಿಕೊಳ್ಳುವುದರಿಂದ ಮನಸ್ಸಿನ ಶಾಂತಿ ಇಮ್ಮಡಿಯಾಗುವುದು.
11. ಸಾಮಾನ್ಯವಾಗಿ ನೆಗಡಿ, ಶೀತ, ಕೆಮ್ಮ , ತಲೆನೋವು ಮುಂತಾದ ತೊಂದರೆಗಳಿಗೆ ಮನೆಮದ್ದು ಮಾಡಿ ಕಡಿಮೆಯಾಗದಿದ್ದಲ್ಲಿ ಕುಟುಂಬ ವೈದ್ಯರನ್ನು ಭೇಟಿ ಮಾಡಿ.
12. ಅಧಿಕ ಸಂಖ್ಯೆಯ ವೃದ್ಧರು ದೈಹಿಕಕ್ಕಿಂತ ಜಾಸ್ತಿಯಾಗಿ ಮಾನಸಿಕವಾಗಿ ಜರ್ಜರಿತರು ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು. ಅವರಿಗೆ ವೈದ್ಯರ ಶುಶ್ರೂಷೆ ಅಥವಾ ಔಷಧಿಗಿಂತ ಹೆಚ್ಚಾಗಿ ಕಿರಿಯರ ಪ್ರೀತಿ, ಅಭಿಮಾನ ಹಾಗೂ ಗೌರವಗಳ ಅಗತ್ಯ ಅಧಿಕವಾಗಿರುತ್ತದೆ. ಇದನ್ನು ಅರ್ಥೈಸಿಕೊಂಡು ಇತರರು ವ್ಯವಹರಿಸಿದಲ್ಲಿ ವೃದ್ಧರ ಶೇಷ ಜೀವನವು ಆರಾಮದಾಯಕವಾಗಿರುವುದರಲ್ಲಿ ಸಂಶಯವಿಲ್ಲ.
Email: drvhegde@yahoo.com; nisargamane6@gmail.com