ಯಾವುದೇ ಮಂಗಲಕಾರ್ಯ ನಡೆಯುವಾಗಲೂ ಕನಿಷ್ಠ ಎರಡು ವೀಳ್ಯದೆಲೆ, ಒಂದು ಅಡಿಕೆ ಬೇಕೇ ಬೇಕು. ದುರ್ಜನರ ಸಂಗ ಅಭಿಮಾನ ಭಂಗ ಎಂಬಂತೆ ತಂಬಾಕಿನ ಸ್ನೇಹದಿಂದಾಗಿ ವಿಶೇಷ ಔಷಧೀ ಗುಣಗಳನ್ನು ಹೊಂದಿರುವ ತುಂಬಾ ಪ್ರಯೋಜನಕಾರಿಯಾಗಿರುವ ವೀಳ್ಯದೆಲೆಯ ಹೆಸರು ಕೂಡಾ ಹಾಳಾಗಿದೆ.
ವೀಳ್ಯದ ಎಲೆಯು ವಿಶೇಷ ಗುಣಗಳನ್ನು ಹೊಂದಿದ್ದು ನಮ್ಮ ದಿನನಿತ್ಯದ ಜೀವನದಲ್ಲಿ ಸಾವಿರಾರು ವರುಷಗಳಿಂದ ಬಳಸುತ್ತಿದ್ದೇವೆ. ತಿನ್ನುವುದರ ಜೊತೆಗೆ ನಮ್ಮ ವಿವಿಧ ಸಂಪ್ರದಾಯಗಳಲ್ಲಿ ವೀಳ್ಯದ ಎಲೆಗೆ ಮಹತ್ವದ ಸ್ಥಾನವಿದೆ. ಆಯುರ್ವೇದ ಗ್ರಂಥಗಳು ವೀಳ್ಯದೆಲೆಯನ್ನು ವಿವಿಧ ರೀತಿಯ ಗುಣಗಳನ್ನು ಹೊಂದಿರುವ ವಿಶೇಷ ಔಷಧವೆಂದು ಹೊಗಳಿವೆ.
ಭಾವಪ್ರಕಾಶ ನಿಘಂಟುವಿನ ಪ್ರಕಾರ ಇದಕ್ಕೆ ತೀಕ್ಷ್ಣ ಮತ್ತು ಉಷ್ಣ ಗುಣಗಳಿದ್ದು ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ ಬಾಯಿಯ ರುಚಿಯನ್ನು ಹೆಚ್ಚಿಸುತ್ತದೆ. ಕಫ ಮತ್ತು ವಾತ ದೋಷಗಳನ್ನು ನಿವಾರಿಸಿ ಬಾಯಿಯ ದುರ್ಗಂಧವನ್ನು ಇದು ತೆಗೆಯುತ್ತದೆ. ಉತ್ತಮವಾದ ಸ್ವರವನ್ನು ಕೊಡಲು ಮತ್ತು ಅಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಇದು ತುಂಬಾ ಉಪಕಾರಿ. ಹಾಗಾಗಿಯೇ ಇದನ್ನು ಊಟವಾದ ನಂತರ ಮೆಲ್ಲುವ ರೂಢಿ ಇರುವುದು.
ಆದರೆ ಅತೀಯಾದ ಸೇವನೆಯಿಂದ ಉಷ್ಣ ಹೆಚ್ಚಾಗಿ ರಕ್ತ ಮತ್ತು ಪಿತ್ತಕ್ಕೆ ಸಂಬಂಧಪಟ್ಟ ದೋಷಗಳು ಅಥವಾ ಸಮಸ್ಯೆಗಳು ಬರುತ್ತವೆ ಎಂದು ಆಯುರ್ವೇದ ಗ್ರಂಥಗಳು ಹೇಳುತ್ತವೆ.
• ಕೆಟ್ಟ ಸೂಕ್ಷ್ಮಾಣುಗಳನ್ನು ನಿರೋಧಿಸುವ ಗುಣ ಇದರಲ್ಲಿರುವ ಕಾರಣದಿಂದ ಇದು ಬಾಯಿಯಲ್ಲಿನ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಿ ಹಲ್ಲು, ವಸಡು, ಗಂಟಲಿಗೆ ಸಂಬಂಧಪಟ್ಟ ತೊಂದರೆಗಳು ಬರದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಒಂದು ರೀತಿಯಲ್ಲಿ ಮೌತ್ ಫ್ರೆಶ್ನರ್ ಥರ ಕೆಲಸಮಾಡುತ್ತದೆ.
• ಇದು ಜೀರ್ಣಕಾರಿ ಎಂಜೈಮ್ ಗಳ ಬಿಡುಗಡೆಯನ್ನು ಹೆಚ್ಚಿಸುವ ಕಾರಣದಿಂದ ಅತಿಯಾಗಿ ಸಿಹಿಯನ್ನು ಸೇವಿಸಿದ ನಂತರ, ಹೊಟ್ಟೆ ತುಂಬಾ ಊಟ ಮಾಡಿದ ನಂತರ ಮತ್ತು ಜೀರ್ಣಕ್ಕೆ ಕಷ್ಟವಾಗುವಂತಹ ಆಹಾರಗಳನ್ನು ಸೇವಿಸಿದ ನಂತರ ಇದನ್ನು ಸೇವಿಸುವುದು ಹಿತಕಾರಿ. ಈ ಗುಣದ ಕಾರಣದಿಂದ ಇದು ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುವುದು, ಹೊಟ್ಟೆಯುಬ್ಬರ, ಮಲಬದ್ಧತೆಯಂತಹ ತೊಂದರೆಗಳನ್ನು ನಿವಾರಿಸುತ್ತದೆ.
• ಇದರಲ್ಲಿ ಆಂಟಿಆಕ್ಸಿಡೆಂಟ್ ಗಳು ಹೇರಳವಾಗಿರುವ ಕಾರಣ ಇದು ನಮಗೆ ಹಲವಾರು ರೀತಿಯ ಖಾಯಿಲೆಗಳು ಬರುವುದನ್ನು ತಡೆಯುತ್ತದೆ. ವಿಶೇಷವಾಗಿ ಡಯಾಬಿಟೀಸ್ ಮತ್ತು ಕ್ಯಾನ್ಸರ್ ಬರದಂತೆ ತಡೆಯುವಲ್ಲಿ ಇದು ಸಹಕಾರಿ.
• ಇದರಲ್ಲಿ ಯುಜೆನಾಲ್ ನಂತಹ ಉರಿಯೂತ ನಿರೋಧಕ ಅಂಶಗಳು ಇರುವ ಕಾರಣದಿಂದ ಇದು ಸಂಧಿಗಳಲ್ಲಿ ನೋವು, ಬಾವು, ತಲೆನೋವು, ಮೈಕೈ ನೋವು, ದೇಹದಲ್ಲಿ ಭಾರವೆನಿಸುವುದು ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ.
• ಕಫವನ್ನು ಹೊರಹಾಕುವ ಗುಣವಿರುವ ಕಾರಣ ಇದು ಪದೇ ಪದೇ ಕಾಡುವ ನೆಗಡಿ, ಕೆಮ್ಮು, ಅಸ್ಥಮಾದಂತಹ ಸಮಸ್ಯೆಗಳಲ್ಲಿ ಅನುಕೂಲಕರ.
• ಕೆಲವು ಸಂಶೋಧನೆಗಳ ಪ್ರಕಾರ ಇದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸುತ್ತದೆ. ಹೀಗಾಗಿ ಪ್ರತಿದಿನ ಊಟವಾದ ನಂತರ ಇದನ್ನು ಸೇವಿಸುವುದರಿಂದ ಅನುಕೂಲವಾಗುತ್ತದೆ.
• ಕೆಲ ವರ್ಷಗಳ ಹಿಂದೆ ನಡೆದ ಒಂದು ಸಂಶೋಧನೆಯ ಪ್ರಕಾರ ನಮ್ಮ ಕರುಳಿನಲ್ಲಿ ಕೆಟ್ಟ ಕೊಬ್ಬನ್ನು ಹೀರಿಕೊಳ್ಳುವಿಕೆಯನ್ನು ಇದು ಕಡಿಮೆ ಮಾಡುವ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುವಂತೆ ನೋಡಿಕೊಳ್ಳುತ್ತದೆ.
• ಇದರಲ್ಲಿ ಸೂಕ್ಷ್ಮಾಣು ನಿರೋಧಕ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳು ಇರುವ ಕಾರಣದಿಂದ ಗುಣವಾಗದ ಗಾಯಗಳು ಮತ್ತು ಚರ್ಮ ರೋಗಗಳನ್ನು ಕಡಿಮೆಮಾಡಲು ಇದು ಸಹಾಯಮಾಡುತ್ತದೆ.
• ಆಯುರ್ವೇದದ ಪ್ರಕಾರ ಇದರ ಸೇವನೆಯಿಂದ ಆಮದೋಷ ಕಡಿಮೆಯಾಗುವ ಕಾರಣ ಜೀರ್ಣಾಂಗವ್ಯೂಹ, ಶ್ವಾಸಾಂಗವ್ಯೂಹ, ಮಾಂಸಖಂಡಗಳು, ಮೂಳೆಗಳು, ಸಂಧಿಗಳು ಮತ್ತು ನರಗಳಿಗೆ ಸಂಬಂಧಪಟ್ಟ ಬೇರೆ ರೀತಿಯ ಸಮಸ್ಯೆಗಳಲ್ಲಿ ಇದು ಅನುಕೂಲಕರ.
ಹೇಗೆ ಸೇವಿಸಬೇಕು?
ಆರೋಗ್ಯವಾಗಿರುವವರು ಅಥವಾ ಕಫ ಮತ್ತು ವಾತದೋಷಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಅನುಭವಿಸುತ್ತಿರುವವರು ದಿನಕ್ಕೊಮ್ಮೆ ಊಟವಾದ ನಂತರ ವೀಳ್ಯದೆಲೆಯ ಜೊತೆಗೆ ಸ್ವಲ್ಪ ಸುಣ್ಣ, ಅಡಿಕೆ, ಸೋಂಪು, ಚಿಕ್ಕ ಚೂರು ಜ್ಯೇಷ್ಠಮಧು, ಕಾಚು, ಸಣ್ಣ ಚೂರು ಲವಂಗ ಮುಂತಾದವುಗಳನ್ನು ಹಾಕಿ ಸೇವಿಸಬಹುದು. ಹೀಗೆ ಸೇವಿಸಿದರೆ ಒಳ್ಳೆಯ ಔಷಧವಾಗಿ ತಾಂಬೂಲವು ಕೆಲಸ ಮಾಡುತ್ತದೆ.
ತಂಬಾಕು ಸೇರಿದರೆ ಮಾತ್ರ ಇದು ವಿಷವಾಗುವುದು; ಕ್ಯಾನ್ಸರ್ ಕಾರಕವಾಗುವುದು. ಆದರೆ ವೀಳ್ಯದೆಲೆಯ ಉಷ್ಣ, ತೀಕ್ಷ್ಣ ಗುಣಗಳ ಕಾರಣದಿಂದ ಇದನ್ನು ದುರ್ಬಲರು, ಗರ್ಭಿಣಿಯರು, ಕೃಶದೇಹಿಗಳು, ಬೇರೆ ಬೇರೆ ರೀತಿಯ ಗಂಭೀರ ಖಾಯಿಲೆಗಳಿಂದ ಬಳಲುತ್ತಿರುವವರು ಸೇವಿಸುವ ಮೊದಲು ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಒಳ್ಳೆಯದು.
ಇದರ ಸೇವನೆ ಅತಿಯಾದರೆ ತಲೆಸುತ್ತು ಬರುವುದು, ವಾಂತಿ ಬಂದತೆನಿಸುವುದು ಮುಂತಾದ ತೊಂದರೆಗಳು ಉಂಟಾಗಬಹುದು. ಆದರೆ ವೀಳ್ಯದೆಲೆಯಲ್ಲಿ ವಿಟಮಿನ್ ಸಿ ನಮಗೆ ಉತ್ತಮ ಪ್ರಮಾಣದಲ್ಲಿ ದೊರೆಯುತ್ತದೆ. ಬೀಟಾ ಕೆರೋಟಿನ್ (ಇದೇ ಮುಂದೆ ವಿಟಮಿನ್ ಎ ಆಗುವುದು) ಕೂಡ ಸಾಕಷ್ಟು ಪ್ರಮಾಣದಲ್ಲಿ ಇದರಲ್ಲಿ ಇದೆ. ಥಿಯಾಮಿನ್, ರೈಬೊಫ್ಲೆವಿನ್, ನಿಯಾಸಿನ್, ಫೋಲೆಟ್ ನಂತಹ ಬಿ ವಿಟಮಿನ್ ಗಳು ಕೂಡ ಸಿಗುತ್ತವೆ. ಒಂದಿಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಂ, ಮೆಗ್ನೀಶಿಯಂ, ಕಬ್ಬಿಣ, ಫಾಸ್ಪರಸ್, ಜಿಂಕ್, ತಾಮ್ರ, ಸೆಲೇನಿಯಂ ಇದರಲ್ಲಿ ಇವೆ. ಈ ಎಲ್ಲಾ ಕಾರಣದಿಂದ ಇದರ ಸೇವನೆಯಿಂದ ಒಂದಿಷ್ಟು ಮಟ್ಟಿಗೆ ನಮಗೆ ಪೋಷಕಾಂಶಗಳ ಪೂರೈಕೆ ಕೂಡಾ ಆಗುತ್ತದೆ.
ಒಟ್ಟಿನಲ್ಲಿ ತುಂಬಾ ಶುಭಕರವೆಂದು ಗುರುತಿಸಲ್ಪಟ್ಟ ಈ ವೀಳ್ಯದೆಲೆಯು ದೇಹದ ಒಳಗೆ ಕೂಡ ಶುಭವಾದ ಕೆಲಸಗಳನ್ನೇ ಮಾಡುತ್ತದೆ. ಆದರೆ ಇಂತಹ ಅದ್ಭುತ ಗುಣಕಾರೀ, ಕಲ್ಯಾಣಕಾರೀ ವೀಳ್ಯದೆಲೆಯನ್ನು ವಿಷಕಾರೀ, ರೋಗಕಾರಕ ತಂಬಾಕಿನಂತಹ ಅತ್ಯಂತ ಋಣಾತ್ಮಕ ಗುಣವನ್ನು ಹೊಂದಿರುವ ದ್ರವ್ಯದ ಜೊತೆಗೆ ಸೇವಿಸಿ ವೀಳ್ಯದೆಲೆಯ ಉತ್ತಮ ಗುಣಗಳನ್ನು ನಾಶಪಡಿಸಬಾರದು ಎಂಬುದನ್ನು ನೆನಪಿಟ್ಟುಕೊಳ್ಳಬೇಕು.
ಡಾ ವೆಂಕಟ್ರಮಣ ಹೆಗಡೆ
ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ, ಶಿರಸಿ, ಉ.ಕ.
Ph:9448729434, 9731460353
www.vedawellnesscenter.com www.nisargamane.com
email: drvhegde@yahoo.com