Vydyaloka

ತುಪ್ಪ ಬೇಕು ತುಪ್ಪ

ತುಪ್ಪ ಬೇಕು ತುಪ್ಪ. ಆಯುರ್ವೇದವು ಅದಕ್ಕೆ ’ನಿತ್ಯ ರಸಾಯನ’ ಎಂದು ಕರೆದು, ಆರೋಗ್ಯವಂತ ಮನುಷ್ಯ ಮತ್ತು ಹಲವು ರೋಗಗಳಿಂದ ಬಳಲುತ್ತಿರುವವರು ನಿತ್ಯವೂ ತುಪ್ಪ ಸೇವಿಸಬೇಕು ಎಂದಿದೆ. ಕೇವಲ ತಿನ್ನುವ ಮೂಲಕವಷ್ಟೇ ಅಲ್ಲ ತುಪ್ಪದ ಬಾಹ್ಯ ಬಳಕೆಯೂ ಪ್ರಯೋಜನಕಾರಿ.

ಅದೆಷ್ಟೇ ದೊಡ್ಡ ಸುಳ್ಳಾದರೂ ಪದೇ ಪದೇ ಹೇಳಿದರೆ ಅದೇ ಸತ್ಯ ಎನ್ನಿಸಲು ಪ್ರಾರಂಭವಾಗುತ್ತದೆ. ಆಗ ಸತ್ಯ ಹೇಳಿದರೂ ಸುಳ್ಳು ಎನ್ನಿಸುತ್ತದೆ. ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ತುಪ್ಪ. ಎಷ್ಟೋ ಜನ ನಾನು ತುಪ್ಪವನ್ನು ಮುಟ್ಟುವುದೂ ಇಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ಅವರಿಗೆ ಗೊತ್ತಿಲ್ಲ ತಾವು ಅಮೃತ ಸಮಾನವಾದದ್ದನ್ನು ದೂರವಿಡುತ್ತಿದ್ದೇವೆ ಎಂದು. ಸಾಲ ಮಾಡುವುದು ತಪ್ಪು ಆದರೆ ತುಪ್ಪದ ವಿಷಯದಲ್ಲಿ ಮಾತ್ರ ಸಾಲ ಮಾಡಿಯಾದರೂ ತಿನ್ನಬೇಕು. ಹಾಗೆಂದು ಸರಿಯಾದ ರೀತಿಯಲ್ಲಿ ಬಳಸದೇ ಹೋದರೆ ಅಮೃತವೂ ವಿಷವಾಗುತ್ತದೆ.

ತುಪ್ಪದ ಪ್ರಯೋಜನಗಳು: 

“ಶಸ್ತ ಧೀ ಸ್ಮೃತಿ ಮೇಧಾ ಅಗ್ನಿ ಬಲ ಆಯುಃ ಶುಕ್ರ ಚಕ್ಷುಷಾಮ್| ಬಾಲ ವೃದ್ಧ ಪ್ರಜಾ ಕಾಂತಿ ಸೌಕುಮಾರ್ಯ ಸ್ವರಾರ್ಥಿನಾಮ್||” ಎನ್ನುತ್ತದೆ ಆಯುರ್ವೇದ. ಅಂದರೆ, ಮನೋಸ್ಥೈರ್ಯ, ನೆನಪಿನ ಶಕ್ತಿ, ಬುದ್ಧಿ ಶಕ್ತಿ, ಜೀರ್ಣಶಕ್ತಿ, ದೈಹಿಕ ಶಕ್ತಿ, ಲೈಂಗಿಕ ಶಕ್ತಿ, ಉತ್ತಮ ದೃಷ್ಟಿ, ಸಂತಾನ, ಸೌಂದರ್ಯ, ಒಳ್ಳೆಯ ಸ್ವರ ಇಂಥವುಗಳನ್ನು ಇಚ್ಛಿಸುವವರಿಗೆ ತುಪ್ಪ ಪ್ರಶಸ್ತವಾದದ್ದು ಎಂದರ್ಥ.

1. ನಮ್ಮ ಮೆದುಳು ಸುಮಾರು ಮುಕ್ಕಾಲು ಭಾಗ ಕೊಬ್ಬಿನಿಂದಲೇ ಆಗಿದೆ. ಹಾಗಾಗಿ ಅದರ ಪೋಷಣೆ ತುಪ್ಪದಿಂದ ಆಗುತ್ತದೆ. ತುಪ್ಪದ ವಿಶಿಷ್ಟ ಗುಣವೆಂದರೆ ಅದು ಪಿತ್ತವನ್ನು ಕಡಿಮೆ ಮಾಡುತ್ತದೆ ಆದರೆ ಅಗ್ನಿ ಬಲವನ್ನು ಹೆಚ್ಚಿಸುತ್ತದೆ. ಹಾಗಾಗಿ ಆಸಿಡಿಟಿ ಸಮಸ್ಯೆ ಇರುವವರಿಗೆ ತುಪ್ಪದ ಬಳಕೆ ತುಂಬಾ ಸಹಕಾರಿ.

2. ಮಲೆನಾಡಿನ ಹಳ್ಳಿಗಳಲ್ಲಿ ಇಂದಿಗೂ ಊಟದ ಮೊದಲ ತುತ್ತಿಗೆ ತುಸು ತುಪ್ಪವನ್ನು ಹಾಕುವ ಪದ್ಧತಿಯಿದೆ. ಇದರಿಂದಾಗಿ ಜಠರದ ಲೋಳೆ ಪದರಕ್ಕೆ ಪೋಷಣೆ ಸಿಕ್ಕಿ ಆಸಿಡಿಟಿ, ಹೊಟ್ಟೆಯ ಹುಣ್ಣುಗಳು ಆಗುವ ಸಂಭವನೀಯತೆ ಕಡಿಮೆಯಾಗುತ್ತದೆ.

3. ನಮ್ಮ ಮೆದುಳು, ರಕ್ತ, ಮಾಂಸಖಂಡಗಳು, ಮೂಳೆ, ಚರ್ಮ, ಸಂಧಿಗಳ ಪೋಷಣೆಯನ್ನು ತುಪ್ಪ ಮಾಡುತ್ತದೆ.

4. ಮುಖಕ್ಕೆ ಆದ ಕಪ್ಪು ಕಲೆಗಳನ್ನು ತೆಗೆಯಲು, ಮುಖದ ಕಾಂತಿ ಹೆಚ್ಚಿಸಲು ಯಾವುದೋ ಕ್ರೀಮ್ ಗಳ ಬಳಕೆಯ ಬದಲು ನಿತ್ಯವೂ ತುಪ್ಪವನ್ನು ಹಚ್ಚಿ ಮಸ್ಸಾಜ್ ಮಾಡಿಕೊಳ್ಳುವುದು ಅತ್ಯಂತ ಪ್ರಯೋಜನಕಾರಿ.

5. ನಮ್ಮ ಮುಪ್ಪು ದೂರಾಗುವಂತೆ ಮಾಡುವ ಗುಣ ತುಪ್ಪಕ್ಕಿದೆ. ಹಾಗಾಗಿಯೇ ಆಯುರ್ವೇದವು ಅದಕ್ಕೆ ’ನಿತ್ಯ ರಸಾಯನ’ ಎಂದು ಕರೆದು, ಆರೋಗ್ಯವಂತ ಮನುಷ್ಯ ಮತ್ತು ಹಲವು ರೋಗಗಳಿಂದ ಬಳಲುತ್ತಿರುವವರು ನಿತ್ಯವೂ ತುಪ್ಪ ಸೇವಿಸಬೇಕು ಎಂದಿದೆ.

 ಬಳಕೆಯ ವಿಧಿ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ:

ತುಪ್ಪ ಒಳ್ಳೆಯದೆಂದು ಕೂಡಲೇ ಅತಿಯಾಗಿ ಸೇವಿಸುವುದಲ್ಲ. ಹೋಮದ ಬೆಂಕಿಗೆ ಚಮಚದಷ್ಟು ತುಪ್ಪ ಸುರಿದಾಗ ಅದು ಚೆನ್ನಾಗಿ ಉರಿಯುತ್ತದೆ. ಆದರೆ ಒಂದು ಬಕೆಟ್ ತುಪ್ಪ ಸುರಿದರೆ ಇರುವ ಬೆಂಕಿಯೂ ಆರಿಹೋಗುವಂತೆ ನಾವು ತುಪ್ಪ ಸೇವಿಸುವಾಗ ನಮ್ಮ ಜೀರ್ಣಶಕ್ತಿಯ ಕಲ್ಪನೆಯಿರಬೇಕು.

1. ನಿತ್ಯವೂ ಸ್ವಲ್ಪ ಸ್ವಲ್ಪವಾಗಿ ತುಪ್ಪ ಸೇವನೆಯ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಗಿ ದಿನಕ್ಕೆ 5೦ ರಿಂದ ನೂರು ಮಿಲಿವರೆಗೂ ತುಪ್ಪ ಸೇವನೆಯನ್ನು ಮಾಡಬಹುದು.

2. ಆದರೆ ತುಪ್ಪದಲ್ಲಿ ಪದೇ ಪದೇ ಕರಿದು ತಿನ್ನುವುದು ಸರಿಯಲ್ಲ. ಅನ್ನ, ರೊಟ್ಟಿ, ಪಲ್ಯ, ಉಂಡೆ, ಪಾಯಸ, ಹಾಲಿನ ಜೊತೆ ನೇರವಾಗಿ ಸೇವಿಸುವುದು ಒಳ್ಳೆಯದು.

3. ಊಟದ ಪ್ರಾರಂಭದಲ್ಲೇ ತುಪ್ಪ ಸೇವಿಸಬೇಕೆ ಹೊರತು ಹೊಟ್ಟೆ ತುಂಬಿರುವಾಗ ಒಳ್ಳೆಯದೆಂದು ತುಪ್ಪ ತಿನ್ನುವುದಲ್ಲ.

4. ಅಜೀರ್ಣ, ವಾಂತಿ, ಭೇದಿ, ಜ್ವರ, ಪಿತ್ತಜನಕಾಂಗ ಅಥವಾ ಮೇದೋಜೀರಕ ಗ್ರಂಥಿಯ ಸಮಸ್ಯೆಗಳಿದ್ದಾಗ ತುಪ್ಪ ಸೇವಿಸುವ ಮೊದಲು ವೈದ್ಯರ ಸಲಹೆ ಅಗತ್ಯ.

ಎಲ್ಲಕ್ಕಿಂತ ಮೊದಲು ನೆನಪಿಟ್ಟುಕೊಳ್ಳಬೇಕಾದ ವಿಷಯವೆಂದರೆ ಇಲ್ಲಿ ಹೇಳಿದ್ದು ಮನೆಯಲ್ಲಿ ತಯಾರಿಸಿದ ತುಪ್ಪವೇ ಹೊರತು ಅಂಗಡಿಯಿಂದ ತಂದಿದ್ದಲ್ಲ (ಯಾವುದೇ ಕಂಪನಿಯದ್ದಾದರೂ). ದೇಸೀ ತಳಿಯ ಆಕಳ ಹಾಲಿನಿಂದ ತಯಾರಿಸಿದ ತುಪ್ಪ ನಿಜಕ್ಕೂ ಶ್ರೇಷ್ಠವಾದದ್ದು.

 

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.com; nisargamane6@gmail.com
http://nisargamane.com
Share this: