Vydyaloka

ಕೊಬ್ಬರಿ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದು

ತೆಂಗಿನಕಾಯಿ, ಕೊಬ್ಬರಿ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದೋ ಅಲ್ಲವೋ ಎಂಬ ಸಂದೇಹವಿದೆ. ಬಹಳ ಜನ ತೆಂಗಿನಕಾಯಿ, ಕೊಬ್ಬರಿ ಬಳಕೆ, ಕೊಬ್ಬರಿ ಎಣ್ಣೆ ಬಳಕೆ ಮಾಡೋಲ್ಲ.  ಪಾಶ್ಚಾತ್ಯ ವೈದ್ಯ ಪದ್ಧತಿ ಹಾಗೂ ಪ್ರಯೋಗಗಳು, ಪಾಶ್ಚಾತ್ಯ ಎಣ್ಣೆ ತಯಾರಿಕೆ ಹಾಗೂ ತಾಳೆ ಎಣ್ಣೆ ಉತ್ಪಾದಕರ ಕೆಟ್ಟ ಪ್ರಚಾರ ಇದಕ್ಕೆ ಕಾರಣ.

ತೆಂಗಿನಕಾಯಿ ದಕ್ಷಿಣ ಭಾರತದ ಆಹಾರದಲ್ಲಿ ನಿತ್ಯ ಬಳಕೆಯಾಗುತ್ತದೆ. ತೆಂಗು – ಇಂಗು ಇದ್ದರೆ ಮಂಗ ಸಹ ಚೆನ್ನಾಗಿ ಅಡುಗೆ ಮಾಡಬಲ್ಲದು ಎಂಬ ಗಾದೆ ಕೇಳಿದ್ದೀರಾ? ಬಹಳ ಜನ ತೆಂಗಿನಕಾಯಿ, ಕೊಬ್ಬರಿ ಬಳಕೆ, ಕೊಬ್ಬರಿ ಎಣ್ಣೆ ಬಳಕೆ ಮಾಡೋಲ್ಲ. ಅವರಿಗೆ ಪಾಶ್ಚಾತ್ಯ ವೈದ್ಯ ಪದ್ಧತಿ ಹಾಗೂ ಪ್ರಯೋಗಗಳು, ಪಾಶ್ಚಾತ್ಯ ಎಣ್ಣೆ ತಯಾರಿಕೆ ಹಾಗೂ ತಾಳೆ ಎಣ್ಣೆ ಉತ್ಪಾದಕರ ಕೆಟ್ಟ ಪ್ರಚಾರದಿಂದ ಹಾಗೂ ತಮಗೇ ತಿಳಿಯದ ರುಚಿ ಹಾಗೂ ಪದಾರ್ಥದ ಬಗ್ಗೆ ಪಾಶ್ಚಾತ್ಯರು ನೀಡಿರುವ ವಿವರಗಳು, ಗಾಬರಿ ತಂದಿವೆ. ಸ್ವಾಭಾವಿಕ ಗುಣ ಮಾಡುವ ಅದ್ಭುತ ಗುಣಗಳಿದ್ದರೂ, ಜನರಿಗೆ ಕೊಬ್ಬರಿಎಣ್ಣೆ ಆರೋಗ್ಯಕ್ಕೆ ಒಳ್ಳೆಯದೋ ಅಲ್ಲವೋ ಎಂಬ ಸಂದೇಹವಿದೆ.

ಕೇರಳದ ಜನರ ಸೌಂದರ್ಯ ರಕ್ಷಣೆಯ ಮುಖ್ಯ ವಿಧಾನ ಆರ್ಯುವೇದ. ಇಲ್ಲಿಯ ಜನ ದಿನ ನಿತ್ಯದ ಸೌಂದರ್ಯ ಕಾಳಜಿಗೆ ಮನೆಯಲ್ಲಿ ಮಾಡಿದ ಹಾಗೂ ಸ್ವಾಭಾವಿಕ ಚಿಕಿತ್ಸೆಗಳತ್ತಲೇ ನಂಬಿಕೆಯಿಟ್ಟು ಅಳವಡಿಸಿಕೊಂಡಿದ್ದಾರೆ. ಕೇರಳದ ಮಹಿಳೆಯರು ತಮ್ಮ ತಲೆಕೂದಲಿಗೆ ಹೇರಳವಾಗಿ ಕೊಬ್ಬರಿ ಎಣ್ಣೆ ಹಚ್ಚುವುದರಿಂದ, ಅವರ ತಲೆಕೂದಲು ಕಪ್ಪಗೆ, ದಟ್ಟವಾಗಿ ಮಿಂಚುತ್ತದೆ. ಅವರ ಆಹಾರದಲ್ಲಿ ಮುಖ್ಯವಾಗಿ ತೆಂಗು ಹಾಗೂ ಕೊಬ್ಬರಿ ಎಣ್ಣೆ ಇರುತ್ತದೆ.

ತೆಂಗಿನ ಮಹತ್ವ ಹಾಗೂ ಆರೋಗ್ಯಕ್ಕೆ ಇದರ ಕೊಡುಗೆ

ತೆಂಗಿನ ತಿರುಳಲ್ಲಿ ಗರಿಷ್ಠ ಪೌಷ್ಠಿಕತೆ, ನಾರಿನಲ್ಲಿ ಶ್ರೀಮಂತಿಕೆ ಇವೆ. ಜೀವಸತ್ವಗಳಾದ ಸಿ, ಇ, ಬಿ, ಬಿ3, ಬಿ5, ಹಾಗೂ ಬಿ6, ಖನಿಜಗಳಾದ ಕಬ್ಬಿಣ, ಸೆಲೇನಿಯಂ, ಸೋಡಿಯಂ, ಕ್ಯಾಲ್ಸಿಯಂ, ಮ್ಯಾಗ್ನೇಶಿಯಂ ಹಾಗೂ ರಂಜಕಗಳು ತೆಂಗಿನಲ್ಲಿ ತುಂಬಿವೆ. ದೇಹದಲ್ಲಿಯ ಸ್ನಾಯುಗಳು ಹಾಗೂ ನರಗಳು ಚೆನ್ನಾಗಿ ಕೆಲಸ ಮಾಡುವಂತಾಗಲು, ಶರೀರದಲ್ಲಿ ಸಾಕಷ್ಟು ಜಲವಿರಬೇಕು. ಇದಕ್ಕೆ ಎಳನೀರು ನೆರವು ನೀಡುತ್ತದೆ. ಎಳನೀರಿನಲ್ಲಿ ಕ್ಯಾಲರಿಗಳು, ಪಿಷ್ಟ, ಸಕ್ಕರೆ ಕಡಿಮೆ ಇದ್ದು, ಅದು ಸಂಪೂರ್ಣ ಕೊಬ್ಬು ಮುಕ್ತವಾಗಿದೆ.ತೆಂಗಿನ ಒಳಗಿನ ಮೃದು ಅಂಶ, ಉತ್ಕರ್ಷಣದಿಂದಾದ ಜೀವಕೋಶ ನಾಶ ತಡೆದು, ಮೂಲಸ್ಥಿತಿಗೆ ಒಯ್ಯಲು ನೆರವು ನೀಡುತ್ತದೆ.

ಸಂಸ್ಕರಿಸದ, ಪರಿಶುದ್ಧಗೊಳಿಸದ, ಕಚ್ಛಾ ಕೊಬ್ಬರಿ ಎಣ್ಣೆ, ಜಲಜನಕೀಕರಣಕ್ಕೊಳಗಾಗದೇ, ಬಳಕೆಗೆ ಉತ್ತಮ ಆಯ್ಕೆಯಾಗಿದೆ. ಇದು ಅಧಿಕ ಕ್ಯಾಲರಿ ಇರುವ, ಕೊಲೆಸ್ಟರಾಲ್‍ನಿಂದ ತುಂಬಿರುವ, ಸಂತೃಪ್ತ ಕೊಬ್ಬುಗಳ ಉದ್ದ ಕೊಂಡಿಯಿಂದ ಭಿನ್ನವಾಗಿದೆ. ಇದು ಮಧ್ಯಮ ಕೊಂಡಿಯ ಕೊಬ್ಬಿನ ಆಮ್ಲದಲ್ಲಿ ಶ್ರೀಮಂತವಾಗಿದ್ದು, ದೇಹದ ಚಯಾಪಚಯ(ಮೆಟಾಬಾಲಿಸಂ) ಹೆಚ್ಚಿಸಲು ಸಹಾಯ ಮಾಡುತ್ತದಲ್ಲದೇ, ಕೊಬ್ಬು ನಾಶದಲ್ಲಿ ನೆರವು ನೀಡುತ್ತದೆ. ಇದು ವೇಗದ ಚಯಾಪಚಯ ಕ್ರಿಯೆಯಿಂದ, ನಿಮ್ಮ ಹೊಟ್ಟೆಗೆ ಅಂಟಿಕಕೊಳ್ಳುವ ಕೊಬ್ಬಾಗದೇ, ಶಕ್ತಿಯಾಗಿ ಸುಟ್ಟು ಹೋಗುತ್ತದೆ.

ನಿಮ್ಮ ದೇಹವನ್ನು ನಿರ್ವಿಷೀಕರಿಸಿ, ನಿಮ್ಮ ಜೀರ್ಣಾಂಗ ವ್ಯವಸ್ಥೆ ಸಮತೋಲ ಮಾಡುತ್ತದೆ. ಆಹಾರ ತಯಾರಿಸಲು ಅಡುಗೆ ಮಾಡುವಾಗ ಕೊಬ್ಬರಿಎಣ್ಣೆ ಬಳಸಿದರೆ, ಅದು ಹೆಚ್ಚಿನ ಶಾಖದ ಅಡುಗೆಯಲ್ಲೂ, ತಾಪಮಾನದಲ್ಲಿ ಸುರಕ್ಷಿತವಾಗಿ ಉಳಿಯುತ್ತದೆ. ಸಾಮಾನ್ಯ ಅಡುಗೆಯಲ್ಲಿ ಇತರ ತರಕಾರಿ ಜನ್ಯ ಎಣ್ಣೆಗಳಂತೆ, ಕೊಬ್ಬರಿ ಎಣ್ಣೆ ಹಾನಿಕಾರಕ ಉಪ ಉತ್ಪನ್ನಗಳನ್ನು ರೂಪಿಸುವುದಿಲ್ಲ. ಕಚ್ಛಾ, ರುಚಿಕರ, ವೇಗನ್ ಭೋಜನಾ ನಂತರದ ಸಿಹಿ ಭಕ್ಷಗಳಿಗೂ ಕೊಬ್ಬರಿಎಣ್ಣೆ ಬಳಸಬಹುದು.

ಅಡಿಗೆ ಮನೆಯಲ್ಲಿ ತೆಂಗಿನ ಬಳಕೆ:

ತೆಂಗಿನತುರಿ ಒಣಗಿಸಿ ಪುಡಿ ಮಾಡಿದರೆ ಇದರಲ್ಲಿ ಪಿಷ್ಠ ಕಡಿಮೆ-ನಾರು ಹೆಚ್ಚು. ಅಂಟು ಕಡಿಮೆ. ನೇರವಾಗಿ, ಬೆಂಕಿಗೆ ತಗುಲಿಸದೇ ಬೇಯಿಸಲು, ಇದು ಅನುಕೂಲಕಾರಿ. ಚೂರು ಮಾಡಿದ ತೆಂಗಿನಕಾಯಿಯನ್ನು ನೀರಿನೊಂದಿಗೆ ಬೆರೆಸಿ ಹಿಂಡಿದಾಗ, ಬರುವ ತೆಂಗಿನ ಹಾಲನ್ನು ಅಡಿಗೆಯಲ್ಲಿ ಬಳಸುತ್ತಾರೆ. ತೆಂಗಿನ ಜೀವರಸದಿಂದ ಮಾಡಿದ ಸಕ್ಕರೆ ಉತ್ತಮ.

ಕೊಬ್ಬರಿ ಎಣ್ಣೆ ಬಳಸಿ ಮಾಡುವ ಆಹಾರ ಪದಾರ್ಥಗಳು:

1. ಆವಿಯಲ್ ಮಾಡುವ ವಿಧಾನ:
ಬೇಕಾಗುವ ಪದಾರ್ಥಗಳು: ಬಾಳೇಕಾಯಿ, ಹುರುಳಿಕಾಯಿ, ಮಧ್ಯಮಗಾತ್ರದ ಬದನೆಕಾಯಿ, ಸೌತೇಕಾಯಿ, ನುಗ್ಗೆಕಾಯಿ, ಪಡುವಲಕಾಯಿ, ಸುವರ್ಣಗೆಡ್ಡೆ ಬೇಕೇ ಬೇಕು. ಬೇಕಾದರೆ ಇದಕ್ಕೆ ನವಿಲುಕೋಸು, ಸೀಮೆಬದನೆಕಾಯಿ, ಗಜ್ಜರಿ ಸೇರಿಸಬಹುದು.

ಮಾಡುವ ವಿಧಾನ: ಈ ತರಕಾರಿಗಳನ್ನು ಅರಿಶಿನ ಪುಡಿ ಹಾಕಿದ ಕಡಿಮೆ ನೀರಿನಲ್ಲಿ ಹಾಕಿ, ಕುದಿಸಿ. 6 ಹಸಿಮೆಣಸಿನಕಾಯಿ, 2 ಕಪ್ ತುರಿದ ತೆಂಗಿನಕಾಯಿ, 1 ಚಮಚ ಜೀರಿಗೆ ಇವುಗಳನ್ನು ಚೆನ್ನಾಗಿ ಅರೆದುಕೊಳ್ಳಿ. ತರಕಾರಿಗೆ ಇದೀಗ ಅರೆದ ಮಸಾಲೆ ಸೇರಿಸಿ, 5 ನಿಮಿಷ ಒಲೆಯ ಮೇಲಿಡಿ. ನಿಮ್ಮ ರುಚಿಗೆ ಬೇಕಾದಷ್ಟು ಉಪ್ಪು ಹಾಕಿ. ಒಲೆಯ ಮೇಲಿಂದ ಕೆಳಗಿಳಿಸಿ. ಸಾಕಷ್ಟು ಗಟ್ಟಿ ಮೊಸರು ಹಾಕಿ ಕಲಕಿ. ಕೊಬ್ಬರಿ ಎಣ್ಣೆ ಒಗ್ಗರಣೆ ಮಾಡಿ, ಸಾಸಿವೆ -ಇಂಗು ಹಾಕಿ ಅವಿಯಲ್ ಮೇಲೆ ಹಾಕಿ. ಬೇಕೆನಿಸಿದರೆ ಇನ್ನಷ್ಟು ಹಸಿ ಕೊಬ್ಬರಿ ಎಣ್ಣೆ ಹಾಕಿ ಚೆನ್ನಾಗಿ ಬೆರೆಸಿ ಬಡಿಸಿ, ಬಿಸಿಯಾಗಿದ್ದಾಗ ಅನ್ನದ ಜೊತೆ ಕೊಬ್ಬರಿ ಎಣ್ಣೆ ಸುವಾಸನೆಯ ಅವಿಯಲ್ ಬಲು ರುಚಿ.

2. ಚಿಪ್ಸ್:
ಬಾಣಲೆಯಲ್ಲಿ ಕೊಬ್ಬರಿ ಎಣ್ಣೆಯಲ್ಲಿ ಕೇರಳದ ಉದ್ದ ನೇಂದ್ರ ಬಾಳೆಕಾಯಿಯ ಹೆರೆದ ಚೂರುಗಳನ್ನು ಹಾಕಿ ಉತ್ತಮ ಚಿಪ್ಸ್ ಸಿಗುತ್ತದೆ.

3. ಬಾಡಿಸಿದ ಹಾಗಲಕಾಯಿ:

ಬೇಕಾಗುವ ಪದಾರ್ಥಗಳು: ಸಣ್ಣ ಸಣ್ಣ ಚೂರಾಗಿಸಿದ 2 ಕಪ್ ಹಾಗಲಕಾಯಿ, ಚಿಕ್ಕದಾಗಿ ಕತ್ತರಿಸಿದ ತೆಂಗಿನಕಾಯಿ ಚೂರುಗಳು, ಉದ್ದವಾಗಿ ಸೀಳಿರುವ ಹಸಿಮೆಣಸಿನಕಾಯಿ, 1 ಚಮಚ ಅಚ್ಚ ಮೆಣಸಿನ ಕಾಯಿ ಪುಡಿ, ಅರ್ಧ ಚಮಚ ಅರಿಶಿನ ಪುಡಿ, ಉಪ್ಪು ಹಾಗೂ ಕೊಬ್ಬರಿಎಣ್ಣೆ.

ಮಾಡುವ ವಿಧಾನ: ಹಾಗಲಕಾಯಿ ಚೂರುಗಳನ್ನು ಚೆನ್ನಾಗಿ ತೊಳೆದು, ನೀರು ಹೋಗುವಂತೆ ಚೆನ್ನಾಗಿ ಒರೆಸಿ. ಅಚ್ಚ ಮೆಣಸಿನಕಾಯಿಪುಡಿ, ಹಸಿರು ಮೆಣಸಿನಕಾಯಿ, ತೆಂಗಿನ ಚೂರುಗಳು, ಅರಿಶಿನ ಪುಡಿ ಹಾಗೂ ಉಪ್ಪು ಹಾಕಿ, ಎಲ್ಲ ಚೆನ್ನಾಗಿ ಬೆರೆಯುವಂತೆ ಕೈಯಲ್ಲೇ ಬೆರೆಸಿ, ಒಂದೆಡೆ ಇಡಿ. ಸಣ್ಣ ಉರಿಯಲ್ಲಿ ಬಾಣಲೆಯಲ್ಲಿ ಕೊಬ್ಬರಿಎಣ್ಣೆ ಹಾಕಿ, ಬಿಸಿ ಎಣ್ಣೆಯಲ್ಲಿ, ಮಿಶ್ರಣದಲ್ಲಿ ಒಂದಾಗಿರುವ ಹಾಗಲಕಾಯಿ ಚೂರುಗಳನ್ನು ಹುರಿಯಿರಿ. ಅವು ಕಂದು ಬಣ್ಣಕ್ಕೆ ತಿರುಗುವವರೆಗೆ ಗಮನಿಸಿ. ಅನ್ನದ ಜೊತೆಗೆ ಕಲಸಿಕೊಳ್ಳಲು ಇದು ಉತ್ತಮ ಜೋಡಿ.

4. ನೆಲ್ಲಿಕಾಯಿ ಉಪ್ಪಿನಕಾಯಿ:
ಭಾರತೀಯ ನೆಲ್ಲಿಕಾಯಿಗಳ ಪರಿಣಾಮ ಎಲ್ಲರಿಗೂ ಗೊತ್ತಿದೆ. ಮಸಾಲೆ, ಉಪ್ಪು ಹಾಗೂ ಹುಳಿ ಮಿಶ್ರಿತ ಉಪ್ಪಿನಕಾಯಿ, ನಿಮ್ಮ ಬಾಯಲ್ಲಿ ನೀರು ತರಿಸಲಿದೆ.

ಬೇಕಾದ ಪದಾರ್ಥಗಳು: 2 ಕಪ್ ನೆಲ್ಲಿಕಾಯಿ, 3 ಚಮಚ ಕೊಬ್ಬರಿಎಣ್ಣೆ, 3 ಚಮಚ ಅಚ್ಚ ಮೆಣಸಿನಕಾಯಿಪುಡಿ, 3 ಚಮಚ ಕೊತ್ತಂಬರಿ ಬೀಜದ ಪುಡಿ, 1 ಚಮಚ ಇಂಗು, 1 ಚಮಚ ವಿನಿಗರ್, ರುಚಿಗೆ ಬೇಕಾದಷ್ಟು ಉಪ್ಪು.

ಮಾಡುವ ವಿಧಾನ: ಒಂದು ಅಗಲ ಬಾಣಲೆಯಲ್ಲಿ ನೀರು ಹಾಕಿ ನೆಲ್ಲಿಕಾಯಿಗಳನ್ನು ಚೆನ್ನಾಗಿ ಕುದಿಸಿ. ಬೆಂದ ನಂತರ ಅವುಗಳಲ್ಲಿಯ ಬೀಜ ತೆಗೆದು, ಒಂದೆಡೆ ನೆಲ್ಲಿ ಕಾಯಿಗಳನ್ನಿಡಿ. ಪ್ಯಾನ್‍ನಲ್ಲಿ ಕೊಬ್ಬರಿಎಣ್ಣೆ ಹಾಗೂ ಇದೀಗ ಹೇಳಿದ ಎಲ್ಲ ಪದಾರ್ಥಗಳನ್ನು ಹಾಕಿರಿ. ಉಪ್ಪು ಹಾಕಿ, 3 ನಿಮಿಷ ಕಲಕುತ್ತಾ ಇರಿ. ಬೇಕಾದರೆ ವಿನಿಗರ್ ಹಾಕಿ ಕೆಳಗಿಳಿಸಿ.

ಎನ್.ವ್ಹಿ ರಮೇಶ್
ಮೊ:98455-65238

Share this: