Vydyaloka

ತಾಯಿ ಹಾಲು ಸಂಜೀವಿನಿ

ತಾಯಿ ಹಾಲು ಸಂಜೀವಿನಿ, ಅಮೃತ ಸಮಾನ. ಇದು ಬಾಹ್ಯ ಸೋಂಕುಗಳಿಂದ ಮುಕ್ತವಾಗಿರುತ್ತದೆ. ತಾಯಂದಿರು ಮಗುವಿಗೆ 6 ತಿಂಗಳ ಕಾಲ ಚೆನ್ನಾಗಿ ಹಾಲು ಕುಡಿಸಿದರೆ, ಶಿಶುಗಳು ಆರೋಗ್ಯವಾಗಿ, ಬುದ್ಧಿಶಾಲಿಯಾಗಿ ಮತ್ತು ಸೋಂಕಿನಿಂದ ಮುಕ್ತವಾಗುತ್ತವೆ. 

ಪ್ರಕೃತಿ ನಿಜಕ್ಕೂ ಅದ್ಭುತವಾದುದು. ಈ ಭೂಮಿ ಮೇಲೆ ಯಾವುದೇ ಹೊಸ ಜೀವ ಸೃಷ್ಟಿಯಾದರೂ ಅದಕ್ಕೆ ತನ್ನ ತಾಯಿಯಿಂದ ಆಹಾರ ಸಿದ್ಧವಾಗಿರುತ್ತದೆ. ಉದಾಹರಣೆಗೆ ಹುಟ್ಟಿದ ತಕ್ಷಣ ಕರುವಿಗೆ ತಾಯಿಯಾದ ಹಸುವಿನಿಂದ ಹಾಲು ಕುಡಿಯಬೇಕೆಂದು ಸಹಜವಾಗಿ ತಿಳಿದಿರುತ್ತದೆ. ಹಾಗೆಯೇ ನವಜಾತ ಹಸುಳೆ ತನ್ನ ತಾಯಿಯ ಮೊಲೆಯಿಂದ ಹಾಲು ಕುಡಿಯುವುದನ್ನು ಹುಟ್ಟಿದಾಗಿನಿಂದಲೇ ಅರಿತಿರುತ್ತದೆ. ಎದೆ ಹಾಲು ಕುಡಿಸುವುದು ಪ್ರಕೃತಿದತ್ತ ಮತ್ತು ಸ್ವಾಭಾವಿಕ ಪ್ರವೃತ್ತಿಯಿಂದ ಉದ್ಭವಿಸುವ ಕ್ರಿಯೆಯಾಗಿರುತ್ತದೆ.

ವಿಶ್ವಕವಿ ರವೀಂದ್ರನಾಥ್ ಠಾಗೋರ್ ಒಂದು ಕಡೆ ಹೇಳುತ್ತಾರೆ; ಭ್ರೂಣದಿಂದಲೇ ಮಾತೆ ಮತ್ತು ಜನಿಸಲಿರುವ ಹಸುಗೂಸಿನ ಮಧ್ಯೆ ಅವಿನಾಭಾವ ಬಾಂಧವ್ಯವಿರುತ್ತದೆ. ನವಜಾತ ಶಿಶುಗಳು ಕೆಲ ತಿಂಗಳ ಕಾಲ ತಾಯಿಯ ಹಾಲನ್ನು ಸೇವಿಸುವಂತೆ ಪ್ರಕೃತಿ ನೈಸರ್ಗಿಕವಾಗಿ ವಿನ್ಯಾಸಗೊಂಡಿದೆ. ಮಗು ತಾಯಿಯ ಎದೆಹಾಲನ್ನು ಸೇವಿಸಿ ತೃಪ್ತಿಗೊಂಡರೆ, ಶಿಶುವಿಗೆ ಎದೆಹಾಲು ಉಣಿಸಿದ ಸಾರ್ಥಕತೆ ಮಾತೆಯದು. ಮಗು ಜನಿಸಿದ ನಂತರ ಎದೆ ಹಾಲು ಕುಡಿಸಲು ತಾಯಿ ಹಾತೊರೆಯುತ್ತಾಳೆ ಮತ್ತು ಆನಂದ ಪಡುತ್ತಾಳೆ.

ಜನಿಸಿದ ಮಗುವಿಗೆ ಆರು ತಿಂಗಳು ಆಗುವ ತನಕ ಸ್ತನಪಾನ ಮಾಡಿಸುತ್ತಲೇ ಇರಬೇಕು. ಆರು ತಿಂಗಳವರೆಗೆ ಮಗುವಿಗೆ ನೀರು ಕೊಡಬಾರದು. ಆರು ತಿಂಗಳ ಬಳಿಕ ಮಗುವಿಗೆ ಹಸುವಿನ ಹಾಲನ್ನು ನೀಡಬಹುದು. ಸೂಕ್ತ ಶಿಕ್ಷಣ ಮತ್ತು ಜಾಗೃತಿಯಿಂದ ಅಪೌಷ್ಠಿಕತೆ ಸೋಂಕು ಕಾರಣಗಳಿಂದ ಲಕ್ಷಾಂತರ ಶಿಶುಗಳನ್ನು ಉಳಿಸಬಹುದು. ಎಲ್ಲ ನವಜಾತ ಹಸುಳೆಗಳಿಗೆ ಎದೆ ಹಾಲು ಕುಡಿಸುವುದರಿಂದ ಈ ಸಮಸ್ಯೆಯನ್ನು ತಪ್ಪಿಸಬಹುದು. ತಾಯಂದಿರು ಮಗುವಿಗೆ 6 ತಿಂಗಳ ಕಾಲ ಚೆನ್ನಾಗಿ ಹಾಲು ಕುಡಿಸಿದರೆ, ಶಿಶುಗಳು ಆರೋಗ್ಯವಾಗಿ, ಬುದ್ಧಿಶಾಲಿಯಾಗಿ ಮತ್ತು ಸೋಂಕಿನಿಂದ ಮುಕ್ತವಾಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಹಾಲಿನ ಪುಡಿಗಾಗಿ ಖರ್ಚು ಮಾಡಬೇಕಾದ ಅಧಿಕ ಹಣವನ್ನು ಉಳಿಸಬಹುದು.

ಸ್ತನಪಾನದ ಪ್ರಯೋಜನಗಳು:

1. ಶಿಶುವಿಗೆ: ಎದೆ ಹಾಲು ಅಮೃತ ಸಮಾನ. ಇದು ಬಾಹ್ಯ ಸೋಂಕುಗಳಿಂದ ಮುಕ್ತವಾಗಿರುತ್ತದೆ. ಹಾಲಿನ ಕಲಬೆರಕೆ ಇರುವುದಿಲ್ಲ. ಇದು ಸಿದ್ಧ ಆಹಾರ, ತಯಾರಿಸುವ ಅಗತ್ಯವೂ ಇರುವುದಿಲ್ಲ. ತಾಯಿಯ ಹಾಲು ಸದಾಕಾಲ ಲಭಿಸುತ್ತದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ. ಅತಿಸಾರ, ಕಿವಿ ಸೋಂಕು, ಉಸಿರಾಟದ ಸೋಂಕಿನಿಂದ ಉಂಟಾಗುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುತ್ತದೆ. ನಂತರದ ಜೀವನದಲ್ಲಿ ಸ್ಥೂಲಕಾಯ, ಅಧಿಕ ರಕ್ತದೊತ್ತಡ, ಡಯಾಬಿಟಿಸ್ ರೋಗಗಳು ತಗುಲುವ ಸಾಧ್ಯತೆಯನ್ನು ಆದಷ್ಟೂ ಕಡಿಮೆ ಮಾಡುತ್ತದೆ. ಬುದ್ಧಿಯನ್ನು ಚುರುಕಾಗಿಸುತ್ತದೆ. ಮಗುವಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದುವಂತೆ ಮಾಡುತ್ತದೆ.

2. ಮಾತೆಗೆ: ಗರ್ಭಧಾರಣೆ ಸಾಧ್ಯತೆಯನ್ನೂ ಕಡಿಮೆ ಮಾಡುತ್ತದೆ. ಸ್ತನ ಮತ್ತು ಅಂಡಾಶಯ ಕ್ಯಾನ್ಸರ್ ವಿರುದ್ಧ ತಾಯಿಗೆ ರಕ್ಷಣೆ ನೀಡುತ್ತದೆ. ಮಗುವಿಗೆ ಜನ್ಮ ನೀಡಿದ ನಂತರ ಆರಂಭದ ಎರಡರಿಂದ ಮೂರು ದಿನಗಳಲ್ಲಿ ಬರುವ ಎದೆ ಹಾಲನ್ನು ಗಿಣ್ಣು ಎಂದು ಕರೆಯುತ್ತಾರೆ. ಇದು ಹಳದಿ ಬಣ್ಣದಲ್ಲಿರುತ್ತದೆ. ಈ ಹಾಲು ಅಲ್ಪಪ್ರಮಾಣದಲ್ಲಿ ಹೊರಬರುತ್ತದೆ. ಈ ಆರಂಭಿಕ ಹಂತದ ಹಾಲು ಅಧಿಕ ಪ್ರೊಟೀನ್ ಮತ್ತು ಸೋಂಕು ಪ್ರತಿರೋಧಕ ಗುಣಗಳನ್ನು ಹೊಂದಿರುತ್ತದೆ. ಇದನ್ನು ನಿರುಪಯುಕ್ತಗೊಳಿಸಬಾರದು.

ಮೂರು ದಿನಗಳ ನಂತರ ಹಾಲಿನ ಬಣ್ಣ ಪರಿವರ್ತನೆಗೊಂಡು 5 ರಿಂದ 6 ದಿನಗಳಲ್ಲಿ ಸಾಮಾನ್ಯ ಬಣ್ಣಕ್ಕೆ ಬರುತ್ತದೆ. ನಂತರ ಪ್ರೌಢಾವಸ್ಥೆಯ ಹಾಲು ಉತ್ಪತ್ತಿಯಾಗಲು ಆರಂಭವಾಗುತ್ತದೆ. ಈ ಪ್ರೌಢಾವಸ್ಥೆ ಹಾಲು ಯಥೇಚ್ಚ ನೀರು, ಪ್ರೊಟೀನ್, ಕಾರ್ಬೋಹೈಡ್ರೇಟ್, ಕೊಬ್ಬು, ಖನಿಜ, ಲವಣ, ವಿಟಮಿನ್‍ಗಳು, ಸೋಂಕು ಪ್ರತಿರೋಧಕಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ಶಿಶುವಿಗೆ ಎದೆಹಾಲನ್ನು ಮಾತ್ರವೇ ಕುಡಿಸಬೇಕು. ಇದರಿಂದ ಮಗುವಿಗೆ ಸೋಂಕು ಅಥವಾ ಅಪೌಷ್ಠಿಕತೆಯ ಸಾಧ್ಯತೆ ಇರುವುದಿಲ್ಲ.

ಯಾವಾಗ ಆರಂಭಿಸಬೇಕು?

ಜನಿಸಿದ ಮಗುವನ್ನು ಸಾಧ್ಯವಾದಷ್ಟು ಬೇಗ ಮಾತೆಯ ಎದೆ ಹಾಲುಣಿಸಲು ಬಿಡಬೇಕು. ಅಂದರೆ 30 ನಿಮಿಷಗಳ ಜನನದ ತರುವಾಯ ಸ್ತನಪಾನ ಆರಂಭಿಸಬೇಕು.

ತಾಯಿಯ ಹಾಲು ಕುಡಿಸುವ ಭಂಗಿ:

ಮಗುವಿಗೆ ಹಾಲುಣಿಸುವಾಗ ಮಾತೆಯು ಸರಿಯಾದ ಭಂಗಿಯಲ್ಲಿ ಕುಳಿತಿರಬೇಕು ಅಥವ ನಿಂತಿರಬೇಕು. ಶಿಶುವಿಗೆ ಸ್ತನಪಾನ ಮಾಡಿಸುವಾಗ ತಾಯಿಯು ಆರಾಮವಾಗಿರುವುದು ಮುಖ್ಯ. ಹಾಲಿನ ಉತ್ಪಾದನೆಯು ತಾಯಿಯ ಭಾನನಾತ್ಮಕ ಸ್ಥಿತಿಗಳಿಗೆ ಸಂಬಂಧಿಸಿರುತ್ತದೆ. ತಾಯಿ ಯಾವಾಗಲೂ ಸಂತೋಷವಾಗಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪತ್ತಿಯಾಗುತ್ತದೆ. ತಾಯಿ ಹತಾಶಳಾಗಿದ್ದರೆ ಹಾಲಿನ ಉತ್ಪಾದನೆ ಕುಂಠಿತಗೊಳ್ಳುತ್ತದೆ. ಹಾಲಿನ ಉತ್ಪಾದನೆ ಮತ್ತು ಸ್ರವಿಸುವಿಕೆ ಒಂದು ರೀತಿಯ ಸ್ವಿಚ್ ಇದ್ದಂತೆ. ಮಗು ಹಾಲನ್ನು ಹೀರಲು ಆರಂಭಿಸುತ್ತಿದ್ದಂತೆ ಸ್ವಿಚ್ ಆನ್ ಆಗುತ್ತದೆ. ಆಗ ಹಾಲಿನ ಉತ್ಪತ್ತಿ ಉತ್ತಮವಾಗಿರುತ್ತದೆ. ಮಗು ಹಾಲನ್ನು ಹೀರದಿದ್ದರೆ ಹಾಲು ಉತ್ಪತ್ತಿಯಾಗುವುದಿಲ್ಲ. ಸ್ತನ ಮತ್ತು ಮನಸ್ಸನ್ನು ನಿಯಂತ್ರಿಸುವ ಮೆದುಳಿಗೂ ಒಂದಕ್ಕೊಂದು ಸಂಬಂಧವಿದೆ. ಆದ್ದರಿಂದ ತಾಯನ್ನು ಸಂತೋಷವಾಗಿ ಮತ್ತು ಪ್ರಫುಲ್ಲವಾಗಿರುವಂತೆ ನೋಡಿಕೊಳ್ಳಬೇಕು. ಆಗ ಉತ್ತಮವಾದ ಪ್ರಮಾಣದಲ್ಲಿ ಹಾಲು ಸ್ರವಿಸುವಂತಾಗುತ್ತದೆ.

ಮಗುವಿನ ಭಂಗಿ:

ಮಗುವಿಗೆ ಹಾಲು ಕುಡಿಸುವಾಗ ಶಿಶುವಿನ ತಲೆಯನ್ನು ಸ್ವಲ್ಪ ಎತ್ತರಿಸಬೇಕು. ಅದರ ಹೆಗಲಿಗೆ ಆಧಾರ ನೀಡಿ ತಲೆ ಮೇಲಕ್ಕೆ ಬರುವಂತೆ ಮಾಡಬೇಕು. ಮಗುವಿನ ಮುಖ ಸ್ತನದತ್ತ ಇರಬೇಕು.

ಸ್ತನಪಾನದ ಅಂತರ:

ಮಗು ಅತ್ತಾಗಲೆಲ್ಲ ಸ್ತನಪಾನ ಮಾಡಿಸಬೇಕು. ಮಗು ಸಾಮಾನ್ಯವಾಗಿ ಪ್ರತಿ 2 ರಿಂದ 21/2 ಗಂಟೆಗೊಮ್ಮೆ ಹಾಲಿಗಾಗಿ ಅಳುತ್ತದೆ.

ಎಷ್ಟು ಸಮಯ ಹಾಲು ಕುಡಿಸಬೇಕು?

ಎಷ್ಟು ಸಮಯ ಮಗುವಿಗೆ ಎದೆ ಹಾಲು ಕುಡಿಸಬೇಕೆಂಬ ಬಗ್ಗೆ ಯಾವುದೇ ಕಾಲ ನಿಗದಿ ಇಲ್ಲ. ಸಾಮಾನ್ಯವಾಗಿ ಶಿಶುಗಳಿಗೆ 5 ರಿಂದ 8 ನಿಮಿಷಗಳಲ್ಲಿ ಹೊಟ್ಟೆ ತುಂಬುತ್ತದೆ. ಆದಾಗ್ಯೂ ಕೆಲವು ಮಕ್ಕಳು ತುಂಬಾ ಕಾಲ ಹಾಲನ್ನು ಹೀರುತ್ತಿರುತ್ತವೆ. ಮಗುವು ಒಂದು ಸ್ತನದ ಹಾಲನ್ನು ಖಾಲಿ ಮಾಡಿದ ನಂತರ ಇನ್ನೊಂದು ಸ್ತನದ ಹಾಲನ್ನು ಹೀರಲು ಅವಕಾಶ ನೀಡಬೇಕು.

ಮಗು ಸಂತೃಪ್ತವಾಗಿದೆ ಎಂದು ತಾಯಿಗೆ ಹೇಗೆ ತಿಳಿಯುತ್ತದೆ?

1. ಹಾಲು ಕುಡಿಯುವುದಕ್ಕೂ ಮುನ್ನ ಸ್ತನಗಳು ಬಿಗಿಯಾಗಿರುತ್ತವೆ. ಆದರೆ, ಸಂಪೂರ್ಣವಾಗಿ ಹಾಲುಣಿಸಿದ ನಂತರ ಸಡಿಲ ಗೊಳ್ಳುತ್ತವೆ.

2. ಮಗು 6 ರಿಂದ 7 ಬಾರಿ ಮೂತ್ರ ವಿಸರ್ಜನೆ ಮಾಡಿದಾಗ

3. ಪ್ರತಿಬಾರಿ ಮಗು ಹಾಲು ಕುಡಿದ ನಂತರ 2 ರಿಂದ 3 ಗಂಟೆಗಳ ಕಾಲ ಚೆನ್ನಾಗಿ ನಿದ್ರಿಸಿದಾಗ

4. ಮಗುವಿನ ತೂಕದಲ್ಲಿ ಏರಿಕೆ ಕಂಡು ಬಂದಾಗ

ಸ್ತನಪಾನದ ಬಳಿಕ ಏನು ಮಾಡಬೇಕು?

ಸ್ತನಪಾನದ ನಂತರ ಮಗುವನ್ನು ಹೆಗಲ ಮೇಲೆ ಬರುವಂತೆ ಇರಿಸಬೇಕು. ಮಗುವಿನ ಬೆನ್ನು ತಟ್ಟಬೇಕು. ಇದರಿಂದ ಹಾಲು ಹೀರುವಾಗ ಮಗು ಸೇವಿಸಿದ ಗಾಳಿಯು ಹೊರಕ್ಕೆ ಬರಲು ಸಹಾಯವಾಗುತ್ತದೆ. ಕೆಲವು ಮಕ್ಕಳಿಗೆ ಇದು 5 ನಿಮಿಷ ಬೇಕಾದರೆ,ಇನ್ನು ಕೆಲವು ಶಿಶುಗಳಿಗೆ 10 ರಿಂದ 15 ನಿಮಿಷ ಬೇಕಾಗಬಹುದು. ಮಗುವಿಗೆ ಇದನ್ನ ಸರಿಯಾಗಿ ಮಾಡಿದಾಗ ಕುಡಿದ ಹಾಲು ಹೊರಬರದಂತೆ ತಡೆಯಲು ನೆರವಾಗುತ್ತದೆ.

ನಮ್ಮ ದೇಶದಲ್ಲಿ ಜನಿದ ಎಲ್ಲ ಶಿಶುಗಳಿಗೂ ಸರಿಯಾಗಿ ಸ್ತನಪಾನ ಮಾಡಿಸಿದರೆ ಭಾರತವು ವರ್ಷಕ್ಕೆ 8500 ಕೋಟಿ ರೂ.ಗಳನ್ನು ಉಳಿಸಬಹುದು. ಸ್ತನಪಾನದ ಮಹತ್ವವನ್ನು ನೀಡಲು ಮತ್ತು ಈ ಗುರಿ ಸಾಧಿಸಲು ಸರ್ಕಾರ ಸ್ತನಪಾನ ಕುರಿತ ಕಾನೂನನ್ನು ಜಾರಿಗೊಳಿಸಿದೆ. ಆರು ತಿಂಗಳವರೆಗೆ ಶಿಶುವಿಗೆ ಕಡ್ಡಾಯವಾಗಿ ತಾಯಿಯ ಎದೆ ಹಾಲು ಕುಡಿಸುವಂತೆ ಪ್ರೋತ್ಸಾಹಿಸುವಲ್ಲಿ ವೈದ್ಯರು, ನರ್ಸ್‍ಗಳು, ಕುಟುಂಬದ ಹಿರಿಯರು, ಮಹತ್ವದ ಪಾತ್ರ ವಹಿಸಿದರೆ ಆರೋಗ್ಯಕರ ಮಗುವು ನಮ್ಮ ರಾಷ್ಟ್ರದ ಜವಾಬ್ದಾರಿಯುತ ಪ್ರಜೆಯಾಗಿ ಹೊರಹೊಮ್ಮುವುದರಲ್ಲಿ ಸಂದೇಹವಿಲ್ಲ.

Also Read: ಮಹಿಳೆಯರಲ್ಲಿ ಕ್ಯಾನ್ಸರ್ – ಆರಂಭಿಕ ಪತ್ತೆಯು ತಡೆಗಟ್ಟುವಿಕೆಗೆ ಸಹಕಾರಿ

ಡಾ. ದಿನಕರ್- ಮಕ್ಕಳ ತಜ್ಞ 

ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್
82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 49069000 Extn: 1147/1366     ಮೊ.: 97422 74849
http://www.vims.ac.in/

Share this: