ಸೇಬು ಹಾಗೂ ಮರಸೇಬು ಆರೋಗ್ಯ ರಕ್ಷಕ ಹಣ್ಣುಗಳು.ಈ ಹಣ್ಣುಗಳು ಜೀರ್ಣಾಂಗವ್ಯೂಹವನ್ನು ಶುದ್ಧಿಗೊಳಿಸುವಲ್ಲಿ ಹಾಗೂ ಕಶ್ಮಲಗಳನ್ನು ಜಠರದಿಂದ ಹೊರಹಾಕುವಲ್ಲಿ ಯಶಸ್ವಿ ಪಾತ್ರ ವಹಿಸುತ್ತವೆ.
- ಈ ಹಣ್ಣುಗಳ ಸೇವನೆ ಅಥವಾ ಹಣ್ಣಿನ ರಸದ ಸೇವನೆಯು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಹಾಗೂ ಚರ್ಮಕ್ಕೆ ಮೃದುತ್ವವನ್ನು ತಂದುಕೊಡುತ್ತವೆ.
- ಬರೀ ದೇಹವನ್ನು ಶುದ್ಧಿಗೊಳಿಸುವುದಲ್ಲದೇ, ರೋಗಕಾರಕ ಜೀವಾಣುಗಳನ್ನು ತಡೆಗಟ್ಟಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಯುತಗೊಳಿಸುತ್ತವೆ.
- ಮರಸೇಬುವಿನಲ್ಲಿ ಆಯೋಡಿನ್ನ ಅಂಶ ಹೆಚ್ಚಾಗಿರುವುದರಿಂದ ಇದು ನಮ್ಮ ಕುತ್ತಿಗೆಯಲ್ಲಿರುವ ಥೈರಾಯಿಡ್ ಗ್ರಂಥಿಯ ಚಟುವಟಿಕೆಯನ್ನು ಚುರುಕುಗೊಳಿಸುತ್ತದೆ.
- ಸೇಬುಹಣ್ಣು ದೇಹದ ಕೊಬ್ಬಿನಂಶವನ್ನು ಕಡಿಮೆಗೊಳಿಸುತ್ತದೆ ಹಾಗೂ ವಾತ ಮತ್ತು ಶ್ವಾಸಕೋಶದ ತೊಂದರೆಗಳಲ್ಲಿ ಉಪಯುಕ್ತ.
ಜೀರ್ಣಕ್ರಿಯೆಯಲ್ಲಿ ಇವುಗಳ ಪಾತ್ರ:
- ಈ ಎರಡೂ ಹಣ್ಣುಗಳಲ್ಲಿ ಪೆಕ್ಟಿನ್ ಎಂಬ ಕಿಣ್ವವಿದೆ. ಇದು ಜೀರ್ಣವಾಗುವ ನಾರು ಪದಾರ್ಥವಾಗಿದ್ದು, ಸಣ್ಣ ಕರುಳಿನ ಚಲನೆಯನ್ನು ಹೆಚ್ಚಿಸುತ್ತದೆ ಹಾಗೂ ಗುದದ್ವಾರದ ಮಾಂಸಖಂಡಗಳನ್ನು ಬಿಗಿಗೊಳಿಸಿ ದೊಡ್ಡ ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯವಾಗಿವೆ.
- ಸೇಬುಹಣ್ಣುಗಳಲ್ಲಿರುವ ಕೆಲವೊಂದು ಕಿಣ್ವಗಳು, ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ, ಜಠರ ಹಾಗೂ ಸಣ್ಣ ಕರುಳಿನಲ್ಲಾಗುವ ಕೆಲವು ದೋಷಗಳನ್ನು ಪರಿಹರಿಸುತ್ತವೆ. ಕೆಲವು ಪ್ರಕ್ರತಿ ಚಿಕಿತ್ಸಕರು, ಈ ಹಣ್ಣುಗಳು ಇರಿಟೇಬಲ್ ಬೊವೆಲ್ ಸಿಂಡ್ರೋಮ್’ನಿಂದ ನರಳುವ ರೋಗಿಗಳಿಗೆ ಈ ಹಣ್ಣುಗಳು ಅತ್ಯಂತ ಉಪಯುಕ್ತ ಎಂದು ನಂಬಿದ್ದಾರೆ.
- ಈ ಹಣ್ಣುಗಳು ಮೂತ್ರದ ಉತ್ಪತ್ತಿಯಲ್ಲಿ ಸಹಾ ಪಾತ್ರ ವಹಿಸುತ್ತವೆ ಹಾಗೂ ದೇಹವನ್ನು ಕಲ್ಮಶಗಳಿಂದ ದೂರಪಡಿಸುವಲ್ಲಿ ಸಹಾಯಕವಾಗಿವೆ.
- ಸೇಬು ಹಾಗೂ ಮರಸೇಬು ಜಠರ ಹಾಗೂ ಸಣ್ಣಕರುಳಿನ ರೋಗಗಳಿಗೆ ಉಪಯುಕ್ತ. ಈ ಹಣ್ಣುಗಳನ್ನು ದಿನದ ಆಹಾರದ ಒಂದು ಆಂಗವಾಗಿ ಸೇರಿಸಿಕೊಳ್ಳಿ. ಇಡೀ ಹಣ್ಣನ್ನೇ ತಿನ್ನಬಹುದು ಅಥವಾ ಜ್ಯೂಸ್ ಮಾಡಿ ಕೂಡ ಕುಡಿಯಬಹುದು.
ಇವುಗಳಲ್ಲಿರುವ ಪ್ರಮುಖ ಅಂಶಗಳು:
ಇವು ಮುಖ್ಯವಾಗಿ ಜೀವಸತ್ವ ಹಾಗೂ ಖನಿಜಾಂಶಗಳನ್ನು ದೇಹಕ್ಕೆ ಒದಗಿಸುತ್ತವೆ. ಅವುಗಳೆಂದರೆ,
- ಬೀಟಾ ಕ್ಯಾರೋಟಿನ್
- ಜೀವಸತ್ವ `ಸಿ
- ಪೋಲಿಕ್ ಆಸಿಡ್
- ಕ್ಯಾಲ್ಸಿಯಂ, ಮೆಗ್ನೇಷಿಯಂ, ಐಯೋಡಿನ್, ಫಾಸ್ಪರಸ್, ಪೋಟ್ಯಾಸಿಯಂ.
ನೆನಪಿನಲ್ಲಿಡಬೇಕಾದ ಅಂಶಗಳು:
- ಮಾಗಿದ ಹಣ್ಣುಗಳನ್ನು ಕೊಂಡುತನ್ನಿ. ಯಾಕೆಂದರೆ ಹಣ್ಣಾಗುವುದಕ್ಕಿಂತ ಮುಂಚೆಯೇ ಗಿಡದಿಂದ ತಂದವುಗಳು ಎಲ್ಲಾ ಪೋಷಕಾಂಶಗಳನ್ನು ಹೊಂದಿರುವುದಿಲ್ಲ.
- ಗಟ್ಟಿಯಾದ ಸಿಪ್ಪೆಯುಳ್ಳ ಹಾಗೂ ಹಾಳಾಗದ ಹಣ್ಣುಗಳನ್ನು ಆರಿಸಿ. ಒಣಗಿದಂತಹ, ಹಾಳಾದ, ಅಥವಾ ಸಿಪ್ಪೆಯಲ್ಲಿ ಸೀಳುಗಳಿದ್ದಂತಹ ಹಣ್ಣುಗಳು ದೇಹಕ್ಕೆ ಒಳ್ಳೆಯದಲ್ಲ.
- ಹಣ್ಣುಗಳನ್ನು ತಿನ್ನುವುದಕ್ಕಿಂತ ಮುಂಚೆ ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. (ಹಣ್ಣಿಗೆ ಸಿಂಪಡಿಸಿದ ಔಷಧಿಯ ಪ್ರಮಾಣ ಕಡಿಮೆಯಿದ್ದರೂ, ಅದರ ಮೇಲಿರುವ ಧೂಳು ಹಾಗೂ ರೋಗಕಾರಕ ಜೀವಾಣುಗಳನ್ನು ತೊಳೆಯುವುದರ ಮೂಲಕ ಶರೀರಕ್ಕೆ ಸೇರದಂತೆ ನೋಡಿಕೊಳ್ಳಬಹುದು )
- ಹಣ್ಣನ್ನು ಸಿಪ್ಪೆಯ ಸಮೇತ ತಿನ್ನುವುದರಿಂದ ಹೆಚ್ಚಿನ ಪೋಷಕಾಂಶಗಳು ದೇಹಕ್ಕೆ ಸಿಗುತ್ತವೆ.
- ಹಣ್ಣುಗಳನ್ನು ಹೆಚ್ಚು ದಿನಗಳವರೆಗೆ ಶೇಖರಿಸಿಡಬೇಡಿ ತಾಜಾ ಇರುವಾಗಲೇ ತಿನ್ನಿ.
- ಹಣ್ಣುಗಳನ್ನು ಆದಷ್ಟು ತಣ್ಣನೆಯ ಪರಿಸರದಲ್ಲಿರಿಸಿ, ಅದರಿಂದಾಗಿ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತವೆ.
- ನೇರವಾಗಿ ಬೀಳುವ ಸೂರ್ಯಕಿರಣಗಳಿಂದ ಹಣ್ಣುಗಳು ಒಣಗದಂತೆ ಸಂರಕ್ಷಿಸಿ ಹಾಗೂ ಶೇಖರಿಸಿಡಿ.
- ಹಣ್ಣುಗಳನ್ನು ಸಣ್ಣಗೆ ಹೆಚ್ಚಬೇಡಿ. ಇದರಿಂದಾಗಿ ಹೆಚ್ಚಿನ ಪೋಷಕಾಂಶಗಳು ನಷ್ಟವಾಗುವ ಸಂಭವಗಳು ಜಾಸ್ತಿ. ಹಾಗೂ ಹೆಚ್ಚು ಹೊತ್ತಿನವರೆಗೆ ಇಟ್ಟು ನಂತರ ಉಪಯೋಗಿಸುವುದರಿಂದಲೂ ಪೋಷಕಾಂಶಗಳು ನಷ್ಟವಾಗುತ್ತದೆ.
ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ, ಶಿರಸಿ, ಉ.ಕ.