Vydyaloka

ದಾಳಿಂಬೆ ಸುಲಭವಾಗಿ ಸಿಗುವ ಸಂಜೀವಿನಿ

ದಾಳಿಂಬೆ ಸುಲಭವಾಗಿ ಸಿಗುವ ಸಂಜೀವಿನಿ.ಆಯುರ್ವೇದದಲ್ಲಿ ದಾಳಿಂಬೆಯ ರೋಗಗಳನ್ನು ಗುಣಪಡಿಸುವ ಶಕ್ತಿಯ ಬಗ್ಗೆ ಸಾಕಷ್ಟು ಉಲ್ಲೇಖವಿದೆ. ಗಿಡದ ಪ್ರತಿಯೊಂದು ಭಾಗ ಕೂಡ ಔಷಧಿಯಾಗಿ ತುಂಬಾ ಉಪಯುಕ್ತವಾಗಿದೆ. ತಾಜಾ ಹಣ್ಣಿನ ರಸ ಚೇತೋಹಾರಿಯಷ್ಟೇ ಅಲ್ಲ, ಅದನ್ನು ಸೇವಿಸಿದರೆ ಅಪಚನ, ಮಲಬದ್ಧತೆ ಅಷ್ಟೇ ಏಕೆ ಎದೆನೋವಿನಂತಹ ಸಮಸ್ಯೆಗಳು ದೂರವಾಗುತ್ತದೆ.

ಮಗುವಿನಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರಿಗೂ ದಾಳಿಂಬೆ ಹಣ್ಣು ಸುಪರಿಚಿತವೇ. ಜೀವನದಲ್ಲಿ ಒಮ್ಮೆಯಾದರೂ ಇದರ ಹುಳಿ-ಹುಳಿ, ಸಿಹಿ-ಸಿಹಿ ಸ್ವಾದವನ್ನು ಚಪ್ಪರಿಸದವರು ಸಿಗುವುದೇ ವಿರಳ. ನಮ್ಮ ಭಾರತೀಯ ಸಾಮಾಜಿಕ ಬದುಕಿನಲ್ಲಿ ದಾಳಿಂಬೆ ಹಾಸು ಹೊಕ್ಕಾಗಿತ್ತು ಎನ್ನಲು ಸಾಕಷ್ಟು ಪುರಾವೆಗಳು ಸಿಗುತ್ತವೆ. ಉದಾಹರಣೆಗೆ ಭಾಣಭಟ್ಟಿ ಮಹಾಕವಿಯ ಕಾದಂಬರಿಯಲ್ಲಿ ದಾಳಿಂಬೆಯ ಉಲ್ಲೇಖವಿದೆ. ಸುಂದರವಾದ ಚೆಲುವೆಯ ದಂತಪಂಕ್ತಿಗಳನ್ನು ರಸಿಕ ಕವಿಗಳು ದಾಳಿಂಬೆ ಬೀಜಗಳಿಗೆ ಹೋಲಿಸುವುದನ್ನಂತೂ ನಾವು ಓದಿದ್ದೇವೆ. ದಾಳಿಂಬೆಯನ್ನು ಮೊಟ್ಟ ಮೊದಲು ಕ್ರಿ. ಪೂ. 2ಂಂಂನೇ ಇಸವಿಯಲ್ಲಿ ಇರಾನಿನಲ್ಲಿ ಬೆಳೆಯಲಾಯಿತೆಂದು ಇತಿಹಾಸ ಹೇಳುತ್ತದೆ. ಅಲ್ಲಿಂದ ಸ್ಪೇನ್, ಈಜಿಪ್ಟ್, ಮೊರಕ್ಕೋ, ಆಫ್‍ಘಾನಿಸ್ತಾನ್, ಬಲೂಚಿಸ್ತಾನ್ ಮುಂತಾದ ರಾಷ್ಟ್ರಗಳಿಗೆ ಇದು ಅತಿ ಕಡಿಮೆ ಅವಧಿಯಲ್ಲಿ ಪ್ರಸಾರವಾಯಿತು. ಸದ್ಯ ಇದನ್ನು ರಷ್ಯ, ಚೀನಾ, ಜಪಾನ್, ಅಮೇರಿಕ, ಬರ್ಮಾ ಹಾಗೂ ಭಾರತಗಳಲ್ಲಿಯೂ ಬೆಳೆಸಲಾಗು ತ್ತಿದೆ.

ಭಾರತಕ್ಕೆ ಯಾವಾಗ ಈ ಹಣ್ಣು ಪಾದಾರ್ಪಣೆ ಮಾಡಿತು ಎನ್ನುವುದು ಗೊತ್ತಿಲ್ಲದೇ ಇದ್ದರೂ ನೂರಾರು ವರ್ಷಗಳಿಂದ ಇಲ್ಲಿ ಬೆಳೆದು ಇದು ಇಲ್ಲಿಯದೇ ಬೆಳೆಯೇನೋ ಎನ್ನುವಷ್ಟರ ಮಟ್ಟಿಗೆ ಜನಜೀವನದಲ್ಲಿ ಬೆರೆತು ಹೋಗಿರುವುದಂತೂ ನಿಜ. ಕರ್ನಾಟಕ (ಮುಖ್ಯವಾಗಿ ವಿಜಾಪುರ ಜಿಲ್ಲೆ), ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ ಗಳಲ್ಲೆಲ್ಲ ಇದು ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿ ಬಿಟ್ಟಿದೆ. ಅಕ್ಟೋಬರ್ ಸಮಯದಲ್ಲಿ ದಾಳಿಂಬೆಯ ದೊಡ್ಡ, ಕೆಂಪು ಮಿಶ್ರಿತ ಹಳದಿ ಬಣ್ಣದ ಹಣ್ಣುಗಳು ಮಾರುಕಟ್ಟೆಯಲ್ಲಿ ಕಂಗೊಳಿಸುತ್ತಿರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ನಿಜಕ್ಕೂ ದಾಳಿಂಬೆ ಪ್ರಕೃತಿ ಮನುಷ್ಯನಿಗೆ ನೀಡಿದ ವರ. ನೂರು ಗ್ರಾಂ ಹಣ್ಣಿನ ತಿರುಳಿನಲ್ಲಿ 16 ಮಿಲಿಗ್ರಾಂ ಸಿ ಜೀವಸತ್ವ, 1.6 ಗ್ರಾಂ ಪ್ರೋಟೀನು, 14.6 ಗ್ರಾಂ ಸರ್ಕರ ಪಿಷ್ಠ ಹಾಗೂ 0.06 ಮಿಲಿಗ್ರಾಂ ಥೈಯಾಮೀನ್‍ಗಳಂಥ ಪೋಷಕಾಂಶಗಳನ್ನು ಒಳಗೊಂಡು ಸಮೃದ್ಧ ವಾಗಿದೆ.

ದಾಳಿಂಬೆಯ ಔಷಧಿ ಗುಣಗಳು :

1. ಆಯುರ್ವೇದದಲ್ಲಿ ದಾಳಿಂಬೆಯ ರೋಗಗಳನ್ನು ಗುಣಪಡಿಸುವ ಶಕ್ತಿಯ ಬಗ್ಗೆ ಸಾಕಷ್ಟು ಉಲ್ಲೇಖವಿದೆ. ಗಿಡದ ಪ್ರತಿಯೊಂದು ಭಾಗ ಕೂಡ ಔಷಧಿಯಾಗಿ ತುಂಬಾ ಉಪಯುಕ್ತವಾಗಿದೆ.

2. ಕೆಲವು ದಿನಗಳವರೆಗೆ ಬೆಳಿಗ್ಗೆ ಎದ್ದ ಕೂಡಲೇ ದಾಳಿಂಬೆಯ ಎಲೆಗಳನ್ನು ಜಗಿದು ಉಗುಳುತ್ತಿದ್ದಂತೆ ಬಾಯಿಯಿಂದ ಬರುವ ದುರ್ವಾಸನೆ ನಿಲ್ಲುತ್ತದೆ.

3. ಒಂದು ಹಿಡಿ ದಾಳಿಂಬೆ ಎಲೆಗಳನ್ನು ಚೆನ್ನಾಗಿ ಅರೆದು, ಮೊಸರಿನಲ್ಲಿ ಬೆರೆಸಿ ದಿನಾಲೂ ಕೆಲವು ದಿನಗಳವರೆಗೆ ಸೇವಿಸಿದರೆ ಗರ್ಭಿಣಿಯರಲ್ಲಿ ಕಾಣುವ ರಕ್ತಹೀನತೆ ಮಾಯ ವಾಗುತ್ತದೆ.

4. ದಾಳಿಂಬೆಯ ಮೊಗ್ಗನ್ನು ಎದೆಹಾಲಿನಲ್ಲಿ ಅರೆದು ಆಗಾಗ ಸೇವಿಸುತ್ತಿದ್ದರೆ ಅತಿಭೇದಿಯನ್ನು ಪರಿಣಾಮಕಾರಿಯಾಗಿ ತಡೆಯಬಹುದು.

5. ಮೊಗ್ಗುಗಳನ್ನು ಒಣಗಿಸಿ, ಕುಟ್ಟಿ ತಯಾರಿಸಿದ ಪುಡಿಯನ್ನು ನಿಯಮಿತವಾಗಿ ಉಪಯೋಗಿಸುವುದರಿಂದ ಅಸ್ತಮಾದ ತೀವ್ರತೆಯನ್ನು ಸಾಕಷ್ಟು ನಿಯಂತ್ರಿಸಬಹು ದೆಂದು ಹೇಳಲಾಗಿದೆ.

6. ತಾಜಾ ಹೂವಿನ ರಸವನ್ನು ತೆಗೆದು ಮೂಗಿನಲ್ಲಿ ಒಂದೆರಡು ತೊಟ್ಟು, ಆಗಾಗ ಹಿಂಡಿಕೊಳ್ಳುತ್ತಿದ್ದರೆ ರಕ್ತಪಿತ್ತ ಶಮನವಾಗುತ್ತದೆ.

7. ತಾಜಾ ಹಣ್ಣಿನ ರಸದೊಂದಿಗೆ ಸ್ವಾದಕ್ಕೆ ಬೇಕಾದಷ್ಟು ಕಲ್ಲುಸಕ್ಕರೆಯನ್ನು ಬೆರೆಸಿ ಆಗಾಗ ಕುಡಿಯುತ್ತಿದ್ದರೆ, ಭೇದಿ ಖಂಡಿತವಾಗಿಯೂ ನಿಲ್ಲುತ್ತದೆ.

8. ಬೇಸಿಗೆಯಲ್ಲಿ ಉರಿಮೂತ್ರದ ತೊಂದರೆ ಸಾಮಾನ್ಯ. ದಾಳಿಂಬೆ ಹಣ್ಣಿನ ರಸವನ್ನು ಒಂದು ಹಿಡಿ ಕೊತ್ತಂಬರಿ ಬೀಜಗಳನ್ನು ಕುದಿಸಿದ ನೀರಿನಲ್ಲಿ ಬೆರೆಸಿ ಆಗಾಗ ಕುಡಿಯು ತ್ತಿದ್ದರೆ ಉರಿಮೂತ್ರದ ತೊಂದರೆ ಶಮನವಾಗುತ್ತದೆ.

9. ತಾಜಾ ಹಣ್ಣಿನ ರಸ ಚೇತೋಹಾರಿಯಷ್ಟೇ ಅಲ್ಲ, ಅದನ್ನು ಸೇವಿಸಿದರೆ ಅಪಚನ, ಮಲಬದ್ಧತೆ ಅಷ್ಟೇ ಏಕೆ ಎದೆನೋವಿನಂತಹ ಸಮಸ್ಯೆಗಳು ದೂರವಾಗುತ್ತದೆ.

10. ಬೀಜಗಳಿಂದ ಅರೆದು ತೆಗೆದ ಎಣ್ಣೆಯನ್ನು ಅಲೋಪತಿ ಪದ್ಧತಿಯಲ್ಲಿ ಜೀವನಿರೋಧಕ (antibiotics)ಗಳನ್ನು ತಯಾರಿಸುವಲ್ಲಿ ಉಪಯೋಗಿಸಲಾಗುತ್ತದೆಂದು ತಿಳಿದು ಬಂದಿದೆ.

11. ದಾಳಿಂಬೆ ಹಣ್ಣಿನ ಸಿಪ್ಪೆ ಮತ್ತು ಚಿಗುರೆಲೆಗಳನ್ನು ಚೆನ್ನಾಗಿ ಅರೆದು ಮಜ್ಜಿಗೆಯಲ್ಲಿ ಬೆರೆಸಿ ತೆಗೆದುಕೊಳ್ಳುವುದರಿಂದ ರಕ್ತಭೇದಿ ನಿಲ್ಲುತ್ತದೆ. ಆದರೆ ಸೇವಿಸುವ ಮುನ್ನ ಕಬ್ಬಿಣದ ಕೋಲೊಂದನ್ನು ಕೆಂಪಗೆ ಕಾಯಿಸಿ ಈ ಮಿಶ್ರಣದಲ್ಲಿ ಅದ್ದಿ ತೆಗೆಯಬೇಕು.

ಪೀಡೆ ನಾಶಕವಾಗಿ ದಾಳಿಂಬೆ :

ದಾಳಿಂಬೆ ಕೀಟ ಹಾಗೂ ರೋಗಗಳನ್ನು ನಿಯಂತ್ರಿಸುವ ಗುಣ ಈಗೀಗ ಬೆಳಕಿಗೆ ಬಂದಿದೆ. ಸಾವಯವ ಕೃಷಿಯ ಬಗ್ಗೆ ಒಲವು ಇರುವವರು ಇದನ್ನು ಪ್ರಯತ್ನಿಸಿ ನೋಡಬಹುದು.

1.. ಕಾಂಡಗಳ ತೊಗಟೆಯನ್ನು ಕುದಿಸಿ ತಯಾರಿಸಿದ ಕಷಾಯ ಉತ್ತಮ ಕೀಟ ನಾಶಕವೆಂದು ಸಂಶೋಧನೆಗಳಿಂದ ತಿಳಿದು ಬಂದಿದೆ.

2. ಹಣ್ಣಿನ ಸಿಪ್ಪೆಯಿಂದ ತೆಗೆದ ಕಷಾಯದಿಂದ ಭತ್ತದ ಬೆಂಕಿರೋಗ (Blast) ಹಾಗೂ ಕಬ್ಬಿನ ಕೆಂಪು ಕೊಳೆ ರೋಗಗಳ್ನನು ಸ್ವಲ್ಪ ಮಟ್ಟಿಗೆ ಹತೋಟಿ ಮಾಡಬಹುದೆಂದು ಕೆಲವು ಅಧ್ಯಯನಗಳು ಹೇಳುತ್ತವೆ.

ಡಾ. ಸಿದ್ದುಕುಮಾರ್ ಘಂಟಿ
ಮಹಾಲಕ್ಷ್ಮಿ ಆಯುರ್ವೇದಿಕ್ ಸೆಂಟರ್
116/13, 12 ನೇ ಮುಖ್ಯ ರಸ್ತೆ, ICICI ಎಟಿಎಂ ಹತ್ತಿರ
ಮಹಾಲಕ್ಷ್ಮಿ ಲೇಔಟ್, ಬೆಂಗಳೂರು-76
ದೂ.: 98450 42755

 

 

Share this: