Vydyaloka

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ರಕೃತಿದತ್ತವಾದ ಮಾರ್ಗಗಳು

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ರಕೃತಿದತ್ತವಾದ ಮಾರ್ಗಗಳು ಸಹಾಯಕಾರಿ. ಪ್ರತಿಯೊಬ್ಬ ಮನುಷ್ಯನಿಗೂ ಉತ್ತಮ ಆರೋಗ್ಯ ಅವಶ್ಯಕ. ದೀರ್ಘಕಾಲ ಆರೋಗ್ಯವಾಗಿ ಬದುಕಬೇಕೆಂಬುದು ಪ್ರತಿಯೊಬ್ಬ ಮನುಷ್ಯನ ಸಹಜ ಬಯಕೆ. ಇದು ನೆರವೇರಲು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ದೇಹಕ್ಕೆ ಸೋಂಕುಗಳು ಬರದ ಹಾಗೆ ತಡೆಯುವುದು ಬಹಳ ಮುಖ್ಯ. ಸರಿಯಾದ ಆಹಾರಪದ್ಧತಿ ಹಾಗೂ ಜೀವನಶೈಲಿಯು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ.

ಪ್ರಕೃತಿದತ್ತವಾಗಿ ದೊರೆಯುವ ಆಹಾರವು ಆರೋಗ್ಯಕ್ಕೆ ಉಪಯುಕ್ತ. ಆಯಾ ಪ್ರದೇಶಗಳಲ್ಲಿ, ಆಯಾ ಕಾಲದಲ್ಲಿ ಸಿಗುವ ಮತ್ತು ಬೆಳೆಯುವ ಹಣ್ಣು, ತರಕಾರಿಗಳನ್ನು ಸೇವಿಸಬೇಕು. ದೈನಂದಿನ ಆಹಾರದಲ್ಲಿ ಮೊಳಕೆಕಾಳುಗಳು, ನಟ್ಸ್ ಗಳನ್ನು ಸೇವಿಸಬೇಕು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ವಿಟಮಿನ್ ಸಿ ಅಂಶ ಹೊಂದಿರುವ ಆಹಾರ ಪದಾರ್ಥಗಳು ಬಹುಮುಖ್ಯ. ಕಿವಿ, ನೆಲ್ಲಿಕಾಯಿ, ನಿಂಬೆಹಣ್ಣು, ಪೇರಳೆ ಹಣ್ಣು, ಪಪ್ಪಾಯ, ಅನಾನಸ್ ಮುಂತಾದವು ವಿಟಮಿನ್ ಸಿ ಹೊಂದಿರುವ ಪದಾರ್ಥಗಳು.

ಸಂಶೋಧನೆಗಳ ಆಧಾರದಿಂದ ಹೇಳುವುದಾದರೆ ಅರಿಶಿಣದಲ್ಲಿರುವ ಕರ್ಕ್ಯುಮಿನ್, ಗ್ರೀನ್ ಟೀನಲ್ಲಿರುವ ಕಾಟೆಕಿನ್, ಶುಂಠಿಯಲ್ಲಿರುವ ಜಿಂಜೆರಾಲ್ ಹಾಗೂ ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಅಂಶಗಳು ದೇಹದಲ್ಲಿರುವ ವೈರಾಣುಗಳ ಶಕ್ತಿಯನ್ನು ಕುಂದಿಸುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ.

1.ಕಾಮಕಸ್ತೂರಿ ಬೀಜ ಸೇರಿಸಿದ ಲಿಂಬು ಮತ್ತು ಜೇನುತುಪ್ಪ ಮಿಶ್ರಿತ ನೀರನ್ನು ಅಗಾಗ್ಗೆ ಕುಡಿಯುತ್ತಿರಬೇಕು.

2.ಕಾಳುಮೆಣಸಿನ ಪುಡಿ ಹಾಗೂ ಶುಂಠಿ ಸೇರಿಸಿದ ನೆಲ್ಲಿಕಾಯಿ ಪೇಯವನ್ನು ಬೆಳಗ್ಗೆ ಎದ್ದ ಕೂಡಲೇ ಕುಡಿಯುವುದು ಉತ್ತಮ.

3.ಜ್ಯೇಷ್ಠಮಧುವಿನ ಕಷಾಯವನ್ನು ಜೇನುತುಪ್ಪದೊಂದಿಗೆ ಸೇವಿಸಿ.

4.ಗ್ರೀನ್ ಟೀಯನ್ನು ದಿನಕ್ಕೆರಡು ಬಾರಿ ಸೇವಿಸಿ.

ಜರ್ನಲ್ ಆಫ಼್ ಲ್ಯುಕೋಸೈಟ್ ಬಯೋಲಜಿ ಪ್ರಕಟಿಸಿದ ವರದಿಯಲ್ಲಿ ಒಮೆಗಾ 3 ಕೊಬ್ಬಿನಾಂಶವೂ ಸಹ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ. 2012ರಲ್ಲಿ ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಶನ್ ಪ್ರಕಟಿಸಿದ ವರದಿಯ ಪ್ರಕಾರ ನಮ್ಮ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಸಹ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಯಾವುದೇ ತರಕಾರಿಯನ್ನು (ಉದಾಹರಣೆಗೆ ಕ್ಯಾರೆಟ್, ಎಲೆಕೋಸು) ಸಣ್ಣಗೆ ಹೆಚ್ಚಿಕೊಂಡು ಅದಕ್ಕೆ ಉಪ್ಪನ್ನು ಬೆರಸಿ ಗಾಳಿ ರಹಿತ ಡಬ್ಬಿಯಲ್ಲಿ ಹಾಕಿ ಒಂದು ವಾರ ಬಿಡಬೇಕು. ನಂತರ ಪ್ರತಿ ದಿವಸ ಈ ಮಿಶ್ರಣವನ್ನು ದಿನಕ್ಕೆ 2 ಚಮಚ ತೆಗೆದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಕರುಳಿನ ಉತ್ತಮ ಬ್ಯಾಕ್ಟೀರಿಯಾಗಳು ಹೆಚ್ಚಲು ಸಹಾಯವಾಗುತ್ತದೆ.

ದೇಹದಲ್ಲಿರುವ ವಿಷವಸ್ತುಗಳನ್ನು ಹೊರಹಾಕುವುದರಿಂದ ದೇಹದ ರೋಗ ನಿರೋಧಕ ಶಕ್ತಿಯ ವರ್ಧನೆ ಸಾಧ್ಯ. ವಾರಕ್ಕೊಂದು ಬಾರಿ ಎನಿಮಾ ತೆಗೆದುಕೊಳ್ಳುವುದು ಹಾಗೂ ಜಲನೇತಿ, ವಮನ ಧೌತಿ, ಉಪವಾಸ ಚಿಕಿತ್ಸೆಗಳು ದೇಹವನ್ನು ಪುನಶ್ಚೇತನಗೋಳಿಸಿ ರೋಗಾಣುಗಳ ವಿರುದ್ಧ ಹೊರಾಡಲು ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ. ಪ್ರಕೃತಿ ಚಿಕಿತ್ಸೆಗಳಾದ ತಂಪು ಕಟಿ ಸ್ನಾನ, ಸೂರ್ಯಸ್ನಾನ – ಬೆಳಗ್ಗೆ ಅಥವಾ ಸಂಜೆ ಅರ್ಧಗಂಟೆಗಳ ಕಾಲ ಕನಿಷ್ಠ ಬಟ್ಟೆಯನ್ನು ಧರಿಸಿ ಸೂರ್ಯನಿಗೆ ಮೈಯನ್ನು ಒಡ್ಡುವುದು, ಮಣ್ಣಿನ ಪಟ್ಟಿಯನ್ನು ಹೊಟ್ಟೆಯ ಭಾಗಕ್ಕೆ ಖಾಲಿ ಹೊಟ್ಟೆಯಲ್ಲಿ ದಿನಕ್ಕೆ 30 ನಿಮಿಷಗಳ ಕಾಲ ಹಾಕಿಕೊಳ್ಳುವುದು ಸಹಾಯಕಾರಿ. ದಿನಕ್ಕೊಂದು ಗಂಟೆಯ ಕಾಲ ಯೋಗ ಹಾಗೂ ಪ್ರಾಣಾಯಾಮದ ಅಭ್ಯಾಸವು ಅಂದು ತೆಗೆದುಕೊಂಡ ಮಾನಸಿಕ ಒತ್ತಡವನ್ನು ಅಂದೇ ಕಡಿಮೆಮಾಡಿಕೊಳ್ಳಲು ಸಹಾಯಮಾಡಿ ತನ್ಮೂಲಕ ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.com; nisargamane6@gmail.com
http://nisargamane.com
Share this: