Vydyaloka

ಪಿ.ಸಿ.ಒ.ಡಿ. ಸಮಸ್ಯೆ – ಈ ತೊಂದರೆ ನಿವಾರಿಸಿಕೊಳ್ಳುವುದು ಹೇಗೆ?

ಪಿ.ಸಿ.ಒ.ಡಿ. ಸಮಸ್ಯೆ ಮಹಿಳೆಯರಲ್ಲಿ ಅದರಲ್ಲೂ ಯುವತಿಯರಲ್ಲಿ ಇಂದು ಸಾಮಾನ್ಯವಾಗಿ ಕಂಡುಬರುತ್ತಿರುವ ತೊಂದರೆ. ಮುಖ್ಯವಾಗಿ ತಪ್ಪು ಜೀವನಶೈಲಿ ಹಾಗೂ ಆಹಾರಪದ್ಧತಿ ಈ ಸಮಸ್ಯೆಯ ಮೂಲ. ಈ ಸಮಸ್ಯೆ ಧೃಡಪಟ್ಟಿದ್ದಲ್ಲಿ ಇದಕ್ಕೆ ಯಾವರೀತಿಯ ಪರಿಹಾರ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಗಮನಿಸೋಣ.

ಮಹಿಳೆಯರಲ್ಲಿ ಅದರಲ್ಲೂ ಯುವತಿಯರಲ್ಲಿ ಇಂದು ಸಾಮಾನ್ಯವಾಗಿ ಕಂಡುಬರುತ್ತಿರುವ ಸಮಸ್ಯೆ ಪಿ.ಸಿ.ಒ.ಡಿ. ಸುಮಾರು 10 ಜನ ಯುವತಿಯರಲ್ಲಿ 2 ಜನರಿಗೆ ಈ ಸಮಸ್ಯೆ ಇರುವುದು ತೋರುತ್ತಿದೆ. ಮಹಿಳೆಯರಲ್ಲಿ ಮಕ್ಕಳಾಗಲು ತೊಂದರೆ ಉಂಟಾಗುವುದು, ಮುಟ್ಟಿನ ಸಮಸ್ಯೆ ಬರುವುದು, ಅದರಲ್ಲಿಯೂ ಮುಖ್ಯವಾಗಿ ಮುಟ್ಟಾದಾಗ ಅತ್ಯಧಿಕ ಹೊಟ್ಟೆನೋವು ಬರುವುದು, 5-6 ತಿಂಗಳುಗಳ ಕಾಲ ಮುಟ್ಟಾಗದಿರುವುದು, ಮುಖದ ಮೇಲಿನ ಕೂದಲುಗಳು ಹೆಚ್ಚಾಗುವುದು, ಧ್ವನಿ ಬದಲಾವಣೆಯಾಗುವುದು, ತಲೆಕೂದಲು ಉದುರುವುದು ಇಂತಹ ಲಕ್ಷಣಗಳು ಪಿ.ಸಿ.ಒ.ಡಿ. ಇರುವಂತದ್ದನ್ನು ಪ್ರಚುರಪಡಿಸುತ್ತದೆ. ಗರ್ಭನಾಳಗಳಲ್ಲಿ ನೀರುಗುಳ್ಳೆಗಳು ತುಂಬಿಕೊಳ್ಳುವುದರಿಂದ ಈ ಸಮಸ್ಯೆ ಬರುವುದು.

ತಪ್ಪು ಆಹಾರಪದ್ಧತಿ ಈ ಸಮಸ್ಯೆಯ ಮೂಲ:

ಮುಖ್ಯವಾಗಿ ಜೀವನಶೈಲಿ ಹಾಗೂ ಆಹಾರಪದ್ಧತಿ. ನಿಯಮಿತ ಕಟ್ಟುನಿಟ್ಟಿನ ಜೀವನಶೈಲಿಯ ಜೊತೆಗೆ ಪರಿಹಾರಪೂರಕವಾದ ಆಹಾರಪದ್ಧತಿಯ ಅಳವಡಿಕೆ ಪಿ.ಸಿ.ಒ.ಡಿ. ಸಮಸ್ಯೆಯನ್ನು ನಿವಾರಿಸಲು ಸಹಕಾರಿ. ತಪ್ಪು ಆಹಾರಪದ್ಧತಿಯು ಈ ಸಮಸ್ಯೆಯ ಮೂಲವಾಗಿದ್ದು ಮುಖ್ಯವಾಗಿ ಆಹಾರದಲ್ಲಿನ ಹೆಚ್ಚಿನ ಕಾರ್ಬೋಹೈಡ್ರೇಟ್ ಅಂಶವು ಪಿ.ಸಿ.ಒ.ಡಿ. ಸಮಸ್ಯೆ ಉಂಟುಮಾಡಲು ಕಾರಣ.

ಬೆವರಿಳಿಯುವಂತಹ ವ್ಯಾಯಾಮ, ನಡಿಗೆ, ಓಟ ಇಂತಹ ದೈಹಿಕ ಚಟುವಟಿಕೆಗಳು ಪಿ.ಸಿ.ಒ.ಡಿ. ಸಮಸ್ಯೆಯನ್ನು ಕಡಿಮೆಮಾಡಲು ಉತ್ತಮ. ಜೊತೆಯಲ್ಲಿ ನಟ್ಸ್ ಹಾಗೂ ಇನ್ನಿತರೆ ಉತ್ತಮ ಕೊಬ್ಬಿನಾಂಶ ಹೊಂದಿರುವ ತುಪ್ಪ, ಬೆಣ್ಣೆ, ಮೊಸರು ಇಂತಹ ಆಹಾರ ಪದಾರ್ಥಗಳನ್ನು ಸೇವಿಬೇಕು. ಒಮೇಗಾ-3 ಪೋಷಕಾಂಶವು ದೇಹಕ್ಕೆ ಅತ್ಯಗತ್ಯವಾಗಿದ್ದು ಈ ಕೊಬ್ಬು ಸಹ ಪಿ.ಸಿ.ಒ.ಡಿ. ಸಮಸ್ಯೆಯ ನಿವಾರಣೆಗೆ ಉಪಯುಕ್ತ.

ಕೇವಲ ನಿಸರ್ಗದತ್ತ ಆಹಾರ ಸೇವಿಸಬೇಕು

ಒಂದು ತಿಂಗಳುಗಳ ಕಾಲ ನಿಸರ್ಗದತ್ತ ಆಹಾರ ಹಾಗೂ ಒಮೇಗಾ-3 ಸೇವನೆ ಮತ್ತು ಪ್ರತಿನಿತ್ಯ 1ಘಂಟೆ ವೇಗದ ವ್ಯಾಯಾಮ ಅನುಸರಿಸಿ. ನಾವು ಸಾಧನೆ ಮಾಡಿ ಕೇವಲ ನಿಸರ್ಗದತ್ತ ಆಹಾರ ಸೇವಿಸಬೇಕು. ಮನಸ್ಸಿನ ಹತೋಟಿ ಇಲ್ಲಿ ಬಹಳ ಮುಖ್ಯ. ಮನಸ್ಸನ್ನು ಹತೋಟಿಯಲ್ಲಿರಿಸಿ ತನ್ಮೂಲಕ ಅನ್ನ, ಚಪಾತಿ, ರಾಗಿ, ಜೋಳ ಕಡಿಮೆಮಾಡಿ ಹಣ್ಣು, ತರಕಾರಿ, ನಟ್ಸ್ ಮುಂತಾದ ನೈಸರ್ಗಿಕ ಆಹಾರವನ್ನೇ ತೆಗೆದುಕೊಂಡಾಗ ನಮ್ಮ ಸಮಸ್ಯೆ ನಿವಾರಣೆಯಾಗಿ ನಾವು ಸಾಧಕರಾಗುತ್ತೇವೆ.

ಮುಟ್ಟಾಗದೇ ಇರುವುದು, ಮುಖದಮೇಲಿನ ಕೂದಲು, ಧ್ವನಿ ಬದಲಾವಣೆ ಮುಂತಾದ ನ್ಯೂನತೆಗಳು ಸರಿಯಾಗುವುದು ಸಾಧಕರಿಗೆ ಕಂಡುಬರುತ್ತದೆ. ಪ್ರಕೃತಿ ಚಿಕಿತ್ಸೆಗಳಾದ ನೀರಿನ ಚಿಕಿತ್ಸೆ, ಮಣ್ಣಿನ ಚಿಕಿತ್ಸೆ, ಬೆಳಕಿನ ಚಿಕಿತ್ಸೆ, ಗಾಳಿಯ ಚಿಕಿತ್ಸೆ ಇವುಗಳ ಮೂಲಕವೂ ಸಹ ಇಂತಹ ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ.

Also Read: ಋತುಸ್ರಾವದ ಉದ್ವೇಗ ನಿವಾರಿಸಿಕೊಳ್ಳುವುದು ಹೇಗೆ? 

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:94487 29434/97314 60353
Email: drvhegde@yahoo.com
http://nisargamane.com

Share this: