ನಿದ್ರಾಹೀನತೆಯೇ?- ಈ ಉಪಾಯಗಳನ್ನು ಪಾಲಿಸಿ.ಗಣನೀಯವಾಗಿ ಕಾಣಿಸಿಕೊಳ್ಳುತ್ತಿರುವ ಒತ್ತಡ, ಶ್ರಮರಹಿತ ಜೀವನ ಪದ್ಧತಿಗಳೇ ಅದಕ್ಕೆ ಕಾರಣ ಎನ್ನಬಹುದು.
ಸುಖನಿದ್ರೆಗೋಸ್ಕರ ಕೆಲವು ಸರಳ ವಿಧಾನ:
ಸುಖನಿದ್ರೆಗೋಸ್ಕರ ಕೆಲವು ಸರಳ ವಿಧಾನಗಳನ್ನು ಈ ಕೆಳಗೆ ವಿವರಿಸಲಾಗಿದೆ. ಮಾತ್ರೆ ರಹಿತ ಸುಖ ನಿದ್ರೆಯನ್ನು ಹೊಂದಿ, ಆರೋಗ್ಯಯುಕ್ತ ಜೀವನವನ್ನು ಪಡೆಯಿರಿ.
1. ಪ್ರತಿನಿತ್ಯ ವ್ಯಾಯಾಮ ಮಾಡಿ. ಪ್ರತಿನಿತ್ಯ ಒಂದು ಗಂಟೆಯ ಯೋಗಾಭ್ಯಾಸ ರೂಢಿಸಿಕೊಂಡರೆ ಉತ್ತಮ. ಒತ್ತಡ ರಹಿತವಾಗಿರಿ.
2. ಕಚೇರಿ ವಿಷಯಗಳನ್ನು ಮನೆಯಲ್ಲಿ ಚಿಂತಿಸಬೇಡಿ. ಸಮಯಕ್ಕೆ ಸರಿಯಾಗಿ ಕೆಲಸ ಪೂರ್ತಿಗೊಳಿಸುವ ಹವ್ಯಾಸ ಬೆಳೆಸಿಕೊಳ್ಳಿ. ನಿನ್ನೆಯ ಬಗೆಗೆ ಅಥವಾ ನಾಳೆಯ ಬಗೆಗೆ ಯಾವಾಗಲೂ ಚಿಂತೆ ಮಾಡುತ್ತಾ ಕುಳಿತುಕೊಳ್ಳಬೇಡಿ. ಪ್ರಸಕ್ತ ಸನ್ನಿವೇಶವನ್ನು ಎದುರಿಸಿ ಮುಂದುವರೆಯುತ್ತಾ ಇರಿ.
3. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದೆ. ಕೇವಲ ಸಮಸ್ಯೆಯ ಆಳವನ್ನೇ ಯೋಚಿಸುವುದು ಬಿಟ್ಟು ಪರಿಹಾರ ಹುಡುಕಿ ಸಂತೃಪ್ತಿಯಿಂದಿರಿ. ನಮಗೆ ಜೀವನದಲ್ಲಿ ದೊರೆತ ಸೌಲಭ್ಯಗಳಲ್ಲೇ ಸಂತೃಪ್ತಿ ಹೊಂದುವುದನ್ನು ಅಭ್ಯಾಸ ಮಾಡಿಕೊಳ್ಳಿ.
4. ಅತಿ ಆಸೆ ದುಃಖಕ್ಕೆ ಕಾರಣವಾಗುತ್ತದೆ. ಕನಿಷ್ಠ ಸೌಲಭ್ಯವೂ ಇಲ್ಲದ ಬಡವರ ಬಗೆಗೆ ಕನಿಕರ ತೋರಿಸಿ, ನಮಗೆ ದೊರೆತದ್ದರ ಬಗೆಗೆ ಸಂತೃಪ್ತಿಯಿಂದಿರಿ.
5. ಮಾನಸಿಕ ಕ್ಷೋಭೆಗಳಿಂದ ಮುಕ್ತವಾಗಿರಲು ಭಕ್ತಿಯಿಂದ ದಿನಕ್ಕೆರಡು ಬಾರಿ ಪ್ರಾರ್ಥಿಸಿ, ಪ್ರತಿನಿತ್ಯದ ದೇವರ ಪೂಜೆಯನ್ನು ಕಾಟಾಚಾರಕ್ಕೊಸ್ಕರ ಮಾಡದೇ ಸಮರ್ಪಣಾ ಭಾವದಿಂದ ಮಾಡಿ.
6. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಶ್ರದ್ಧಾಭಕ್ತಿಯಿಂದ ಭಾಗವಹಿಸಿ.
7. ರಾತ್ರಿಯ ಆಹಾರ ಮಿತವಾಗಿರಲಿ. ರಾತ್ರಿ ಭಾರೀ ಭೋಜನ ಒಳ್ಳೆಯದಲ್ಲ. ಲಘು ಆಹಾರ ಸಾಕು. ಹಣ್ಣು, ಹಸಿ ತರಕಾರಿ ಹೆಚ್ಚೆಚ್ಚು ಸೇವಿಸಿ.
8. ರಾತ್ರಿ ಊಟವನ್ನು ಸರಿಯಾದ ನಿರ್ದಿಷ್ಟ ವೇಳೆಗೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಊಟ ಹಾಗೂ ನಿದ್ರೆಯ ನಡುವೆ 2-3 ಗಂಟೆಗಳ ಅಂತರ ಇರಬೇಕು.
9. ಒಳ್ಳೆಯ ಪುಸ್ತಕ ಓದಿ. ಮಲಗುವ ಮುಂಚೆ ಭಯಾನಕ ಟಿ.ವಿ. ಧಾರಾವಾಹಿಗಳನ್ನು, ಸಿನಿಮಾಗಳನ್ನು ನೋಡಬೇಡಿ.
10. ಭಯಾನಕ ಕಥಾ ಪುಸ್ತಕಗಳನ್ನು ಓದಬೇಡಿ. ದೇವರ ನಾಮವನ್ನು ಸ್ಮರಿಸಿ ನಿದ್ರಿಸಿ. ತಲೆ ಮತ್ತು ಪಾದಕ್ಕೆ ಸಾಸಿವೆ ಎಣ್ಣೆ ಹಚ್ಚಿ ಮಲಗಿ.
11. ಚಹಾ-ಕಾಫಿ ಬೇಡ.
12. ಯಾವುದೂ ಅತಿಯಾಗಿದ್ದರೆ ಒಳ್ಳೆಯದಲ್ಲ. ಅತಿಯಾದ ಊಟ, ಅತಿಯಾದ ಕೆಲಸ, ಅತಿಯಾದ ಲೈಂಗಿಕಾಸಕ್ತಿ ಹತೋಟಿಯಲ್ಲಿಟ್ಟುಕೊಳ್ಳಿ.
13. ಹಗಲು ನಿದ್ರೆ ಬಿಡಿ. ಚಿಕ್ಕಮಕ್ಕಳು, ವಯಸ್ಸಾದವರು ಹಾಗೂ ರೋಗಿಗಳನ್ನು ಬಿಟ್ಟು ಉಳಿದವರು ಹಗಲಿನಲ್ಲಿ ನಿದ್ರೆ ಮಾಡಬೇಕಾಗಿಲ್ಲ.
14. ಕೊಠಡಿಯ ಕಿಟಕಿಗಳನ್ನು ತೆರೆದು ಮಲಗಿ. ಪ್ರಕೃತಿದತ್ತವಾದ ಪರಿಶುದ್ಧ ಗಾಳಿ ಸೇವಿಸಿ. ಅತ್ಯುತ್ತಮ ಶುದ್ಧವಾದ ಬೆಡ್‍ಶೀಟ್‍ಗಳನ್ನು ಬಳಸಿ.
15. ‘ಓಂ’ ಕಾರ ಹೇಳಿ. ಪ್ರತಿನಿತ್ಯ ಶವಾಸನದ ಅಭ್ಯಾಸ ಮಾಡಿ. ಅಂಗಾತ ಮಲಗಿ ಇಡೀ ದೇಹಕ್ಕೆ ಪ್ರಜ್ಞಾಪೂರ್ವಕವಾಗಿ ವಿಶ್ರಾಂತಿ ಕೊಡಿ. ಕೊನೆಯಲ್ಲಿ ‘ಓಂಕಾರ’ವನ್ನು ಮೂರು ಬಾರಿ ದೀರ್ಘವಾಗಿ ಉಚ್ಛರಿಸಿ ‘ಓಂಕಾರ’ದ ತರಂಗಗಳನ್ನು ಅನುಭವಿಸುತ್ತ ದೇಹಕ್ಕೆ ವಿಶ್ರಾಂತಿ ನೀಡಿ. ದೇಹದಲ್ಲಿ ಉಂಟಾಗುವಂತಹ ಆರಾಮವನ್ನು ಅನುಭವಕ್ಕೆ ತಂದುಕೊಳ್ಳಲು ಪ್ರಯತ್ನಿಸಿ.
Email: drvhegde@yahoo.com; nisargamane6@gmail.com