Vydyaloka

ನೇತ್ರ ರಕ್ಷಣೆಗೆ ನಾವೇಕೆ ಕಾಳಜಿ ವಹಿಸುತ್ತಿಲ್ಲ ?

ನೇತ್ರ ರಕ್ಷಣೆಗೆ ನಾವೇಕೆ ಕಾಳಜಿ ವಹಿಸುತ್ತಿಲ್ಲ ? ಕಣ್ಣಿನ ಬಗ್ಗೆ ಕಾಳಜಿ ವಹಿಸುವಲ್ಲಿ ಮತ್ತು ನೇತ್ರ ರಕ್ಷಣೆ ಕುರಿತು ಜಾಗೃತಿ ಮೂಡಿಸುವಲ್ಲಿ ಭಾರತೀಯರು ಅತ್ಯಂತ ಉದಾಸೀನ ಧೋರಣೆ ಹೊಂದಿದ್ದಾರೆ ಎಂದು ಸಂಶೋಧನೆಯೊಂದು ತಿಳಿಸಿದೆ.

ವಿಶ್ವದ ಮೂರನೇ ಒಂದರಷ್ಟು ಜನರು ಮಾತ್ರ ತಮ್ಮ ಅಮೂಲ್ಯ ಕಣ್ಣುಗಳ ಬಗ್ಗೆ ತೀವ್ರ ಕಾಳಜಿ ವಹಿಸುತ್ತಾರೆ. ಕಾಳಜಿ ವಹಿಸದೇ ಇರುವವರ ಪಟ್ಟಿಯಲ್ಲಿ ಭಾರತೀಯರು ಮುಂಚೂಣಿಯಲ್ಲಿದ್ದಾರೆ ಎಂಬುದು ಇತ್ತೀಚಿನ ಕೆಲವು ಸಂಶೋಧನೆಗಳಿಂದ ತಿಳಿದುಬಂದಿದೆ. ಮನುಷ್ಯ ತನ್ನ ದೃಷ್ಟಿಯನ್ನು ಕಳೆದುಕೊಂಡರೆ ಜೀವನದಲ್ಲಿ ಬಹಳಷ್ಟನ್ನು ಕಳೆದುಕೊಂಡಂತೆ ಎಂಬ ಸತ್ಯ ತಿಳಿದಿದ್ದರೂ ಕೂಡ ಅತ್ತ ಕಡೆ ಗಮನ ಹರಿಸುತ್ತಿಲ್ಲ. ಕಣ್ಣಿನ ಸಮಸ್ಯೆ ತಾನಾಗೇ ಬರುವವರೆಗೆ ತಾವು ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದಿಲ್ಲ ಎಂದು ಶೇ.44ರಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ತಮ್ಮ ದೃಷ್ಟಿಯಲ್ಲಿ ಯಾವುದೇ ದೋಷವಿಲ್ಲ. ತಾವು ಏಕೆ ನೇತ್ರ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಶೇಕಡ 42ರಷ್ಟು ಜನರು ಪ್ರಶ್ನಿಸುತ್ತಾರೆ.

ಭಾರತದಲ್ಲಿ ಶೇಕಡ 70ರಷ್ಟು ಮಂದಿ ಕಣ್ಣಿನಲ್ಲಿ ಸಮಸ್ಯೆ ಅಥವಾ ದೋಷ ಉದ್ಭವಿಸುವ ತನಕ ಕಣ್ಣಿನ ಬಗ್ಗೆ ಆಸ್ಥೆ ವಹಿಸುವುದಿಲ್ಲ ಎಂದು ಸಂಶೋಧನೆ ತಿಳಿಸಿದೆ. ತಾವು ಕಣ್ಣಿನ ಬಗ್ಗೆ ಹೆಚ್ಚು ತಿಳಿದ್ದೇವೆ ಎಂದು ಭಾರತೀಯರು ಹೇಳಿಕೊಳ್ಳುತ್ತಾರೆ. ಆದರೆ ಇತರ ದೇಶಗಳಿಗೆ ಹೋಲಿಸಿದರೆ, ಭಾರತೀಯರಿಗೆ ಕಣ್ಣಿನ ಬಗ್ಗೆ ನಿಜವಾಗಿಯೂ ಅರಿವಿಲ್ಲ. ಸ್ಥೂಲಕಾಯ, ಮಾಲಿನ್ಯ, ಧೂಮಪಾನದಿಂದ ಭಾರತೀಯರು ಹೆಚ್ಚಾಗಿ ಕಣ್ಣಿನ ದೋಷಕ್ಕೆ ಒಳಗಾಗುತ್ತಾರೆ ಎಂದು ಸಂಶೋಧನೆ ತಿಳಿಸಿದೆ. ಕಣ್ಣು ನಿಮಗೆಷ್ಟು ಮುಖ್ಯ ಎನ್ನುವ ಪ್ರಶ್ನೆಗೆ ಶೇ.79ರಷ್ಟು ಜನರು ನಮಗೆ ರುಚಿ ಅನುಭವಿಸುವ ಸಾಮಥ್ರ್ಯ ಹೋದರೂ ಪರವಾಗಿಲ್ಲ, ಶೇಕಡ 78ರಷ್ಟು ಮಂದಿ ನಮಗೆ ಕಿವಿಯಲ್ಲಿ ದೋಷ ಉಂಟಾದರೂ ತೊಂದರೆಯಿಲ್ಲ ಹಾಗೂ ಶೇಕಡ 67ರಷ್ಟು ಜನ ನಮ್ಮ ಆಯಸ್ಸು ಮತ್ತು ವರ್ಷ ಕಡಿಮೆಯಾದರೂ ಚಿಂತೆ ಇಲ್ಲ. ನಾವು ಬದುಕಿರುವ ತನಕ ದೃಷ್ಟಿಯಲ್ಲಿ ಯಾವುದೇ ದೋಷ ಉಂಟಾಗಬಾರದು ಎಂದು ಹೇಳಿಕೊಂಡಿದ್ದಾರೆ. ಜನರ ಮನಸ್ಥಿತಿ ಹೀಗಿದ್ದರೂ ಕೂಡ ನೇತ್ರ ರಕ್ಷಣೆ ಕುರಿತು ಜಾಗೃತಿ ವಹಿಸುತ್ತಿಲ್ಲ. ಭಾರತದಲ್ಲಿ ಸುಮಾರು 80,00,000 ಮಂದಿ ಕಣ್ಣಿನ ಸಮಸ್ಯೆಯಿಂದ ಬಳಸುತ್ತಿದ್ದಾರೆ ಎಂದು ಸಂಶೋಧನೆ ಹೇಳಿದೆ.

ಆರೋಗ್ಯಕರ ಕಣ್ಣಿನ ಆರೈಕೆಗೆ ಟಿಪ್ಸ್:

ಕಣ್ಣು ಮುಖದ ಪ್ರತಿಬಿಂಬ, ಅಕರ್ಷಕವಾದ ಕಣ್ಣು ಮುಖದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಬಹುತೇಕ ಮಂದಿ ಮುಖದ ಆರೈಕೆಗೆ ವಹಿಸುವ ಆಸಕ್ತಿಯನ್ನು ಕಣ್ಣಿನ ಕಡೆ ವಹಿಸುವುದಿಲ್ಲ. ಮುಖ ಆಕರ್ಷಕವಾಗಿ ಕಾಣಬೇಕೆಂದರೆ ನೇತ್ರ ಆರೈಕೆ ಬಗ್ಗೆಯೂ ಕೂಡ ಗಮನಹರಿಸಬೇಕಾಗುತ್ತದೆ. ಈ ಕೆಳಗಿನ ಸಲಹೆಗಳು ಸ್ಫಟಿಕದಂತಹ ಹೊಳಪಿನ ಕಣ್ಣನ್ನು ಪಡೆಯಲು ಸಹಾಯ ಮಾಡುತ್ತದೆ.

1. ಕಣ್ಣಿನ ಕೆಳಭಾಗಕ್ಕೆ ಕ್ರೀಮ್ ಲೇಪನ: ಕಣ್ಣಿನ ಸುತ್ತ ಕಪ್ಪು ವರ್ತುಲವಿದ್ದರೆ ಅಂದರೆ ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ ಇದ್ದರೆ ಮಾತ್ರ ಕ್ರೀಮ್ ಹಚ್ಚಬೇಕೆಂದಿಲ್ಲ. ಕಣ್ಣಿನ ಸುತ್ತ ಇರುವ ತ್ವಚೆಯು ಕೆನ್ನೆಯ ತ್ವಚೆಗಿಂತ ತುಂಬಾ ಮೃದುವಾಗಿರುವುದರಿಂದ ಕ್ರೀಮ್ ಅನ್ನು ಪ್ರತಿದಿನ ಹಚ್ಚಿದರೆ ಆ ಭಾಗದಲ್ಲಿ ಕಪ್ಪು ವರ್ತುಲವಿರುವುದಿಲ್ಲ ಮತ್ತು ತ್ವಚ್ಚೆಯು ಆರೋಗ್ಯಕರವಾಗಿರುತ್ತದೆ.

2. ಕಣ್ಣಿನ ಪ್ಯಾಕ್: ಕಣ್ಣಿನ ಮೇಲೆ ಸೌತೆಕಾಯಿ ಅಥವಾ ಸ್ಟ್ರಾಬೆರಿ ಇಟ್ಟು 15 ನಿಮಿಷ ವಿಶ್ರಾಂತಿ ತೆಗೆದುಕೊಳ್ಳಬೇಕು. ಈ ರೀತಿ ಮಾಡಿದರೆ ಕಣ್ಣಿನಲ್ಲಿ ತುರಿಕೆಯ ಸಮಸ್ಯೆ ಇದ್ದರೆ ಹೋಗಲಾಡಿಸಬಹುದು. ಮತ್ತು ಇದರಿಂದ ಹಣ್ಣು ಹೊಳಪಿನಿಂದ ಕಾಣುತ್ತದೆ.

3. ಕಣ್ಣಿನ ಸುತ್ತ ಮಾಯಿಶ್ಚರೈಸರ್: ಕಣ್ಣಿನ ಸುತ್ತ ಮಾಯಿಶ್ಚರೈಸರ್ ಲೇಪಿಸುವುದರಿಂದ ಪ್ರಯೋಜನಗಳುಂಟು. ಮುಖದಲ್ಲಿ ನೆರಿಗೆ ಮೊದಲು ಕಣ್ಣಿನ ಸುತ್ತ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಮುಖಕ್ಕೆ ಮಾಯಿಶ್ಚರೈಸರ್ ಮಾಡುವಾಗ ಕಣ್ಣಿನ ಸುತ್ತ ಕೂಡ ಎಣ್ಣೆಯಿಂದ ಮಾಯಿಶ್ಚರೈಸರ್ ಮಾಡಬೇಕು. ತೆಂಗಿನೆಣ್ಣೆಯನ್ನು ಹಚ್ಚಿದರೆ ಒಳ್ಳೆಯದು. ಮೊದಲು ಸ್ವಲ್ಪ ಉರಿ ಅನಿಸಿದರೂ ಕಣ್ಣಿಗೆ ಇದು ತುಂಬಾ ಒಳ್ಳೆಯದು ಮತ್ತು ಹಿತಕಾರಿ.

4. ಕನ್ನಡಕದ ಬದಲು ಲೆನ್ಸ್: ಕನ್ನಡಕವನ್ನು ಪ್ರತಿದಿನ ಬಳಸುತ್ತಿದ್ದರೆ ಕಣ್ಣಿನ ಸುತ್ತ ಕಪ್ಪು ಬಣ್ಣ ಉಂಟಾಗುತ್ತದೆ. ಆದ್ದರಿಂದ ಕನ್ನಡಕದ ಬದಲು ಲೆನ್ಸ್ ಬಳಸಿದರೆ ಮುಖದ ಅಂದ ಹೆಚ್ಚಾಗುತ್ತದೆ.

5. ಒತ್ತಡ ಕಡಿಮೆ ಮಾಡಬೇಕು: ಮಾನಸಿಕ ಒತ್ತಡವು ಕೇವಲ ಮೆದುಳಿನ ಮೇಲೆ ಅಲ್ಲದೇ ಕಣ್ಣು ಸೇರಿದಂತೆ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡವಿದ್ದರೆ ಕಣ್ಣು ನೋಡಿದಾಗ ತಿಳಿಯುತ್ತದೆ. ಕಣ್ಣು ಕೆಂಪಾಗಿ ಮಂಕಾಗಿ ಕಾಣುತ್ತದೆ. ಆದ್ದರಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಮುಖ್ಯ. ಇದರಿಂದ ಮನಸ್ಸು ಪ್ರಶಾಂತವಾಗಿ ಕಣ್ಣಿನ ಮೇಲೆ ಒತ್ತಡ ಕಡಿಮೆಯಾಗಿ ನೇತ್ರಗಳಲ್ಲಿ ಕಾಂತಿ ಕಂಡುಬರುತ್ತದೆ.

6. ಪ್ರಶಾಂತ ಮನಸ್ಸಿನ ನಿದ್ರೆ: ನಿದ್ರೆ ಕಣ್ಣಿಗೆ ತುಂಬಾ ಅಗತ್ಯವಿರುತ್ತದೆ. ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ನೆಮ್ಮದಿಯಿಂದ ಪ್ರಶಾಂತತೆಯಿಂದ ನಿದ್ದೆ ಮಾಡಬೇಕು. ಇದರಿಂದ ಕಣ್ಣಿನ ಹೊಳಪು ಹೆಚ್ಚಾಗುತ್ತದೆ.

7. ಪೋಷಕಾಂಶ ಆಹಾರ: ಇವುಗಳೊಂದಿಗೆ ದೇಹದಲ್ಲಿ ನೀರಿನಂಶ ಸರಿಯಾದ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು. ವಿಟಮಿನ್ ಎ ಮತ್ತು ವಿಟಮಿನ್ ಸಿ ಇರುವ ಪೋಷಕಾಂಶ ಆಹಾರವು ದಿನನಿತ್ಯದ ಆಹಾರ ಕ್ರಮದಲ್ಲಿರಬೇಕು.

ಈ ಮೇಲಿನ ಸಲಹೆಗಳನ್ನು ಅನುಸರಿಸಿದರೆ ಕಣ್ಣುಗಳ ಅಂದ ಹೆಚ್ಚಾಗುತ್ತದೆ. ಸ್ಫಟಿಕ ಹೊಳಪಿನ ಆರೋಗ್ಯಕರ ಕಣ್ಣುಗಳು ನಿಮ್ಮದಾಗುತ್ತವೆ.

ಡಾ. ಕೆ.ಭುಜಂಗ ಶೆಟ್ಟಿ
ವ್ಯವಸ್ಥಾಪಕ ನಿರ್ದೇಶಕರು, ನಾರಾಯಣ ನೇತ್ರಾಲಯ
121/ಸಿ, ಪಶ್ಚಿಮ ಕಾರ್ಡ್‍ರಸ್ತೆ, ರಾಜಾಜೀನಗರ ಆರ್ ಬ್ಲಾಕ್, ಬೆಂಗಳೂರು-10, ದೂ: 080-23373311/66121300
Email : info@narayananethralaya.com ; info@nnmail.org

Website : www.narayananethralaya.org

Share this: