Vydyaloka

ಮಾರಕ ಮಧುಮೇಹ – ಭಾರೀ ಗಂಡಾಂತರ ಎಂದರೆ ದೃಷ್ಟಿ ಹಾನಿ

diabetes-and-eye

ಮಾರಕ ಮಧುಮೇಹ ರೋಗವನ್ನು ಸಕಾಲದಲ್ಲಿ ಪತ್ತೆ ಮಾಡಿ ಸಮರ್ಪಕವಾಗಿ ನಿಯಂತ್ರಿಸದಿದ್ದರೆ, ಅನೇಕ ಮಂದಿಯ ದೇಹದ ಪ್ರಮುಖ ಅಂಗಾಂಗಗಳ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ. ಭಾರೀ ಗಂಡಾಂತರ ಎಂದರೆ ದೃಷ್ಟಿ ಹಾನಿ.

ದೇಶದಲ್ಲಿನ ಅನೇಕ ತಜ್ಞ ವೈದ್ಯರು ಭಾರತವನ್ನು ವಿಶ್ವ ಮಧುಮೇಹ ರಾಜಧಾನಿ ಎಂದು ಪರಿಗಣಿಸಿದ್ದಾರೆ ಹಾಗೂ ಪರಿಸ್ಥಿತಿಯನ್ನು ಮಹಾಸ್ಪೋಟಕ್ಕಾಗಿ ಕಾಯುತ್ತಿರುವ ಟೈಮ್ ಬಾಂಬ್‍ಗೆ ಹೋಲಿಸಿದ್ದಾರೆ. ಆದಾಗ್ಯೂ ಮತ್ತೊಂದು ಆತಂಕಕಾರಿ ಸಂಗತಿ ಎಂದರೆ ಈ ಪಿಡುಗಿನ ಬಗ್ಗೆ ಮತ್ತು ಮಧುಮೇಹ ಹೆಮ್ಮಾರಿಯ ಬಗ್ಗೆ ಮೂಡಿಸಲಾಗುತ್ತಿರುವ ಜಾಗೃತಿ ತುಂಬಾ ಅಲ್ಪ ಮಟ್ಟದ್ದಾಗಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಜರೂರು ನಿಯಂತ್ರಣ ಮಾಡಿಕೊಳ್ಳುವ ಅಗತ್ಯವಿದೆ. ಈ ಮಾರಕ ರೋಗವು ಕಾಲಕ್ರಮೇಣ ಕಣ್ಣುಗಳು, ಮೂತ್ರಪಿಂಡಗಳು, ಹೃದಯ, ಮೆದುಳು ಹಾಗು ದೇಹದ ಪ್ರತಿ ಮುಖ್ಯ ಅಂಗಾಂಗದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂಬ ಬಗ್ಗೆ ರೋಗಿಗಳಲ್ಲಿ ಸಾಕಷ್ಟು ಜಾಗೃತಿ ಮತ್ತು ಅರಿವು ಇಲ್ಲ ಎಂಬುದು ಕಳವಳಕ್ಕೆ ಕಾರಣವಾಗಿದೆ.

ಡಯಾಬಿಟಿಸ್ ಅಥವಾ ಮಧುಮೇಹ ರೋಗವನ್ನು ಆರಂಭದಲ್ಲೇ ಪತ್ತೆ ಮಾಡಿ ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದರೆ, ಅದು ಕೇವಲ ದೃಷ್ಟಿಗೆ ಅಪಾಯ ತಂದೊಡ್ಡುವುದಲ್ಲದೇ ಜೀವಕ್ಕೇ ಸಂಚಕಾರ ಉಂಟು ಮಾಡುತ್ತದೆ. ಈ ಹೆಮ್ಮಾರಿಯನ್ನು ಆರಂಭದಲ್ಲೇ ಪಳಗಿಸಿದರೆ ಮತ್ತು ನಿಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡರೆ ಈ ರೋಗವನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು. ಆದರೆ ದುರಾದೃಷ್ಟವಶಾತ್ ಭಾರತದಲ್ಲಿ ಈ ರೋಗವು ಒಂದು ಆತಂಕಕಾರಿ ಆರೋಗ್ಯ ಸಮಸ್ಯೆಯಾಗಿ ಎಲ್ಲರನ್ನೂ ಕಾಡುತ್ತಿದೆ..

ಭಾರತದಲ್ಲಿ ಅಂದಾಜು 40 ದಶಲಕ್ಷ ಮಂದಿ ಡಯಾಬಿಟಿಸ್‍ನಿಂದ ಬಳಲುತ್ತಿದ್ದಾರೆ ಹಾಗೂ ತಜ್ಞರ ಪ್ರಕಾರ, ಎಚ್ಚರಿಕೆ ಪ್ರಮಾಣದಲ್ಲಿ ಈ ಪಿಡುಗು ವೃದ್ದಿಯಾಗುತ್ತದೆ.  ಈಗಿರುವ ಸಂಖ್ಯೆಗಿಂತ ಎರಡರಷ್ಟು ಹೆಚ್ಚಾಗಲಿದ್ದು, ಸೋಂಕು ಹಬ್ಬುವ ರೀತಿಯಲ್ಲಿ ವ್ಯಾಪಿಸಲಿದೆ. ಮತ್ತೊಂದು ಆತಂಕಕಾರಿ ಸಂಗತಿ ಎಂದರೆ ದೇಶದಲ್ಲಿರುವ ಡಯಾಬಿಟಿಸ್ ರೋಗಿಗಳಲ್ಲಿ ಅರ್ಧದಷ್ಟು ಮಂದಿಯ ರೋಗ ಪತ್ತೆಯಾಗದೇ ಉಳಿದಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲಿದೆ. ಮಾರಕ ಮಧುಮೇಹ ರೋಗವನ್ನು ಸಕಾಲದಲ್ಲಿ ಪತ್ತೆ ಮಾಡಿ ಸಮರ್ಪಕವಾಗಿ ನಿಯಂತ್ರಿಸದಿದ್ದರೆ, ಅನೇಕ ಮಂದಿಯ ದೇಹದ ಪ್ರಮುಖ ಅಂಗಾಂಗಗಳ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ. ಭಾರೀ ಗಂಡಾಂತರ ಎಂದರೆ ದೃಷ್ಟಿ ಹಾನಿ.

ಡಯಾಬಿಟಿಸ್ ಇಲ್ಲದ ವ್ಯಕ್ತಿಗಿಂತ ಮಧುಮೇಹ ಹೊಂದಿರುವ ರೋಗಿಗಳಲ್ಲಿ ದೃಷ್ಟಿ ಹಾನಿ ಅಥವಾ ಅಂಧತ್ವವು 25 ಪಟ್ಟು ಹೆಚ್ಚಾಗಿರುತ್ತದೆ. ಡಯಾಬಿಟಿಸ್‍ನಿಂದ ದೀರ್ಘಕಾಲದಲ್ಲಿ ದುಷ್ಪರಿಣಾಮಕ್ಕೆ ಒಳಗಾಗುವ ತೀರಾ ಸಾಮಾನ್ಯ ಅಂಗ ಎಂದರೆ ಕಣ್ಣು. ಹೀಗಾಗಿ ಈ ಬಗ್ಗೆ ಜಾಗ್ರತೆ ವಹಿಸುವುದು ಡಯಾಬಿಟಿಕ್ ರೋಗಿಗಳಿಗೆ ಅಗತ್ಯ. ಅಗಾಗ ತಪಾಸಣೆಯನ್ನು ಮಾಡಿಸಿಕೊಳ್ಳುವ ಮೂಲಕ ಈ ಗಂಡಾಂತರವನ್ನು ದೊಡ್ಡ ಮಟ್ಟದಲ್ಲಿ ತಪ್ಪಿಸಬಹುದಾಗಿರುತ್ತದೆ.

ಡಯಾಬಿಟಿಸ್ ರೋಗಿಗೆ ತನಗಿರುವ ಸ್ಥಿತಿಯ ಪತ್ತೆಯಾದ ನಂತರ ನೇತ್ರ ತಪಾಸಣೆಗೆ ಒಳಗಾಗಬೇಕು ಹಾಗೂ ಆನಂತರ ವಾರ್ಷಿಕವಾಗಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಅಥವಾ ವೈದ್ಯರ ಸಲಹೆಗಳು ಮತ್ತು ಶಿಫಾರಸ್ಸಿನಂತೆ ಆಗಾಗ ನೇತ್ರ ತಪಾಸಣೆಗಳಿಗೆ ಒಳಪಡಬೇಕು. ನೇತ್ರ ದೋಷಗಳನ್ನು ಆರಂಭದಲ್ಲೇ ಪತ್ತೆ ಮಾಡಲು ಹಾಗೂ ಲೇಸರ್ ಅಥವಾ ಇತರ ಚಿಕಿತ್ಸೆಗಳ ಮೂಲಕ ತಡೆಗಟ್ಟಲು ಇದರಿಂದ ಸಾಧ್ಯವಾಗುತ್ತದೆ. ಆರಂಭದಲ್ಲೇ ನೇತ್ರ ರೋಗಗಳನ್ನು ಪತ್ತೆ ಮಾಡುವುದರಿಂದ ಡಯಾಬಿಟಿಸ್ ಸಂಬಂಧಿ ಕಣ್ಣಿನ ಕಾಯಿಲೆಗಳನ್ನು ತಡೆಗಟ್ಟಲು ಅಥವಾ ಕಡಿಮೆ ಮಾಡಲು ಸಹಕಾರಿಯಾಗುತ್ತದೆ.

ಈ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸದೇ ಇರುವುದರಿಂದ ಡಯಾಬಿಟಿಸ್ ರೋಗಿಗಳು ಈ ಸಮಸ್ಯೆಯನ್ನು ನಿರ್ಲಕ್ಷಿಸುತ್ತಾರೆ. ಯಾವುದೇ ತೊಂದರೆ ನೀಡದೇ ಇದು 10 ವರ್ಷಗಳ ಕಾಲ ಮುಂದುವರಿಯುವ ಸಾಧ್ಯತೆ ಇರುತ್ತದೆ. ಆದರೆ ಇದು ಒಳಗೇ ದುಷ್ಪರಿಣಾಮಗಳನ್ನು ಬೀರುತ್ತಿರುತ್ತದೆ. ಆದಾಗ್ಯೂ, ಎಂದಿನ ತಪಾಸಣೆ ವೇಳೆ ವೈದ್ಯರಿಗೆ ಇದನ್ನು ಪತ್ತೆ ಮಾಡಲು ಸಾಧ್ಯವಾಗುತ್ತದೆ ಹಾಗೂ ಉಪಶಮಕಾರಿ ಕ್ರಮಗಳನ್ನು ಆರಂಭಿಸುತ್ತಾರೆ. ಆದರೆ ರೋಗಿಯು ಇದನ್ನು ನಿರ್ಲಕ್ಷಿಸಿದರೆ, ಪರಿಸ್ಥಿತಿ ಹದಗೆಟ್ಟು ವಾಸ್ತವತೆಯನ್ನು ಅರಿಯುವ ಮುನ್ನವೇ ಕಾಲವು ಮೀರಿರುತ್ತದೆ. ಸಮಸ್ಯೆಯು ಹೆಚ್ಚು ಬಿಗಡಾಯಿಸಿದರೆ ಅದು ಆಂತರಿಕ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಆಗ ಶಸ್ತ್ರಕ್ರಿಯೆ ಮೂಲಕ ಮಾತ್ರವೇ ಚಿಕಿತ್ಸೆ ನೀಡಬೇಕಾಗುತ್ತದೆ. ಜಾಗೃತಿ ಮತ್ತು ಸುರಕ್ಷಿತ ಕ್ರಮಗಳ ಮೂಲಕ ಇದನ್ನು ತಪ್ಪಿಸಬಹುದಾಗಿರುತ್ತದೆ.

ಮಧುಮೇಹ

ಡಯಾಬಿಟಿಸ್ ಒಂದು ಜೀವನಶೈಲಿಯ ರೋಗವಾಗಿದ್ದು, ತಡೆಗಟ್ಟುವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ. ಕೌಟುಂಬಿಕ ಹಿನ್ನೆಲೆಯೂ ಡಯಾಬಿಟಿಸ್‍ನಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಒಬ್ಬ ವ್ಯಕ್ತಿಯ ತಂದೆಗೆ  ಡಯಾಬಿಟಿಸ್ ಇದ್ದರೆ ಆತನಿಗೆ ಮಧುಮೇಹದ ಸಾಧ್ಯತೆ ಶೇಕಡ 40ರಷ್ಟಿರುತ್ತದೆ, ತಾಯಿಗೆ ಇದ್ದರೆ ಶೇಕಡ 60ರಷ್ಟು ಹಾಗೂ ತಂದೆ-ತಾಯಿ ಇಬ್ಬರಿಗೂ ಇದ್ದರೆ ಸಕ್ಕರೆ ಕಾಯಿಲೆಯ ತಗಲುವ ಸಂಭವ ಶೇ.90ರಷ್ಟು ಇರುತ್ತದೆ. ಮಹಿಳೆಯರಿಗಿಂತ ಪುರುಷರು ಮಧುಮೇಹಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ತೂಕವನ್ನು ಸಮಪ್ರಮಾಣದಲ್ಲಿ ನಿಯಂತ್ರಿಸಿಕೊಳ್ಳುವಿಕೆ, ನಿಯತ ವ್ಯಾಯಾಮ ಮತ್ತು ಒತ್ತಡವನ್ನು ಕಡಿಮೆ ಮಾಡುವ ಮೂಲಕ ಈ ರೋಗ ಬರುವ ಸಾಧ್ಯತೆಯನ್ನು ವಿಳಂಬ ಮಾಡಬಹುದು. ಗ್ರಾಮೀಣ ಪ್ರದೇಶದ ಜನರಿಗಿಂತ ನಗರ ಪ್ರದೇಶದ ಮಂದಿಯಲ್ಲಿ ಸಕ್ಕರೆ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಅಂಕಿ-ಅಂಶಗಳು ದೃಢಪಡಿಸಿವೆ. ನಗರವಾಸಿಗಳಲ್ಲಿ ಶೇ.12.5ರಷ್ಟು ಮಂದಿ ಮಧುಮೇಹ ಹೊಂದಿದ್ದರೆ, ಗ್ರಾಮೀಣ ಪ್ರದೇಶಗಳ ವಾಸಿಗಳಲ್ಲಿ ಡಯಾಬಿಟಿಸ್ ಇರುವ ಪ್ರಮಾಣ ಶೇ.4ರಷ್ಟು.

ಡಯಾಬಿಟಿಸ್ ಮತ್ತು ಕಣ್ಣುಗಳೊಂದಿಗೆ ಅದಕ್ಕೆ ಇರುವ ಸಂಬಂಧ  

ಡಯಾಬಿಟಿಸ್‍ನಿಂದಾಗಿ ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಅಂಧತ್ವ ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ.

ಆರಂಭಿಕ ಚಿಹ್ನೆ ಮತ್ತು ಲಕ್ಷಣ :

ಉಪಶಮನಕ್ಕಿಂತ ರೋಗ ತಡೆಗಟ್ಟುವುದು ಉತ್ತಮ

ಉಪಶಮನಕ್ಕಿಂತ ರೋಗ ತಡೆಗಟ್ಟುವುದು ಉತ್ತಮ. ಡಯಾಬಿಟಿಸ್ ವಿಷಯದಲ್ಲಿ ಆರೋಗ್ಯ ಮತ್ತು ದೀರ್ಘಾಯುಷ್ಯ ಹೊಂದಲು ಇದು ತುಂಬಾ ಮುಖ್ಯ. ಅಗಾಗ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಮತ್ತು ಡಯಾಬಿಟಿಸ್ ರೋಗದ ಆರಂಭಿಕ ಲಕ್ಷಣಗಳನ್ನು ಅರಿತುಕೊಳ್ಳಬೇಕು.

Also Read: ಡಯಾಬಿಟಿಸ್‍ನನ್ನು ತಡೆಗಟ್ಟಬಹುದು

ಡಾ. ಕೆ.ಭುಜಂಗ ಶೆಟ್ಟಿ
ವ್ಯವಸ್ಥಾಪಕ ನಿರ್ದೇಶಕರು, ನಾರಾಯಣ ನೇತ್ರಾಲಯ
121/ಸಿ, ಪಶ್ಚಿಮ ಕಾರ್ಡ್‍ರಸ್ತೆ, ರಾಜಾಜೀನಗರ ಆರ್ ಬ್ಲಾಕ್

ಬೆಂಗಳೂರು-10, ದೂ: 080-23373311/66121300
Email : info@narayananethralaya.com ; info@nnmail.org

Website : www.narayananethralaya.org

Share this: