ಮಳೆಗಾಲ ಸಂದರ್ಭದಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.ಮುಖ್ಯವಾಗಿ ನೆನಪಿಡಬೇಕಾದ ವಿಷಯವೇನೆಂದರೆ ಸುಲಭವಾಗಿ ಜೀರ್ಣವಾಗುವಂತಹ ಆಹಾರಗಳನ್ನು ಮಾತ್ರ ಸೇವಿಸಬೇಕು.ಯಾವಾಗಲೂ ಕಾಯಿಸಿ ಆರಿಸಿದ ನೀರನ್ನೇ ಸೇವಿಸಬೇಕು.
1. ಸುಲಭವಾಗಿ ಜೀರ್ಣವಾಗುವಂತಹ ಆಹಾರಗಳನ್ನು ಮಾತ್ರ ಸೇವಿಸಬೇಕು. ವಾತಾವರಣ ತಂಪಾಗಿದೆ ಎಂದು ಕರಿದ ಪದಾರ್ಥಗಳನ್ನು ಸೇವಿಸುವುದು ತಪ್ಪು. ತೆರೆದು ಬೇಯಿಸಿ ನೀರು ಬಸಿದ ಮೆತ್ತಗಿನ ಅನ್ನ ಮತ್ತು ಹೆಸರುಬೇಳೆಯ ತಿಳಿಸಾರನ್ನು ಹೆಚ್ಚಾಗಿ ಬಳಸಬೇಕು ಎನ್ನುತ್ತದೆ ಆಯುರ್ವೇದ.
2. ಕೊತ್ತಂಬರಿ, ಜೀರಿಗೆ, ಶುಂಠಿ, ಲವಂಗ, ಚಕ್ಕೆ, ಅರಿಶಿನ, ಕಲ್ಲು ಹೂ, ಮೆಣಸಿನ ಕಾಳು, ಸಾಸಿವೆ ಇಂತಹ ಎಲ್ಲಾ ಸಾಂಬಾರ ಪದಾರ್ಥಗಳನ್ನು ಹೆಚ್ಚು ಬಳಸಬೇಕಾದ ಕಾಲ ಇದು. ಇವುಗಳ ಕಷಾಯ ಮಾಡಿ ಅದಕ್ಕೆ ಜೋನಿಬೆಲ್ಲ ಹಾಕಿ ನಿತ್ಯ ಕುಡಿದರೆ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಬಹುತೇಕ ಸಮಸ್ಯೆಗಳಿಂದ ದೂರ ಇರಬಹುದು. ವಿಶೇಷವಾಗಿ ಅಸ್ತಮಾ, ಆಮವಾತ, ಅಲರ್ಜಿ, ಅಜೀರ್ಣದ ಸಮಸ್ಯೆ ಇರುವವರಿಗೆ ಈ ಕಷಾಯ ತುಂಬಾ ಪ್ರಯೋಜನಕಾರಿಯಾಗುತ್ತದೆ.
3. ಬೆಳ್ಳುಳ್ಳಿ, ಈರುಳ್ಳಿ, ಇಂಗು, ಕರಿಬೇವು, ಜೋನಿಬೆಲ್ಲ, ಬೆಣ್ಣೆ ತೆಗೆದ ಮಜ್ಜಿಗೆ, ಅರಿಶಿನ, ಮೇಲೆ ಹೇಳಿದ ಎಲ್ಲಾ ಸಾಂಬಾರ ಪದಾರ್ಥಗಳು, ದೊಡ್ಡಪತ್ರೆ, ಪುದಿನದಂತಹವುಗಳನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸುವುದು ಒಳ್ಳೆಯದು. ಅಸ್ತಮಾ, ಆಮವಾತ, ಅಲರ್ಜಿ, ಅಜೀರ್ಣದ ಸಮಸ್ಯೆ ಇರುವವರಂತೂ ಮಳೆಗಾಲದಲ್ಲಿ ಯಾವುದೇ ಕಾರಣಕ್ಕೂ ಜೀರ್ಣಕ್ಕೆ ಸುಲಭವಲ್ಲದ ಆಹಾರ ಮತ್ತು ಅತಿಯಾದ ಪ್ರಮಾಣದಲ್ಲಿ ಆಹಾರವನ್ನು ಸೇವಿಸಬಾರದು.
5. ಮಳೆಗಾಲದಲ್ಲಿ ಯಾವಾಗಲೂ ಕಾಯಿಸಿ ಆರಿಸಿದ ನೀರನ್ನೇ ಸೇವಿಸಬೇಕು. ನೀರನ್ನು ಕಾಯಿಸುವಾಗ ಒಂದೆರಡು ತುಳಸಿ ಎಲೆ ಮತ್ತು ಅರಿಶಿನವನ್ನು ಹಾಕಿದರೆ ಇನ್ನೂ ಒಳ್ಳೆಯದು. ಮಳೆಗಾಲ ಪ್ರಾರಂಭವಾಗಿ ಕೆಲ ದಿನ ಕಳೆದ ನಂತರ ಮಳೆಯ ನೀರನ್ನು ಭೂಮಿಗೆ ತಾಗದಂತೆ ಸಂಗ್ರಹಿಸಿ ಆ ನೀರನ್ನು ಬಳಸಬೇಕು. ಅದಕ್ಕೆ ಅಮೃತ ಸಮಾನ ಗುಣವಿದ್ದು ಅದನ್ನು ’ದಿವ್ಯ ಜಲ’ ಎಂದು ಆಯುರ್ವೇದದಲ್ಲಿ ಕರೆಯಲಾಗಿದೆ.
6. ಮಳೆಗಾಲದಲ್ಲಿ ಹಗಲುನಿದ್ದೆ ಮಾಡಬಾರದು. ಬೆಳಿಗ್ಗೆ ಬೇಗ ಎದ್ದು ಯೋಗಾಸನ, ಪ್ರಾಣಾಯಾಮಗಳನ್ನು ಮಾಡಲೇಬೇಕಾದ ಕಾಲ ಇದು. ಇದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೇ ಮಳೆಗಾಲದಲ್ಲಿ ಉಲ್ಬಣವಾಗುವ ಮತ್ತು ಪ್ರಾರಂಭವಾಗುವ ಸಮಸ್ಯೆಗಳನ್ನು ದೂರವಿಡಬಹುದು.