Vydyaloka

ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಹೇಗೆ

ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ. ಉತ್ತಮ ಆಹಾರ, ಶಿಸ್ತುಭದ್ಧ ದಿನಚರಿ, ರಾಸಾಯನಿಕ ಯುಕ್ತ ಆಹಾರ ಪದಾರ್ಥಗಳನ್ನು ಸೇವಿಸದಿರುವುದು ಸೂಕ್ತ.

makkala-roga-nirodhaka-shakti-hecchisuvudu-haege

ಶಾಲೆಗಳಲ್ಲಿ ಮನ ಬಿಚ್ಚಿ ಆಟವಾಡುವ ಮಕ್ಕಳು ಸಹಜವಾಗಿ ನೆಗಡಿ, ಕೆಮ್ಮು, ಜ್ವರ ಮುಂತಾದ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಅಷ್ಟೇ ಅಲ್ಲದೇ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ವೈರಸ್ ಅಥವಾ ಬ್ಯಾಕ್ಟೀರಿಯದಿಂದ ಉಂಟಾಗುವ ಸಾಂಕ್ರಾಮಿಕ ಖಾಯಿಲೆಗಳು ಕೂಡ ಶಾಲೆಗಳಲ್ಲಿ ಸಹಜವಾಗಿ ಹರಡುತ್ತವೆ. ಹಾಗಾಗಿ ನಾವು ಶಾಲೆಗಳಿಗೆ ಹೋಗುವ ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ.

1. ಆಹಾರ:
ಬೆಳವಣಿಗೆ ಹೊಂದುತ್ತಿರುವ ಮಕ್ಕಳ ಆರೋಗ್ಯ ಮತ್ತು ಅನಾರೋಗ್ಯ ಎರಡೂ ಬಹುತೇಕವಾಗಿ ಆಹಾರದ ಮೇಲೆಯೇ ಅವಲಂಬಿತವಾಗಿದೆ. ಹಣ್ಣುಗಳು, ತರಕಾರಿಗಳು, ನಟ್ ಗಳು ಮುಂತಾದ ಪ್ರಕೃತಿದತ್ತ ಆಹಾರಗಳಲ್ಲಿ ವಿವಿಧ ರೀತಿಯ ಪೋಷಕಾಂಶಗಳು ಹೇರಳವಾಗಿರುತ್ತವೆ. ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ಅದಕ್ಕಿಂತ ಹೆಚ್ಚಿನ ರೋಗನಿರೋಧಕ ಶಕ್ತಿಯ ವರ್ಧಕ ಇನ್ನೊಂದಿಲ್ಲ. ಬಹಳಷ್ಟು ಮಕ್ಕಳ ಊಟವೆಂದರೆ ಅನ್ನ – ಮೊಸರು ಅಥವಾ ಅನ್ನ – ಸಾರು ಮಾತ್ರ. ಆದರೆ ಅದು ಅಪೂರ್ಣವಾದದ್ದು.

ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್, ಕೊಬ್ಬು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಸೇವಿಸಲೇಬೇಕು. ಹಾಗಾಗಿ ಶುದ್ಧ ಎಣ್ಣೆ, ತುಪ್ಪ, ಹಣ್ಣುಗಳು, ಬೇಳೆ ಕಾಳುಗಳ ಸೇವನೆ ಅತ್ಯಂತ ಅವಶ್ಯಕ. ನಿತ್ಯವೂ ಒಂದಿಲ್ಲೊಂದು ಹಸಿರು ಸೊಪ್ಪಿನ ತಂಬುಳಿ ಅಥವಾ ಸಾರು ಮಾಡಿ ಉಣಬಡಿಸುವುದರಿಂದ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಎಳ್ಳು, ಶುಂಠಿ, ಜೀರಿಗೆ, ವಾಲ್ನಟ್, ಶೇಂಗಾ, ಬಾದಾಮಿ, ಗೋಡಂಬಿ, ಶುದ್ಧ ಸಾವಯವ ಬೆಲ್ಲಗಳನ್ನು ಬಳಸಿ ತಯಾರಿಸಿದ ಲಡ್ಡುಗಳನ್ನು ತಿನ್ನಲು ಕೊಟ್ಟರೆ ಸರ್ವತೋಮುಖ ಆರೋಗ್ಯ ವೃದ್ಧಿ ಆಗುತ್ತದೆ.

2. ದಿನಚರಿ:
ಸರಿಯಾದ ಶಿಸ್ತುಭದ್ಧ ದಿನಚರಿಯನ್ನು ಮಕ್ಕಳಿಗೆ ರೂಢಿ ಮಾಡಿಸುವುದು ತಂದೆ ತಾಯಿಯರ ಕರ್ತವ್ಯ. ಹಾಗಾಗಿ ಬೆಳಿಗ್ಗೆ ಬೇಗ ಎದ್ದು ಸೂರ್ಯ ನಮಸ್ಕಾರ, ಕೆಲವು ಆಸನಗಳು ಮತ್ತು ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಿದರೆ ಸುಲಭವಾಗಿ ಅಲರ್ಜಿ, ಅಸ್ತಮಾದಂತಹ ತೊಂದರೆಗಳು ಕಾಡಲು ಸಾಧ್ಯವಿಲ್ಲ. ಜೊತೆಗೆ, ಪ್ರತಿದಿನವೂ ಸ್ವಲ್ಪಮಟ್ಟಿಗಾದರೂ ದೈಹಿಕ ಶ್ರಮವನ್ನು ಬಯಸುವಂತಹ ಆಟಗಳನ್ನು ಆಡುವಂತೆ ಮಕ್ಕಳನ್ನು ಪ್ರೋತ್ಸಾಹಿಸಬೇಕು. ಇಲ್ಲದೇ ಹೋದರೆ ರೋಗನಿರೋಧಕ ಶಕ್ತಿ ಬೆಳೆಯಲು ಸಾಧ್ಯವಿಲ್ಲ.

3. ರಾಸಾಯನಿಕ ಯುಕ್ತ ಆಹಾರ ಪದಾರ್ಥಗಳ ತ್ಯಾಗ:
ಚಿಕ್ಕ ಮಕ್ಕಳಿಗೆ ಮನೆಯಲ್ಲಿ ಎಷ್ಟೇ ರುಚಿಯಾದ ತಿಂಡಿ ತಿನಿಸುಗಳನ್ನು ತಯಾರಿಸಿ ಕೊಟ್ಟರೂ ಅದು ಅವರಿಗೆ ರುಚಿಸುವುದಿಲ್ಲ. ಆದರೆ ಬಿಸ್ಕೆಟ್, ಚಾಕಲೇಟ್ ಮತ್ತು ಕುರುಕಲು ತಿಂಡಿಗಳನ್ನು ತುಂಬಾ ಇಷ್ಟಪಡುತ್ತಾರೆ. ದುರದೃಷ್ಟವಶಾತ್ ಅವುಗಳಲ್ಲಿ ಹತ್ತಾರು ರೀತಿಯ ರಾಸಾಯನಿಕಗಳ ಬಳಕೆ ಆಗಯೇ ಆಗಿರುತ್ತದೆ. ಇವುಗಳ ಸೇವನೆಯಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುವುದಷ್ಟೇ ಅಲ್ಲ; ನಾವು ಬೇರೆ ಪದಾರ್ಥಗಳಲ್ಲಿ ಸೇವಿಸಿದ ಒಳ್ಳೆಯ ಪೋಷಕಾಂಶಗಳು ನಮ್ಮ ದೇಹಕ್ಕೆ ಸಿಗದಂತೆ ಮಾಡುವ ಗುಣವನ್ನೂ ಇವು ಹೊಂದಿರುತ್ತವೆ. ಹಾಗಾಗಿ ಚಿಕ್ಕ ಮಕ್ಕಳನ್ನು ಎಷ್ಟು ಸಾಧ್ಯವೋ ಅಷ್ಟು ಹೊರಗಿನ ತಿಂಡಿಗಳಿಂದ ದೂರವಿರುವಂತೆ ನೋಡಿಕೊಳ್ಳಬೇಕು. ಇಲ್ಲದೇ ಹೋದರೆ ಮುಂದೊಂದು ದಿನ ಸಮಸ್ಯೆ ಕಟ್ಟಿಟ್ಟ ಬುತ್ತಿ.

4. ಕೆಲವು ಸುಲಭ ಉಪಾಯಗಳು ಮತ್ತು ಮನೆಮದ್ದುಗಳು:
1. ಅರಿಶಿನ ಅತ್ಯಂತ ಅದ್ಭುತವಾದ ರೋಗನಿರೋಧಕ. ನಿತ್ಯವೂ ಅರ್ಧ ಚಮಚದಷ್ಟು ಅರಿಶಿನ ಪುಡಿಯನ್ನು ಹಾಲಿಗೆ ಹಾಕಿ ಮಕ್ಕಳಿಗೆ ನೀಡುವುದರಿಂದ ತುಂಬಾ ಅನುಕೂಲವಾಗುತ್ತದೆ. ಅರಿಶಿನ ಅಲರ್ಜಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.
2. ತಣ್ಣನೆಯ ಅಥವಾ ಉಗುರ ಬೆಚ್ಚಗಿನ ಹಾಲಿಗೆ ದಿನಕ್ಕೊಂದು ಚಮಚ ಜೇನುತುಪ್ಪವನ್ನು ಹಾಕಿಕೊಟ್ಟರೆ ತಂಪಿನ ಕಾರಣದಿಂದ ಉಂಟಾಗುವ ನೆಗಡಿ, ಕೆಮ್ಮಿನಂತಹ ತೊಂದರೆಗಳು ದೂರವಾಗುತ್ತವೆ.
3. ವಾರದಲ್ಲಿ ಒಂದು ದಿನವಾದರೂ ಕಿರಾತಕಡ್ಡಿ ಅಥವಾ ಕಹಿಬೇವಿನ ಕಷಾಯವನ್ನು ಮಕ್ಕಳಿಗೆ ನೀಡುವುದರಿಂದ ವೈರಸ್ ಗಳ ವಿರುದ್ಧ ಮಕ್ಕಳ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಜೊತೆಗೆ ಕ್ರಿಮಿಯ ಸಮಸ್ಯೆಯೂ ಕಾಡುವುದಿಲ್ಲ.
4. ನಾಲ್ಕು ಒಣ ದ್ರಾಕ್ಷಿ, ಎರಡು ಖರ್ಜೂರ, ಕಾಲು ಚಮಚದಷ್ಟು ಜೇಷ್ಠ ಮಧುವಿನ ಪುಡಿ, ಎರಡು ಚಿಟಿಕೆ ಹಿಪ್ಪಲಿ ಪುಡಿ, ತಲಾ ಒಂದೊಂದು ಚಿಟಿಕೆ ಏಲಕ್ಕಿ ಮತ್ತು ಚಕ್ಕೆಯ ಪುಡಿಗಳನ್ನು ಸೇರಿಸಿ ಪೇಸ್ಟ್ ನಂತೆ ಮಾಡಿ ಅದಕ್ಕೆ ಅರ್ಧ ಚಮಚ ಜೇನುತುಪ್ಪವನ್ನು ಹಾಕಿ ಪ್ರತಿದಿನದಂತೆ ಕೆಲ ದಿನಗಳ ಕಾಲ ಕೊಡುವುದರಿಂದ ಕಫ, ಕೆಮ್ಮು, ಗಂಟಲು ಉರಿಯಂತಹ ತೊಂದರೆಗಳು ನಿವಾರಣೆಯಾಗುತ್ತವೆ.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
Share this: