Vydyaloka

ಮಕ್ಕಳ ಆಹಾರ ಪದ್ಧತಿ ಹೇಗಿರಬೇಕು?

ನವೆಂಬರ್ 14 – ಮಕ್ಕಳ ದಿನ

ಇಂದಿನ ದಿನಗಳಲ್ಲಿ ಮಕ್ಕಳಿಗೆ ನಾವು ನೀಡುವಂತಹ ತಪ್ಪಾದ ಆಹಾರ ಪದ್ಧತಿಯ ಪ್ರಭಾವದಿಂದಾಗಿ ಹಲವಾರು ಸಮಸ್ಯೆಗಳು ಕಂಡುಬರುತ್ತಿದೆ. ಭವಿಷ್ಯತ್ತಿನಲ್ಲಿ ಅದು ದೊಡ್ಡ ತೊಂದರೆಯಾಗಿ ಪರಿಣಮಿಸಬಹುದು. ಪ್ರಸ್ತುತ ಜೀವನಶೈಲಿಯೂ ಸಹ ಅವರ ಮೇಲೆ ಗಾಢವಾಗಿ ಪ್ರಭಾವ ಬೀರುವುದು.

ಕರಿದ ಆಹಾರ ಪಧಾರ್ಥಗಳು, ಬೇಕರಿಯ ತಿನಿಸುಗಳು, ಸಂಸ್ಕರಿತ ಆಹಾರ ಪಧಾರ್ಥಗಳು ಮಕ್ಕಳ ಮೆಚ್ಚಿನ ಆಹಾರವಾಗಿದೆ. ಅವರು ಪ್ರಕೃತಿದತ್ತವಾದ, ಸ್ವಾಭಾವಿಕ ಅಥವಾ ನೈಸರ್ಗಿಕ ಆಹಾರದ ಹೊರತಾಗಿ ಮೇಲಿನಂತಹ ಆಹಾರವನ್ನು ಸೇವಿಸುತ್ತಿರುವುದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತಿವೆ. ಇದರಿಂದಾಗಿ ಕೆಟ್ಟ ಕೊಬ್ಬು ಸಂಗ್ರಹವಾಗಿ ಹಲವಾರು ಖಾಯಿಲೆಗಳಿಗೆ ಕಾರಣವಾಗುತ್ತದೆ. ಚಿಕ್ಕವಯಸ್ಸಿನಲ್ಲಿಯೇ ಬೊಜ್ಜು ಸಾಮಾನ್ಯವಾಗಿ ಕಂಡುಬರುತ್ತಿರುವುದಕ್ಕೆ ಕಾರಣ ಇದಾಗಿದೆ. ಹಾಗಾಗಿ ದೇಹಕ್ಕೆ ಅತ್ಯಗತ್ಯವಾಗಿ ಬೇಕಾದ ಕೊಬ್ಬಿನಾಂಶಕ್ಕಾಗಿ ಅವರು ಪ್ರಕೃತಿದತ್ತವಾಗಿ ಸಿಗುವ ಆಹಾರದಿಂದ ಪಡೆಯುವುದು ಒಳಿತು. ಇದು ಉತ್ತಮ ಕೊಬ್ಬು ನೀಡಲು ಸಹಾಯಕವಾಗಿ ಆರೋಗ್ಯ ವರ್ಧನೆಗೆ ಸಹಕಾರಿಯಾಗುವುದು.

ಹಿರಿಯರು, ನಮ್ಮ ಪೂರ್ವಿಕರು ಮಕ್ಕಳಿಗೆ ಹೆಚ್ಚು ಹಣ್ಣು – ಹಂಪಲುಗಳನ್ನು ಸೇವಿಸಲು ಹೇಳುತ್ತಿದ್ದರು. ಅಂತೆಯೇ ಹಣ್ಣು – ಹಂಪಲುಗಳನ್ನು ಮಕ್ಕಳು ಹೆಚ್ಚಾಗಿ ಸೇವಿಸುವುದರಿಂದಾಗಿ ಅದರಲ್ಲಿನ ಹೆಚ್ಚು ಆ್ಯಂಟಿ ಆಕ್ಸಿಡೆಂಟ್ಸಗಳು ದೇಹಕ್ಕೆ ದೊರೆಯುತ್ತದೆ. ಹಸಿತರಕಾರಿಗಳು ಹಾಗೂ ಹಸಿರುಸೊಪ್ಪುಗಳನ್ನು ಬಹಳಷ್ಟು ಸೇವಿಸಬೇಕು. ಇದೂ ಸಹ ದೇಹಕ್ಕೆ ಬೇಕಾದ ಹಲವಾರು ಪೋಷಕಾಂಶಗಳನ್ನು ಒದಗಿಸುತ್ತದೆ. ಉತ್ತಮ ಪ್ರೋಟೀನ್‍ಗಳಿಗಾಗಿ ಮೊಳಕೆಕಾಳುಗಳನ್ನು ತೆಗೆದುಕೊಳ್ಳಬೇಕು. ಮುಖ್ಯವಾಗಿ ನಟ್ಸ್‍ಗಳು ಮಕ್ಕಳ ಬೆಳವಣಿಗೆಗೆ ಅತ್ಯಂತ ಪೂರಕವಾದುದು. ಇದರಿಂದಾಗಿ ಮಾನಸಿಕ, ಬೌದ್ಧಿಕ, ದೈಹಿಕ ವಿಕಾಸ ಸರಿಯಾಗಿ ಆಗಲು ಸಾಧ್ಯವಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ನಮ್ಮ ದೇಹಕ್ಕೆ ದಿನಕ್ಕೆ ಎರಡು ಗ್ರಾಂ ಉಪ್ಪು ಸಾಕು. ಆದರೆ, ನಾವು ಸೇವಿಸುವ ಪ್ರತಿಯೊಂದು ಆಹಾರವನ್ನು ಪರಿಗಣಿಸಿದಾಗ ಸುಮಾರು 15-20 ಗ್ರಾಂ ಪ್ರತಿನಿತ್ಯ ಉಪ್ಪನ್ನು ತೆಗೆದುಕೊಳ್ಳುತ್ತಿದ್ದೇವೆ. ಇದು ಹಲವಾರು ಸಮಸ್ಯೆಗಳಿಗೆ ನಾಂದಿಯಾಗುತ್ತಿದೆ. ಮಕ್ಕಳು ಚಿಕ್ಕವರಿದ್ದಾಗಿನಿಂದಲೇ ಕಡಿಮೆ ಉಪ್ಪನ್ನು ಸೇವಿಸುವುದನ್ನು ರೂಢಿ ಮಾಡಿಸಬೇಕು. ಅಂತೆಯೇ ಕರಿದ ಆಹಾರ, ಬೇಕರಿ ಆಹಾರ, ಸಂಸ್ಕರಿತ ಆಹಾರಗಳ ಬದಲಾಗಿ ಉತ್ತಮ, ಪೌಷ್ಟಿಕ, ನಿಸರ್ಗದತ್ತ ಆಹಾರದ ಬಳಕೆ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು. ಹಾಲು, ಮಜ್ಜಿಗೆ, ಬೆಣ್ಣೆ, ತುಪ್ಪ, ಮೊಸರು ಸಹ ಆರೋಗ್ಯ ವರ್ಧನೆಗೆ ಪೂರಕ.

ಕೆಲವೊಂದು ಮಕ್ಕಳಲ್ಲಿ ‘ಆಟಿಸಮ್’ ಸಮಸ್ಯೆಯು ಕಂಡುಬರುತ್ತಿದೆ. ಇದನ್ನು ಪಾಲಕರು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವುದು ಅವಶ್ಯ. ಅವರ ಮಿದುಳು ಚುರುಕಾಗಲು ಈ ಮೇಲಿನ ಎಲ್ಲ ಅಂಶಗಳು, ಆಹಾರ ಪದಾರ್ಥಗಳು ಸಹಕಾರಿಯಾಗುತ್ತದೆ. ಜೊತೆಯಲ್ಲಿ ಪಾಲಕರ ತಾಳ್ಮೆ, ಸಂಯಮ ಇವುಗಳು ಮಕ್ಕಳಿಗೆ ಚೈತನ್ಯಶಕ್ತಿಯಂತೆ ಕೆಲಸಮಾಡುತ್ತದೆ. ಹಾಗಾಗಿ ಈ ಎಲ್ಲ ಅಂಶಗಳನ್ನು ಗಮನಿಸಿ ಮಕ್ಕಳ ಆಹಾರಕ್ರಮವನ್ನು ಸುವ್ಯವಸ್ಥಿತಗೊಳಿಸಿ ಶಿಸ್ತುಬದ್ಧ ಜೀವನಕ್ರಮದೊಂದಿಗೆ ಸ್ವಾಸ್ಥ್ಯತೆಯನ್ನು ದೊರಕಿಸುವತ್ತ ಪ್ರಯತ್ನ ಸಾಗಲಿ. ಇದರಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ.

ಮಕ್ಕಳ ಆಹಾರ ಹೀಗಿರಲಿ

‘ಬೆಳೆಯುವ ಸಿರಿ ಮೊಳಕೆಯಲಿ’್ಲ ಎಂಬ ಗಾದೆಯಂತೆ ಮಗು ತನ್ನ ಗುಣಗಳನ್ನು ಯಾವೊಂದೋ ರೀತಿಯಲ್ಲಿ ಪ್ರಕಟಪಡಿಸಿರುತ್ತದೆ. ಆದರೆ ಕೆಲವೊಂದು ಬಾರಿ ಪಾಲಕರು, ಪೋಷಕರು ಅದನ್ನು ಗುರುತಿಸುವಲ್ಲಿ ವಿಫಲರಾಗಿರುತ್ತಾರೆ. ತಮ್ಮ ಆಸೆಗಳನ್ನು, ಗುರಿಗಳನ್ನು ಹೇಳಿದಾಗ ಅದು ಮಕ್ಕಳ ಮನೋಬಲದ ಮೇಲೆ, ಆರೋಗ್ಯದ ಮೆಲೆ ವ್ಯತಿರಿಕ್ತ ಪರಿಣಾಮವುಂಟಾಗುತ್ತದೆ. ಆದರೆ ಮಕ್ಕಳ ಇಚ್ಛಾಶಕ್ತಿಯನ್ನು, ಪ್ರತಿಭೆಯನ್ನು ಗುರುತಿಸಿ ಅವರಿಗೆ ದಾರಿಯನ್ನು ತೋರಿಸಿದಾಗ ಆ ಪ್ರತಿಭೆಯು ಬೆಳೆದು ಅಲ್ಲಿ ಸಾಧನೆ ಸಫಲವಾಗುತ್ತದೆ.

ಮಗುವಿನ ಸರ್ವತೋಮುಖ ಬೆಳವಣಿಗೆಗೆ ಇಚ್ಛಾಬಲ, ಮನೋಬಲ ಹಾಗೂ ದೇಹಬಲ ಎಲ್ಲವೂ ಬೇಕು. ಇದಕ್ಕೆ ಪಾಲಕರ ದಾರಿದೀಪ, ಆರೈಕೆ ಮಕ್ಕಳಿಗೆ ಬೇಕು. ಆರೋಗ್ಯವು ಮಾಧ್ಯಮದಂತೆ ಕಾರ್ಯನಿರ್ವಹಿಸುತ್ತದೆ. ‘ಧರ್ಮಾರ್ಥಕಾಮಮೋಕ್ಷಾಣಾಂ ಆರೋಗ್ಯಮೂಲಮುತ್ತಮಮ್’ ಎನ್ನುವಂತೆ ಸ್ವಸ್ಥ ಆರೋಗ್ಯದಿಂದ ಮಾತ್ರ ಸಕಲ ಕಾರ್ಯ ಸಾಧನೆಯಾಗುತ್ತದೆ. ಪ್ರಾರಂಭದಿಂದಲೇ ಮಕ್ಕಳಿಗೆ ಸರಿಯಾಗಿ ಪೌಷ್ಟಿಕ ಆಹಾರವನ್ನು ನೀಡುತ್ತ ಬಂದಲ್ಲಿ ನಿಯಮಿತವಾದ, ವ್ಯವಸ್ಥಿತ ಆಹಾರದಿಂದ ಆರೋಗ್ಯವರ್ಧನೆ ಸಾಧ್ಯವಾಗುತ್ತದೆ.

ಮೊದಲಿನಿಂದಲೂ ಮಕ್ಕಳು ತರಕಾರಿ-ಹಣ್ಣುಗಳನ್ನು ಹೆಚ್ಚು ಸೇವಿಸಬೇಕು ಎಂಬುದಾಗಿ ಹಿರಿಯರು ನಮಗೆ ತಿಳಿಸುತ್ತ ಬಂದಿದ್ದಾರೆ. ವೈಜ್ಞಾನಿಕ ವೈದ್ಯಕೀಯ ದೃಷ್ಟಿಯಿಂದ ನೋಡಿದಾಗಲೂ ಸಹ ಇದು ಆರೋಗ್ಯಕ್ಕೆ ಉತ್ತಮವೆಂದು ತಿಳಿದುಬರುತ್ತದೆ. ಆದರೆ ಇಂದಿನ ದಿನಗಳಲ್ಲಿ ಹಸಿತರಕಾರಿಗಳನ್ನು, ಹಣ್ಣುಗಳನ್ನು ಮಕ್ಕಳು ಹೆಚ್ಚು ಇಷ್ಟ ಪಡುತ್ತಿಲ್ಲ. ಕಾರಣ ಅವರು ಬೇಕರಿಯ ತಿಂಡಿಗಳೊಂದಿಗೆ, ಕರಿದ ಆಹಾರ ಪದಾರ್ಥಗಳೊಂದಿಗೆ (ಮಸಾಲಪೂರಿ, ಬೇಲ್‍ಪೂರಿ, ಗೋಭಿಮಂಚೂರಿ ಇತ್ಯಾದಿ) ಈ ಆಹಾರಗಳನ್ನು ತುಲನೆ ಮಾಡುತ್ತಿದ್ದಾರೆ. ಈ ಆಹಾರಗಳಲ್ಲಿ ಹೆಚ್ಚು ಉಪ್ಪು ಹಾಗೂ ಉಳಿದ ಹಲವಾರು ಪದಾರ್ಥಗಳಿಂದ ರುಚಿಯನ್ನು ಹೆಚ್ಚಿಸಿ ಆಕರ್ಷಿತರಾಗುವಂತೆ ಮಾಡಿರುತ್ತಾರೆ. ಆದರೆ ಆರೋಗ್ಯಕ್ಕೆ ಒಳಿತಾಗುವ ಆಹಾರವನ್ನು ಪಾಲಕರು ಮಕ್ಕಳಿಗೆ ಸಮಜಾಯಿಸಿ ನೀಡುವುದು ಉತ್ತಮ.

ನೈಸರ್ಗಿಕ ಪದಾರ್ಥಗಳನ್ನೇ ಉಪಯೋಗಿಸಿಕೊಂಡು ರುಚಿಯಾಗುವಂತೆ ಅಡಿಗೆ ಮಾಡಿ ಮಕ್ಕಳನ್ನು ಪ್ರಕೃತಿದತ್ತ ಆಹಾರದತ್ತ ಆಕರ್ಷಿಸಬೇಕು. ಮೊಳಕೆಕಾಳುಗಳನ್ನು ರುಚಿಕರವಾಗಿ ಮಾಡಿ ನೀಡಬೇಕು. ತರಕಾರಿಗಳನ್ನು ಹಣ್ಣುಗಳನ್ನು ಸಲಾಡ್ ಮಾಡಿ ಸೇವಿಸಬಹುದು. ಅದಕ್ಕೆ ತೆಂಗಿನ ತುರಿಯನ್ನು ಹಾಕುವುದು ಒಳಿತು. ಬೇಕಾದಲ್ಲಿ ಎಕ್ಸ್ಟ್ರಾ ವರ್ಜಿನ್ ಕೊಕೊನಟ್ ಆಯಿಲ್, ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್‍ನ್ನು ಕೂಡ ಸೇರಿಸಬಹುದು. ಅಲ್ಲದೇ ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ಅಥವಾ ಛಾಟ್ ಮಸಾಲಾ ಪೌಡರ್‍ನ್ನು ರುಚಿಗಾಗಿ ಹಾಕಬಹುದು. ಹೀಗೆ ಸಣ್ಣ ಬದಲಾವಣೆಯೊಂದಿಗೆ ಪೌಷ್ಠಿಕ ಆಹಾರವನ್ನು ಮಕ್ಕಳು ಸೇವಿಸುವಂತೆ ಮಾಡಿದಲ್ಲಿ ಆರೋಗ್ಯವರ್ಧನೆಗೆ ಇದು ಸಹಕಾರಿಯಾಗುತ್ತದೆ. ಪ್ರತಿನಿತ್ಯ ಇಂತಹ ಆಹಾರಪದಾರ್ಥವನ್ನು ನೀಡುತ್ತ ಬಂದಲ್ಲಿ ಅದು ಅಭ್ಯಾಸವಾಗುತ್ತದೆ.

ತಾಯಂದಿರು ಈ ಕಾರ್ಯದಲ್ಲಿ ಯಶಸ್ವಿಯಾದಾಗ ಮಕ್ಕಳು ತಮ್ಮ ಆರೋಗ್ಯದಲ್ಲಿ ಸ್ವಾಸ್ಥ್ಯತೆಯನ್ನು ಹೊಂದಲು ಸಾಧ್ಯವಾಗುತ್ತದೆ. ಕಾರಣ ಇಂದಿನ ಕಾಲದಲ್ಲಿ ಮಧುಮೇಹ, ಬೊಜ್ಜು, ಕೊಲೆಸ್ಟ್ರಾಲ್, ಅಧಿಕರಕ್ತದೊತ್ತಡ, ಹೃದಯ ಸಂಬಂಧಿ ಖಾಯಿಲೆಗಳು, ಕಿಡ್ನಿ ಸಂಬಂಧಿತ ತೊಂದರೆ, ಮಂಡಿನೋವು, ಸೊಂಟನೋವು, ಬೆನ್ನುನೋವು, ಅಜೀರ್ಣ, ಮಲಬದ್ಧತೆ, ಗ್ಯಾಸ್ಟ್ರಿಕ್‍ನಂತಹವುಗಳು ಹೆಚ್ಚಾಗಿ ಕಂಡುಬರುತ್ತಿದೆ. ಭವಿಷ್ಯತ್ತಿನಲ್ಲಿ ಮಕ್ಕಳು ಇವೆಲ್ಲವುಗಳಿಂದ ದೂರವಿರಲು ಈ ಶಿಸ್ತುಬದ್ದ ಪೌಷ್ಟಿಕ, ನೈಸರ್ಗಿಕ ಆಹಾರದ ಅವಶ್ಯಕತೆ ಇದೆ.ಇದು ಸ್ವಾಸ್ತ್ಯ ಜೀವನಕ್ಕೆ ಕಾರಣವಾಗುತ್ತದೆ.

ಮಕ್ಕಳ ಆರೋಗ್ಯನಿರ್ವಹಣೆಗೆ ಒಮೇಗಾ-3 ಮೇದಾಮ್ಲ

ನಮ್ಮ ಮಿದುಳಿನ ಶೇ 70 ರಷ್ಟು ಭಾಗ ಕೊಬ್ಬಿನಿಂದ ಆವೃತವಾಗಿದೆ. ಈ ಫ್ಯಾಟ್ ಅಥವಾ ಕೊಬ್ಬು ನಮ್ಮ ಮಿದುಳಿನ ರಚನೆಯ ಮೂಲ. ಇದು ಮಿದುಳನ್ನು ಕಾಪಾಡುವುದಲ್ಲದೇ ಮಿದುಳಿನ ಎಲ್ಲ ಕ್ರಿಯೆಗಳಿಗೆ ಹಾಗೂ ದೇಹದ ಎಲ್ಲ ಪ್ರಕ್ರಿಯೆಗಳಿಗೆ ಪೂರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಕೊಬ್ಬು ಬೊಜ್ಜಿಗೆ, ಕೊಲೆಸ್ಟ್ರಾಲ್‍ಗೆ ಕಾರಣವಾಗುತ್ತದೆ ಎಂಬ ಸಾಮಾನ್ಯ ತಪ್ಪು ಕಲ್ಪನೆ ನಮ್ಮಲ್ಲಿದೆ. ಆದರೆ ಕೊಬ್ಬಿನಲ್ಲಿ ಎರಡು ರೀತಿಗಳಿದ್ದು, ಒಳ್ಳೆಯ ಕೊಬ್ಬು ಹಾಗೂ ಕೆಟ್ಟ ಕೊಬ್ಬು ಎಂಬುದಾಗಿ ಇದನ್ನು ವಿಂಗಡಿಸಲಾಗುತ್ತದೆ. ಈ ಒಳ್ಳೆಯ ಕೊಬ್ಬು ನಮ್ಮ ಮಿದುಳಿನಲ್ಲಿ ಶೇಖರಣೆಗೊಂಡಿದ್ದು, ಅದರಿಂದಾಗಿ ನಮ್ಮ ಮಿದುಳಿನ ಪ್ರಕ್ರಿಯೆಗಳು ಚೈತನ್ಯ ಶಕ್ತಿಯನ್ನು ಪಡೆಯುತ್ತದೆ. ಹಾಗಾಗಿ ಉತ್ತಮ ಕೊಬ್ಬನ್ನು ಒದಗಿಸುವ ಆಹಾರವನ್ನು ನಾವು ಸೇವಿಸಬೇಕು.

ಹಾಗಾಗಿ ಕೊಬ್ಬು ಎನ್ನುವಂತದ್ದು ಕಾರ್ಬೋಹೈಡ್ರೇಟ್ ಹಾಗೂ ಪ್ರೋಟೀನ್ ಪೋಷಕಾಂಶಗಳ ಜೊತೆಯಲ್ಲಿ ದೇಹಕ್ಕೆ ಅಗತ್ಯವಾದ, ದೇಹದಲ್ಲಿ ಆವೃತವಾಗಿರುವ ಬೃಹತ್ ಪೋಷಕಾಂಶ. ದೇಹದ ಸಂಪೂರ್ಣ ರಚನೆಗೆ ಹಾಗೂ ದೇಹದ ಜೈವಿಕ ಕ್ರಿಯೆಗಳೆರಡಕ್ಕೂ ಬೇಕಾಗಿರುವಂತಹ ಆಹಾರ ಪೋಷಕಾಂಶ ಕೊಬ್ಬು. ಅದರಲ್ಲೂ ನಮ್ಮ ಮಿದುಳಿನಲ್ಲಿನ ಕೊಬ್ಬಿನಲ್ಲಿ 70% ಕೊಬ್ಬು ಒಮೆಗಾ-3 ಆಗಿದೆ. ಆದರೆ ನಮ್ಮ ಇಂದಿನ ಆಧುನಿಕ ಆಹಾರ ಪದ್ಧತಿಯ ಪ್ರಭಾವದಿಂದಾಗಿ ಈ ಒಮೆಗಾ-3 ಪೋಷಕಾಂಶ ಸರಿಯಾಗಿ ದೊರಕುತ್ತಿಲ್ಲ. ಒಮೆಗಾ-6 ಪೋಷಕಾಂಶ ಹೆಚ್ಚಾಗುತ್ತಿದ್ದು, ಒಮೆಗಾ-3 ಹಾಗೂ ಒಮೆಗಾ-6 ಪೋಷಕಾಂಶದ ಅಸಮತೋಲನ ದೇಹದಲ್ಲಿ ಉಂಟಾಗುತ್ತಿದೆ. ಹಾಗಾಗಿ ಒಮೆಗಾ-3 ಪೋಷಕಾಂಶವನ್ನು ಆಹಾರದ ರೂಪದಲ್ಲಿ ಬಾಹ್ಯವಾಗಿ ತೆಗೆದುಕೊಳ್ಳಬೇಕು.

ಅದರಲ್ಲೂ ಮಕ್ಕಳಲ್ಲಿ ಇಂದಿನ ದಿನಗಳಲ್ಲಿ ಹಲವಾರು ರೀತಿಯ ತೊಂದರೆಗಳು ಕಂಡುಬರುತ್ತಿದೆ. ಕಲಿಕಾ ನ್ಯೂನ್ಯತೆ, ಏಕಾಗ್ರತೆಯ ಕೊರತೆ, ಕ್ರಿಯಾಶೀಲತೆಯ ಕೊರತೆ, ಸೌಹಾರ್ದಯುತ ಜೀವನದ ಅಭಾವ, ಸಹಬಾಳ್ವೆಯ ತಪ್ಪುಕಲ್ಪನೆ, ಕಲ್ಪನಾ ಸಾಮಥ್ರ್ಯದ ಕೊರತೆ, ಅತಿರೇಕದ ಮನೋಭಾವ, ಚಂಚಲತೆ, ಹೆದರಿಕೆ, ಮಾನಸಿಕ ಅಸ್ವಸ್ಥತೆ ಇಂತವುಗಳ ಜೊತೆಯಲ್ಲಿ ಅಜೀರ್ಣ, ಅಲರ್ಜಿ, ಕೆಲವೊಬ್ಬರಲ್ಲಿ ಬೊಜ್ಜು ಇವುಗಳೂ ಸಹ ಕಾಣುತ್ತಿವೆ. ಹಾಗಾಗಿ ಈ ಎಲ್ಲದರ ನಿಯಂತ್ರಣಕ್ಕಾಗಿ ಒಳ್ಳೆಯ ಕೊಬ್ಬು ಅವರಿಗೆ ನೀಡಬೇಕು.

ಅದರಲ್ಲೂ ಈ ಒಮೆಗಾ-3 ಮೇದಾಮ್ಲವನ್ನು ಪ್ರತಿನಿತ್ಯ ನೀಡುತ್ತ ಬಂದಲ್ಲಿ ಮಕ್ಕಳಲ್ಲಿ ಬುದ್ಧಿಶಕ್ತಿ ವರ್ಧನೆಗೆ, ಉತ್ಸಾಹಿ ಕ್ರಿಯಾಶೀಲತೆಯ ಜೀವನ ನಿರ್ವಹಣೆಗೆ ಇದು ಪೂರಕ ಶಕ್ತಿಯಾಗಿ ಕಾರ್ಯನಿರ್ವಹಿಸಲು ಸಹಕಾರಿ. ಗರ್ಭಧರಿಸಿದ ಸ್ತ್ರೀ ಈ ಒಮೆಗಾ-3 ಮೇದಾಮ್ಲವನ್ನು ಪ್ರತಿನಿತ್ಯ ಸೇವಿಸುತ್ತ ಬಂದಲ್ಲಿ ಭವಿಷ್ಯತ್ತಿನಲ್ಲಿ ಮಗುವಿನ ಸ್ವಸ್ಥ ಆರೋಗ್ಯ ನಿರ್ವಹಣೆಗೆ ಇದು ಸಹಕಾರಿಯಾಗುತ್ತದೆ. ಹೃದಯದ ತೊಂದರೆ, ಕಣ್ಣಿನ ತೊಂದರೆ, ಕಿಡ್ನಿ ಸಮಸ್ಯೆ ಹಾಗೂ ಇನ್ನಿತರೆ ಮಖ್ಯ ತೊಂದರೆಗಳನ್ನು ಮುಂದೂಡಲೂ ಸಹ ಇದು ನೆರವಾಗುತ್ತದೆ.

ಹಾಗಾಗಿ ಗ್ರಹಣಶಕ್ತಿಯ ವರ್ಧನೆಗೆ, ಆರೋಗ್ಯವಂತ ಕ್ರಿಯಾಶೀಲ ಮಿದುಳಿನ ಅಭಿವೃದ್ಧಿಗೆ ಮತ್ತು ದೇಹದ ಸರ್ವತೋಮುಖ ಬೆಳವಣಿಗೆಗೆ, ಸ್ವಾಸ್ಥ್ಯತೆಗೆ ಒಮೆಗಾ-3 ಯನ್ನು ತೆಗೆದುಕೊಳ್ಳುವುದು ಉತ್ತಮ. ಉತ್ತಮ ಕೊಬ್ಬು ನೀಡುವ ಆಹಾರ ಪದಾರ್ಥಗಳಾದ ತೆಂಗಿನ ತುರಿ, ಶೇಂಗಾ, ಮೊಸರು, ಬೆಣ್ಣೆ, ತುಪ್ಪ, ಹಾಲಿನ ಚೀಸ್, ಪನೀರ್, ಬಾದಾಮಿ, ಅಕ್ರೂಟ್, ಗೋಡಂಬಿ ಇವುಗಳನ್ನು ಮಕ್ಕಳಿಗೆ ಸಾಕಷ್ಟು ನೀಡೋಣ. ತನ್ಮೂಲಕ ಮಕ್ಕಳ ರೋಗ ನಿರೋಧಕ ಶಕ್ತಿ, ನೆನಪಿನ ಶಕ್ತಿ, ಏಕಾಗ್ರತೆ ಹೆಚ್ಚಳವಾಗಲು ಸಹಾಯ ಮಾಡೋಣ.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.com; nisargamane6@gmail.com
http://nisargamane.com
Share this: