Vydyaloka

ಮಹಿಳೆಯರಲ್ಲಿ ಕ್ಯಾನ್ಸರ್ – ಆರಂಭಿಕ ಪತ್ತೆಯು ತಡೆಗಟ್ಟುವಿಕೆಗೆ ಸಹಕಾರಿ

ಮಹಿಳೆಯರಲ್ಲಿ ಕ್ಯಾನ್ಸರ್ ಕ್ಷಿಪ್ರವಾಗಿ ಅತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಅದರಲ್ಲಿಯೂ ಗುಪ್ತಾಂಗಗಳ ಕ್ಯಾನ್ಸರ್ ಇದ್ದರಂತೂ ಸ್ತ್ರೀಯರು ತೀವ್ರ ಇರಿಸುಮುರಿಸಿಗೆ ಒಳಗಾಗಿ ಮಾರಕರೋಗದೊಂದಿಗೆ ತೀವ್ರ ಮಾನಸಿಕ ಯಾತನೆಯನ್ನೂ ಅನುಭವಿಸುತ್ತಾರೆ. ಸ್ತನ ಕ್ಯಾನ್ಸರ್ ಮತ್ತು ಗರ್ಭಕೊರಳಿನ ಕ್ಯಾನ್ಸರ್ ಮಹಿಳೆಯರಲ್ಲಿ ತೀರಾ ಸಾಮಾನ್ಯವಾಗಿ ಕಂಡುಬರುತ್ತಿರುವ ಪಿಡುಗಾಗಿದೆ.

ಮಹಿಳೆಯರಲ್ಲಿ ಕ್ಯಾನ್ಸರ್-ಆರಂಭಿಕ ಪತ್ತೆಯು ತಡೆಗಟ್ಟುವಿಕೆಗೆ ಸಹಕಾರಿ. ಭಾರತೀಯ ಮಹಿಳೆಯರಲ್ಲಿ ಮಾರಕ ಕ್ಯಾನ್ಸರ್ ಪ್ರಕರಣಗಳು ಮತ್ತು ಸಾವು-ನೋವುಗಳು ಕ್ಷಿಪ್ರವಾಗಿ ಅತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಅರಿವು ಮತ್ತು ಜಾಗ್ರತೆಯ ಕೊರತೆ ಹಾಗೂ ತಡವಾಗಿ ರೋಗ ಪತ್ತೆಯಾಗುತ್ತಿರುವುದೇ ಇದಕ್ಕೆ ಪ್ರಾಥಮಿಕ ಕಾರಣ. ಮಹಿಳೆಯರಲ್ಲಿ ಕಂಡುಬರುತ್ತಿರುವ ಅತಿಹೆಚ್ಚು ಕ್ಯಾನ್ಸರ್ ಪ್ರಕರಣಗಳಲ್ಲಿ ವಿಶ್ವದಲ್ಲೇ ಭಾರತವು ಮೂರನೇ ಸ್ಥಾನದಲ್ಲಿರುವುದು ಸಹ ಆಘಾತಕಾರಿ ಸಂಗತಿಯಾಗಿದೆ. ರೋಗದ ಬಗ್ಗೆ ಅರಿವಿನ ಕೊರತೆ, ನಿರ್ಲಕ್ಷ್ಯ, ಅಮಾಯಕತೆ, ಭಯ, ಬಡತನ, ವೈದ್ಯಕೀಯ ಸೌಲಭ್ಯಗಳು ಲಭಿಸದಿರುವಿಕೆ, ಲಿಂಗ ತಾರತಮ್ಯ ಹಾಗೂ ಕೆಲವೊಮ್ಮೆ ಆರೋಗ್ಯತಜ್ಞರು ಮತ್ತು ನೀತಿ ರೂಪಿಸುವವರ ಬೇದಭಾವದಿಂದಲೂ ಕ್ಯಾನ್ಸರ್‍ಬಾಧಿತ ಮಹಿಳೆಯರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.

ನಮ್ಮ ಭಾರತದಲ್ಲಿ ಕ್ಯಾನ್ಸರ್ ಎಂಬ ಪದವು ಭಯ, ಆತಂಕದೊಂದಿಗೆ ತೀವ್ರ ಸಾಮಾಜಿಕ ಕಳಂಕಕ್ಕೆ ಕಾರಣವಾಗಿದೆ. ತಮಗೆ ತಗುಲಿರುವ ಕ್ಯಾನ್ಸರ್‍ರೋಗವು ದೂಷಣೆಗೆ ಕಾರಣವಾಗುತ್ತದೆ ಎಂಬ ಭಯದಲ್ಲಿ ವನಿತೆಯರು ನರಳುತ್ತಾರೆ. ಅಲ್ಲದೇ ತಮಗೆ ಅರ್ಬುಧ ಕಾಯಿಲೆ ಇರುವುದು ಕಂಡುಬಂದರೆ ನಮ್ಮ ಕುಟುಂಬವನ್ನು ಜನರು ತಾತ್ಸಾರದಿಂದ ನೋಡಿ ಕಡೆಗಣಿಸುತ್ತಾರೆ ಎಂಬ ಆತಂಕವೂ ಕ್ಯಾನ್ಸರ್ ಪೀಡಿತ ಮಹಿಳೆಯರನ್ನು ಬಹುವಾಗಿ ಕಾಡುತ್ತಿದೆ. ಅದರಲ್ಲಿಯೂ ಗುಪ್ತಾಂಗಗಳ ಕ್ಯಾನ್ಸರ್ ಇದ್ದರಂತೂ ಸ್ತ್ರೀಯರು ತೀವ್ರ ಇರಿಸುಮುರಿಸಿಗೆ ಒಳಗಾಗಿ ಮಾರಕರೋಗದೊಂದಿಗೆ ತೀವ್ರ ಮಾನಸಿಕ ಯಾತನೆಯನ್ನೂ ಅನುಭವಿಸುತ್ತಾರೆ.

ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ತೀರಾ ಸಾಮಾನ್ಯ

ಸ್ತನ ಕ್ಯಾನ್ಸರ್ ಭಾರತೀಯ ಮಹಿಳೆಯರಲ್ಲಿ ತೀರಾ ಸಾಮಾನ್ಯವಾಗಿ ಕಂಡುಬರುತ್ತಿರುವ ಪಿಡುಗಾಗಿದೆ. ಸ್ತನ ಕ್ಯಾನ್ಸರ್ ಪ್ರಕರಣಗಳು ಮತ್ತು ಸಾವಿನ ಸಂಖ್ಯೆಗಳು ಸಹ ಹೆಚ್ಛಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಭಾರತದಲ್ಲಿನ ಸ್ತನ ಕ್ಯಾನ್ಸರ್ ರೋಗಗಳಲ್ಲಿ ಶೇಕಡ 50ಕ್ಕಿಂತಲೂ ಹೆಚ್ಚು ಸ್ತ್ರೀಯರು ಅಪಾಯಕಾರಿ 3 ಮತ್ತು 4ನೇ ಹಂತದಲ್ಲಿದ್ದು, ಅವರು ಬದುಕುಳಿಯುವ ಸಾಧ್ಯತೆಗಳು ತೀವ್ರವಾಗಿ ಕ್ಷೀಣಿಸುತ್ತಿದೆ. ಈ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವುದು ಈ ಸನ್ನಿವೇಶದಲ್ಲಿ ಅತ್ಯಂತ ಅನಿವಾರ್ಯವಾಗಿದೆ. ಸ್ತನ ಕ್ಯಾನ್ಸರ್ ನ ಗಂಡಾಂತರಕಾರಿ ಅಂಶಗಳು ಮತ್ತು ರೋಗ ಲಕ್ಷಣ-ಚಿಹ್ಹೆಗಳ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸಿ ಶಿಕ್ಷಣ ನೀಡುವ ಅಗತ್ಯವಿದೆ. ಸ್ತನ ಕ್ಯಾನ್ಸರ್ ಗೆ ಅನೇಕ ಕಾರಣಗಳನ್ನು ಗಂಡಾಂತರಕಾರಿ ಅಂಶಗಳೆಂದು ಗುರುತಿಸಲಾಗಿದೆ. ಈ ಬಗ್ಗೆ ಸ್ತ್ರೀಯರಲ್ಲಿ ಜಾಗೃತಿ ಮೂಡಿಸಬೇಕು.

1. ವಿಳಂಬ ವಯೋಮಾನದಲ್ಲಿ ಮೊದಲ ಗರ್ಭಧಾರಣೆ (30 ವರ್ಷಗಳ ನಂತರಗರ್ಭಧರಿಸುವಿಕೆ)
2. ಒಂದೇ ಮಗು ಅಥವಾ ಸಂತಾನಇಲ್ಲದಿರುವಿಕೆ
3. ಅತ್ಯಂತಚಿಕ್ಕ ವಯಸ್ಸಿನಲ್ಲೇ ಋತುಮತಿಯಾಗುವಿಕೆ ಮತ್ತು
4. ವಿಳಂಬವಾಗಿ ರಜೋನಿವೃತ್ತಿ(ಮುಟ್ಟಿನಅವಧಿ ಕೊನೆಗೊಳ್ಳುವಿಕೆ)
5. ಸ್ಥೂಲಕಾಯ, ಬೊಜ್ಜು

ಇತ್ಯಾದಿ ಸ್ತನ ಕ್ಯಾನ್ಸರ್ ಸಾಧ್ಯತೆಯ ಗಂಡಾಂತರಗಳೆಂದು ಗುರುತಿಸಲಾಗಿದೆ.

ಸ್ತನ ಕ್ಯಾನ್ಸರ್ ಸಾಧ್ಯತೆಯನ್ನು ತಡೆಗಟ್ಟುವುದು ಕಷ್ಟಸಾಧ್ಯ. ಆದರೆ ಆರಂಭದಲ್ಲೇ ಇದನ್ನು ಪತ್ತೆ ಮಾಡುವುದರಿಂದ ಹಾಗೂ ಸಕಾಲದಲ್ಲಿ ಸೂಕ್ತ ಚಿಕಿತ್ಸೆಯಿಂದ ಸ್ತನ ಕ್ಯಾನ್ಸರ್ ಗಂಡಾಂತರವನ್ನು ತಪ್ಪಿಸಿ ಬದುಕುಳಿಯುವ ಅವಧಿಯನ್ನು ಹೆಚ್ಚಿಸಬಹುದಾಗಿದೆ. ಸ್ತನ ಕ್ಯಾನ್ಸರ್ ನ್ನು ಪತ್ತೆ ಮಾಡುವ ಮೆಮೋಗ್ರಾಫಿಕ್ ಪರೀಕ್ಷೆ ಭಾರತದಲ್ಲಿ ಪ್ರಸ್ತುತದುಬಾರಿ. ಆದರೆ ಆಗಾಗ ಸ್ವಯಂ ಸ್ತನ ಪರೀಕ್ಷೆ ಮತ್ತು ಕ್ಲಿನಿಕಲ್ ಪರೀಕ್ಷೆಗಳು ಸೂಕ್ತವೆಂದು ಶಿಫಾರಸು ಮಾಡಲಾಗಿದೆ. ವಯಸ್ಸು ಮತ್ತು ಸಂಭವಾಂಶದ ಆಧಾರದ ಮೇಲೆ ತಪಾಸಣೆ ಮತ್ತು ಪರೀಕ್ಷೆ ಮಾರ್ಗಸೂಚಿಯನ್ನು ಅನುಸರಿಸಬಹುದಾಗಿದೆ.

ಎರಡನೇ ಕ್ಯಾನ್ಸರ್ ಹೆಮ್ಮಾರಿ  ಗರ್ಭಕೊರಳಿನ ಕ್ಯಾನ್ಸರ್ :

ಭಾರತೀಯ ಮಹಿಳೆಯರನ್ನು ತೀರಾ ಸಾಮಾನ್ಯವಾಗಿ ಕಾಡುತ್ತಿರುವ ಎರಡನೇ ಕ್ಯಾನ್ಸರ್ ಹೆಮ್ಮಾರಿ ಎಂದರೆ ಗರ್ಭಕೊರಳಿನ ಕ್ಯಾನ್ಸರ್ (ಗರ್ಭಕಂಠ ಕ್ಯಾನ್ಸರ್‍ ಅಥವಾ ಸರ್ವಿಕಲ್‍ ಕ್ಯಾನ್ಸರ್). ಆರಂಭದಲ್ಲೇ ಇದನ್ನು ಪತ್ತೆ ಮಾಡಿದರೆ ಈ ವಿಧದ ಕ್ಯಾನ್ಸರ್ ತಡೆಗಟ್ಟಬಹುದು ಮತ್ತು ಗುಣಪಡಿಸಬಹುದಾಗಿದೆ. ಹ್ಯುಮನ್ ಪ್ಯಾಪಿಲೋಮಾ ವೈರಸ್ (ಎಚ್‍ಪಿವಿ) ಸೋಂಕಿನಿಂದಾಗಿ ಸರ್ವಿಕಲ್‍ ಕ್ಯಾನ್ಸರ್‍ಗೆ ಕಾರಣ ಎಂಬುದು ಈಗ ದೃಢಪಟ್ಟಿದೆ. ಹೀಗಾಗಿ ಎಚ್‍ಪಿವಿ ಸೋಂಕು ಮತ್ತು ಅದರಿಂದ ಉಂಟಾಗುವ ಗರ್ಭಕೊರಳಿನ ಕ್ಯಾನ್ಸರ್‍ನನ್ನು ನಿಯಂತ್ರಿಸಲು ಲಸಿಕೆ/ಚುಚ್ಚುಮದ್ದು ಈಗ ಲಭ್ಯವಿದೆ. ಬಹು ಲೈಂಗಿಕ ಸಂಗಾತಿಗಳು, ಅಸುರಕ್ಷಿತ ಲೈಂಗಿಕ ಕ್ರಿಯೆ, ಚಿಕ್ಕವಯಸ್ಸಿನಲ್ಲೇ ವಿವಾಹ ಹಾಗೂ ಜನನಾಂಗಗಳ ಅಶುಚಿತ್ವ ಇತ್ಯಾದಿ ಸರ್ವಿಕಲ್‍ ಕ್ಯಾನ್ಸರ್ ಕಾರಣವಾಗುವ ಕೆಲವು ಅಂಶಗಳಾಗಿವೆ.

ಗರ್ಭಕೊರಳಿನ ಕ್ಯಾನ್ಸರ್ ಪ್ರಕರಣವನ್ನು ತಗ್ಗಿಸುವಲ್ಲಿ ಸರ್ವಿಕಲ್ ಸೈಟೋಲಾಜಿ (ಪ್ಯಾಪ್ ಸಿಮಿಯರ್) ತಪಾಸಣೆ ಮತ್ತು ಅದಕ್ಕೆ ಸಂಬಂದಪಟ್ಟ ಚಿಕಿತ್ಸಾ ವಿಧಾನಗಳು ಪರಿಣಾಮಕಾರಿ ಮತ್ತು ಯಶಸ್ವಿ ಫಲಿತಾಂಶ ನೀಡುತ್ತದೆ ಎಂಬುದು ದೃಢಪಟ್ಟಿದೆ. ಇತ್ತೀಚೆಗೆ ಎಚ್‍ಪಿವಿ ಪರೀಕ್ಷೆಯನ್ನು ತಪಾಸಣೆಗಾಗಿ ಪರಿಚಯಿಸಲಾಗಿದೆ. ತಪಾಸಣೆ ಮತ್ತು ಪರೀಕ್ಷಾ ಆಧರಿತ ಮೇಲೆ ಬೃಹತ್ ಜನಸಂಖ್ಯೆಗೆ ಇದು ತಲುಪುವುದು ಸೀಮಿತವಾಗಿದೆ. ಜನನಾಂಗಗಳ ಶುಚಿತ್ವ ಅರಿವು ಮೂಡಿಸುವಿಕೆಗೆ ಉತ್ತೇಜನ ಮತ್ತು ಲಸಿಕೆ ಕಾರ್ಯಕ್ರಮಗಳ ಮೂಲಕ ಗರ್ಭಕೊರಳಿನ ಕ್ಯಾನ್ಸರ್ ತಡೆಗಟ್ಟುವ ಪ್ರಾಥಮಿಕ ಹಂತದ ಕ್ರಮವಾಗಿ ಕೇಂದ್ರ ಸರ್ಕಾರ ಪರಿಗಣಿಸಬಹುದಾಗಿದೆ. ಆಸಿಟಿಕ್ ಆಮ್ಲದೊಂದಿಗೆ ದೃಶ್ಯತಪಾಸಣೆ (ವಿಷ್ಯುಷಲ್ ಸ್ಕ್ರೀನಿಂಗ್) ರೀತಿಯ ಕಡಿಮೆ ವೆಚ್ಚದ ವಿಧಾನಗಳನ್ನು ಒಂದು ಪರಿಣಾಮಕಾರಿ ಪರೀಕ್ಷಾ ವಿಧಾನವಾಗಿ ಗಣನೆಗೆ ತೆಗೆದುಕೊಳ್ಳಬಹುದಾಗಿದೆ.

ಆರಂಭಿಕ ಪತ್ತೆಯು ತಡೆಗಟ್ಟುವಿಕೆಗೆ ಸಹಕಾರಿ:

ತಡೆಗಟ್ಟುವಿಕೆ, ಆರಂಭದಲ್ಲೇ ಪತ್ತೆ ಮಾಡುವಿಕೆ ಮತ್ತು ಚಿಕಿತ್ಸೆ ಇವುಗಳಿಗಾಗಿ ಸಂಪನ್ಮೂಲ ಆಧಾರಿತ ಸೂಕ್ತ ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸುವ ಮೂಲಕ ಪ್ರತಿ ವರ್ಷಲಕ್ಷಾಂತರ ಜನರ ಜೀವಗಳನ್ನು ಉಳಿಸಬಹುದಾಗಿದೆ. ಕ್ಯಾನ್ಸರ್ ಬಗ್ಗೆ ಸಾರ್ವಜನಿಕ ಮತ್ತು ರಾಜಕೀಯ ಜಾಗೃತಿಯನ್ನು ಹೆಚ್ಚಿಸುವ ಮುಖಾಂತರ ನಾವು ಕ್ಯಾನ್ಸರ್ ರೋಗಿಗಳು ಮತ್ತು ಅವರ ಕುಟುಂಬಗಳಲ್ಲಿನ ಭಯ, ಆತಂಕವನ್ನು ಕಡಿಮೆ ಮಾಡಬಹುದು. ಕ್ಯಾನ್ಸರ್ ದುಷ್ಪರಿಣಾಮಗಳನ್ನು ಅರ್ಥ ಮಾಡಿಕೊಂಡು ಜಾಗೃತಿಯನ್ನು ಹೆಚ್ಚಿಸಿಕೊಳ್ಳಬಹುದು, ಮೂಢನಂಬಿಕೆ ಮತ್ತು ತಪ್ಪುಕಲ್ಪನೆಗಳನ್ನು ಹೋಗಲಾಡಿಸಬಹುದು, ನಡವಳಿಕೆಗಳು ಮತ್ತು ಕ್ಯಾನ್ಸರ್‍ನತ್ತ ಹೊಂದಿರುವ ಧೋರಣೆಗಳನ್ನು ಬದಲಾಯಿಸಿಕೊಳ್ಳಬಹುದು.

ಈ ಕಾರ್ಯಕ್ರಮ ಒಂದು ಭಾಗವಾಗಿ ವೈದೇಹಿ ಕ್ಯಾನ್ಸರ್ ಸೆಂಟರ್ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಹು ಉಚಿತ ಕ್ಯಾನ್ಸರ್  ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತಿದೆ. ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ವೈದೇಹಿ ಕ್ಯಾನ್ಸರ್ ಸೆಂಟರ್ ತನ್ನ ಕೇಂದ್ರದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಮುಂಬೈನ ಟಾಟಾ ಮೊಮೊರಿಯಲ್‍ ಆಸ್ಪತ್ರೆಯ ಉಪ ನಿರ್ದೇಶಕ ಡಾ. ಶೈಲೇಶ್ ಶ್ರೀಖಂಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನ್ಯೂರೋಸರ್ಜನ್ ಮತ್ತು ಅಂತಾರಾಷ್ಟ್ರೀಯ ಆರೋಗ್ಯ ಆರೈಕೆ ತಜ್ಞರಾದ ಡಾ. ಉಮಾ ನಂಬಿಯಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಢಾ. ಗೀತಾನಾರಾಯಣ್
ಪ್ರೊಫೆಸರ್ ಮತ್ತು ವಿಭಾಗದ ಮುಖ್ಯಸ್ಥರು,
ರೇಡಿಯೇಷನ್‍ಆಂಕೋಲಾಜಿ ವಿಭಾಗ ,ವೈದೇಹಿ ಕ್ಯಾನ್ಸರ್ ಸೆಂಟರ್

www.vydehicancercenter.com

 Ph:080-41663864, 080-28413381-85

Share this: