ಕೂದಲು ಉದುರುವುದನ್ನು ತಡೆಯಲು ನೈಸರ್ಗಿಕ ದಾರಿಗಳು ಹಲವಾರು. ವಿವಿಧ ರೀತಿಯ ತೈಲ, ಶ್ಯಾಂಪೂಗಳನ್ನು ಪ್ರಯತ್ನಿಸಿದ ಮೇಲೂ ಕೂದಲು ಉದುರುವುದು ನಿಂತಿಲ್ಲ ಎಂಬುದು ಹಲವರ ದೂರು. ಇದು ಸಹಜವೇ. ಏಕೆಂದರೆ ಕೂದಲು ಉದುರಬಾರದು ಎಂದರೆ, ಕೂದಲಿನ ಬುಡ ಶಕ್ತಿಯುತವಾಗಿರಬೇಕು. ಅದಕ್ಕೆ ಬೇಕಾದ ಪೋಷಕಾಂಶಗಳನ್ನು ನಾವು ಆಹಾರದಲ್ಲಿ ಸೇವಿಸಬೇಕು. ಕೇವಲ ಹೊರಗಡೆಯಿಂದ ಎಣ್ಣೆ ಹಚ್ಚಿದರೆ ಸಾಕಾಗುವುದಿಲ್ಲ. ಆಹಾರದಲ್ಲಿ ವಿಟಮಿನ್ ಬಿ, ಸಿ, ಡಿ, ಈ, ಝಿಂಕ್, ಪ್ರೋಟೀನ್, ಕಬ್ಬಿಣದ ಅಂಶ ಚೆನ್ನಾಗಿರಬೇಕು. ಆಗ ತುಂಬಾ ಸುಲಭವಾಗಿ ಕೂದಲು ಬೆಳೆಯುತ್ತದೆ; ಉದುರುವುದು ಕಡಿಮೆಯಾಗುತ್ತದೆ.
ದಾಸವಾಳದ ಹೂವುಗಳನ್ನು ಅಡುಗೆಯಲ್ಲಿಯೋ ಅಥವಾ ಟೀ ಮಾಡಿಕೊಂಡೋ ಬಳಸುವುದರಿಂದ ಕೂದಲಿನ ಬುಡಕ್ಕೆ ಶಕ್ತಿ ಸಿಕ್ಕಿ ಕೂದಲು ಉದುರುವುದು ಕಡಿಮೆಯಾಗುವುದಲ್ಲದೇ ಕೂದಲಿನ ಬಣ್ಣ, ವಿನ್ಯಾಸ ಎರಡೂ ಚೆನ್ನಾಗಿ ಆಗುತ್ತದೆ. ದೇಹದಲ್ಲಿ ಕ್ಯಾಲ್ಸಿಯಂನ ಅಂಶ ಚೆನ್ನಾಗಿರುವುದೂ ಅತ್ಯಂತ ಅವಶ್ಯ. ಹಾಗಾಗಿ ನಾಟೀ ಹಸುವಿನ ಹಾಲು, ಬೆಣ್ಣೆ, ತುಪ್ಪಗಳು ತುಂಬಾ ಸಹಕಾರಿ. ನಾಟಿ ಹಸುವಿನ ಶುದ್ಧ ಹಾಲು ಸಿಗುವುದು ಅಸಾಧ್ಯವಾಗಿರುವ ಈ ದಿನಗಳಲ್ಲಿ ಹೆಚ್ಚು ಹೆಚ್ಚು ನಟ್ ಗಳ ಸೇವನೆ ಮಾಡಬಹುದು. ಪ್ರತಿನಿತ್ಯ ಬಾದಾಮಿ, ಅಂಜೂರ, ಗೋಡಂಬಿ, ವಾಲ್ನಟ್, ಶೇಂಗಾಗಳನ್ನು ಸೇವಿಸಬೇಕು. ನಟ್ ಗಳನ್ನು ಹೆಚ್ಚು ಸೇವಿಸಿದಷ್ಟೂ ಕೂದಲು ಉದುರುವುದು ಕಡಿಮೆಯಾಗುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಕೊಬ್ಬರಿ ಎಣ್ಣೆಯನ್ನು ತಲೆಗೆ ಹಚ್ಚಿದರೆ ಕೂದಲಿಗೆ ಸಹಾಯವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ ಆದರೆ ಕೊಬ್ಬರಿ ಅಥವಾ ಕೊಬ್ಬರಿ ಎಣ್ಣೆಯನ್ನು ಹೊಟ್ಟೆಗೆ ಸೇವಿಸುವುದರಿಂದ ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆ.
ಎಣ್ಣೆಯನ್ನು ಕಾಯಿಸಿ, ಕರಿದು ತಿನ್ನುವುದಲ್ಲ. ಗಾಣದಲ್ಲಿ ತೆಗೆದ ಎಣ್ಣೆ ಅಥವಾ ವರ್ಜಿನ್ ಕೊಬ್ಬರಿ ಎಣ್ಣೆಯನ್ನು ಮಾತ್ರ ಬಳಸಬೇಕು. ಇಂದು ನಾವು ಸೇವಿಸುವ ಆಹಾರದಲ್ಲಿ ಒಮೆಗಾ-3 ಸಿಗುತ್ತಿಲ್ಲವಾದ್ದರಿಂದ ಕೂದಲಿನ ಆರೋಗ್ಯಕ್ಕೆ ಸಹಕಾರಿಯಾದ ಇದನ್ನು ಮಾತ್ರೆಗಳ ರೂಪದಲ್ಲಾದರೂ ಸೇವಿಸಬೇಕು. ಇವಿಷ್ಟು ಸೇವಿಸಬೇಕಾದ್ದಾಯಿತು. ಸೇವಿಸಬಾರದ ಹಲವು ವಿಷಗಳನ್ನು ನಾವು ನಿತ್ಯ ಸೇವಿಸುತ್ತಿದ್ದೇವೆ. ಹೊರಗಡೆ ತಯಾರಾದ ಆಹಾರ, ಪ್ಯಾಕ್ಡ್ ಆಹಾರಗಳು, ಬ್ರೆಡ್, ಬಿಸ್ಕಿಟ್, ಜ್ಯಾಮ್ ಗಳಂತಹ ಸಂಸ್ಕರಿಸಿದ ಅಹಾರಗಳಲ್ಲಿರುವ ಹಲವಾರು ರೀತಿಯ ರಾಸಾಯನಿಕಗಳು ಎಷ್ಟೋ ಬಾರಿ ಕೂದಲು ವೇಗವಾಗಿ ಉದುರಲು ಕಾರಣವಾಗುತ್ತವೆ.
ಬಾಹ್ಯವಾಗಿಯೂ ಕೂದಲಿಗೆ ಪೋಷಣೆಯನ್ನು ನೀಡಿದರೆ ಒಳ್ಳೆಯದೇ. ಅದಕ್ಕೆ ವಾರಕ್ಕೆ ಎರಡು ಬಾರಿಯಾದರೂ ಎಣ್ಣೆಯನ್ನು ಹಚ್ಚಬೇಕು. ಶುದ್ಧವಾದ ಕೊಬ್ಬರಿ ಎಣ್ಣೆಗೆ ನೆಲ್ಲಿಕಾಯಿ ರಸ, ಭೃಂಗರಾಜದ ರಸ ಮತ್ತು ಹಾಲನ್ನು ಎಣ್ಣೆಯ ಪ್ರಮಾಣದಷ್ಟೇ ಹಾಕಿ, ಎಣ್ಣೆಯ ಕಾಲು ಭಾಗ ತೂಕದಷ್ಟು ಜೇಷ್ಠಮಧುವಿನ ತುಂಡುಗಳನ್ನು ಹಾಕಿ ನೀರಿನಂಶ ಹೋಗುವವರೆಗೆ ಕಾಯಿಸಿ ಸೋಸಿದಾಗ ಸಿಗುವ ಎಣ್ಣೆಯನ್ನು ಬಳಸಿದರೆ ತುಂಬಾ ಅನುಕೂಲವಾಗುತ್ತದೆ.
ಹಸಿ ನೆಲ್ಲಿಕಾಯಿ ಮತ್ತು ಭೃಂಗರಾಜ ಸಿಗದೇ ಹೋದರೆ ಒಣಗಿದವುಗಳ ಕಷಾಯ ಮಾಡಿಕೊಳ್ಳಬೇಕು. ಇವೆಲ್ಲಾ ಗ್ರಂಧಿಗೆ ಅಂಗಡಿಗಳಲ್ಲಿ ಸಿಗುತ್ತವೆ. ಶ್ಯಾಂಪೂ ಮತ್ತು ಕಂಡೀಷನರ್ ಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಅಂಟವಾಳಕಾಯಿ (ರೀಠಾ) ಯನ್ನು ನೆನೆಸಿ ಜ್ಯೂಸ್ ನಂತೆ ಮಾಡಿ ಶ್ಯಾಂಪೂವಿನಂತೆ ಬಳಸಬಹುದು. ದಾಸವಾಳದ ಎಲೆಗಳನ್ನು ನೀರಿನಲ್ಲಿ ಕಲಸಿದಾಗ ಸಿಗುವ ಲೋಳೆಯನ್ನು ಕಂಡೀಷನರ್ ನಂತೆ ಬಳಸಿದರೆ ಕೂದಲಿನ ಸೌಂದರ್ಯ ಹೆಚ್ಚುವುದೊಂದೇ ಅಲ್ಲ ಕೂದಲು ಸದೃಢವಾಗುತ್ತದೆ. ಮಹಿಳೆಯರಲ್ಲಂತೂ ಮೊದಲ ದಿನದಿಂದಲೇ ಇದರಿಂದ ಕೂದಲು ಉದುರುವುದು ಗಣನೀಯವಾಗಿ ಕಡಿಮೆಯಾಗುವುದು ಗೊತ್ತಾಗುತ್ತದೆ.