Vydyaloka

ಕೊಬ್ಬರಿ ಎಣ್ಣೆ ಮತ್ತು ರೋಗ ನಿರೋಧಕ ಶಕ್ತಿ

ಕೊಬ್ಬರಿ ಎಣ್ಣೆ  ಹೆಚ್ಚು ಆರೋಗ್ಯವರ್ಧಕ. ಅನವಶ್ಯಕವಾಗಿ ಹೆದರಿ ಔಷಧರೂಪಿ ಆಹಾರವನ್ನು ಮಿಸ್ ಮಾಡಿಕೊಳ್ಳುವುದು ಬೇಡ.ಇದರ ಸೇವನೆಯಿಂದ ನಮ್ಮ ದೇಹದಲ್ಲಿ ವೈರಸ್ ಅಥವಾ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಾಗುತ್ತದೆ.

ರೋಗ ನಿರೋಧಕ ಶಕ್ತಿ ಅತಿ ಪ್ರಾಮುಖ್ಯತೆ ಪಡೆಯುತ್ತಿರುವ ಈ ಕಾಲದಲ್ಲಿ ಕೊಬ್ಬರಿ ಎಣ್ಣೆಯ ಬಗ್ಗೆ ತಿಳಿದುಕೊಳ್ಳಲೇಬೇಕು. ಅಮೃತ ಸಮಾನವಾದ ಗುಣಗಳನ್ನು ಹೊಂದಿದ್ದರೂ ಅದನ್ನು ವಿಷವೆಂದು ಪರಿಗಣಿಸಿ ದೂರವಿಡುತ್ತಿದ್ದೇವೆ. ಆದರೆ ಇಂದಿನ ಲೇಖನವನ್ನು ಪೂರ್ತಿ ಓದಿದರೆ, ಕೊಬ್ಬರಿ ಎಣ್ಣೆಯ ಮಹತ್ವ ಅರಿವಾಗುತ್ತದೆ. ಕೊಬ್ಬರಿ ಎಣ್ಣೆಯಲ್ಲಿ 65% ಮೀಡಿಯಂ ಚೈನ್ ಫ್ಯಾಟ್ಟಿ ಆಸಿಡ್ (ಮುಖ್ಯವಾಗಿ ಲಾರಿಕ್ ಆಸಿಡ್) ಇದೆ. ಕೊಬ್ಬರಿ ಎಣ್ಣೆಯ ಹೊರತಾಗಿ ಬೇರೆ ಎಲ್ಲಾ ಸೇವನೆಗೆ ಯೋಗ್ಯ. ಕೊಬ್ಬುಗಳಲ್ಲೂ ಲಾಂಗ್ ಚೈನ್ ಫ್ಯಾಟ್ಟಿ ಆಸಿಡ್ ಇದೆ. ಈ ಮೀಡಿಯಂ ಚೈನ್ ಫ್ಯಾಟ್ಟಿ ಆಸಿಡ್ ನ ವಿಶೇಷತೆಯೆಂದರೆ, ಇದು ಎಷ್ಟೋ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ಜೀವಕೋಶದ ಒಳಗೆ ಪ್ರವೇಶಿಸಿ ಅದನ್ನು ನಾಶಪಡಿಸುತ್ತದೆ. ಮಗು ಜನಿಸಿದ ನಂತರ ಮೊದಲ ಒಂದೆರಡು ತಿಂಗಳ ಕಾಲ ದೇಹದಲ್ಲಿ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಪ್ರತಿರೋಧಕ ಶಕ್ತಿ ಬೆಳೆದಿರುವುದಿಲ್ಲ. ಹಾಗಾಗಿ ದೇವರು ಎದೆಹಾಲಿನಲ್ಲಿ ಈ ಮೀಡಿಯಂ ಚೈನ್ ಫ್ಯಾಟ್ಟಿ ಆಸಿಡ್ ಗಳನ್ನು ಇಟ್ಟಿದ್ದಾನೆ. ಇದು ಕೊಬ್ಬರಿ ಎಣ್ಣೆಯಲ್ಲಿ ಕೂಡಾ ಇದೆ. ಹಾಗಾಗಿಯೇ ಇದರ ಸೇವನೆಯಿಂದ ನಮ್ಮ ದೇಹದಲ್ಲಿ ವೈರಸ್ ಅಥವಾ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಾಗುತ್ತದೆ.

ಇಷ್ಟೇ ಅಲ್ಲ; ದೇಹಕ್ಕೆ ವಿಶೇಷವಾಗಿ ಮೆದುಳಿಗೆ ಶಕ್ತಿ ನೀಡುವ ಕೆಲಸವನ್ನು ಕೊಬ್ಬರಿ ಎಣ್ಣೆ ಮಾಡುತ್ತದೆ. ಕೊಬ್ಬರಿ ಎಣ್ಣೆಯ (ವಿಶೇಷವಾಗಿ ವರ್ಜಿನ್ ಕೊಬ್ಬರಿ ಎಣ್ಣೆಯ) ನಿಯಮಿತ ಸೇವನೆಯಿಂದ ದೇಹ ಕಂಪಿಸುವ ಪಾರ್ಕಿನ್ಸನ್ ಖಾಯಿಲೆ ಹತೋಟಿಗೆ ಬರುತ್ತದೆ ಎಂದು ಆಧುನಿಕ ಸಂಶೋಧನೆಗಳು ಹೇಳುತ್ತವೆ. ಚರ್ಮದ ಮೃದುತ್ವ ಹೆಚ್ಚಿ ಸೌಂದರ್ಯ ವೃದ್ಧಿಸಲು ಕೂಡಾ ಕೊಬ್ಬರಿ ಎಣ್ಣೆ ಒಳ್ಳೆಯದು. ಬೇರೆ ಎಲ್ಲಾ ಎಣ್ಣೆಗಳಿಗೆ ಹೋಲಿಸಿದರೆ ತಂಪು ಗುಣವನ್ನು ಹೊಂದಿರುವ ಕೊಬ್ಬರಿ ಎಣ್ಣೆಯು ಬೇಸಿಗೆಯಲ್ಲಿ ಮತ್ತು ಉಷ್ಣ ಪ್ರಕೃತಿಯವರಿಗೆ ಹೆಚ್ಚು ಸೂಕ್ತವಾದದ್ದು.  ಆಚಾರ್ಯ ಚರಕರು ಹೇಳುವಂತೆ ಕೊಬ್ಬರಿ ಎಣ್ಣೆ ದೇಹದ ಬಲವೃದ್ಧಿಗೆ ವಿಶೇಷವಾಗಿ ಮಾಂಸಖಂಡಗಳು ಬಲಪಡಿಸಲು ಸಹಕಾರಿ.

ಅನವಶ್ಯಕವಾಗಿ ಹೆದರಿ ಔಷಧರೂಪಿ ಆಹಾರವನ್ನು ಮಿಸ್ ಮಾಡಿಕೊಳ್ಳುವುದು ಬೇಡ:

ಬೇರೆ ಯಾವುದೇ ರೀತಿ ಯ ಕೊಬ್ಬನ್ನು ಸೇವಿಸದೇ ಇರುವವರು ದಿನಕ್ಕೆ 100 ಮಿಲೀ ಕೊಬ್ಬರಿ ಎಣ್ಣೆಯ ಸೇವನೆ ಮಾಡಬಹುದು. ಕೊಬ್ಬರಿ ಎಣ್ಣೆಯ ಕುದಿಯುವ ಬಿಂದು ಹೆಚ್ಚಿರುವ ಕಾರಣ ಕರಿಯಲು ಕೂಡಾ ಕೊಬ್ಬರಿ ಎಣ್ಣೆ ಸೂಕ್ತವಾದದ್ದು. ಹಾಗೆಂದು ಪದೇ ಪದೇ ಕರಿದು ಸೇವಿಸುವುದು ಆರೋಗ್ಯಕ್ಕೆ ಹಿತವಲ್ಲ. ಆದರೆ ಕರಿಯುವಾಗಲೆಲ್ಲಾ ಕೊಬ್ಬರಿ ಎಣ್ಣೆಯನ್ನೇ ಬಳಸುವುದು ಒಳ್ಳೆಯದು. ಕೆಲವರಿಗೆ ಕೊಬ್ಬರಿ ಎಣ್ಣೆಯ ವಾಸನೆ ಇಷ್ಟವಾಗುವುದಿಲ್ಲ. ಆದರೆ ಕೆಲದಿನ ಬಳಸಿದರೆ, ಆಮೇಲೆ ಅದು ವಾಸನೆ ಅನ್ನಿಸುವ ಬದಲು ಪರಿಮಳವೆನ್ನಿಸಲು ಪ್ರಾರಂಭವಾಗುತ್ತದೆ. ಒಂದು ವೇಳೆ ಅದು ಸಾಧ್ಯವೇ ಇಲ್ಲ ಎನ್ನಿಸಿದರೆ ದಿನಕ್ಕೆ ನಾಲ್ಕೈದು ಚಮಚ ವರ್ಜಿನ್ ಕೊಬ್ಬರಿ ಎಣ್ಣೆಯನ್ನು ಔಷಧಿಯ ರೂಪದಲ್ಲಿ ಹಾಗೇ ಸೇವಿಸಬಹುದು.

ಚೆನ್ನಾಗಿ ಒಣಗಿದ ಕೊಬ್ಬರಿಗಳನ್ನು ಗಾಣಗಳಲ್ಲಿ ನಿಮ್ಮ ಕಣ್ಣೆದುರೇ ಎಣ್ಣೆ ಮಾಡಿಸಿಕೊಂಡು ಸೇವಿಸಬೇಕೇ ಹೊರತು ಅಂಗಡಿಗಳಲ್ಲಿ ಸಿಗುವ ಕೊಬ್ಬರಿ ಎಣ್ಣೆಯನ್ನಲ್ಲ. ಒಂದು ವೇಳೆ ಅದು ಸಾಧ್ಯವಾಗದೇ ಹೋದರೆ ತೆಂಗಿನಕಾಯಿಯ ಹಾಲಿನಿಂದ ತಾಪಮಾನ ಹೆಚ್ಚಾಗದ ರೀತಿಯಲ್ಲಿ ತಯಾರಿಸಿದ ವರ್ಜಿನ್ ಕೊಬ್ಬರಿ ಎಣ್ಣೆಯನ್ನು ಸೇವಿಸುವುದು ಅತಿ ಸೂಕ್ತವಾದದ್ದು. ಏಕೆಂದರೆ ತಯಾರಿಕೆಯ ವಿಧಾನದಲ್ಲಿ ವ್ಯತ್ಯಾಸವಿರುವ ಕಾರಣ ಸಾಧಾರಣ ಕೊಬ್ಬರಿ ಎಣ್ಣೆಗೆ ಹೋಲಿಸಿದರೆ  ಇದು ಹೆಚ್ಚು ಆರೋಗ್ಯವರ್ಧಕ. ಕೊನೆಯಲ್ಲಿ ಎಲ್ಲರಿಗೂ ಇರುವ ಪ್ರಶ್ನೆಯೊಂದೇ. ಕೊಬ್ಬರಿ ಎಣ್ಣೆಯಿಂದ ಹೃದಯಕ್ಕೆ ತೊಂದರೆಯಾಗುವುದಿಲ್ಲವೇ? ಆದರೆ ಅದಕ್ಕೆ ಯಾವುದೇ ಪುರಾವೆಯಿಲ್ಲ. ಅನವಶ್ಯಕವಾಗಿ ಹೆದರಿ ಔಷಧರೂಪಿ ಆಹಾರವನ್ನು ಮಿಸ್ ಮಾಡಿಕೊಳ್ಳುವುದು ಬೇಡ.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.com; nisargamane6@gmail.com
http://nisargamane.com
Share this: