Vydyaloka

ಕಾಳುಮೆಣಸು – ವೈರಸ್ ಹಾವಳಿಯಿಂದ ತಲೆಕೆಡಿಸಿಕೊಂಡಿರುವ ನಮಗೆ ಅತ್ಯಂತ ಅವಶ್ಯಕ

ಕಾಳುಮೆಣಸು ಇಂದು ವೈರಸ್ ಹಾವಳಿಯಿಂದ ತಲೆಕೆಡಿಸಿಕೊಂಡಿರುವ ನಮಗೆ ಅತ್ಯಂತ ಅವಶ್ಯಕವಾಗಿದೆ. ಹಿಂದೆಲ್ಲಾ ಕರಾವಳಿ ಮತ್ತು ಮಲೆನಾಡಿನ ಪ್ರತಿ ಮನೆಯಲ್ಲೂ ಪ್ರತಿನಿತ್ಯವೂ ಕಷಾಯ ಕುಡಿಯುವ ರೂಢಿಯಿತ್ತು.

ನೂರಾರು ವರ್ಷಗಳ ಹಿಂದೆ ಅರಬ್ ಮತ್ತು ಐರೋಪ್ಯ ದೇಶಗಳಲ್ಲಿ ಕಾಳುಮೆಣಸನ್ನು ಕೊಳ್ಳುವ ಶಕ್ತಿ ಅತಿ ಶ್ರೀಮಂತರಿಗೆ ಮಾತ್ರವೇ ಇತ್ತು. ಏಕೆಂದರೆ ಆಗ ಅಲ್ಲಿ ಅದಕ್ಕಿದ್ದ ದುಬಾರಿ ಬೆಲೆ. ಹಾಗಾಗಿಯೇ ಅವರು ಅದಕ್ಕೆ ಕಪ್ಪು ಬಂಗಾರ ಎಂದರು. ಆದರೆ ಇದರ ಗುಣಗಳನ್ನು ನೋಡಿದರೆ ನಾವೂ ಇದಕ್ಕೆ ಬಂಗಾರವೆಂದೇ ಕರೆಯಬಹುದು. ಇಂದು ವೈರಸ್ ಹಾವಳಿಯಿಂದ ತಲೆಕೆಡಿಸಿಕೊಂಡಿರುವ ನಮಗೆ ಕಾಳುಮೆಣಸು ಅತ್ಯಂತ ಅವಶ್ಯಕವಾಗಿದೆ.

ಇದಕ್ಕೆ ವೈರಸ್ ನಿರೋಧಕ ಗುಣವಿರುವುದು ಇತ್ತೀಚಿನ ಸಂಶೋಧನೆಗಳಿಂದ ತಿಳಿದುಬಂದಿದೆ. ಆಯುರ್ವೇದದ ಗ್ರಂಥಗಳಲ್ಲಿ ಕೂಡಾ ಇದಕ್ಕೆ ಅದೇ ರೀತಿಯ ವಿವರಣೆ ಸಿಗುತ್ತದೆ. “ಶ್ವಾಸ ಶೂಲ ಕ್ರಿಮೀನ್ ಹರೇತ್” ಎಂದಿದ್ದಾರೆ. ಅಂದರೆ, ಉಸಿರಾಟದ ಸಮಸ್ಯೆ (ಅಸ್ತಮಾ ಇತ್ಯಾದಿ), ನೋವು ಮತ್ತು ಕ್ರಿಮಿಗಳನ್ನು ನಾಶಪಡಿಸುತ್ತದೆ ಎಂದರ್ಥ. ಇಲ್ಲಿ ಕ್ರಿಮಿಗಳು ಎಂದರೆ ಹೊಟ್ಟೆಯಲ್ಲಿರುವ ಕ್ರಿಮಿಗಳು ಎಂಬುದಕ್ಕಿಂತ ಹೆಚ್ಚಾಗಿ ಸೂಕ್ಷ್ಮಾಣು ಜೀವಿಗಳು ಎಂದೇ ಅರ್ಥ. ಇದೇ ಕಾರಣಕ್ಕಾಗಿಯೇ ಆಯುಷ್ ಮಂತ್ರಾಲಯವು ’ಆಯುಷ್ ಕ್ವಾಥ ಚೂರ್ಣ’ದಲ್ಲಿ ಇದನ್ನು ಬಳಸಿರುವುದು.

1. ಹಿಂದೆಲ್ಲಾ ಕರಾವಳಿ ಮತ್ತು ಮಲೆನಾಡಿನ ಪ್ರತಿ ಮನೆಯಲ್ಲೂ ಪ್ರತಿನಿತ್ಯವೂ ಕಷಾಯ ಕುಡಿಯುವ ರೂಢಿಯಿತ್ತು. ಕಷಾಯ ಪುಡಿಯಲ್ಲಿ ಕಾಳುಮೆಣಸು ಅವಿಭಾಜ್ಯ ಅಂಗವಾಗಿತ್ತು. ಹಾಗಾಗಿಯೇ ಇಂದಿಗೂ ಹಳ್ಳಿಗಳಲ್ಲಿ ಕೊರೋನಾ ತನ್ನ ಪ್ರತಾಪವನ್ನು ತೋರಿಸಿಲಾಗಲಿಲ್ಲ. ಇದಕ್ಕೆ ಜ್ವರವನ್ನು ಕಡಿಮೆ ಮಾಡುವ ಗುಣವಿದೆ. ಬೆವರು ತರಿಸುವ ಗುಣವಿದೆ. ಅದು ಟೈಫಾಯ್ಡ್, ಮಲೇರಿಯಾ, ಡೆಂಗ್ಯೂ, ಕೋವಿಡ್ ಯಾವುದರಿಂದ ಬಂದ ಜ್ವರವೇ ಆಗಲಿ, ಉಳಿದ ಔಷಧಗಳ ಜೊತೆಗೆ ಕಾಳುಮೆಣಸಿನ ಕಷಾಯವನ್ನು ಕುಡಿಯಬೇಕು. ಅದರಿಂದ ತುಂಬಾ ಲಾಭವಾಗುತ್ತದೆ.

2. ಇದಕ್ಕೆ ಜೀರ್ಣಕ್ರಿಯೆಯನ್ನು ಸುಧಾರಿಸಿ ಅಜೀರ್ಣದಿಂದಾಗುವ ಸಮಸ್ಯೆಗಳನ್ನು ನಿವಾರಿಸುವ ಗುಣವಿದೆ. ವಿಶೇಷವಾಗಿ ತುಪ್ಪದ ಸೇವನೆಯಿಂದಾದ ಅಜೀರ್ಣದಲ್ಲಿ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ. ಹೊಟ್ಟೆಯುಬ್ಬರ, ಊಟ ಮಾಡಿ ಎಷ್ಟು ಹೊತ್ತಾದರೂ ಆಹಾರ ಜೀರ್ಣವಾಗದೇ ಹೊಟ್ಟೆಯಲ್ಲೇ ಇದ್ದಂತೆ ಅನ್ನಿಸುತ್ತಿದ್ದರೆ ಮತ್ತು ಐಬಿಎಸ್ ನ ಸಮಸ್ಯೆಗಳಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹಾಗಾಗಿ ಮಳೆಗಾಲದಲ್ಲಿ ಇದರ ಸೇವನೆಯನ್ನು ಹೆಚ್ಚಾಗಿ ಮಾಡಲೇಬೇಕು.

3. ಕಫ ಮತ್ತು ವಾತ ದೋಷಗಳಿಂದಾಗುವ ಸಮಸ್ಯೆಗಳನ್ನು ನಿವಾರಿಸುತ್ತದೆ. ಅತ್ಯುತ್ತಮ ನೋವು ನಿವಾರಕವಾಗಿರುವುದರಿಂದ ಸಂಧಿವಾತ, ಆಮವಾತ, ಗೌಟ್ ನಂತಹ ಸಮಸ್ಯೆಗಳಲ್ಲಿ ತುಂಬಾ ಸಹಕಾರಿ. ಅದರಲ್ಲೂ ವಿಶೇಷವಾಗಿ ಪ್ರಾರಂಭಾವಸ್ಥೆಯಲ್ಲಿರುವ ಆಮವಾತ (ರುಮಟಾಯ್ಡ್ ಆರ್ಥ್ರೈಟಿಸ್) ನಂತಹ ಸಮಸ್ಯೆಗಳಲ್ಲಿ ಬಾವು, ಜ್ವರ, ಹಸಿವಾಗದೇ ಇರುವುದು ಆಗುತ್ತಿದ್ದಾಗ ಇದನ್ನು ಶುಂಠಿ ಮತ್ತು ಹಿಪ್ಪಲಿ ಪುಡಿಗಳ ಜೊತೆ ಸೇವಿಸಿದರೆ ಅರ್ಧದಷ್ಟು ಸಮಸ್ಯೆ ಕಡಿಮೆಯಾಗಿಬಿಡುತ್ತದೆ.

4. ಕಾಳುಮೆಣಸು, ಶುಂಠಿ ಮತ್ತು ಹಿಪ್ಪಲಿ ಪುಡಿ ಇವು ಮೂರನ್ನು ಸಮಪ್ರಮಾಣದಲ್ಲಿ ಸೇರಿಸಿದಾಗ ಹಲವಾರು ಸಮಸ್ಯೆಗಳನ್ನು ನಿವಾರಿಸುವ ತಾಕತ್ತಿರುವ ’ತ್ರಿಕಟು ಚೂರ್ಣ’ವಾಗುತ್ತದೆ. ಹಿಂದೆ ನೋವಿನ ಮಾತ್ರೆಗಳಿಲ್ಲದ ಕಾಲದಲ್ಲಿ ಬಾಣಂತಿಯರಿಗೆ ನೋವು ನಿವಾರಕವಾಗಿ ಇದನ್ನೇ ಬಳಸುತ್ತಿದ್ದರು. ಇಂದಿಗೂ ಎಷ್ಟೋ ಹಳ್ಳಿಗಳಲ್ಲಿ ಬಾಣಂತಿಯರಿಗೆ ಹಲವು ದಿನಗಳ ಕಾಲ ಕಾಳುಮೆಣಸು ಹಾಕಿದ ವಿವಿಧ ಔಷಧಗಳನ್ನು ನೀಡುತ್ತಾರೆ. ಇದರಿಂದ ರಕ್ತಸ್ರಾವವೂ ಸರಿಯಾಗಿ ಆಗಿ ಗರ್ಭಾಶಯದ ಶುದ್ಧಿಯೂ ಆಗುತ್ತದೆ.

5. ದಿನಕ್ಕೆ ಎರಡರಿಂದ ನಾಲ್ಕು ರತ್ತಿ ಅಂದರೆ 250 ರಿಂದ 500 ಮಿಲಿಗ್ರಾಂನಷ್ಟು ಕಾಳುಮೆಣಸನ್ನು ಸೇವಿಸಬಹುದು ಎಂದು ಆಯುರ್ವೇದ ಗ್ರಂಥಗಳು ಹೇಳುತ್ತವೆ. ಜೇನುತುಪ್ಪ ಅಥವಾ ಬಿಸಿನೀರಿನ ಜೊತೆ, ಕಷಾಯದ ರೂಪದಲ್ಲಿ ಇದನ್ನು ಸೇವಿಸಬಹುದು. ಆದರೆ ಇದು ಪಿತ್ತದೋಷವನ್ನು ಹೆಚ್ಚಿಸುತ್ತದೆ. ಜೊತೆಗೆ ತುಂಬಾ ಉಷ್ಣ ಗುಣವನ್ನು ಹೊಂದಿದೆ. ಸೇವನೆ ಅತಿಯಾದರೆ ಹೊಟ್ಟೆನೋವು, ವಾಂತಿ, ಕಿಬ್ಬೊಟ್ಟೆ ಮತ್ತು ಮೂತ್ರದಲ್ಲಿ ಉರಿ, ಚರ್ಮವಿಕಾರಗಳು ಆಗಬಹುದು. ಹಾಗಾಗಿ ಪಿತ್ತ ಪ್ರಕೃತಿಯವರು, ಕೃಶದೇಹಿಗಳು, ಬೇಸಿಗೆಯಲ್ಲಿ, ಒಣ ಪ್ರದೇಶಗಳಲ್ಲಿ ಇದನ್ನು ಮಿತವಾಗಿಯೇ ಬಳಸಬೇಕು.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ, ಶಿರಸಿ, ಉ.ಕ.
ದೂ: 94487 29434/97314 60353
Email: drvhegde@yahoo.com; nisargamane6@gmail.com
http://nisargamane.com

Share this: