Vydyaloka

ಹಲ್ಲು ಮೂಡಲು ತಡವಾಗುವುದೇಕೆ?

ಹಲ್ಲು ಮೂಡಲು ತಡವಾಗುವುದೇಕೆ? ಹಲ್ಲು ಮೂಡುವ ಪ್ರಕ್ರಿಯೆ ಮಗುವಿನ ಬೆಳವಣಿಗೆಯ ಒಂದು ಪ್ರಾಮುಖ್ಯವಾದ ಹಂತವಾಗಿದ್ದು ಸಹಜವಾಗಿಯೇ ಎಲ್ಲಾ ಪೋಷಕರು ಸರಿಯಾದ ಸಮಯಕ್ಕೆ ಹಲ್ಲು ಮೂಡದಿದ್ದಲ್ಲಿ ಆತಂಕಕ್ಕೊಳಗಾಗುತ್ತಾರೆ. ಮಗುವಿನಿಂದ ಮಗುವಿಗೆ ಹಲ್ಲು ಮೂಡುವ ಸಮಯದಲ್ಲಿ ಒಂದಷ್ಟು ವ್ಯತ್ಯಾಸವಿರುತ್ತದೆ. ವರ್ಷವಾದರೂ ಹಲ್ಲು ಮೂಡದಿದ್ದಲ್ಲಿ ವೈದ್ಯರ ಭೇಟಿ ಅವಶ್ಯಕ. 

ಸಾಮಾನ್ಯವಾಗಿ ನವಜಾತ ಶಿಶುವಿನ ಬಾಯಿಯಲ್ಲಿ ಹಲ್ಲು ಇರುವುದಿಲ್ಲ. ಮಗು ಹುಟ್ಟಿದ 6ರಿಂದ 7ನೇ ತಿಂಗಳಿನಿಂದ ಮಗುವಿನ ಬಾಯಿಯಲ್ಲಿ ಹಾಲು ಹಲ್ಲು ಮೂಡಲು ಆರಂಭವಾಗುತ್ತದೆ. ಮೊದಲು ಕೆಳಗಿನ ದವಡೆಯ ಬಾಚಿ ಹಲ್ಲು, ಬಳಿಕ ಮೇಲಿನ ದವಡೆಯ ಬಾಚಿಹಲ್ಲು, ಕೋರೆಹಲ್ಲು ಮತ್ತು ಕೊನೆಗೆ ದವಡೆ ಹಲ್ಲುಗಳು ಮೂಡುತ್ತದೆ. ಸಾಮಾನ್ಯವಾಗಿ ಮೂರು ವರ್ಷದ ಹೊತ್ತಿಗೆ ಎಲ್ಲಾ ಹಾಲುಹಲ್ಲುಗಳು ಮಗುವಿನ ಬಾಯಿಯಲ್ಲಿ ಹುಟ್ಟಿರುತ್ತದೆ. ಹಾಲು ಹಲ್ಲುಗಳ ಒಟ್ಟು ಸಂಖ್ಯೆ ಇಪ್ಪತ್ತು. ಮಗುವಿನ ಒಸಡನ್ನು ಬೇಧಿಸಿ ಹಲ್ಲು ಮೂಡುವ ಪ್ರಕ್ರಿಯೆ ಮಗುವಿನ ಬೆಳವಣಿಗೆಯ ಒಂದು ಪ್ರಾಮುಖ್ಯವಾದ ಹಂತವಾಗಿದ್ದು ಸಹಜವಾಗಿಯೇ ಎಲ್ಲಾ ಪೋಷಕರು ಸರಿಯಾದ ಸಮಯಕ್ಕೆ ಹಲ್ಲು ಮೂಡದಿದ್ದಲ್ಲಿ ಆತಂಕಕ್ಕೊಳಗಾಗುತ್ತಾರೆ.

ವರ್ಷವಾದರೂ ಹಲ್ಲು ಮೂಡದಿದ್ದಲ್ಲಿ ವೈದ್ಯರ ಭೇಟಿ ಅವಶ್ಯಕ

ಮಗುವಿನಿಂದ ಮಗುವಿಗೆ ಹಲ್ಲು ಮೂಡುವ ಸಮಯದಲ್ಲಿ ಒಂದಷ್ಟು ವ್ಯತ್ಯಾಸವಿರುತ್ತದೆ. ನಿಗದಿತ ಸಮಯಕ್ಕಿಂತಲೂ 6 ತಿಂಗಳು ತಡವಾದಲ್ಲಿ ದಂತ ವೈದ್ಯರನ್ನು ಕಾಣತಕ್ಕದ್ದು. ಒಂದು ವರ್ಷವಾದರೂ ಹಲ್ಲು ಮೂಡದಿದ್ದಲ್ಲಿ ವೈದ್ಯರ ಭೇಟಿ ಅವಶ್ಯಕ. ಅನುವಂಶೀಯತೆ, ಕೌಟುಂಬಿಕ ಕಾರಣಗಳು, ಅಪೌಷ್ಟಿಕತೆ, ಕ್ಯಾಲ್ಸಿಯಂ ಕೊರತೆ, ವಿಟಮಿನ್ ಮತ್ತು ಖನಿಜಾಂಶಗಳ ಕೊರತೆ, ರಸದೂತಗಳ ಕೊರತೆ ಮುಂತಾದ ಕಾರಣಗಳಿಂದ ಹಲ್ಲು ಹುಟ್ಟಲು ತಡವಾಗಬಹುದು. ಬುದ್ಧಿಮಾಂದ್ಯ ಮಕ್ಕಳು, ಡೌನ್ ಸಿಂಡ್ರೋಮ್, ಅವಧಿಗೆ ಮುನ್ನ ಜನಿಸಿದ ಮಕ್ಕಳು, ಹುಟ್ಟಿನ ಸಮಯದ ಸಮಸ್ಯೆಗಳಿಂದಲೂ ಹಾಲು ಹಲ್ಲು ಹುಟ್ಟಲು ತಡವಾಗಬುಹುದು.

ಮಕ್ಕಳಿಗೆ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ಖನಿಜಾಂಶಗಳು ದೊರಕುವಂತೆ ಮಾಡಿದಲ್ಲಿ, ಪ್ರೋಟಿನ್, ವಿಟಮಿನ್ ಇರುವ ಪೌಷ್ಟಿಕ ಆಹಾರ ದೊರತಲ್ಲಿ ಸಕಾಲದಲ್ಲಿ ಹಲ್ಲು ಮೂಡಬಹುದು. ರಸದೂತಗಳ ತೊಂದರೆ, ಮೆದುಳಿನ ಕಾಯಿಲೆ ಇದ್ದಲ್ಲಿ ಸೂಕ್ತ ವೈದ್ಯರ ಸಲಹೆ ಅಗತ್ಯ. ಒಟ್ಟಿನಲ್ಲಿ ಮೂರು ವರ್ಷಕ್ಕೆ ಎಲ್ಲಾ ಹಾಲುಹಲ್ಲುಗಳು ಹುಟ್ಟಿ 12 ವರ್ಷದ ಹೊತ್ತಿಗೆ ಎಲ್ಲಾ ಹಾಲುಹಲ್ಲುಗಳು ಬಿದ್ದುಹೊಗಿ ಶಾಶ್ವತ ಹಲ್ಲುಗಳು ಹುಟ್ಟುತ್ತದೆ. ಆಡು ಭಾಷೆಯಲ್ಲಿ ಹೇಳುವುದಾದರೆ ಮಗುವಿಗೆ ಹತ್ತು ವರ್ಷವಾದಾಗ ಹತ್ತು ಹಾಲು ಹಲ್ಲುಗಳು ಬಿದ್ದುಹೋಗಿ ಹತ್ತು ಶಾಶ್ವತ ಹಲ್ಲುಗಳು ಬರದಿದ್ದಲ್ಲಿ ಅದನ್ನು ಅಸಹಜ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ.

ಡಾ|| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ
ಹೊಸಂಗಡಿ, ಮಂಜೇಶ್ವರ- 671 323
ದೂ.: 04998-273544, 235111  ಮೊ.: 98451 35787
www.surakshadental.com
email: drmuraleemohan@gmail.com

 

 

Share this: