Vydyaloka

ಗೋಡಂಬಿಯ ಆರೋಗ್ಯ ಪ್ರಯೋಜನಗಳು

ಗೋಡಂಬಿಯಲ್ಲಿ ವಿಟಮಿನ್ ಬಿ2, ಬಿ3, ಸಿ, ವಿಟಮಿನ್ ಇ, ತಾಮ್ರ ಮತ್ತು ಪ್ಯಾಂಟೊಥೆನಿಕ್ ಆಸಿಡ್ ಗಳು ಹೇರಳವಾಗಿವೆ. ಹಾಗಾಗಿ ಗೋಡಂಬಿಯ ಆರೋಗ್ಯ ಪ್ರಯೋಜನಗಳು ಹಲವಾರು  

ಯಾರಿಗಾದರೂ ದುಬಾರಿ ಕೊಡುಗೆಯನ್ನು ಕೊಡಬೇಕು ಅನ್ನಿಸಿದಾಗ ದುಬಾರಿ ಚಾಕಲೇಟಿನ ಬದಲು ಗೋಡಂಬಿಯನ್ನು ಕೊಡುವುದು ಹೆಚ್ಚು ಸೂಕ್ತ. ಅದು ಏಕೆ ಎಂಬುದನ್ನು ಮತ್ತು ಗೋಡಂಬಿಯ ಬಗ್ಗೆ ಇರುವ ಕೆಲವು ತಪ್ಪು ಕಲ್ಪನೆಗಳ ಬಗ್ಗೆ ಕೂಡ ಇಂದು ತಿಳಿದುಕೊಳ್ಳೋಣ. ಬಹುತೇಕ ಎಲ್ಲರಿಗೂ ಇಷ್ಟವಾಗುವ ಗೋಡಂಬಿಯು ನಮ್ಮ ಆರೋಗ್ಯವನ್ನು ಹೆಚ್ಚಿಸುವ, ಮುಪ್ಪನ್ನು ದೂರ ಮಾಡುವ ಹಲವು ರೀತಿಯ ಪೋಷಕಾಂಶಗಳನ್ನು ಒದಗಿಸುವ ಒಂದು ಸೂಪರ್ ಫುಡ್. ಗೋಡಂಬಿಯಲ್ಲಿ ವಿಟಮಿನ್ ಬಿ2, ಬಿ3, ಸಿ, ವಿಟಮಿನ್ ಇ, ತಾಮ್ರ ಮತ್ತು ಪ್ಯಾಂಟೊಥೆನಿಕ್ ಆಸಿಡ್ ಗಳು ಹೇರಳವಾಗಿವೆ.

ಎರಡರಿಂದ ಮೂರು ಗೋಡಂಬಿಯನ್ನು ಒಂದು ಚಮಚದಷ್ಟು ತುಪ್ಪದಲ್ಲಿ ಸ್ವಲ್ಪವೇ ಹುರಿದು ಪುಡಿ ಮಾಡಿ ಒಂದು ಚಮಚ ಶುದ್ಧ ಜೇನುತುಪ್ಪದಲ್ಲಿ ಕಲಸಿ ದಿನಕ್ಕೊಮ್ಮೆ ಊಟ ಮಾಡುವ ಕನಿಷ್ಠ ಅರ್ಧ ಗಂಟೆ ಮೊದಲು ಸೇವಿಸಿ ಒಂದು ಲೋಟ ಹಾಲು ಕುಡಿದರೆ ಶಾಲೆ ಅಥವಾ ಕಾಲೇಜಿಗೆ ಹೋಗುವ ಮಕ್ಕಳ ನೆನಪಿನ ಶಕ್ತಿ ಹೆಚ್ಚಲು ತುಂಬಾ ಸಹಾಯವಾಗುತ್ತದೆ. ಹೀಗೆ ನಿಯಮಿತವಾಗಿ ಸೇವನೆ ಮಾಡುತ್ತಾ ಬರುವುದರಿಂದ ಯಾವುದೇ ವಯಸ್ಸಿನವರ ನೆನಪಿನ ಶಕ್ತಿ, ಗ್ರಹಣ ಶಕ್ತಿ ಹೆಚ್ಚಲು ಮತ್ತು ಬುದ್ಧಿ ಚುರುಕಾಗಲು ಸಹಾಯವಾಗುತ್ತದೆ.

ಒಂದು ಚಮಚ ಕರಿ ಎಳ್ಳಿಗೆ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿ ಅದಕ್ಕೆ ಸ್ವಲ್ಪ ಬೆಲ್ಲ ಮತ್ತು ಐದಾರು ಗೋಡಂಬಿಯ ಪುಡಿಯನ್ನು ಹಾಕಿ ನಿತ್ಯವೂ ಸೇವಿಸಿದರೆ ಮೂಳೆಯ ಸವೆತ, ಮೂಳೆಯ ಸಾಂಧ್ರತೆಯಲ್ಲಿ ಕೊರತೆಯಾಗುವುದು ತಪ್ಪುತ್ತದೆ. 50 ಗ್ರಾಂ ಗೋಡಂಬಿ ಮತ್ತು ಸುಮಾರು 150 ಗ್ರಾಂ ಉತ್ತಮ ಗುಣಮಟ್ಟದ ಮೆತ್ತನೆಯ ಖರ್ಜೂರವನ್ನು ಸೇರಿಸಿ, ರುಬ್ಬಿ, 10 ರಿಂದ 15 ಗ್ರಾಂ ನ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಟ್ಟುಕೊಂಡು ದಿನಕ್ಕೊಮ್ಮೆ ಒಂದು ಉಂಡೆಯನ್ನು ತಿಂದು ಬೆಚ್ಚನೆಯ ಹಾಲು ಸೇವಿಸಿದರೆ ಬಹಳ ಬೇಗ ತೂಕ ಹೆಚ್ಚಲು ಮತ್ತು ಆರೋಗ್ಯ ಸುಧಾರಿಸಲು ಸಾಧ್ಯವಾಗುತ್ತದೆ.

ಲೈಂಗಿಕ ನಿರಾಸಕ್ತಿ ಮತ್ತು ನಿಶ್ಶಕ್ತಿಯಲ್ಲಿ ಗೋಡಂಬಿ ತುಂಬಾ ಪ್ರಯೋಜಕ. ಒಂದು ಕಪ್ ಹಾಲಿಗೆ ಐದಾರು ಗೋಡಂಬಿಗಳನ್ನು ಹಾಕಿ ರುಬ್ಬಿ ಒಂದು ಚಮಚ ಜೇನುತುಪ್ಪ ಹಾಕಿ ದಿನಕ್ಕೊಮ್ಮೆ ಸೇವಿಸಿದರೆ ಲೈಂಗಿಕ ಶಕ್ತಿ ಬೇಗನೆ ವೃದ್ಧಿಸಲು ಸಾಧ್ಯವಾಗುತ್ತದೆ. ಹಲಸಿನ ಬೀಜವನ್ನು ಬೇಯಿಸಿ ರುಬ್ಬಿ ಆ ಪೇಸ್ಟ್ ಗೆ ಜೋನೀಬೆಲ್ಲ ಹಾಕಿ ಬಾಣಲೆಯಲ್ಲಿ ಕಾಯಿಸಿ, ತುಪ್ಪ ಮತ್ತು ಗೋಡಂಬಿಗಳನ್ನು ಹಾಕಿ ಸೇವಿಸಿದರೆ ತಿನ್ನಲೂ ರುಚಿ; ಜೊತೆಗೆ ಲೈಂಗಿಕ ಶಕ್ತಿ ಊಹಿಸಿಕೊಳ್ಳದ ರೀತಿಯಲ್ಲಿ ವೃದ್ಧಿಸುತ್ತದೆ. ಆದರೆ ಇದನ್ನು ಜೀರ್ಣಿಸಿಕೊಳ್ಳಲು ಜೀರ್ಣಶಕ್ತಿ ಚೆನ್ನಾಗಿರಬೇಕು. ಇಲ್ಲದೇ ಹೋದರೆ ಹೊಟ್ಟೆಯ ಉಬ್ಬರ, ಅಪಾನವಾಯುಗಳ ಸಮಸ್ಯೆ ಉಂಟಾಗುತ್ತವೆ.

ದೇಹದ ಶಕ್ತಿ ವೃದ್ಧಿಸಲು, ಚರ್ಮದ ಕಾಂತಿ ಹೆಚ್ಚಲು ಮತ್ತು  ನಿತ್ಯದ ಟಾನಿಕ್ ರೀತಿಯಲ್ಲಿ ಬಹುತೇಕ ಎಲ್ಲರೂ ಸೇವಿಸಬಹುದಾದ ಒಂದು ಅದ್ಭುತ ಮಿಶ್ರಣದ ಬಗ್ಗೆ ತಿಳಿದುಕೊಳ್ಳೋಣ. ಎರಡರಿಂದ ಮೂರು ಗೋಡಂಬಿ, ಆರೆಂಟು ಬಾದಾಮಿ ಮತ್ತು ಹತ್ತರಿಂದ ಹನ್ನೆರಡು ಒಣದ್ರಾಕ್ಷಿಯನ್ನು ಸಂಜೆಯ ಸಮಯದಲ್ಲಿ ಸೇವಿಸಿದರೆ ಜೀರ್ಣಶಕ್ತಿ, ದೇಹದ ಶಕ್ತಿ, ನೆನಪಿನ ಶಕ್ತಿ ಹೆಚ್ಚುತ್ತವೆ.

ಗೋಡಂಬಿಯು ಕ್ಯಾನ್ಸರ್ ನಿರೋಧಕವಾಗಿಯೂ ಕೆಲಸ ಮಾಡುತ್ತದೆ. ಗೋಡಂಬಿಯಲ್ಲಿರುವ ಪ್ರೊ ಆಂಥೋಸಾಯಿನೈಡಿನ್ಸ್ ಕ್ಯಾನ್ಸರ್ ಜೀವಕೋಶಗಳು ವಿಭಜನೆಯಾಗುವುದನ್ನು ಮತ್ತು ದೇಹದ ಬೇರೆ ಭಾಗಗಳಿಗೆ ಹರಡುವುದನ್ನು ತಪ್ಪಿಸುತ್ತದೆ. ಗೋಡಂಬಿಯಲ್ಲಿ ತಾಮ್ರದ ಅಂಶವು ಹೇರಳವಾಗಿರುವ ಕಾರಣ ಕೂದಲು ಕಪ್ಪಾಗಲು ತುಂಬಾ ಸಹಾಯಕ. ವಿಶೇಷವಾಗಿ ಬಾಲನೆರೆಯಲ್ಲಿ ಅಥವಾ ಬಹಳ ವೇಗವಾಗಿ ಕೂದಲು ಬೆಳ್ಳಗಾಗುತ್ತಿದ್ದರೆ ಗೋಡಂಬಿಯ ನಿಯಮಿತ ಸೇವನೆ ಅತ್ಯಂತ ಪ್ರಯೋಜಕ. ಕೂದಲಿನ ಬಣ್ಣದ ಬಗ್ಗೆ ಯಾರಿಗೆಲ್ಲ ಚಿಂತೆ ಇದೆಯೋ ಅವರೆಲ್ಲ ಗೋಡಂಬಿಯನ್ನು ಇಷ್ಟಪಡಲೇಬೇಕು.

ಇಷ್ಟೆಲ್ಲ ಪ್ರಯೋಜನಗಳಿದ್ದರೂ ತುಂಬಾ ಜನ ಗೋಡಂಬಿಯನ್ನು ಸೇವಿಸಲು ಹಿಂಜರಿಯುತ್ತಾರೆ. ಕಾರಣ ಅದು ತುಂಬಾ ಉಷ್ಣ ಎಂದು. ಆದರೆ ನಾವು ನಿತ್ಯವೂ ಸೇವಿಸುವ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಮುಂತಾದ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಗೋಡಂಬಿ ಉಷ್ಣ ಅಲ್ಲವೇ ಅಲ್ಲ. ಆದರೆ ಒಮ್ಮೆಲೇ 15 – 20 ಗೋಡಂಬಿಗಳನ್ನು ಸೇವಿಸಬಾರದು. ನಿಧಾನವಾಗಿ ಗೋಡಂಬಿಯ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗಬೇಕು. ಸಾಮಾನ್ಯವಾಗಿ ನಿತ್ಯವೂ ಐದರಿಂದ ಆರು ಗೋಡಂಬಿಗಳನ್ನು ಸೇವಿಸಬಹುದು.

ಗೋಡಂಬಿಯಿಂದ ಕೊಲೆಸ್ಟ್ರಾಲ್ ಹೆಚ್ಚಾಗಿ ಹೃದಯದ ಸಮಸ್ಯೆ ಬರುತ್ತದೆ ಎಂಬುದು ದೊಡ್ಡ ತಪ್ಪು ಕಲ್ಪನೆ. ಗೋಡಂಬಿಯಲ್ಲಿರುವ ಫ್ಯಾಟಿ ಆಸಿಡ್ ಗಳು ಕೆಟ್ಟ ಕೊಲೆಸ್ಟೆರಾಲ್ ಅನ್ನು ಹೆಚ್ಚಿಸುವುದಿಲ್ಲ. ಹೃದಯ ಸ್ನೇಹಿಯಾದ ಎಚ್ ಡಿ ಎಲ್ ಅನ್ನು ಹೆಚ್ಚಿಸುತ್ತದೆ. ತನ್ಮೂಲಕ ಗೋಡಂಬಿಯು ಹೃದಯದ ಆರೋಗ್ಯಕ್ಕೆ ಅನುಕೂಲಕರವೇ ಆಗಿದೆ.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
Share this: