Vydyaloka

ಕೊರೊನಾ ಹಿನ್ನೆಲೆಯಲ್ಲಿ ಸ್ತನ್ಯಪಾನ

ಕೊರೊನಾ ಹಿನ್ನೆಲೆಯಲ್ಲಿ ಸ್ತನ್ಯಪಾನ ಕುರಿತು ಹಲವಾರು ಸಂದೇಹಗಳು ತಾಯಂದಿರನ್ನು ಕಾಡುತ್ತಿರುತ್ತವೆ.ಕೊರೊನಾ ಸೋಂಕಿನ ನೆಪವೊಡ್ಡಿ ಮಗುವನ್ನು ಎದೆಹಾಲಿನಿಂದ ವಂಚಿತವಾಗಿಸಬಾರದು. ಇದುವರೆಗೆ ಲಭ್ಯವಿರುವ ಮಾಹಿತಿಗಳ ಪ್ರಕಾರ ಎದೆಹಾಲಿನ ಮುಖಾಂತರ ಕೊರೊನಾ ವೈರಾಣು ಮಗುವಿಗೆ ರವಾನೆಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ತಿಳಿದುಬಂದಿದೆ.

ಪ್ರತಿ ವರ್ಷದ ಆಗಸ್ಟ್ ಮೊದಲ ವಾರವನ್ನು ‘ವಿಶ್ವ ಸ್ತನ್ಯಪಾನ ಸಪ್ತಾಹ‘ ವೆಂದು ಘೋಷಿಸಲಾಗಿದೆ. ಶಿಶುವಿಗೆ ಸ್ತನ್ಯಪಾನವನ್ನು ಉತ್ತೇಜಿಸುವುದು ಮತ್ತು ಜನಸಾಮಾನ್ಯರಿಗೆ ಸ್ತನ್ಯಪಾನದ ಮಹತ್ವದ ಕುರಿತು ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶ. ‘ಆರೋಗ್ಯಕರ ಭೂಗ್ರಹಕ್ಕಾಗಿ ಸ್ತನ್ಯಪಾನ ಬೆಂಬಲಿಸಿ’ ಎಂಬುದು ಈ ಬಾರಿಯ ಘೋಷವಾಕ್ಯ. ಕೊರೊನಾ ಸೋಂಕು ವಿಶ್ವದಾದ್ಯಂತ ವ್ಯಾಪಿಸಿರುವ ಪ್ರಸಕ್ತ ಸಂದರ್ಭದಲ್ಲಿ ಸ್ತನ್ಯಪಾನದ ಕುರಿತು ಹಲವಾರು ಸಂದೇಹಗಳು ತಾಯಂದಿರನ್ನು ಕಾಡುತ್ತಿರುತ್ತವೆ.

ಸ್ತನ್ಯಪಾನದ ಮಹತ್ವವೇನು?

ಸ್ತನ್ಯಪಾನದಿಂದ ಶಿಶುವಿಗೂ ತಾಯಿಗೂ ಹಲವಾರು ಪ್ರಯೋಜನಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ-

1. ಪಿಷ್ಟ, ಪ್ರೊಟೀನ್, ಮೇದಸ್ಸು ಮತ್ತು ಸೂಕ್ಷ್ಮ ಪೌಷ್ಟಿಕಾಂಶಗಳಿಂದ ಸಮೃದ್ಧವಾದ ಎದೆಹಾಲು ಮಗುವಿನ ಮಾನಸಿಕ ಮತ್ತು ಶಾರೀರಿಕ ಆರೋಗ್ಯದ ದೃಷ್ಟಿಯಿಂದ ಪರಿಪೂರ್ಣ ಆಹಾರ.

2. ಎದೆಹಾಲಿನಲ್ಲಿ ಅಡಕಗೊಂಡಿರುವ ಇಮ್ಯುನೊಗ್ಲಾಬ್ಯುಲಿನ್, ಲ್ಯಾಕ್ಟೊಫೆರಿನ್ ಮುಂತಾದ ನೈಸರ್ಗಿಕ ರೋಗ‌ ಪ್ರತಿಬಂಧಕಗಳು‌ ಭೇದಿ, ನ್ಯುಮೋನಿಯಾ ಮುಂತಾದ ತೀವ್ರ ಸ್ವರೂಪದ ಸೋಂಕುಗಳಿಂದ ಮಗುವನ್ನು ರಕ್ಷಿಸುತ್ತವೆ. ಹಾಗಾಗಿಯೇ ‘ಸ್ತನ್ಯಪಾನ ಅಮೃತ ಸಮಾನ’ ಎನ್ನಲಾಗುತ್ತದೆ.

3. ಅಸ್ತಮಾ, ಮಧುಮೇಹ, ಹೃದ್ರೋಗ ಮುಂತಾದ ಅಸಾಂಕ್ರಾಮಿಕ ಕಾಯಿಲೆಗಳ ವಿರುದ್ಧವೂ ಮಗುವಿಗೆ ರಕ್ಷಣೆ ನೀಡುತ್ತದೆ.

4. ತಾಯಿ ಮಗುವಿನ ನಡುವಿನ ಬಾಂಧವ್ಯವನ್ನು ವೃದ್ಧಿಸುತ್ತದೆ.

5. ಸ್ತನ‌ ಮತ್ತು ಅಂಡಾಶಯದ ಕ್ಯಾನ್ಸರ್ ಹಾಗೂ ಎರಡನೇ ವಿಧದ ಮಧುಮೇಹಗಳ ವಿರುದ್ಧ ತಾಯಿಗೆ ರಕ್ಷಣೆ‌ ನೀಡುತ್ತದೆ.

ಕೊರೊನಾ ಸೋಂಕಿತ ತಾಯಿ ಹಾಲೂಡಿಸಬಹುದೇ?

ಈ ಪ್ರಶ್ನೆ ಸಾಮಾನ್ಯವಾಗಿ ಎಲ್ಲಾ ತಾಯಂದಿರನ್ನೂ ಕಾಡುತ್ತಿರುತ್ತದೆ. ಇದುವರೆಗೆ ಲಭ್ಯವಿರುವ ಮಾಹಿತಿಗಳ ಪ್ರಕಾರ ಎದೆಹಾಲಿನ ಮುಖಾಂತರ ಕೊರೊನಾ ವೈರಾಣು ಮಗುವಿಗೆ ರವಾನೆಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ತಿಳಿದುಬಂದಿದೆ. ಎದೆಹಾಲಿನಲ್ಲಿ ಕೊರೊನಾ ವಿರುದ್ಧದ ಪ್ರತಿಕಾಯಗಳು ಪತ್ತೆಯಾಗಿವೆಯೇ ಹೊರತು ಸೋಂಕಿಗೆ ಕಾರಣವಾಗಬಲ್ಲ ವೈರಾಣು ಪತ್ತೆಯಾಗಿಲ್ಲ. ಹಾಗೊಮ್ಮೆ ಸೋಂಕಿನ ಸಂಭವನೀಯತೆಯಿದ್ದರೂ ಸಹ ಮಗುವಿನ ಆರೋಗ್ಯವನ್ನು ಸಂರಕ್ಷಿಸಿ, ಶಿಶು ಮರಣವನ್ನು ತಗ್ಗಿಸುವ ಸಾಮರ್ಥ್ಯವಿರುವ ಎದೆಹಾಲನ್ನು ಮಗುವಿಗೆ ನೀಡಲೇಬೇಕಾಗುತ್ತದೆ.‌ ಹಾಗೊಂದು ವೇಳೆ ಮಗುವಿಗೆ ಸೋಂಕು ತಗುಲಿದರೂ ಅದು ತೀರಾ ಸೌಮ್ಯ ಸ್ವರೂಪದ್ದಾಗಿರುವುದೆಂದು ತಿಳಿದುಬಂದಿರುವುದರಿಂದ, ಯಾವುದೇ ಕಾರಣಕ್ಕೂ ಕೊರೊನಾ ಸೋಂಕಿತ ತಾಯಿಯು ಮಗುವಿಗೆ ಹಾಲೂಡಿಸುವುದನ್ನು ನಿಲ್ಲಿಸಬಾರದು.

ಅನುಸರಿಸಬೇಕಾದ ಕ್ರಮಗಳೇನು?

ಐ ಸಿ ಎಂ ಆರ್, ಅಮೆರಿಕಾ ಮಕ್ಕಳ ವೈದ್ಯರ ಅಕಾಡೆಮಿಯಂಥ ಕೆಲ ಸಂಸ್ಥೆಗಳು ನವಜಾತ ಶಿಶುವನ್ನು ಸೋಂಕಿತ ತಾಯಿಯಿಂದ ತಾತ್ಕಾಲಿಕವಾಗಿ ಪ್ರತ್ಯೇಕಿಸಬೇಕೆಂದು ಶಿಫಾರಸ್ಸು ಮಾಡಿವೆ. ಆದರೆ ತಾಯಿಯು ಮಗುವನ್ನು ತನ್ನ ಚರ್ಮಕ್ಕೆ ತಾಗಿಸಿಕೊಂಡು ಆರೈಕೆ (ಕಾಂಗರೂ ಆರೈಕೆ) ಮಾಡುವುದರಿಂದ ಬಾಂಧವ್ಯ ವೃದ್ಧಿ, ಶಾರೀರಿಕ ಉಷ್ಣತೆಯ ಕಾಪಾಡುವಿಕೆ, ಸೋಂಕುಗಳಿಂದ ರಕ್ಷಣೆ ಮುಂತಾದ ಹಲವಾರು ಪ್ರಯೋಜನಗಳಿವೆ. ಹಾಗಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಮಗುವನ್ನು ತಾಯಿಯ ಸನಿಹದಲ್ಲೇ ಇರಿಸಿ ಹಾಲೂಡಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸ್ಸು ಮಾಡಿದೆ. ಅದರಲ್ಲೂ ‌ಶಂಕಿತ, ಲಕ್ಷಣ ರಹಿತ ಮತ್ತು ಲಘು ಸ್ವರೂಪದ ಲಕ್ಷಣಗಳುಳ್ಳ ತಾಯಿಗೆ ಹೆಚ್ಚಿನ ನಿರ್ಬಂಧಗಳ ಅಗತ್ಯವಿಲ್ಲವೆಂತಲೂ ತಿಳಿಸಿದೆ. ಈ ಎಲ್ಲಾ ಅಂಶಗಳ ಕುರಿತು ಹಾಲೂಡಿಸುವ ತಾಯಿಗೆ ತಿಳಿಹೇಳಿ ಮಾನಸಿಕವಾಗಿ ಸಜ್ಜುಗೊಳಿಸಬೇಕು. ಮಗುವಿಗೆ ಹಾಲೂಡಿಸುವ ಸಮಯದಲ್ಲಿ ಸೋಂಕಿತ ತಾಯಿಯು ಕೆಳಕಂಡ ಕೆಲವು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

1. ಹಾಲೂಡಿಸುವಾಗ ತಪ್ಪದೇ ಮುಖಗವಸನ್ನು‌ ಧರಿಸಿರಬೇಕು.

2. ಹಾಲೂಡಿಸುವ ಮುನ್ನ ಸಾಬೂನಿನಿಂದ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಳ್ಳಬೇಕು.

3. ತುರ್ತು ಚಿಕಿತ್ಸೆಯ ಅಗತ್ಯವಿರುವ ತೀವ್ರ ಸ್ವರೂಪದ ಸೋಂಕಿತ ತಾಯಿಯ ಹಾಲನ್ನು, ಶುಚಿತ್ವದ ಎಲ್ಲಾ ಕ್ರಮಗಳನ್ನು ಅನುಸರಿಸಿ ಸ್ತನಗಳಿಂದ ಹೊರತೆಗೆಯಬೇಕು. ಅದನ್ನು ಚಮಚ ಅಥವಾ ಒಳಲೆಯ ಸಹಾಯದಿಂದ ಬೇರೊಬ್ಬ ಆರೋಗ್ಯವಂತ ವ್ಯಕ್ತಿಯು ಮಗುವಿಗೆ ಉಣಿಸಬೇಕು. ಆ ವ್ಯಕ್ತಿಯು ಕೊರೊನಾ ಸೋಂಕು ಹೊಂದಿದ್ದು, ಲಕ್ಷಣ ರಹಿತವಾಗಿರುವ ಸಾಧ್ಯತೆಯಿರುವುದರಿಂದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಸ್ತನಗಳಿಂದ ಹೊರತೆಗೆದ ಹಾಲನ್ನು ಕೊಠಡಿಯ ಉಷ್ಣತೆಯಲ್ಲಿ ಸುಮಾರು ಎಂಟು ಗಂಟೆಗಳ ಅವಧಿಯವರೆಗೆ ಶೇಖರಿಸಿಡಬಹುದು.

4. ತೀರಾ ಅನಿವಾರ್ಯ ಸಂದರ್ಭಗಳಲ್ಲಷ್ಟೇ ಕೃತಕ ಹಾಲು ಅಥವಾ ದಾನಿ ತಾಯಿಯ ಹಾಲಿನ ಮೊರೆ ಹೋಗಬೇಕಾಗುತ್ತದೆ.

ಒಟ್ಟಿನಲ್ಲಿ ಕೊರೊನಾ ಸೋಂಕಿನ ನೆಪವೊಡ್ಡಿ ಮಗುವನ್ನು ಎದೆಹಾಲಿನಿಂದ ವಂಚಿತವಾಗಿಸಬಾರದು. ಹಾಗೆಯೇ ಪ್ರಸವ ನಂತರದ ಮೊದಲ ಮೂರು ದಿನಗಳವರೆಗೆ ಕೇವಲ ಅತ್ಯಲ್ಪ ಪ್ರಮಾಣದಲ್ಲಿ ಸ್ರವಿಸುವ, ನಿಜಕ್ಕೂ ಅಮೃತವೇ ಆಗಿರುವ ಗಿಣ್ಣುಹಾಲನ್ನು ಯಾವ ಕಾರಣಕ್ಕೂ ಕುಡಿಸದೇ ಇರಬಾರದು. ಮಗುವಿಗೆ ಆರು ತಿಂಗಳುಗಳು ತುಂಬುವವರೆಗೆ ನೀರನ್ನು ಒಳಗೊಂಡು ಬೇರೆ ಯಾವ ಆಹಾರ ಪದಾರ್ಥಗಳನ್ನೂ ನೀಡದೆ ಕೇವಲ ಎದೆಹಾಲನ್ನಷ್ಟೇ ಕುಡಿಸಬೇಕು. ಆರು ತಿಂಗಳುಗಳು ತುಂಬಿದ ನಂತರ ಹಂತ ಹಂತವಾಗಿ ಪೂರಕ ಆಹಾರವನ್ನು ಪ್ರಾರಂಭಿಸಿ‌‌, ಕನಿಷ್ಠ ಎರಡು ವರ್ಷಗಳ ತನಕ‌ ಎದೆಹಾಲೂಡಿಸುವುದನ್ನು ಮುಂದುವರಿಸಬೇಕು. ಈ ಎಲ್ಲಾ ಸಲಹೆಗಳು ಕೊರೊನಾ ಸೋಂಕಿತ ತಾಯಿಗೆ ಜನಿಸಿದ ಮಗುವಿಗಷ್ಟೇ ಅಲ್ಲದೆ ಇತರೆ ಮಕ್ಕಳಿಗೂ ಅನ್ವಯಿಸುತ್ತವೆ.

Watch our Video: ಉತ್ತಮ ಎದೆಹಾಲಿಗೆ ಸುಲಭ ಮನೆಮದ್ದುಗಳು

ಡಾ. ಕೆ. ಬಿ. ರಂಗಸ್ವಾಮಿ
ನೆಮ್ಮದಿ, 7ನೇ ಮುಖ್ಯರಸ್ತೆ
ಜಯನಗರ ಪೂರ್ವ
ತುಮಕೂರು – 2
ಮೊ: 9880709766

Share this: