Vydyaloka

ಕೇರ್‌ಲೆಸ್ ಆದ್ರೆ ಹೇರ್‌ಲೆಸ್

ಕೇರ್‌ಲೆಸ್ ಆದ್ರೆ ಹೇರ್‌ಲೆಸ್. ತಲೆ ಕೂದಲಿನ ಉತ್ತಮ ಬೆಳವಣಿಗೆ ಮತ್ತು ಸೌಂದರ್ಯ ವರ್ಧನೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ ಸ್ವಚ್ಚವಾಗಿ ತೊಳೆಯುವುದು ಎಷ್ಟು ಮುಖ್ಯವೋ , ಉತ್ತಮ ಆಹಾರ ಸೇವನೆ ಮತ್ತು ಮಾನಸಿಕ ಆರೋಗ್ಯವೂ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ.

 ಕೇರ್‍ಲೆಸ್ ಆದರೆ ಹೇರ್‍ಲೆಸ್ ಅನ್ನೋದು ಆಧುನಿಕ ಗಾದೆಯ ಮಾತು ವಾಸ್ತವವೂ ಹೌದು. ಸೌಂದರ್ಯ ವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ತಲೆಕೂದಲು. ಸ್ವಚ್ಚವಾಗಿ, ಹೊಳಪಾಗಿ ಮತ್ತು ನುಣುಪಾಗಿ ಆಕರ್ಷಕವಾಗಿರಬೇಕೆಂದು ಎಲ್ಲರೂ ಬಯಸುವುದು ಸಹಜ. ತಲೆ ಕೂದಲಿನ ಉತ್ತಮ ಬೆಳವಣಿಗೆ ಮತ್ತು ಸೌಂದರ್ಯ ವರ್ಧನೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ ಸ್ವಚ್ಚವಾಗಿ ತೊಳೆಯುವುದು ಎಷ್ಟು ಮುಖ್ಯವೋ ಉತ್ತಮ ಆಹಾರ ಸೇವನೆ ಮತ್ತು ಮಾನಸಿಕ ಆರೋಗ್ಯವೂ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ.ಉತ್ತಮ ಕೂದಲು ಎಲ್ಲರ ಆಕಾಂಕ್ಷೆಯಾಗಿದ್ದು, ಕೆಲವು ಸಲಹೆಗಳು ಇಲ್ಲಿವೆ. ಟ್ರೈಮಾಡಿ ನೋಡಿ.

1. ತಲೆಸ್ನಾನ ಮಾಡುವ ಅರ್ಧಗಂಟೆ ಮೊದಲು ತಲೆಗೆ ಎಣ್ಣೆ ಹಚ್ಚಿರಿ. ಕೂದಲಿಗೆ ಟವೆಲ್‍ನಿಂದ ಬಡಿಯಬೇಡಿ. ಇದು ಕೂದಲಿಗೆ ತೊಂದರೆ ಕೊಡುತ್ತದೆ.

2. ಹೇರ್ ಡ್ರೈಯರ್ ಅಥವಾ ಫ್ಯಾನ್ ಗಾಳಿಯಿಂದ ಕೂದಲು ಒಣಗಿಸುವುದು ಒಳ್ಳೆಯದಲ್ಲ. ಅತಿಯಾದ ಚಿಂತೆ, ಶೋಕ ತಲೆಕೂದಲು ಉದುರಲು ಕಾರಣ. ಮಾನಸಿಕ ನೆಮ್ಮದಿ ಉತ್ತಮ ಕೂದಲಿನ ಆರೋಗ್ಯಕ್ಕೂ ಸಹಕಾರಿ.

3. ದಿನಕ್ಕೆ 10-23 ಗ್ಲಾಸ್ ನೀರು ಕುಡಿದರೆ ಕೂದಲಿಗಷ್ಟೇ ಅಲ್ಲ ದೇಹಕ್ಕೂ ಉತ್ತಮ. ನೆಲ್ಲಿಕಾಯಿ ಅಥವಾ ಸೀಗೆಕಾಯಿ ಪುಡಿಯನ್ನು ಮೊಸರಿನಲ್ಲಿ ಬೆರೆಸಿ ತಲೆಗೆ ಹಚ್ಚಿ ಅರ್ಧಗಂಟೆ ಬಿಟ್ಟು ತೊಳೆದಲ್ಲಿ ಮಿಂಚುವ ಕೂದಲಿನ ಜೊತೆಗೆ ಗಟ್ಟಿತನ ಕಾಪಾಡಬಹುದು.

4. ತಲೆಕೂದಲು ಬಾಚಲು ಉಪಯೋಗಿಸುವ ಬಾಚಣಿಗೆಯನ್ನು ಕನಿಷ್ಟ ವಾರಕ್ಕೊಮ್ಮೆಯಾದರೂ ಸ್ವಚ್ಚಗೊಳಿಸಿ.

5. ಬಿಸಿನೀರಿನಲ್ಲಿ ತೊಳೆದು ಹಿಂಡಿದ ಟವೆಲ್ ಅನ್ನು ತಲೆಕೂದಲಿಗೆ ಹತ್ತು ನಿಮಿಷಗಳ ಕಾಲ ಕಟ್ಟಿಕೊಳ್ಳಿ. ಇದರಿಂದ ಕೂದಲಿನ ಬುಡದ ರಕ್ತ ಸಂಚಾರ ಸುಗಮವಾಗುತ್ತದೆ.

6. ಕೂದಲಿಗೆ ಸೋಪು ಅಥವಾ ಶಾಂಪೂ ಬಳಕೆಗಿಂತ ನೈಸರ್ಗಿಕ ಸೀಗೆಕಾಯಿ ಅಥವಾ ಅಂಟವಾಲ ಕಾಯಿ ಬಳಸಿದರೆ ಉತ್ತಮ. ಶಾಂಪೂ ಬೇಕೆನಿಸಿದರೆ ಆಯುರ್ವೇದಿಕ್ ಉತ್ಪಾದನೆಗೆ ಆದ್ಯತೆ ಕೊಡಿ.

7. ತಲೆಕೂದಲಿಗೆ ಅತಿಬಿಸಿ ಅಥವಾ ತಣ್ಣನೆಯ ನೀರು ಬಳಕೆ ಒಳ್ಳೆಯದಲ್ಲ. ಒದ್ದೆಯಾಗಿರುವ ಕೂದಲನ್ನು ಬಾಚುವ ಪ್ರಯತ್ನ ಬೇಡ.

8. ಉಗುರು ಬೆಚ್ಚಗಿನ ಸಾಸಿವೆಎಣ್ಣೆಯನ್ನು ಸ್ನಾನಕ್ಕೆ ಅರ್ಧಗಂಟೆ ಮುಂಚೆ ನಿಂಬೆರಸದೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿದರೆ ಯಾವುದೇ ಶಾಂಪೂಗಿಂತ ಹೆಚ್ಚು ಹೊಳಪು ಕಾಣಬಹುದು.

9. ಬಿಳಿದಾಸವಾಳ ಹೂವು ಅಥವಾ ಎಲೆಗಳ ಪೇಸ್ಟ್ ತಯಾರಿಸಿ ವಾರಕ್ಕೊಮ್ಮೆ ಕೂದಲಿಗೆ ಹಚ್ಚಿ ಮಸಾಜ್ ಮಾಡಿದರೆ ತಲೆ ತಂಪಾಗುವುದರೊಂದಿಗೆ ಕೂದಲಿಗೆ ಭದ್ರತೆ ಕೊಡುತ್ತದೆ.

10. ಮದರಂಗಿ ಎಲೆಗಳನ್ನು ಮೊಸರಿನೊಂದಿಗೆ ಕಲಸಿ ಪೇಸ್ಟ್ ತಯಾರಿಸಿಕೊಂಡು ಸ್ನಾನಕ್ಕೆ ಮುನ್ನ ಹಚ್ಚಿ ಬಳಿಕ ನಿಧಾನವಾಗಿ ಕೂದಲು ತೊಳೆದಲ್ಲಿ ಹೊಳಪು ಮತ್ತು ಕಪ್ಪುಬಣ್ಣ ಹೊಂದಬಹುದು.

11. ಕರಿಬೇವಿನ ಎಲೆಗಳ ರಸ ಮತ್ತು ಮೆಂತ್ಯಸೊಪ್ಪಿನ ರಸವನ್ನು ಹದವಾಗಿ ಬೆರೆಸಿ ಪೇಸ್ಟ್ ತಯಾರಿಸಿಕೊಂಡು ತಲೆ ಕೂದಲಿಗೆ ಹಚ್ಚಿ ಒಂದು ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ತಲೆಕೂದಲು ಉದುರುವಿಕೆ ನಿಲ್ಲುತ್ತದೆ. ಜೊತೆಗೆ ಗಂಟು ಕೂದಲಿನಿಂದಲೂ ಪರಿಹಾರ ಸಾಧ್ಯವಿದೆ.

12. ಉಗುರು ಬೆಚ್ಚಗಿನ ಕೊಬ್ಬರಿ ಎಣ್ಣೆ ಮತ್ತು ನಿಂಬೆರಸವನ್ನು ಚೆನ್ನಾಗಿ ಬೆರೆಸಿ ಹಿಂದಿನ ದಿನ ರಾತ್ರಿಯೇ ಕೂದಲಿಗೆ ಚೆನ್ನಾಗಿ ಹಚ್ಚಿಕೊಂಡು ಬೆಳಿಗ್ಗೆ ಸ್ನಾನ ಮಾಡಿದರೆ ಉತ್ತಮ ನಿದ್ರೆಯೊಂದಿಗೆ ಸೊಂಪಾದ ಕೂದಲು ಹೊಂದಬಹುದು.

13. ತೆಂಗಿನಕಾಯಿ ತುರಿಯನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿ ಅದರಿಂದ ಬರುವ ಹಾಲನ್ನು ತಲೆಗೂದಲಿಗೆ ಎಣ್ಣೆ ರೀತಿಯಲ್ಲಿ ಬಳಸಬಹುದು. ಈ ಹಾಲನ್ನು ಕೂದಲಿನ ಬುಡದವರೆಗೂ ಚೆನ್ನಾಗಿ ತಿಕ್ಕಿ ಒಂದು ಗಂಟೆ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಕೂದಲು ತೊಳೆದರೆ ಕೂದಲಿನ ಹೊಳಪಿನೊಂದಿಗೆ ಉತ್ತಮ ಕೇಶರಾಶಿ ಉಳಿಸಿಕೊಳ್ಳಬಹುದು.

14. ತಲೆಗೆ ನೆಲ್ಲಿಕಾಯಿ ಎಣ್ಣೆ ಹಚ್ಚಿ ಚೆನ್ನಾಗಿ ಬುಡದವರೆಗೂ ಮಸಾಜ್ ಮಾಡಿದರೆ ಉತ್ತಮ ನಿದ್ರೆ ಪಡೆಯಲು ಸಾಧ್ಯ. ಅಲ್ಲದೆ ಕೂದಲೂ ಸೊಂಪಾಗಿ ಬೆಳೆಯುವುದಲ್ಲದೆ ತಲೆಹೊಟ್ಟು ನಿವಾರಣೆ ಯಾಗುತ್ತದೆ.

15. ನೆಲ್ಲಿಕಾಯಿ ಪೌಡರನ್ನು ನಿಂಬೆಹಣ್ಣಿನ ರಸದೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಕಬ್ಬಿಣದ ಪಾತ್ರೆಯಲ್ಲಿ ಸಂಗ್ರಹಿಸಿಟ್ಟು ಎರಡು ದಿನಗಳ ಬಳಿಕ ಕೂದಲಿಗೆ ಹಚ್ಚಿದರೆ ಚಿಕ್ಕಮಕ್ಕಳಲ್ಲಿ ಕಂಡು ಬರುವ ನೆರೆಕೂದಲಿಂದ ಮುಕ್ತಿ ಪಡೆಯಬಹುದು. ಜೊತೆಗೆ ಸೋಂಕನ್ನು ನಿವಾರಿಸುತ್ತದೆ.

16. ಸಾಸಿವೆ ಎಣ್ಣೆ ಮತ್ತು ಮದರಂಗಿ ಎಲೆಗಳನ್ನು ಬಳಸಿಯೂ ಉತ್ತಮ ಕೂದಲು ಅರೊಗ್ಯ ರಕ್ಷಣೆ ಸಾದ್ಯವಿದೆ. ಸಾಸಿವೆ ಎಣ್ಣೆಯನ್ನು ಬಿಸಿಮಾಡಿಕೊಂಡು ಅದಕೆ ಮದರಂಗಿ ಎಲೆಯ ಪುಡಿಯನ್ನು ಒಂದು ಚಿಟಕಿಯಷ್ಟು ಹಾಕಿ ಚೆನ್ನಾಗಿ ಕಲಸಿದ ಬಳಿಕ ಕೂದಲಿಗೆ ಹಚ್ಚಬೇಕು. ರಜೆಯ ದಿನಗಳಲ್ಲಿ ಇದನ್ನು ಹಚ್ಚಿಕೊಂರೆ ಕನಷ್ಟ ಐದಾರು ಗಂಟೆ ಹಾಗೇಯೇ ಬಿಟ್ಟು ಆನಂತರ ಸೀಗೆಕಾಯಿ ಅಥವಾ ಕಡಲೆಹಿಟ್ಟಿನಿಂದ ಕೂದಲು ತೊಳೆದರೆ ದೀರ್ಘಕಾಲ ಸಿಕ್ಕುರಹಿತ ಕೂದಲು ಹೊಂದಲು ಸಾಧ್ಯವಿದೆ.

17. ಪುರುಷರಾದಲ್ಲಿ ಹೆಲ್ಮೆಟ್ ಬಳಸುವ ಅನಿವಾರ್ಯತೆ ಇದ್ದಲ್ಲಿ ಧರಿಸುವ ಮುನ್ನ ಕರ್ಚಿಫ್ ಅಥವಾ ಸ್ಕ್ರಾಪ್ ಬಳಸುವುದು ಒಳ್ಳೇಯದು. ಇದು ಕೂದಲಿನ ಬೆವರನ್ನು ಇಂಗಿಸಿಕೊಳ್ಳುತ್ತದೆ. ಪದೇ ಪದೇ ತಲೆಕೂದಲು ಬಾಚುವ ಅಭ್ಯಾಸ ಬೇಡ.

18. ಅತಿಸುವಾಸಿತ ಎಣ್ಣೆ ಬಳಕೆಯೂ ಒಳ್ಳೆಯದಲ್ಲ. ಇದರಲ್ಲಿ ರಾಸಾಯನಿಕಗಳ ಅಂಶ ಹೆಚ್ಚಿರುವುದರಿಂದ ನಮಗೆ ಸುವಾಸನೆ ಕೊಟ್ಟರೂ ಭವಿಷ್ಯದಲ್ಲಿ ಕೂದಲಿಗೆ ತೊಂದರೆ ನೀಡುತ್ತದೆ. ಹಾಗಾಗಿ ಆದಷ್ಟು ಆಯುರ್ವೇದಿಕ ಎಣ್ಣೆ ಬಳಕೆ ಮಾಡಿ.

19. ಹೇರ್ ಕಟ್ಟಿಂಗ್ ಸಂದರ್ಭ ಉಪಯೋಗಿಸುವ ಬಾಚಣಿಗೆ ಬಗ್ಗೆ ಎಚ್ಚರವಿರಲಿ. ಹೆಡ್ ಮಸಾಜ್‍ಗೆ ಬಳಸುವ ಎಣ್ಣೆ ಪರೀಕ್ಷಿಸಿಕೊಳ್ಳಿ. ತುಂಬ ಬಡಿಯುವುದರಿಂದಲೂ ಕೂದಲು ದುರ್¨ಲವಾಗುತ್ತದೆ.

20. ಮಿರ ಮಿರ ಮಿಂಚುವ ಕೂದಲಿನ ಆಸೆಗೆ ಬಿದ್ದು ಕಡಿಮೆ ದರ್ಜೆ ಶಾಂಪೂವನ್ನು ಬಳಸಿದಲ್ಲಿ ಕೂದಲಿಂದಲೇ ನೀವು ದೂರವಾಗಬಹುದು. ಹಾಗಾಗಿ ಬಳಸುವ ಶಾಂಪೂವಿನ ಗುಣಮಟ್ಟದ ಅರಿವಿರಲಿ. ಹೊರ ಆಕರ್ಷಣೆಗಿಂತ ಗುಣಮಟ್ಟಕ್ಕೆ ಆದ್ಯತೆ ಕೊಡಿ.

21. ಬಿಳಿಕೂದಲುಗಳನ್ನು ಹೆಕ್ಕಿ ತೆಗೆಯುವ ಚಾಳಿ ಬೆಳೆಸಿಕೊಳ್ಳಬೇಡಿ. ಬದಲಿಗೆ ಉತ್ತಮ ಹೇರ್‍ಡೈ ಬಳಸಿ. ತಿಂಗಳಿಗೊಮ್ಮೆ ಬಳಸುವುದು ಉತ್ತಮ.

ಲತಾಪರಮೇಶ್
ಸ್ನೇಹ ಬ್ಯೂಟಿಪಾರ್ಲರ್, ನಂ. 656, 8ನೇ ಅಡ್ಡರಸ್ತೆ,
1ನೇ ಮುಖ್ಯರಸ್ತೆ, ಭುವನೇಶ್ವರಿ ನಗರ,
ಆರ್.ಟಿ. ನಗರ, ಬೆಂಗಳೂರು-32
ಮೊಬೈಲ್ : 9164089890

Share this: