Vydyaloka

ಬಿಳಿಸೆರಗು ಅಥವಾ ಶ್ವೇತಪದರ-ವನಿತೆಯರಿಗೆ ಮಾನಸಿಕ ಯಾತನೆ

ಬಿಳಿಸೆರಗು ಅಥವಾ ಶ್ವೇತಪದರ-ವನಿತೆಯರಿಗೆ ಮಾನಸಿಕ ಯಾತನೆ. ಸಂತಾನೋತ್ಪತ್ತಿ ವಯೋಮಾನದ ಎಲ್ಲ ಮಹಿಳೆಯರು (ಋತುಸ್ರಾವ ಅರಂಭದಿಂದ ಮುಟ್ಟು ಕೊನೆಗೊಳ್ಳುವ ತನಕ) ಒಂದಲ್ಲ ಒಂದು ಹಂತದಲ್ಲಿ ಲ್ಯೂಕೊರಿಯ(ಯೋನಿಯಿಂದ ಹೊರಡುವ ಒಂದು ಪ್ರಕಾರದ ಬಿಳಿಸೆರಗು ಅಥವಾ ಶ್ವೇತ ಪದರ) ಸಮಸ್ಯೆಗೆ ಒಳಗಾಗುತ್ತಾರೆ. ಅಶುಚಿತ್ವ ಹೊಂದಿರುವ ಮಹಿಳೆಯರಿಗೆ ಲೈಂಗಿಕ ರೋಗಗಳು, ಪಿಐಡಿ ತಗುಲುವ ಸಾಧ್ಯತೆ ಇರುವುದರಿಂದ ಅವರಲ್ಲಿ ಲ್ಯೂಕೊರಿಯಾ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.

ನಮ್ಮ ದೇಹದ ಶ್ಲೇಷ್ಮ ಪದರಗಳು ಹಾಗೂ ಗ್ರಂಥಿಗಳಿಂದ ಶರೀರದಲ್ಲಿ ಸಾಕಷ್ಟು ಸ್ರವಿಸುವಿಕೆಯಾಗುತ್ತದೆ. ಈ ಸ್ರವಿಸುವಿಕೆಗೆ ಅವುಗಳದ್ದೇ ಆದ ಕಾರ್ಯಗಳಿರುತ್ತವೆ. ಮುಖದಲ್ಲಿನ ಸೆಬಮ್ ಹಾಗೂ ಬಾಯಿಯಲ್ಲಿ ಸಲೈವಾ (ಎಂಜಲು) ಸ್ರವಿಸುವಿಕೆಯಂಥ ಸ್ಥಳಗಳ ಆಧಾರದ ಮೇಲೆ ಇವುಗಳ ಕೆಲಸ ಅವಲಂಬಿಸಿರುತ್ತವೆ. ಇಂಥ ಸ್ರವಿಸುವಿಕೆಗಳು ತೇವವಾಗಿರಿಸಲು ಮತ್ತು ಹೊಂದಿಕೊಳ್ಳಲು ಅನುಕೂಲವಾಗುವಂತೆ ಚರ್ಮದ ಅಥವಾ ಶ್ಲೇಷ್ಮ ಪದರದ ಮೇಲೆ ತೆಳುವಾದ ಗೆರೆಯನ್ನು ರೂಪುಗೊಳಿಸುವ ಮೂಲಕ ದೇಹವನ್ನು ರಕ್ಷಿಸುತ್ತವೆ.
ಸ್ರವಿಸುವಿಕೆ ಪ್ರಮಾಣ ಕಡಿಮೆಯಾದರೆ ನಮಗೆ ಶುಷ್ಕತೆ ಉಂಟಾಗಿ ಚರ್ಮ ಬಿರುಕು ಬಿಡುತ್ತದೆ. ಇದರಿಂದ ಸೋಂಕು ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ. ಇದೇ ರೀತಿ ಯೋನಿಯ ಗ್ರಂಥಿಗಳು ಸ್ರವಿಸುವಿಕೆಯನ್ನು ಉತ್ಪಾದಿಸುತ್ತದೆ. ಇದು ಯೋನಿ ತೇವಾಂಶ, ಮೃದುವಾಗಿರಲು ಹಾಗೂ ಸೋಂಕು ತಡೆಗಟ್ಟಲು ನೆರವಾಗುತ್ತದೆ. ಬೀಜಾಣುಗಳ ಉತ್ಪಾದನೆ ವೇಳೆ ಫಲವತ್ತತೆಗೆ ಅವಕಾಶ ನೀಡಲು ಸ್ರವಿಸುವಿಕೆಯಲ್ಲಿ ಪರಿವರ್ತನೆಯಾಗುತ್ತದೆ.
ಸಂತಾನೋತ್ಪತ್ತಿ ವಯೋಮಾನದ ಎಲ್ಲ ಮಹಿಳೆಯರು (ಋತುಸ್ರಾವ ಅರಂಭದಿಂದ ಮುಟ್ಟು ಕೊನೆಗೊಳ್ಳುವ ತನಕ) ಒಂದಲ್ಲ ಒಂದು ಹಂತದಲ್ಲಿ ಲ್ಯೂಕೊರಿಯ (ಯೋನಿಯಿಂದ ಹೊರಡುವ ಒಂದು ಪ್ರಕಾರದ ಬಿಳಿಸೆರಗು ಅಥವಾ ಶ್ವೇತ ಪದರ) ಸಮಸ್ಯೆಗೆ ಒಳಗಾಗುತ್ತಾರೆ. ಯೋನಿಯಿಂದ ಸ್ರಾವವಾಗುವ ಬಿಳಿ ಲೋಳೆಯಂಥ ವಸ್ತುವನ್ನು ಬಿಳಿಸೆರಗು ಎನ್ನುತ್ತಾರೆ. ಯೋನಿಯಿಂದ ಅಧಿಕ ಸ್ರಾವವಾಗುವುದಕ್ಕೆ ವೈದ್ಯಕೀಯ ಭಾಷೆಯಲ್ಲಿ ಲ್ಯೂಕೊರಿಯ ಎಂದು ಹೇಳುತ್ತಾರೆ. ಈ ಸಮಸ್ಯೆಯು ನೋವು ಮತ್ತು ಅನಾನುಕೂಲತೆಯಿಂದ ಕೂಡಿರುತ್ತದೆ.

ವಿಧಗಳು:

ಫಿಸಿಯೋಲಾಜಿಕಲ್ ಲ್ಯೂಕೊರಿಯ ಯುವತಿಯರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಋತುಮತಿಯಾಗುವ ವೇಳೆ ಹಾರ್ಮೋನುಗಳ ಬದಲಾವಣೆ, ಅಂಡಾಣು ಉತ್ಪಾದನೆ, ಋತುಸ್ರಾವಕ್ಕೂ ಮುನ್ನ, ಗರ್ಭಧರಿಸಿದ ಆರಂಭದ ದಿನಗಳಲ್ಲಿ ಹಾಗೂ ಲೈಂಗಿಕ ಉದ್ವೇಗದಿಂದಾಗಿ ಇದು ಉಂಟಾಗುತ್ತದೆ. ನವಜಾತ ಹೆಣ್ಣು ಶಿಶುಗಳಲ್ಲೂ ಇದು ಕಂಡುಬರುತ್ತದೆ. ಹೆರಿಗೆಗೂ ಮುನ್ನ ತನ್ನ ತಾಯಿಯ ಹೊಕ್ಕಳ ಬಳ್ಳಿಯ ಮೂಲಕ ಪ್ರವೇಶಿಸುವ ಶಿಶುವಿನ ರಕ್ತದಲ್ಲಿನ ಈಸ್ಟ್ರೋಜೆನ್ ಹಾರ್ಮೋನಿಂದಾಗಿ ಇದು ಉಂಟಾಗುತ್ತದೆ.
ಪ್ಯಾಥೋಲಾಜಿಕಲ್ ಲ್ಯೂಕೊರಿಯ ಮಹಿಳೆಯ ಜನನಾಂಗ ನಾಳದ ರೋಗ ಅಥವಾ ಅಸಮರ್ಪಕ ಕಾರ್ಯನಿರ್ವಹಣೆಯಿಂದ ಕಂಡುಬರುತ್ತದೆ. ಸ್ರವಿಸುವಿಕೆಯ ಸ್ವರೂಪವು ತೆಳು ಸ್ರಾವದಿಂದ ಗಟ್ಟಿ ರಕ್ತ ಸ್ರಾವದ ತನಕ ವ್ಯತ್ಯಾಸದಿಂದ ಕೂಡಿರುತ್ತದೆ.

ಕಾರಣಗಳು:

1. ಸೋಂಕು : ಫಂಗಸ್, ಪರಾವಲಂಬಿ ಅಥವಾ ಬ್ಯಾಕ್ಟೀರಿಯಾದಿಂದ ಇದು ಉಂಟಾಗುತ್ತದೆ.

2. ಗಾಯ : ಶಿಶು ಜನನ, ಗರ್ಭಪಾತ ಅಥವಾ ವಿಪರೀತ ಲೈಂಗಿಕ ಕ್ರಿಯೆಯಿಂದಾಗಿ ಯೋನಿ ಅಥವಾ ಗರ್ಭಕೊರಳು ಅಥವಾ ಗರ್ಭಾಶಯಕ್ಕೆ ಗಾಯವಾಗುತ್ತದೆ ಇದರಿಂದ ಸವೆತ ಮತ್ತು ಸ್ರಾವದೊಂದಿಗೆ ಸೋಂಕು ಉಂಟಾಗುತ್ತದೆ.

3. ಅಶುಚಿತ್ವ : ದುರ್ಬಲ ನೈರ್ಮಲೀಕರಣ, ಅಶುಚಿತ್ವ ಮತ್ತು ಶುಚಿತ್ವದ ಕೊರತೆ ಇರುವ ಮಹಿಳೆಯರಿಗೆ ಲೈಂಗಿಕ ರೋಗಗಳು, ಪಿಐಡಿ ತಗುಲುವ ಸಾಧ್ಯತೆ ಇರುವುದರಿಂದ ಅವರಲ್ಲಿ ಲ್ಯೂಕೊರಿಯಾ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.

4. ಡಯಾಬಿಟಿಸ್ ಮತ್ತು ಅನಿಮಿಯಾ : ಮಧುಮೇಹ ಮತ್ತು ರಕ್ತ ಹೀನತೆ ಸಮಸ್ಯೆಗಳು ಇದ್ದರೆ, ರೋಗ ಪ್ರತಿರೋಧಕ ಶಕ್ತಿ ದುರ್ಬಲಗೊಳ್ಳುವುದರಿಂದ ಸೋಂಕುಗಳಿಗೆ ಪ್ರಚೋದನೆ ನೀಡುತ್ತದೆ.

5. ಮೂತ್ರ ನಾಳದ ಸೋಂಕು : ಮೂತ್ರ ನಾಳದಲ್ಲಿ ಸೋಂಕು ಉಂಟಾಗುವುದರಿಂದ ಅದು ಇತರೆಡೆಗೆ ಹಬ್ಬಿ ಈ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ.

6. ಐಯುಸಿಡಿ ಕಿರಿಕಿರಿ : ಇಂಟ್ರಾ ಯೂಟ್ರಿನ್ ಕಾನ್‍ಟ್ರಾಸೆಪ್ಟಿವ್ ಡಿವೈಸ್ (ಐಯುಸಿಡಿ) – ಇದರಿಂದಲೂ ಈ ದೋಷ ಕಂಡು ಬರುತ್ತದೆ.

ಚಿಹ್ನೆ ಮತ್ತು ಲಕ್ಷಣಗಳು :

1. ಕೆಳ ಹೊಟ್ಟೆ ನೋವು
2. ಯಾತನಾಮಯ ಲೈಂಗಿಕ ಕ್ರಿಯೆ
3. ಬೆನ್ನು ನೋವು ಹಾಗೂ ಕಾಲು, ತೊಡೆ, ಮೀನಖಂಡಗಳಲ್ಲಿ ನೋವು
4. ದೊಡ್ಡ ಕರುಳ ಬಾಧೆ
5. ಜನನಾಂಗ ನಾಳದಲ್ಲಿ ಊತ ಮತ್ತು ಉರಿ
6. ಮೂತ್ರ ವಿಸರ್ಜನೆ ವೇಳೆ ಉರಿ
7. ಸ್ಪಲ್ಪ ಪ್ರಮಾಣದಲ್ಲಿ ಪದೇ ಪದೇ ಮೂತ್ರ ವಿಸರ್ಜನೆ
8. ಮಾನಸಿಕ ಯಾತನೆ ಹಾಗೂ ಕೆಲಸದಲ್ಲಿ ಏಕಾಗ್ರತಿ ಕೊರತೆ
9. ಮಲಬದ್ದತೆ ಅಥವಾ ಅತಿಸಾರ ಅಥವಾ ವಾಂತಿಯಂಥ ಪಚನಕ್ರಿಯೆ ತೊಂದರೆಗಳು
10. ಸ್ರಾವದಿಂದ ಮುಖ್ಯ ದ್ರವಗಳ ನಷ್ಟದಿಂದ ಸಾಮಾನ್ಯ ಅಯಾಸ ಮತ್ತು ಸುಸ್ತು

ರೋಗ ನಿರ್ಧಾರ:

1. ಬ್ಯಾಕ್ಟೀರಿಯಾ, ವೈರಸ್ ಅಥವಾ ಫಂಗಸ್‍ಗಾಗಿ ವಜೈನಲ್ ಸಿಮಿಯರ್‍ನಿಂದ ಫಿಸಿಯೋಲಾಜಿಕಲ್ ಅಥವಾ ಪ್ಯಾಥೋಲಾಜಿಕಲ್ ರೋಗ ನಿರ್ಧಾರ.

2. ಗರ್ಭಕೊರಳಿನ ಕ್ಯಾನ್ಸರ್ ಸಾಧ್ಯತೆ ನಿರಾಕರಣೆಗೆ ಸರ್ವಿಕಲ್ ಬಯಾಪ್ಸಿ.

3. ಬ್ಯಾಕ್ಟೀರಿಯಾ ಪತ್ತೆಗಾಗಿ ಕಲ್ಚರ್ ಮತ್ತು ಸೆನ್ಸಿವಿಟಿ ಪರೀಕ್ಷೆ.

4. ರಕ್ತ ಪರೀಕ್ಷೆ

5. ಮೂತ್ರ ಪರೀಕ್ಷೆ

ತಪ್ಪಿಸಬೇಕಾದ ಸಂಗತಿಗಳು:

1. ಒತ್ತಡ ಮತ್ತು ಆಯಾಸ. ಏಕೆಂದರೆ ಇವು ಹಾರ್ಮೋನುಗಳ ಮಟ್ಟದ ಮೇಲೆ ಪರಿಣಾಮ ಉಂಟು ಮಾಡಿ ಸ್ರಾವವನ್ನು ಹೆಚ್ಚಿಸಬಹುದು.

2. ಟವಲ್ ಮತ್ತು ಅಂಡರ್‍ವೇರ್‍ನನ್ನು ಹಂಚಿಕೊಳ್ಳುವಿಕೆ.

3. ಸಿಂಥೆಟಿಕ್ ಮತ್ತು ನೈಲಾನ್ ಒಳ ಉಡುಪು ಜನನಾಂಗದ ತೇವಕ್ಕೆ ಕಾರಣವಾಗುತ್ತದೆ. ತೇವಾಂಶವನ್ನು ತಪ್ಪಿಸಲು ಸದಾ ಕಾಟನ್ ಅಂಡರ್‍ವೇರ್ ಧರಿಸಬೇಕು.

4. ಅಧಿಕ ಸ್ರಾವದ ವೇಳೆ ಲೈಂಗಿಕ ಕ್ರಿಯೆ.

5. ಚಿಕಿತ್ಸೆಯಲ್ಲಿರುವಾಗ ಕಾಂಡೋಮ್ ಇಲ್ಲದೇ ಸಂಭೋಗ ಮಾಡುವಿಕೆ.

ಮಾಡಬೇಕಾದ ಸಂಗತಿಗಳು:

1. ಜನನಾಂಗವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಶುಚಿತ್ವ ಕ್ರಮಗಳು ಹಾಗೂ ಪ್ರತಿದಿನ ಒಳ ಉಡುಪನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು.

2. ಸಾಮಾನ್ಯ ಆರೋಗ್ಯ ಸುಧಾರಣೆಗಾಗಿ ಪೌಷ್ಟಿಕಾಂಶ ಪಥ್ಯಾಹಾರ, ವಿಟಮಿನ್ ಎ, ಬಿ, ಸಿ, ಇ, ಮ್ಯಾಗ್ನಿಸಿಯಂ ಮತ್ತು ಜಿಂಕ್ ಸಮೃದ್ದ ಆಹಾರ ಸೇವಿಸಬೇಕು.

3. ಮೂತ್ರ ನಾಳದ ಸೋಂಕನ್ನು ತಪ್ಪಿಸಲು ಹಾಗೂ ಅದು ಯೋನಿ ಮತ್ತು ಗರ್ಭಕೊರಳಿಗೆ ಹಬ್ಬದಂತೆ ತಡೆಗಟ್ಟಲು ಸಾಕಷ್ಟು ನೀರು ಮತ್ತು ಹಣ್ಣಿನ ರಸ ಕುಡಿಯಬೇಕು.

 

ಡಾ. ಬಿ. ರಮೇಶ್- ಆಲ್ಟಿಯಸ್ ಹಾಸ್ಪಿಟಲ್
ಶಾಖೆ: ರಾಜಾಜಿನಗರ: 6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
Ph: 9900031842/ 080-23151873

ಶಾಖೆ:ರಾಜರಾಜೇಶ್ವರಿನಗರ : 915, 1ನೇ ಮಹಡಿಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರಬೆಂಗಳೂರು-560098.

Ph:o80-28606789/9663311128

E-mail : endoram2006@yahoo.co.in , altiushospital@yahoo.com

www.altiushospital.com

Share this: