Vydyaloka

ಬೇಸಿಗೆಯಲ್ಲಿ ಸೌಂದರ್ಯ ರಕ್ಷಣೆ

ಬೇಸಿಗೆಯಲ್ಲಿ ಸೌಂದರ್ಯ ರಕ್ಷಣೆ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು.ಬೇಸಿಗೆಯ ಅತೀವ ಸೆಖೆ ಹಾಗೂ ಬೇಸಿಗೆ ಕಾಯಿಲೆಗಳಿಂದ ಪಾರಾಗಲು ದೇಹವನ್ನು ಆದಷ್ಟು ಶುಚಿಯಾಗಿ ಇಡಬೇಕೆಂಬುದೇ ಇದರ ಒಟ್ಟು ತಾತ್ಪರ್ಯ.

ಉತ್ತರಾಯಣ ಆರಂಭವಾಗುವುದರೊಂದಿಗೆ ಸೂರ್ಯನ ಸ್ಪರ್ಶಶಕ್ತಿಗೆ ಸುಡುವ ಬಿಸಿ, ದೈನಂದಿನ ಗಡಿಬಿಡಿ ವನಿತೆಯರ ಜೀವನದ ದಿಸೆಯನ್ನೇ ಬದಲಿಸಿ ಬಿಡುತ್ತದೆ. ಈ ಬೇಸಿಗೆಯ ಕಾಲದಲ್ಲಿ ಅವರು ತಮ್ಮ ಸೌಂದರ್ಯ ರಕ್ಷಣೆಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಪರಂಪರಾಗತವಾದ ಪ್ರಾಚೀನ ರೀತಿ-ನೀತಿಗಳಿಂದ ಮೊದಲುಗೊಂಡು ಆಧುನಿಕ ಸೌಂದರ್ಯವರ್ಧಕಗಳ ತನಕ ತಲುಪಿದರೂ ಅವರ ಚಿಂತೆಯೊಂದೇ ಹೇಗೆ ಮತ್ತಷ್ಟು ಸುಂದರಿಯಾಗಿ ಕಾಣುವುದು!

ಆರೋಗ್ಯಕರ ಮನಸ್ಸು ಹಾಗೂ ಶರೀರವೇ ಸೌಂದರ್ಯದ ಅಡಿಪಾಯವೆಂಬ ಪ್ರಮುಖ ಅಂಶವನ್ನು ನಾವು ಆಗಾಗ ಮರೆತು ಬಿಡುತ್ತೇವೆ. ಆದುದರಿಂದಲೇ ಆರೋಗ್ಯ ಸೌಂದರ್ಯ ಸಂರಕ್ಷಣೆಗಳನ್ನು ಕಾಲಕಾಲಕ್ಕೆ ನಾವು ಗಮನಿಸಬೇಕು. ಇಂತಹ ಸಂದರ್ಭಗಳಲ್ಲಿ ಜೀವನ ಜಂಜಾಟದಲ್ಲಿ ಒಂದಷ್ಟು ಹೊತ್ತು ಬಿಡುವು ಮಾಡಿಕೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾದುದು ಅನಿವಾರ್ಯ. ಆ ಮೂಲಕ ಸೌಂದರ್ಯವನ್ನು, ಆರೋಗ್ಯವನ್ನೂ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಶುದ್ದವಾದ ನೀರಿನ ಅಲಭ್ಯತೆ ಮತ್ತು ಅತಿಯಾದ ಸೆಖೆ ಬೇಸಿಗೆಯ ಬಹುಮುಖ್ಯ ಸಮಸ್ಯೆಗಳಾಗಿವೆ. ಸೆಖೆ ಹೆಚ್ಚಾಗುತ್ತಿದ್ದಂತೆ ಬೇಸಿಗೆಯಲ್ಲಷ್ಟೇ ಕಾಣಿಸಿಕೊಳ್ಳುವ ರೋಗಗಳು ವರ್ಷದ ಅತಿಥಿಯಂತೆ ಅಗಮಿಸುತ್ತವೆ. ಆದಷ್ಟು ಔಷಧಗಳಿಂದ ದೂರವಿದ್ದು, ದೇಹದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವುದೇ ಬುದ್ಧಿವಂತಿಕೆ.

1. ಬೇಸಿಗೆ ಬಿಸಿಗೆ ಹೆಚ್ಚಾಗುವ ಬೆವರು ದೇಹದಲ್ಲೇ ಒಣಗಿ ಅಂಟಿಕೊಳ್ಳುತ್ತದೆ. ಇದು ದೋಷಪೂರಿತವಾದುದು. ಆದ್ದರಿಂದ ಬೆಳಿಗ್ಗೆ ಮತ್ತು ಸಂಜೆ ತಂಪಾದ ನೀರಿನಲ್ಲಿ ಸ್ನಾನ ಮಾಡಬೇಕು.

2. ಕಡು ಮತ್ತು ತೀಕ್ಷ್ಮ ಬಣ್ಣದ ಉಡುಪುಗಳು ಹೆಚ್ಚು ಸೆಖೆಯನ್ನು ಉಂಟು ಮಾಡುವುದರಿಂದ ಅಂತಹ ಬಟ್ಟೆಗಳನ್ನು ಧರಿಸಬಾರದು. ಸಾಮಾನ್ಯವಾಗಿ ತೆಳು ಬಣ್ಣದ ಅದರಲ್ಲೂ ಹತ್ತಿ,ಹಗುರ ಬಟ್ಟೆಗಳನ್ನು ಉಪಯೋಗಿಸುವುದು ಸೂಕ್ತ.

3. ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಎಳನೀರು, ಹಣ್ಣಿನ ರಸ, ಅರಳಿನ ಪುಡಿಯನ್ನು ಸೇರಿಸಿ ಕುದಿಸಿದ ನೀರು, ಮಜ್ಜಿಗೆ ಮುಂತಾದವನ್ನು ದ್ರವ ರೂಪದಲ್ಲಿ ಸೇವಿಸುವುದು ಒಳ್ಳೆಯದು. ಹಾಲು ಮತ್ತು ಮೊಸರನ್ನು ಹೆಚ್ಚಾಗಿ ಆಹಾರದಲ್ಲಿ ಸೇರಿಸಬೇಕು. ಬೇಸಿಗೆ ಕಾಲದಲ್ಲಿ ದ್ರವ ರೂಪದಲ್ಲಿರುವ ಆಹಾರ ಪದಾರ್ಥಗಳು ಬಹಳ ಒಳ್ಳೆಯದೆಂಬುದನ್ನು ಬಿಡಿಸಿ ಹೇಳಬೇಕಿಲ್ಲ.

4. ಮಾಂಸ, ಮೊಟ್ಟೆ ಮತ್ತು ಎಣ್ಣೆಯಲ್ಲಿ ಕರಿದ ತಿಂಡಿತಿನಿಸುಗಳಿಂದ ಆದಷ್ಟು ದೂರವಿರಬೇಕು. ಸೊಪ್ಪು, ಹಸಿರು ತರಕಾರಿಗಳು ಮತ್ತು ಹಣ್ಣುಹಂಪಲುಗಳನ್ನು ಬೇಸಿಗೆಯಲ್ಲಿ ಯೆಥೇಚ್ಚವಾಗಿ ಉಪಯೋಗಿಸಬೇಕು.

5. ಶ್ರಮದಾಯಕ ಕೆಲಸಗಳು ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತದೆ. ಆದ ಕಾರಣ ಬೇಸಿಗೆಯಲ್ಲಿ ನಿಯಮಿತ ವ್ಯಾಯಾಮ ಸೂಕ್ತ. ಮಧ್ಯಾಹ್ನದ ಊಟವಾದ ನಂತರ ಸ್ವಲ್ಪ ಹೊತ್ತು ವಿಶ್ರಾಂತಿಗಾಗಿ ಮಲಗುವುದು ಒಳ್ಳೆಯದು. ಇದರಿಂದ ಆಯಾಸ ಪರಿಹಾರವಾಗಿ ನವೋತ್ಸಾಹ ಮೂಡುತ್ತದೆ. ಕಣ್ಣುಗಳ ದಣಿವಿನ ನಿವಾರಣೆಗೂ ಇದು ಉಪಯುಕ್ತ.

6. ವಾಯು ಮಾಲಿನ್ಯದಿಂದ ಕಣ್ಣುಗಳಿಗೆ ಆಯಾಸವಾಗುವ ಸಾಧ್ಯತೆ ಹೆಚ್ಚು. ಗಾಳಿಯಲ್ಲಿನ ಧೂಳಿನಿಂದಾಗಿ ನೇತ್ರ ಸೋಂಕಿಗೆ ಕಾರಣವಾಗುತ್ತದೆ. ಆಗಾಗ ಶುದ್ದವಾದ ನೀರಿನಿಂದ ಕಣ್ಣುಗಳನ್ನು ತೊಳೆಯಬೇಕು. ಜೊತೆಗೆ ಮುಖಕ್ಕೆ ಅಂಟಿದ ಧೂಳಿನ ಕಣಗಳನ್ನು ಹೋಗಲಾಡಿಸಲು ತಣ್ಣೀರಿನಿಂದ ಮುಖ ತೊಳೆದುಕೊಳ್ಳಬೇಕು. ನೀರಿನಲ್ಲಿ ಹಸಿ ಧನಿಯಾವನ್ನು ಹಾಕಿ ಕೊಂಚ ಸಮಯದ ನಂತರ ಆ ನೀರಿನಿಂದ ಕಣ್ಣು ತೊಳೆದುಕೊಂಡರೆ ಕಣ್ಣಿನ ಕಾಯಿಲೆಗಳು ಬರದಂತೆ ತಡೆಗಟ್ಟಬಹುದು.

7. ಬೇಸಿಗೆಯಲ್ಲಿ ಮಹಿಳೆಯರಿಗೆ ಮುಟ್ಟಾಗುವ ಸಮಯದಲ್ಲಿ ಹೆಚ್ಚಾಗಿ ರಕ್ತಸ್ರಾವವಾಗುತ್ತದೆ. ಇದಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶವಿರುವ ಆಹಾರ ಸೇವಿಸಬೇಕು ಜೊತೆಗೆ ಯೆಥೇಚ್ಚವಾಗಿ ನೀರು ಕುಡಿಯಬೇಕು.

8. ಕೆಲವರಿಗೆ ಬೇಸಿಗೆಯಲ್ಲಿ ಕೂದಲು ವಿಪರೀತ ಉದುರುತ್ತದೆ. ಫಂಗಸ್, ಬ್ಯಾಕ್ಟೀರಿಯಾ ಮುಂತಾದ ಸೂಕ್ಷ್ಮಾಣುಗಳಿಂದ ಬರುವ ಕಾಯಿಲೆಗಳು, ತಲೆಹೊಟ್ಟು, ಮಾನಸಿಕ ಸಂಘರ್ಷ, ಹಾರ್ಮೋನುಗಳ ಅಸಮರ್ಪಕ ನಿರ್ವಹಣೆ – ಇವೇ ಮೊದಲಾದ ಸಮಸ್ಯೆಗಳು ಈ ಋತುವಿನಲ್ಲಿ ಸಾಮಾನ್ಯ. ಬಿಳಿ ಹೊಟ್ಟಿನಂಥ ಕಾಯಿಲೆಗಳನ್ನು ತಡೆಗಟ್ಟಲು ಸ್ನಾಲ್ಸ್ ಚಿಕಿತ್ಸೆ ನೀಡಿ ಹಾಗೂ ಸಮೀಕೃತ ಆಹಾರ ಸೇವಿಸಿ ಒಂದು ಹಂತದವರೆಗೆ ಅದನ್ನು ನಿಯಂತ್ರಿಸಬಹುದು.

9. ಬೆವರು ಹೆಚ್ಚಾಗಿ ಹರಿಸುವ ಕಾಲವಾದ್ದರಿಂದ ತಲೆ ಮತ್ತು ತಲೆಗೂದಲನ್ನು ಶುಚಿಯಾಗಿಡಲು ಗಮನಹರಿಸಬೇಕು.

ಬೇಸಿಗೆಯ ಅತೀವ ಸೆಖೆ ಹಾಗೂ ಬೇಸಿಗೆ ಕಾಯಿಲೆಗಳಿಂದ ಪಾರಾಗಲು ದೇಹವನ್ನು ಆದಷ್ಟು ಶುಚಿಯಾಗಿ ಇಡಬೇಕೆಂಬುದೇ ಇದರ ಒಟ್ಟು ತಾತ್ಪರ್ಯ. ಮನೆಯಿಂದ ಹೊರ ಹೋಗಿ ಮರಳಿ ಮನೆಗೆ ಬಂದರೆ ಕೈ ಕಾಲು ಮುಖವನ್ನು ತೊಳೆದುಕೊಂಡು ಪರಿಶುದ್ದಗೊಳಿಸಬೇಕು. ಅದರಂತೆ ಹೆಚ್ಚು ಹೊತ್ತ ಫ್ಯಾನ್ ಗಾಳಿಯಲ್ಲಿರುವುದು ಅಥವಾ ಹವಾನಿಯಂತ್ರಿತ ಕೊಠಡಿಯಲ್ಲಿ ನಿದ್ರಿಸುವುದು ರೂಢಿ ಮಾಡಿಕೊಳ್ಳಬಾರದು. ಏಕೆಂದರೆ ಇದು ಗುಣಕ್ಕಿಂತಲೂ ದೋಷವನ್ನೇ ಉಂಟು ಮಾಡುತ್ತದೆ. ಪ್ರಕೃತಿ ಜೊತೆ ಕೂಡಿ ಬಾಳುವುದಕ್ಕೆ ಹೆಚ್ಚು ಒತ್ತು ನೀಡಬೇಕು. ನಿಸರ್ಗದಿಂದ ತಪ್ಪಿಸಿಕೊಂಡು ಬದುಕುವುದರಿಂದ ಇದ್ದಕ್ಕಿದ್ದಂತೆ ಆರೋಗ್ಯ ಕೆಡುವುದಕ್ಕೆ ಕಾರಣವಾಗುತ್ತದೆ.

ಡಾ.ವಸುಂಧರಾ ಭೂಪತಿ
ಸಿದ್ಧಾರ್ಥ ಆಯುರ್ವೇದ ಕ್ಲಿನಿಕ್
ನಂ.222, 2ನ `ಇ’ ಕ್ರಾಸ್, 3ನೇ ಬ್ಲಾಕ್, 3ನೇ ಸ್ಟೇಜ್, ಬಸವೇಶ್ವರನಗರ,
ಬೆಂಗಳೂರು – 560 079, ಮೊ: 9480334750

Share this: