Vydyaloka

ಬೇಸಿಗೆಯಲ್ಲಿ ಆರೋಗ್ಯ ಹೆಜ್ಜೆಗಳು – ಬೇಸಿಗೆಯ ಬೇಗೆಯನ್ನು ನಿವಾರಿಸುವುದು ಹೇಗೆ?

ಬೇಸಿಗೆಯಲ್ಲಿ ಆರೋಗ್ಯ ಸಮಸ್ಯೆಗಳು ಸಾಕಷ್ಟು ಬರಬಹುದು. ಎಷ್ಟೋ ಜನ ಸುಸ್ತು, ದೌರ್ಬಲ್ಯಗಳನ್ನು ಅನುಭವಿಸುತ್ತಾರೆ. ಸಾಧ್ಯವಾದಷ್ಟೂ ತಂಪು ಗುಣ ಹೊಂದಿದ ಆಹಾರದ್ರವ್ಯಗಳು ಮತ್ತು ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಬೇಸಿಗೆಯಲ್ಲಿ ನಾವು ಪಾಲಿಸಬೇಕಾದ ಕೆಲವು ನಿಯಮಗಳು ಮತ್ತು ಬೇಸಿಗೆಯ ಬೇಗೆಯನ್ನು ನಿವಾರಿಸಬಲ್ಲ ಕೆಲವು ಪಾನಿಯಗಳ ಬಗ್ಗೆ ತಿಳಿದುಕೊಳ್ಳೋಣ.

ಚಳಿಗಾಲ ಮುಗಿದು ಬೇಸಿಗೆಯತ್ತ ಕಾಲ ಬದಲಾದಂತೆ ನಮ್ಮ ದೇಹದಲ್ಲೂ ಹಲವು ರೀತಿಯ ಬದಲಾವಣೆಗಳಾಗುತ್ತವೆ. ಹಾಗಾಗಿ ಎಷ್ಟೋ ಜನ ಸುಸ್ತು, ದೌರ್ಬಲ್ಯಗಳನ್ನು ಅನುಭವಿಸುತ್ತಾರೆ. ಆದರೆ ಕಾಲಕ್ಕೆ ತಕ್ಕಂತೆ ನಮ್ಮ ಆಹಾರ, ದಿನಚರಿಗಳನ್ನು ಇಟ್ಟುಕೊಂಡರೆ ತೊಂದರೆಗಳನ್ನು ಎದುರಿಸಬೇಕಿಲ್ಲ.

1. ಬೇಸಿಗೆಯ  ಕಾಲದಲ್ಲಿ ಸಾಧ್ಯವಾದಷ್ಟೂ ತಂಪು ಗುಣ ಹೊಂದಿದ ಆಹಾರದ್ರವ್ಯಗಳು ಮತ್ತು ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಅಂದರೆ ಹಾಲು, ಬೆಣ್ಣೆ, ಬಸಳೆಸೊಪ್ಪು, ಬೂದುಗುಂಬಳಕಾಯಿ, ಹಾಲುಗುಂಬಳಕಾಯಿ, ಒಂದೆಲಗ, ನೆಲ್ಲಿಕಾಯಿ, ಒಣದ್ರಾಕ್ಷಿ, ಮೆಂತೆಸೊಪ್ಪು, ಖರ್ಜೂರ, ಚಿಕ್ಕು (ಸಪೋಟ), ಸೀತಾಫಲ, ಖರಬೂಜದಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಾ ಬಂದರೆ ಬೇಸಿಗೆ ಬೇಗೆ ಅನ್ನಿಸುವುದಿಲ್ಲ. ಈ ರೀತಿ ಸಮಸ್ಯೆ ಇರುವವರು ಉಪ್ಪು, ಹುಳಿ, ಖಾರಗಳನ್ನು ಸಾಧ್ಯವಾದಷ್ಟೂ ಕಡಿಮೆ ಸೇವಿಸಬೇಕು.

2. ವಿಶೇಷವಾಗಿ ಹಿರಿಯರಿಗೆ ಬೇಸಿಗೆಯಲ್ಲಿ ಉಷ್ಣವಾಗುವುದರ ಜೊತೆಗೆ ನಿಶ್ಶಕ್ತಿಯೂ ಕಾಡುತ್ತದೆ. ಹಾಗಾಗಿ, ಖರ್ಜೂರದ ಮಿಲ್ಕ್ ಶೇಕ್ ಮಾಡಿಕೊಂಡು ಅಂದರೆ ಮೆತ್ತನೆಯ, ಕಪ್ಪು ಬಣ್ಣದ ಖರ್ಜೂರಗಳ ಬೀಜ ತೆಗೆದು ಹಾಲಿನ ಜೊತೆ ರುಬ್ಬಿ ಹಸಿವಿರುವ ಸಮಯದಲ್ಲಿ ಅಂದರೆ ಮಧ್ಯಾಹ್ನ 12 ಘಂಟೆಯ ಹೊತ್ತಿಗೆ ಸೇವಿಸಿದರೆ ತುಂಬಾ ಅನುಕೂಲವಾಗುತ್ತದೆ. ಬೂದುಗುಂಬಳಕಾಯಿಯಂತೂ ಈ ಕಾಲದಲ್ಲಿ ಅತ್ಯಂತ ಪ್ರಶಸ್ತವಾದ ಆಹಾರದ್ರವ್ಯ. ಏಕೆಂದರೆ ಬೂದುಗುಂಬಳಕಾಯಿಯು ತಂಪುಗುಣವನ್ನು ಹೊಂದಿದ್ದು ನಿಶ್ಶಕ್ತಿ, ದೇಹದಲ್ಲಿ ಉರಿ, ಮಾನಸಿಕ ಒತ್ತಡ, ನಿದ್ರಾಹೀನತೆಗಳನ್ನು ಕಡಿಮೆ ಮಾಡಲು ಅತ್ಯಂತ ಸಹಾಯಕ. ಹಾಗಾಗಿ ನಿತ್ಯವೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೂದುಗುಂಬಳದ ಜ್ಯೂಸ್ ಅನ್ನು ಸೇವಿಸಿದರೆ ಅನುಕೂಲವಾಗುತ್ತದೆ.

3. ಮಣ್ಣಿನ ಮಡಕೆಯಲ್ಲಿ ಇರಿಸಿದ, ಪ್ರಾಕೃತಿಕವಾಗಿ ತಂಪಾದ ನೀರನ್ನು ಬೇಸಿಗೆಯಲ್ಲಿ ಸೇವಿಸಬೇಕೆಂದು ಆಯುರ್ವೇದ ಹೇಳುತ್ತದೆ. ರೆಫ್ರಿಜರೇಟರ್ ನಲ್ಲಿ ಇರಿಸಿದ ನೀರಿಗಿಂತ ಇದು ಎಷ್ಟೋ ಉತ್ತಮ. ತೆಳುವಾದ ಹತ್ತಿ ಬಟ್ಟೆಯನ್ನು ಧರಿಸುವುದು, ಶುದ್ಧ ಶ್ರೀಗಂಧದ ಕೊರಡನ್ನು ತೇಯ್ದು ದೇಹದ ಮೇಲೆ ಹಚ್ಚಿಕೊಳ್ಳುವುದು ಮುಂತಾದ ಕ್ರಿಯೆಗಳ ಮೂಲಕ ದೇಹವನ್ನು ತಂಪಾಗಿರಿಸಿಕೊಳ್ಳಲು ಆಯುರ್ವೇದ ಸಲಹೆ ನೀಡುತ್ತದೆ.

Also Read: ಬಾಯಾರಿಕೆ : ತೊಂದರೆಗಳೇನು?ಪರಿಹಾರೋಪಾಯಗಳೇನು?

4. ತಮಗೆ ದೇಹ ಉಷ್ಣವಾಗಿಯೇ ಇರುತ್ತದೆ ಎಂಬುದು ಹಲವು ಜನರ ದೂರು. ಇಂಥವರಿಗೆ ಬೇಸಿಗೆ ಇನ್ನೂ ಯಾತನಾದಾಯಕ. ಇದಕ್ಕೆ ಗರಿಕೆ ಮದ್ದಾಗುತ್ತದೆ. ಅದ್ಭುತವಾಗಿ ತಂಪು ಗುಣವನ್ನು ಹೊಂದಿರುವ ಗರಿಕೆಯನ್ನು ಒಂದು ಮುಷ್ಟಿಯಷ್ಟು ತಂದು ಹೆಚ್ಚಿ ನೀರಿನ ಜೊತೆ ರುಬ್ಬಿ ಸೋಸಿ ಅದಕ್ಕೆ ಒಂದು ಚಮಚದಷ್ಟು ತೇಯ್ದ ಶ್ರೀಗಂಧವನ್ನು ಹಾಕಿ, ಬೇಕೆನಿಸಿದರೆ ರುಚಿಗೆ ಸ್ವಲ್ಪ ಜೋನಿಬೆಲ್ಲ ಸೇರಿಸಿ ಕುಡಿದರೆ ಕಣ್ಣುರಿ, ತಲೆ ಬಿಸಿ, ಪಾದದ ಉರಿ, ಹೊಟ್ಟೆ ಉರಿ, ಮಾನಸಿಕ ಕಿರಿಕಿರಿಗಳು ಕಡಿಮೆಯಾಗುತ್ತವೆ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಮಧ್ಯಾಹ್ನ 12 ರ ಒಳಗೆ ಸೇವಿಸುವುದು ಉತ್ತಮ.

5.ಬೇಸಿಗೆಯಲ್ಲಿ ರಾಸಾಯನಿಕ ಭರಿತ ಸಿದ್ಧ ತಂಪುಪಾನೀಯಗಳನ್ನು ಸೇವಿಸುವುದು ಹಲವರ ರೂಢಿ. ಆದರೆ ಇದರಿಂದ ಆರೋಗ್ಯ ಹಾಳಾಗುವುದು ಶತಃಸಿದ್ಧ. ಇಂದು ಆರೋಗ್ಯ ಹೆಚ್ಚಿಸುವ, ಚರ್ಮದ ತೊಂದರೆಗಳನ್ನು ನಿವಾರಿಸುವ, ಚರ್ಮದ ಸೌಂದರ್ಯವನ್ನು ಕಾಪಾಡುವ, ಉರಿಮೂತ್ರ, ಚರ್ಮದಲ್ಲಿ ಉರಿ, ತುರಿಕೆ, ಬೆವರುಸಾಲೆ, ಚರ್ಮ ಕಪ್ಪಾಗುವುದು ಮುಂತಾದ ಉಷ್ಣದಿಂದಾಗುವ ಸಮಸ್ಯೆಗಳನ್ನು ನಿವಾರಿಸುವ ಒಂದು ಪಾನೀಯವನ್ನು ಮಾಡಿಕೊಂಡು ಬಳಸುವ ವಿಧಾನವನ್ನು ತಿಳಿದುಕೊಳ್ಳೋಣ. ಲಾವಂಚ ಮತ್ತು ರಕ್ತ ಚಂದನಗಳನ್ನು ಸಣ್ನ ಸಣ್ಣ ತುಂಡುಗಳನ್ನಾಗಿ ಮಾಡಿ ಇಡೀ ದಿನ ಮನೆಯವರಿಗೆಲ್ಲಾ ಸಾಲುವಷ್ಟು ನೀರಿಗೆ ಹಾಕಿ ಕುದಿಸಬೇಕು. ನೀರು ಕುದಿಯುತ್ತಿಂದಂತೆಯೇ ಅದಕ್ಕೆ ಸೊಗದೇ ಬೇರಿನ ಪುಡಿ ಅಥವಾ ಚೂರುಗಳನ್ನು ಹಾಕಿ ಪಾತ್ರೆಯನ್ನು ಮುಚ್ಚಿ ಬೆಂಕಿ ಆರಿಸಬೇಕು. ನೀರು ತಣಿದ ನಂತರ ಮನೆಮಂದಿಯೆಲ್ಲಾ ಇಡೀ ದಿನ ಇದೇ ನೀರನ್ನು ಸೇವಿಸಬಹುದು. ನಾಲ್ಕು ಲೀಟರ್ ನೀರನ್ನು ತಯಾರಿಸುವುದಿದ್ದರೆ ಲಾವಂಚದ ತುಂಡುಗಳನ್ನು ನಾಲ್ಕು ಚಮಚದಷ್ಟು ಮತ್ತು ಸೊಗದೇ ಬೇರು ಹಾಗೂ ಚಂದನಗಳನ್ನು ಒಂದು ಚಮಚದಷ್ಟು ಬಳಸಬೇಕು.

6. 10 ಗ್ರಾಂನಷ್ಟು ಕೊತ್ತಂಬರಿ ಬೀಜವನ್ನು ತೆಗೆದುಕೊಂಡು ಬಿಸಿನೀರಿನಲ್ಲಿ ರಾತ್ರಿ ಇಟ್ಟು ಬೆಳಿಗ್ಗೆ ಆ ನೀರನ್ನು ಸೇವಿಸುವುದರಿಂದ ಬೇಸಿಗೆಯಲ್ಲಿ ಕಾಣುವ ಉರಿ, ಬಾಯಿಹುಣ್ಣು ಮುಂತಾದ ಸಮಸ್ಯೆಗಳು ಹತೋಟಿಗೆ ಬರುತ್ತವೆ. ತ್ರಿಫಲಾ ಚೂರ್ಣ, ಅರಿಶಿನ, ಲಾವಂಚ, ಸೊಗದೇ ಬೇರು ಮತ್ತು ಬೇವಿನ ಪುಡಿಗಳ ಮಿಶ್ರಣ ಮಾಡಿಟ್ಟುಕೊಂಡು ವಾರಕ್ಕೆ ಎರಡು ದಿನವಾದರೂ ಅದಕ್ಕೆ ನೀರು ಹಾಕಿ ಪೇಸ್ಟ್ ಮಾಡಿ ಮೈಗೆಲ್ಲಾ ಹಚ್ಚಿ ಸ್ನಾನ ಮಾಡುವುದರಿಂದ ಬೆವರುಸಾಲೆ, ಅತಿಯಾದ ಬೆವರು ಮುಂತಾದ ಸಮಸ್ಯೆಗಳಲ್ಲಿ ಅನುಕೂಲವಾಗುತ್ತದೆ.

7. ನಿತ್ಯವೂ ಯೋಗಾಸನಗಳು, ಭ್ರಾಮರಿ, ಶೀತಲೀ, ಶೀತ್ಕಾರಿಗಳಂತಹ ಪ್ರಾಣಾಯಾಮಗಳು ಮತ್ತು ಚಿನ್ಮುದ್ರೆ, ವರುಣ ಮುದ್ರೆಗಳಂತಹ ಮುದ್ರೆಗಳನ್ನು ಅಭ್ಯಾಸ ಮಾಡುವುದರಿಂದ ತುಂಬಾ ಸಹಾಯವಾಗುತ್ತದೆ. ಅತಿಯಾಗಿ ದೈಹಿಕ ವ್ಯಾಯಾಮ, ತುಂಬಾ ಹೊತ್ತು ಬಿಸಿಲಿಗೆ ಮೈಯೊಡ್ಡುವುದು, ಉಷ್ಣ ಗುಣವಿರುವ ಪದಾರ್ಥಗಳನ್ನು ಸೇವಿಸುವುದು, ಉಪ್ಪು-ಹುಳಿ-ಖಾರದ ರುಚಿಗಳನ್ನು ಹೆಚ್ಚಾಗಿ ಸೇವಿಸುವುದು ಮುಂತಾದ ತಪ್ಪುಗಳನ್ನು ಬೇಸಿಗೆಯಲ್ಲಿ ಮಾಡಬಾರದು.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:94487 29434/97314 60353
Email: drvhegde@yahoo.com
http://nisargamane.com

Share this: