Vydyaloka

ಬೇಸಿಗೆಯ ಅಪಾಯಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ

ಬೇಸಿಗೆಯ ಅಪಾಯಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ಬಿಸಿಲಿನ ತಾಪ ಏರುತ್ತಿದೆ. ಅಂತೆಯೇ ಬೇಸಿಗೆಯನ್ನು ಕಾಡುವ ಹಲವು ರೋಗಗಳ ಆತಂಕವೂ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಬಹುದು. ಅದಾಗ್ಯೂ ಆಹಾರ ಜೀವನ ಶೈಲಿ ಬಗ್ಗೆ ಎಚ್ಚರ ವಹಿಸಿದರೆ ಬೇಸಿಗೆಯಲ್ಲೂ ಆರೋಗ್ಯಕರವಾದ ಜೀವನ ನಡೆಸಬಹುದು.

ಸುಡು ಬೇಸಿಗೆ ಬಂತೆಂದರೆ ಸಾಕು ಅದರ ಹಿಂದೆಯೇ ರೋಗಗಳು ಸಾಲು ಸಾಲಾಗಿ ಬರುತ್ತವೆ. ಬೇಸಿಗೆಯಲ್ಲಿ ಅನೇಕ ರೋಗಗಳು ಜನರನ್ನು ಕಾಡುತ್ತವೆ. ಒಂದೆಡೆ ಉರಿ ಬಿಸಿಲಿನ ತಾಪ ಇನ್ನೊಂದೆಡೆ ರೋಗ ಬಾಧೆ ಮಂದಿಯನ್ನು ನಿತ್ರಾಣಗೊಳಿಸುತ್ತದೆ. ಅದರಲ್ಲೂ ಈ ಕಾಲದಲ್ಲಿ ಸೋಂಕು ರೋಗಗಳ ಹಾವಳಿ ಹೆಚ್ಚಾಗಿರುತ್ತದೆ. ಚರ್ಮ ಸುಡುವಿಕೆ (ಸನ್‍ಬರ್ನ್), ಚರ್ಮ ಅಲರ್ಜಿ, ತಲೆ ನೋವು, ತಲೆ ಸುತ್ತುವಿಕೆ, ಸುಸ್ತು, ಆಯಾಸ, ಶ್ವಾಸಕೋಶ ತೊಂದರೆ, ವಿಪರೀತ ಬೆವರು, ಬೆವರು ಗುಳ್ಳೆಗಳು, ಕಾಲರಾ, ಉಷ್ಣದ ಕೆಮ್ಮು-ನೆಗಡಿ, ದೇಹದಲ್ಲಿ ನೀರಿನ ಕೊರತೆಯಿಂದ ಉಂಟಾಗುವ ಅನೇಕ ತೊಂದರೆಗಳು, ಅಂಗೈ-ಅಂಗಾಲು ಉರಿ, ಉರಿ ಮೂತ್ರ, ಮಲಬದ್ದತೆ-ಇವು ಬಿಸಿಲಿನ ಝಳದಿಂದ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಬೇಸಿಗೆ ರೋಗಗಳು.

ಆಹಾರ : ಇರಲಿ ಎಚ್ಚರ

1. ಬೇಸಿಗೆಯಲ್ಲಿ ಸಾಂಕ್ರಾಮಿಕ ಮತ್ತು ಸೋಂಕು ರೋಗಗಳಿಗೆ ಜನರು ಸುಲಭವಾಗಿ ಗುರಿಯಾಗುತ್ತಾರೆ. ಬಿಸಿಲಿನ ತಾಪದಿಂದ ದಣಿವಾರಿಸಿಕೊಳ್ಳಲು ರಸ್ತೆ ಪಕ್ಕದಲ್ಲಿ ಲಭಿಸುವ ಅಶುಚಿತ್ವ ತಂಪು ಪಾನೀಯ, ತೆರೆದ ಹಣ್ಣುಗಳನ್ನು ಸೇವಿಸಿದರೆ ವಾಂತಿ-ಭೇದಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಅಂಟು ಜಾಡ್ಯಗಳಿಂದ ಜ್ವರ, ವಿಷಮಶೀತ ಜ್ವರ, ವೈರಾಣು ಸೋಂಕು ತಲೆದೋರುತ್ತದೆ. ಈ ಸುಡು ಸುಡು ಬೇಸಿಗೆ ಮಧ್ಯೆ, ಅಪರೂಪಕ್ಕೆ ಮಳೆ ಬಂದರೆ, ಗಾಯದ ಮೇಲೆ ಬರೆ ಎಳೆದಂತೆ ಸೋಂಕು ಕಾಯಿಲೆಗಳು ಉಲ್ಬಣಗೊಳ್ಳುತ್ತವೆ.

2. ಬೇಸಿಗೆ ಕಾಲದಲ್ಲಿ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಾವು ಪ್ರತಿನಿತ್ಯ ಸೇವಿಸುವ ಆಹಾರ-ಉಪಹಾರ, ನೀರು-ಪಾನೀಯ-ಪೇಯ, ಬಟ್ಟೆ-ಬರೆ ಈ ಎಲ್ಲದರಲ್ಲೂ ಸ್ವಲ್ಪ ವ್ಯತ್ಯಾಸವಾದರೂ ಆರೋಗ್ಯ ಏರುಪೇರಾಗುತ್ತದೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ರೋಗಕಾರಕ ಸೂಕ್ಷ್ಮಾಣುಗಳು ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತವೆ. ಈ ಕಾರಣದಿಂದಲೇ ರೋಗಗಳು ಒಬ್ಬರಿಂದ ಇನ್ನೊಬ್ಬರಿಗೆ ಬಹುಬೇಗ ಹರಡುತ್ತವೆ.

3. ಒಂದೆಡೆ ಬಿಸಲಿನ ತಾಪ, ಪ್ರಖರ ಬೆಳಕಿನ ಝಳದಿಂದಾಗಿ ಜನರು ನಿತ್ರಾಣಗೊಳ್ಳುತ್ತಾರೆ. ದೇಹದಲ್ಲಿ ನೀರಿನ ಕೊರತೆಯಿಂದಾಗಿ ಈ ಸಮಸ್ಯೆಗಳು ಉದ್ಭವಿಸುತ್ತವೆ. ಜೊತೆಗೆ ರೋಗ ಪ್ರತಿರೋಧಕ ಶಕ್ತಿ ಕಡಿಮೆ ಇದ್ದರೆ ವ್ಯಕ್ತಿಯು ಸುಲಭವಾಗಿ ಹಾಸಿಗೆಯ ಮಿತ್ರನಾಗುತ್ತಾನೆ. ಬೇಸಿಗೆ ಕಾಲದ ಸ್ಥಿತಿಯೇ ಹೀಗಿರುವುದರಿಂದ ಪ್ರತಿಯೊಬ್ಬರೂ ಸ್ವಚ್ಚತೆ ಮತ್ತು ಆರೋಗ್ಯದ ಕಡೆ ಗಮನ ಹರಿಸುವುದು ಅಗತ್ಯ.

ಮುಂಜಾಗ್ರತೆ ಕ್ರಮಗಳು:

1. ಬೇಸಿಗೆಯಲ್ಲಿ ಕಾಡುವ ಬಗೆಬಗೆಯ ರೋಗಗಳನ್ನು ತಡೆಗಟ್ಟಲು ಸೂಕ್ತ ಮುನ್ನೆಚ್ಚರಿಕೆ ಅಗತ್ಯ.

2. ರಸ್ತೆ ಪಕ್ಕದ ತಿಂಡಿ-ತಿನಿಸು-ಪಾನೀಯಗಳನ್ನು ತ್ಯಜಿಸುವುದು ಸೂಕ್ತ. ಏಕೆಂದರೆ ಧೂಳು, ವಾಯು ಮಾಲಿನ್ಯ, ಸೂಕ್ಷ್ಮ ರೋಗಾಣು, ನೊಣ, ಸೊಳ್ಳೆಗಳು ಹಾಗೂ ಕಲುಷಿತ ನೀರಿನಿಂದ ರೋಗಗಳು ಬೇಗ ಕಾಣಿಸಿಕೊಳ್ಳುತ್ತವೆ.

3. ಮಂಜುಗಡ್ಡೆ ಹಾಕಿದ ತಂಪು ಪಾನೀಯ ಅರೋಗ್ಯಕ್ಕೆ ಹಾನಿಕರ. ಮಂಜುಗಡ್ಡೆಯನ್ನು ಕಲುಷಿತ ನೀರು ಮತ್ತು ಕೊಳಕು ಪರಿಸರದಲ್ಲಿ ತಯಾರಿಸಲಾಗುತ್ತದೆ. ಇಂಥ ಐಸ್‍ನನ್ನು ಶುಚಿತ್ವ ಇಲ್ಲದ ತಂಪುಪಾನೀಯದೊಂದಿಗೆ ಸೇವಿಸಿದರೆ ಅನಾರೋಗ್ಯಕ್ಕೆ ಆಹ್ವಾನ ನೀಡಿದಂತೆ.

4. ಉಷ್ಣಕಾರಕ ಅಧಿಕ ಮಾಂಸ ಸೇವನೆ ತರವಲ್ಲ. ಜೊತೆಗೆ ಹೆಚ್ಚಿನ ಸಾಂಬಾರ ಪದಾರ್ಥಗಳನ್ನು ಬಳಸಬಾರದು.

5. ಸಾಧ್ಯವಾದಷ್ಟೂ ದ್ರವರೂಪದ ಆಹಾರ ಸೇವನೆ ಹೆಚ್ಚಾಗಿರಲಿ. ಶುದ್ದವಾದ ನೀರನ್ನು ಯೆಥೇಚ್ಚವಾಗಿ ಕುಡಿಯಬೇಕು. ತಾಜಾ ಹಣ್ಣಿನ ರಸ ಸೇವಿಸಬೇಕು. ಹೆಚ್ಚು ತಣ್ಣನೆಯ ನೀರು ಕುಡಿಯಬಾರದು. ಬಿಸಿ ಆಹಾರ ಮತ್ತು ಚೆನ್ನಾಗಿ ಕುದಿಸಿ ಆರಿಸಿದ ನೀರನ್ನು ಸೇವಿಸುವುದು ಉತ್ತಮ.

6. ಬೇಸಿಗೆ ಕಾಲದಲ್ಲಿ ವಾತಾವರಣದಲ್ಲಿ ಧೂಳಿನ ಅಂಶ ಅತಿಯಾಗಿರುವುದರಿಂದ ಬೆಳಿಗ್ಗೆ ಮತ್ತು ಸಂಜೆ ಸ್ನಾನ ಒಳ್ಳೆಯದು.

7. ಸೊಪ್ಪು, ಹಣ್ಣು, ತರಕಾರಿ, ಮೊಳಕೆ ಕಾಳುಗಳ ಸೇವನೆ ಉತ್ತಮ. ‘ಸಿ’ ಜೀವಸತ್ವ ಹೇರಳವಾಗಿರುವ ನಿಂಬೆಹಣ್ಣು, ಕಿತ್ತಳೆಹಣ್ಣುಗಳನ್ನು ಹೆಚ್ಚಾಗಿ ಸೇವಿಸಬಹುದು. ರೆಫ್ರಿಜೇಟರ್‍ನಲ್ಲಿ ಇರಿಸಿದ ಆಹಾರ ಬಳಸದಿರುವುದು ಸೂಕ್ತ.

8. ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ಸನ್ ಬರ್ನ್ ಅಥವಾ ಸೂರ್ಯನ ಪ್ರಖರತೆಯಿಂದ ಚರ್ಮ ಸುಡುವಿಕೆ. ತಾಜಾ ಲೋಳೆರಸ (ಆಲೋವೆರಾ) ಉಪಯೋಗದಿಂದ ಈ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ನಿವಾರಿಸಿಕೊಳ್ಳಬಹುದು. ದಿನಕ್ಕೆ ಮೂರ್ನಾಲ್ಕು ಬಾರಿ ತಣ್ಣೀರಿನಿಂದ ಮುಖ ತೊಳೆಯಬೇಕು. ಐಸ್‍ಕ್ಯೂಬ್‍ನಿಂದ ಮಸಾಜ್ ಮಾಡಿಕೊಂಡರೆ ಚರ್ಮ ಕಾಂತಿಯುಕ್ತವಾಗುತ್ತದೆ.

9. ಸ್ನಾನಕ್ಕೆ ಮುನ್ನ ಮುಖ, ಕೈ, ಕಾಲು ಮತ್ತು ಕುತ್ತಿಗೆಗೆ ಮೊಸರಿನಿಂದ ಮಸಾಜ್ ಮಾಡಿಕೊಂಡರೆ ಚರ್ಮದ ಹೊಳಪು ಹೆಚ್ಚಾಗುತ್ತದೆ. ಹೊರಗೆ ಹೋಗುವಾಗ ಸನ್ ಸ್ಕ್ರೀನ್ ಲೋಷನ್, ಛತ್ರಿ ಬಳಸಬಹುದು. ಸಿಲ್ವರ್ ಲೇಪನ ಇರುವ ಕೊಡೆ ಬಿಸಿಲಿನ ಝಳವನ್ನು ತಡೆಯುತ್ತದೆ. ವೈದ್ಯರ ಸಲಹೆ ಮೇರೆಗೆ ಮಕ್ಕಳಿಗೂ ಲೋಷನ್ ಹಚ್ಚಬಹುದು.

Also Read: ಬೇಸಿಗೆಯಲ್ಲಿ ಆರೋಗ್ಯ ಹೆಜ್ಜೆಗಳು – ಬೇಸಿಗೆಯ ಬೇಗೆಯನ್ನು ನಿವಾರಿಸುವುದು ಹೇಗೆ?

ಮಕ್ಕಳ ಬಗ್ಗೆ ಕಾಳಜಿ ವಹಿಸಿ:

1. ಬೇಸಿಗೆ ಕಾಲ ಎದುರಾದಾಗ ಮಕ್ಕಳ ಬಗ್ಗೆ ವಿಶೇಷ ಕಾಳಜಿ ತೋರುವುದು ಅನಿವಾರ್ಯ. ಪರೀಕ್ಷಾ ಸಮಯದಲ್ಲಿ ಮನೆಯಲ್ಲಿ ತಯಾರಿ ನಡೆಸುವ ವಿದ್ಯಾರ್ಥಿಗಳು ಪರೀಕ್ಷೆ ಮುಗಿದ ಬಳಿಕ ಸ್ವಾತಂತ್ರ್ಯ ಪಡೆದವರಂತೆ ರಜೆ ಮಜಾ ಕಳೆಯಲು ಬೀದಿಗೆ ಇಳಿಯುತ್ತಾರೆ. ಸುಡು ಬಿಸಿಲು, ಪ್ರಖರ ಝಳ ಯಾವುದನ್ನೂ ಲೆಕ್ಕಿಸುವುದಿಲ್ಲ. ಪರೀಕ್ಷಾ ಜ್ವರದಿಂದ ಹೊರ ಬಂದ ವಿದ್ಯಾರ್ಥಿಗಳಿಗೆ ನಂತರ ಕಾಡುವುದು ಕ್ರಿಕೆಟ್ ಜ್ವರ. ಇಂಥ ಸನ್ನಿವೇಶದಲ್ಲಿ ಪೀಡಿಸುವ ತೊಂದರೆ ಎಂದರೆ ಸನ್‍ಸ್ಟ್ರೋಕ್ ಸಮಸ್ಯೆ. ಮಕ್ಕಳು ಹೆಚ್ಚು ಕಾಲ ಬಿಸಿಲಲ್ಲಿ ಕಳೆಯುವುದರಿಂದ, ಓಡಾಡುವುದರಿಂದ, ಆಟವಾಡುವುದರಿಂದ ತಲೆ ಸುತ್ತು, ಚರ್ಮ ಸುಡುವುದು, ಚರ್ಮದ ಅಲರ್ಜಿ, ಬೆವರುಗುಳ್ಳೆ ಕಾಣಿಸಿಕೊಳ್ಳುತ್ತವೆ.

2. ಇನ್ನು ಮಕ್ಕಳಿಗೆ ತುಂಬಾ ಉಪಟಳ ನೀಡುವ ರೋಗಗಳೆಂದರೆ ಟೈಫಾಯ್ಡ್, ಕಾಲರಾ, ಅಮ್ಮ, ಕಾಮಾಲೆ ಕಾಯಿಲೆಗಳು. ಈ ಪೀಡೆಗಳನ್ನು ಹೋಗಲಾಡಿಸಲು ಇರುವ ಮಾರ್ಗವೆಂದರೆ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು. ಸದಾ ಸ್ವಚ್ಚತೆ ಕಾಪಾಡುವುದು, ಐಸ್ ವಾಟರ್, ಬರ್ಗರ್, ರಸ್ತೆ ಪಕ್ಕದ ತಿಂಡಿ-ತಿನಿಸುಗಳಿಂದ ಮಕ್ಕಳನ್ನು ದೂರವಿಡುವುದು, ನೀರಿನ ಅಂಶ ಹೆಚ್ಚಿರುವ ಆಹಾರ ಸೇವನೆಗೆ ಪ್ರೋತ್ಸಾಹ ನೀಡುವುದು.

3. ಬೆಂಗಳೂರು ಮಹಾನಗರವನ್ನು ಅಗಾಗ ಕಾಡುವ ಮದ್ರಾಸ್-ಐ ಬೇಸಿಗೆಯಲ್ಲೂ ಮತ್ತೆ ಕಾಣಿಸಿಕೊಳ್ಳುವ ಆತಂಕವಿದೆ. ಗಾಳಿ-ಧೂಳು ಮತ್ತು ಸೂಕ್ಷ್ಮ ರೋಗಾಣು ಸೋಂಕಿನಿಂದಾಗಿ ಮದ್ರಾಸ್-ಐ ಅಥವಾ ಕೆಂಗಣ್ಣು ರೋಗ ಕಂಡು ಬರುವ ಸಾಧ್ಯತೆ ಇದೆ. ಬೇಸಿಗೆ ಋತುವಿನಲ್ಲಿ ಬೆಂಗಳೂರು ಸೇರಿದಂತೆ ವಿವಿಧೆಡೆ ತಾಪಮಾನದಲ್ಲಿ ಏರಿಳಿತವಾಗುತ್ತಿದ್ದು, ಅಲರ್ಜಿ ಮತ್ತು ಶ್ವಾಸಕೋಶದ ತೊಂದರೆಗೆ ಎಡೆಮಾಡಿಕೊಡುತ್ತಿದೆ.

ಸೂರ್ಯ ಮತ್ತು ಬೇಸಿಗೆ ಉಷ್ಣಾಂಶ:

1. ಬೇಸಿಗೆ ಕಾಲದಲ್ಲಿ ಅಡಗಿರುವ ಗುಪ್ತ ಆಪಾಯಗಳೆಂದರೆ ಧಗೆ ಮತ್ತು ಬಿಸಿಲಿನ ಝಳ. ಬೇಸಿಗೆಯಲ್ಲಿ ತುಂಬಾ ಸೆಕೆ ಮತ್ತು ಬಿಸಿಲಿನ ಝಳದಿಂದ ಸನ್‍ಸ್ಟ್ರೋಕ್ ಉಂಟಾಗಬಹುದು. ಇದನ್ನು ತಡೆಗಟ್ಟಲು ಮಕ್ಕಳಿಗೆ ದ್ರವರೂಪದ ಆಹಾರವನ್ನು ಹೆಚ್ಚಾಗಿ ನೀಡಬೇಕು. ಮಕ್ಕಳು ಹೊರಗೆ ಆಟವಾಡುತ್ತಿದ್ದರೆ, ಆಗಾಗ ವಿಶ್ರಾಂತಿ ನೀಡಬೇಕು. ಹಸಿವು, ಬಾಯಾರಿಕೆ, ಆಯಾಸ, ದಣಿವು, ತಲೆಸುತ್ತುವಿಕೆ, ವಾಂತಿ, ತಲೆನೋವು ಮತ್ತು ಜ್ವರದಂಥ ಲಕ್ಷಣಗಳನ್ನು ಗಮನಿಸಬೇಕು.

2. ಮೆಟಲ್ ಸ್ಲೈಡ್‍ಗಳು (ಲೋಹದ ಜಾರುವ ಹಲಗೆಗಳು) ಅಥವಾ ಇತರ ಬಿಸಿಯಾಗುವ ಆಟದ ಮೈದಾನದ ಉಪಕರಣಗಳಿಂದ ಮಕ್ಕಳಿಗೆ ಸುಟ್ಟ ಗಾಯಗಳಾಗಬಹುದು.

3. ಬಿಸಿಲಿನ ಸುಟ್ಟ ಗಾಯಗಳು (ಸನ್ ಬನ್ರ್ಸ್) : ಮಕ್ಕಳಿಗೆ ಬಿಸಿಲಿನಿಂದ ಸುಟ್ಟ ಗಾಯಗಳು (ಸನ್ ಬನ್ರ್ಸ್) ಆಗುವುದನ್ನು ತಪ್ಪಿಸಲು ಸನ್ ಸ್ಕ್ರೀನ್ ಲೇಪಿಸಿ.

ಜಲ ಸುರಕ್ಷತೆ ಮಾಹಿತಿ (ವಾಟರ್ ಸೇಫ್ಟಿ ಟಿಪ್ಸ್):

ಅನೇಕ ಕುಟುಂಬಗಳು ಬಿಸಿಲಿನ ತಾಪದಿಂದ ಪಾರಾಗಲು ಈಜುಕೊಳ, ವಾಟರ್ ಅಮ್ಯೂಸ್‍ಮೆಂಟ್ ಪಾರ್ಕ್ ಅಥವಾ ಹತ್ತಿರದ ಕೆರೆ-ಸರೋವರಗಳಿಗೆ ಹೋಗುತ್ತವೆ. ನೀರಿನಲ್ಲಿ ನಿಮ್ಮ ಮಕ್ಕಳ ಸುರಕ್ಷತೆಯನ್ನು ಕಾಪಾಡಲು ಈ ಕೆಳಗಿನ ಮಾಹಿತಿ ಬಗ್ಗೆ ಗಮನ ಹರಿಸಬೇಕು.

1. ಕೊಳಕ್ಕೆ ಬೇಲಿ ಅಳವಡಿಸಿ. ಬೇಲಿಯಲ್ಲಿ ಸ್ವಯಂ ಬಂದ್ ಆಗುವ ಮತ್ತು ಸ್ವಯಂ ಕೀಲಿ ಹೊಂದಿರುವ ಗೇಟ್ ಅಳವಡಿಸುವುದು ಮುಖ್ಯ.

2. ಮಕ್ಕಳಿಗೆ ಈಜು ತಿಳಿದಿದ್ದರೂ ಈಜು ಕೊಳದಲ್ಲಿ  ಮಕ್ಕಳ ಮೇಲೆ ನಿಗಾ ಇರಲಿ.

3. ಹೇಗೆ ಈಜಬೇಕು ಎಂಬುದು  ಮಕ್ಕಳಿಗೆ ಗೊತ್ತಿದ್ದರೂ ಸಹ  ಮಕ್ಕಳು ಸುರಕ್ಷಾ ಕವಚ (ಸೇಫ್ಟಿ ಜಾಕೆಟ್) ಧರಿಸುವಂತೆ ನೋಡಿಕೊಳ್ಳಿ.

4. ಮಗುವಿಗೆ ನಾಲ್ಕರಿಂದ ಐದು ವರ್ಷವಾದಾಗ ಆತ / ಅಕೆಗೆ ಈಜು ಕಲಿಸುವುದು ಉತ್ತಮ.

ಇತರ ಬೇಸಿಗೆ ಸುರಕ್ಷತೆ ಮಾಹಿತಿಗಳು:

1. ಬೇಸಿಗೆಯಲ್ಲಿ ಮಕ್ಕಳ ತ್ವಚೆ ರಕ್ಷಿಸಲು ಸನ್ ಸ್ಕ್ರೀನ್ ಬಳಕೆ, ಜಲ ಸುರಕ್ಷತೆ ಮತ್ತು ಬೇಸಿಗೆ ಉಷ್ಣಾಂಶದಿಂದ ರಕ್ಷಣೆ ನೀಡುವ ಜೊತೆಗೆ ಇತರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

2. ಪುಟ್ಟ ಮಕ್ಕಳನ್ನು ಲಾನ್ ಮೂವರ್‍ಗಳಿಂದ (ಹುಲ್ಲು ಕತ್ತರಿಸುವ ಯಂತ್ರಗಳು) ದೂರವಿರಿಸಿ.

3. ಅಗತ್ಯವಿದ್ದಾಗ ಕ್ರಿಮಿಕೀಟ ರೆಪೆಲೆಂಟ್‍ಗಳನ್ನು ಬಳಸಿ.

4. ಮಕ್ಕಳು ಹೊರಗೆ ಆಡುತ್ತಿರುವಾಗ ಅವರ ಬಗ್ಗೆ ನಿಗಾ ಇರಲಿ.

5. ನಿಮ್ಮ ಮಕ್ಕಳು ಸೈಕಲ್, ಸ್ಕೇಟ್ ಬೋರ್ಡ್ ಅಥವಾ ಸ್ಕೂಟರ್ ಸವಾರಿ ಮಾಡುವಾಗ ಹೆಲ್ಮೆಟ್ ಮತ್ತು ಪ್ಯಾಡ್‍ಗಳಂಥ ಸೂಕ್ತ ರಕ್ಷಣಾ ಸಾಧನಗಳನ್ನು ಬಳಸಲು ಸೂಚಿಸಿ.

6. ಪಟಾಕಿಯೊಂದಿಗೆ ಅಥವಾ ಬೆಂಕಿ ಕಾರುವ ವಸ್ತುಗಳೊಂದಿಗೆ ಸರಸವಾಡಲು  ಮಕ್ಕಳಿಗೆ ಅವಕಾಶ ನೀಡಬೇಡಿ.

7. ಒಂದು ಗಂಟೆಗೂ ಹೆಚ್ಚು ಕಾಲ ಉಳಿದ ಆಹಾರವನ್ನು ಮಕ್ಕಳಿಗೆ ಕೊಡಬೇಡಿ. ಇದರಿಂದ ಆಹಾರವು ವಿಷಮಯವಾಗಬಹುದು.

8. ವಿಷ ವಸ್ತುಗಳನ್ನು ಗುರುತಿಸಲು ಮತ್ತು ಅವುಗಳಿಂದ ದೂರವಿರಲು  ಮಕ್ಕಳಲ್ಲಿ ಅರಿವು ಮೂಡಿಸಿ.

 9. ಮನೆಯಲ್ಲಿ ಮಕ್ಕಳು ಸುರಕ್ಷಿತವಾಗಿರುವಂತೆ ನೋಡಿ ಕೊಳ್ಳಿ.

10. ಬೇಸಿಗೆ ಕಾಲದಲ್ಲಿ  ಮಕ್ಕಳು ಚಟುವಟಿಕೆಯಿಂದ ಇರುವಂತೆ ಮತ್ತು ಆರೋಗ್ಯಕರ ಆಹಾರ ಸೇವಿಸುವಂತೆ ನೋಡಿಕೊಳ್ಳಿ. ಜಂಕ್‍ಫಡ್, ಫಾಸ್ಟ್ ಫುಡ್ ಆಹಾರ ಸೇವಿಸಿದರೆ ಮಕ್ಕಳು ಸ್ಥೂಲಕಾಯರಾಗಬಹುದು.

Also Read: ಜಂಕ್ ಫುಡ್ ಖಯಾಲಿ ಮಾಡಿಕೊಂಡಲ್ಲಿ ಆಪಾಯ ಕಟ್ಟಿಟ್ಟ ಬುತ್ತಿ. 

ಡಾ. ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್,
82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 080-28413381/2/3/4      ಮೊ.: 97422 74849
 www.vims.ac.in

Share this: