Vydyaloka

ಬೇಸಿಗೆಯ ಆಹಾರ – ತಂಪು ಗುಣದ ದ್ರವ ಪ್ರಧಾನವಾಗಿರುವ ಆಹಾರವನ್ನು ಸೇವಿಸಿ

ಬೇಸಿಗೆಯ ಆಹಾರ ತುಂಬಾ ಹುಳಿ, ಉಪ್ಪು, ಖಾರ ಇರುವ, ಜೀರ್ಣಕ್ಕೆ ಕಷ್ಟಕರವಾದ ಮತ್ತು ಉಷ್ಣ ಗುಣಹೊಂದಿರ ಬಾರದು. ಆಯುರ್ವೇದದ ಗ್ರಂಥಗಳ ಪ್ರಕಾರ ಬೇಸಿಗೆಯಲ್ಲಿ ಸಿಹಿ ಪ್ರಧಾನವಾಗಿರುವ, ಸುಲಭವಾಗಿ ಜೀರ್ಣವಾಗುವಂತಹ, ಕೊಬ್ಬನ್ನು ಹೊಂದಿರುವ, ತಂಪು ಗುಣ ಹೊಂದಿರುವ ಮತ್ತು ದ್ರವ ಪ್ರಧಾನವಾಗಿರುವ ಆಹಾರವನ್ನು ಸೇವಿಸಬೇಕು.

ಕಾಲಕ್ಕೆ ತಕ್ಕಂತೆ ಆಹಾರ ಸೇವಿಸಿದರೆ ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ. ಆ ಕಾಲದ ಪ್ರಭಾವದಿಂದ ಉಂಟಾಗುವ ದೈಹಿಕ ಏರುಪೇರುಗಳು ಹತೋಟಿಗೆ ಬರುತ್ತವೆ. ಆಯುರ್ವೇದದ ಗ್ರಂಥಗಳ ಪ್ರಕಾರ ಬೇಸಿಗೆಯಲ್ಲಿ ಸಿಹಿ ಪ್ರಧಾನವಾಗಿರುವ, ಸುಲಭವಾಗಿ ಜೀರ್ಣವಾಗುವಂತಹ, ಕೊಬ್ಬನ್ನು ಹೊಂದಿರುವ, ತಂಪು ಗುಣ ಹೊಂದಿರುವ ಮತ್ತು ದ್ರವ ಪ್ರಧಾನವಾಗಿರುವ ಆಹಾರವನ್ನು ಸೇವಿಸಬೇಕು. ಇವುಗಳನ್ನು ಸೇವಿಸುವುದರಿಂದ ಬೇಸಿಗೆಯಲ್ಲಿ ಬರುವ ಸಮಸ್ಯೆಗಳು, ಸುಸ್ತು, ನಿದ್ರಾಹೀನತೆ, ಉಷ್ಣತೆ ಮುಂತಾದ ತೊಂದರೆಗಳು ಉಂಟಾಗುವುದನ್ನು ತಪ್ಪಿಸಬಹುದು ತುಂಬಾ ಹುಳಿ, ಉಪ್ಪು, ಖಾರ ಇರುವ, ಉಷ್ಣ ಗುಣಹೊಂದಿರುವ ಮತ್ತು ಜೀರ್ಣಕ್ಕೆ ಕಷ್ಟಕರವಾದ ಆಹಾರವನ್ನು ಸೇವಿಸಬಾರದು.

ಬೇಸಿಗೆಯಲ್ಲಿ ಹೆಚ್ಚಾಗಿ ಸೇವಿಸಬೇಕಾದ ಆಹಾರ ಪದಾರ್ಥಗಳು:

1. ಹಾಲು: ದೇಶಿ ತಳಿಯ, ಹುಲ್ಲನ್ನು ಮೆಂದ ಆಕಳಿನ ಹಾಲನ್ನು ಬೇಸಿಗೆಯಲ್ಲಿ ಸೇವಿಸುವುದರಿಂದ ದೇಹದ ಶಕ್ತಿಯಲ್ಲಿ ವೃದ್ಧಿ, ಮಾನಸಿಕ ಬಲ ವೃದ್ಧಿಯಾಗಿ ಸುಸ್ತು, ನಿದ್ರಾಹೀನತೆಯಂತಹ ಸಮಸ್ಯೆಗಳು ಹತೋಟಿಗೆ ಬರುತ್ತವೆ. ಉಷ್ಣತೆಯು ಕಡಿಮೆಯಾಗುತ್ತದೆ.

2. ಬೆಣ್ಣೆ: ಮೇಲೆ ಹೇಳಿದ ಬಹುತೇಕ ಎಲ್ಲ ಗುಣಗಳನ್ನು ಹೊಂದಿರುವುದು ಬೆಣ್ಣೆ. ಹಾಗಾಗಿ ಇದನ್ನು ಸೇವಿಸುವುದರಿಂದ ಬೇಸಿಗೆಯಲ್ಲಿ ತುಂಬಾ ಅನುಕೂಲವಾಗುತ್ತದೆ. ಜೊತೆಗೆ ಇದರ ಸೇವನೆಯಿಂದ ಚರ್ಮ, ಮೂಳೆ ಮತ್ತು ಹೊಟ್ಟೆಯ ಆರೋಗ್ಯದಲ್ಲಿ ಸುಧಾರಣೆ ಉಂಟಾಗುತ್ತದೆ ಆದರೆ ಇದು ಜೀರ್ಣಕ್ಕೆ ಸ್ವಲ್ಪ ಕಷ್ಟಕರವಾದ್ದರಿಂದ ಇದನ್ನು ರಾತ್ರಿಯ ಸಮಯದಲ್ಲಿ ಸೇವನೆ ಮಾಡುವುದು ಬೇಡ.

3. ಮಜ್ಜಿಗೆ: ಬೆಣ್ಣೆ ತೆಗೆದ ಮಜ್ಜಿಗೆಗೆ ನಿಜವಾದ-ಸಾವಯವ ಸಕ್ಕರೆಯನ್ನು ಹಾಕಿ ಸೇವಿಸುವುದರಿಂದ ಬೇಸಿಗೆಯಲ್ಲಿ ಉಂಟಾಗುವ ಬಹುತೇಕ ಎಲ್ಲ ಸಮಸ್ಯೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು. ವಿಶೇಷವಾಗಿ ಆಮಶಂಕೆ, ಹೊಟ್ಟೆ ನೋವು, ಹೊಟ್ಟೆ ಉರಿ, ತಲೆನೋವುಗಳಲ್ಲಿ ಅನುಕೂಲವಾಗುತ್ತದೆ. ಆದರೆ ಮಜ್ಜಿಗೆ ಸ್ವಲ್ಪವೂ ಹುಳಿಯಾಗಿರಬಾರದು. ತಾಜಾ ಕಡೆದದ್ದಾಗಿರಬೇಕು.

ALSO READ: ಬೇಸಿಗೆಯಲ್ಲಿ ಆರೋಗ್ಯ ಹೆಜ್ಜೆಗಳು – ಬೇಸಿಗೆಯ ಬೇಗೆಯನ್ನು ನಿವಾರಿಸುವುದು ಹೇಗೆ? 

4. ಪಾನಕ: ಖರ್ಜೂರ, ದ್ರಾಕ್ಷಿ, ಪರುಷಕ (ಪಾಲಸ ಹಣ್ಣು) ಗಳನ್ನು ಸಮಪ್ರಮಾಣದಲ್ಲಿ ಸೇರಿಸಿ ನೀರಿನಲ್ಲಿ ಕಲಸಿ ಜ್ಯೂಸ್ನಂತೆ ಮಾಡಿಕೊಂಡು ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿ ಮತ್ತು ಚಕ್ಕೆ ಪುಡಿಗಳನ್ನು ಹಾಕಿ ಸೇವಿಸಲು ಆಯುರ್ವೇದ ಹೇಳುತ್ತದೆ. ಇದರಿಂದ ಬೇಸಿಗೆಯಲ್ಲಿನ ಉಷ್ಣತೆಯಿಂದ ಉಂಟಾಗುವ ರಕ್ತಸ್ರಾವ, ಕಣ್ಣುರಿ, ಸುಸ್ತು, ಚರ್ಮದಲ್ಲಾಗುವ ಉರಿ – ತುರಿಕೆಗಳು ಉಂಟಾಗುವುದಿಲ್ಲ ಅಥವಾ ಗುಣವಾಗುತ್ತವೆ.

5. ಮಾವಿನ ಹಣ್ಣು: ಚೆನ್ನಾಗಿ ಬಲಿತ ಹುಳಿಯಿಲ್ಲದ ಮಾವಿನಹಣ್ಣನ್ನು ಸೇವಿಸುವುದರಿಂದ ಶಕ್ತಿ ವೃದ್ಧಿಯ ಜೊತೆಗೆ ಬೇಸಿಗೆಯಲ್ಲಿ ಉಂಟಾಗುವ ವಾತ-ಪಿತ್ತ ಸಮಸ್ಯೆಗಳು ಹತೋಟಿಗೆ ಬರುತ್ತವೆ.

6. ಬೂದುಗುಂಬಳ: ತಂಪು ಗುಣವನ್ನು ಹೊಂದಿರುವ, ದ್ರವ ಗುಣ ಪ್ರಧಾನವಾಗಿರುವ, ದೇಹಕ್ಕೆ ಮತ್ತು ಮೆದುಳಿಗೆ ಶಕ್ತಿಯನ್ನು ಹೆಚ್ಚಿಸುವ ಬೂದುಗುಂಬಳವನ್ನು ಬೇಸಿಗೆಯಲ್ಲಿ ಹೆಚ್ಚಾಗಿ ಬಳಸುವುದರಿಂದ ಉರಿಮೂತ್ರ, ಚರ್ಮರೋಗಗಳು, ಅಸಿಡಿಟಿಯಂತಹ ಸಮಸ್ಯೆಗಳು ಉಂಟಾಗುವುದಿಲ್ಲ. ನಿದ್ರೆಯು ಚೆನ್ನಾಗಿ ಬಂದು ಲವಲವಿಕೆಯಿಂದ ಇರಲು ಸಹಾಯವಾಗುತ್ತದೆ.

7. ನೀರು: ಲಾವಂಚ ಹಾಕಿ ಕುದಿಸಿದ ನೀರಿಗೆ ಸ್ವಲ್ಪ ಸೊಗದೇ ಬೇರಿನ ಪುಡಿ ಮತ್ತು ತೇಯ್ದ ಶುದ್ಧ ಶ್ರೀಗಂಧದ ಪೇಸ್ಟ್ ಹಾಕಿ ಮಡಿಕೆಯಲ್ಲಿ ಇಟ್ಟ ತಣ್ಣನೆಯ ನೀರನ್ನು ಬೇಸಿಗೆಯಲ್ಲಿ ಕುಡಿಯಬೇಕು ಮತ್ತು ಬೇರೆ ಕಾಲಗಳಲ್ಲಿ ಸೇವಿಸುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೇಸಿಗೆಯಲ್ಲಿ ನೀರನ್ನು ಸೇವಿಸಲೇಬೇಕು.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:94487 29434/97314 60353
Email: drvhegde@yahoo.com
http://nisargamane.com

Share this: