Vydyaloka

ಆರೋಗ್ಯಯುತ ದೀಪಾವಳಿ ಆಚರಿಸಿ

ವಿಕೃತಿಯ ಮಾಡದಿರು, ಪ್ರಕೃತಿಯ ಕೊಡುಗೆಯಂತೆ ಇರು.
ಇದ ಮರೆತರೆ ದೇಹ ಪ್ರಕೃತಿಯು ವಿಕೃತಿಯಾಗುವುದು.
ಇದ ತಿಳಿಯದಿದ್ದರೆ ಭವಿಷ್ಯದಲ್ಲಿ ಪ್ರಕೃತಿಯೇ ಮಾರಕವಾಗುವುದು.
ಪಟಾಕಿಯ ಸುಟ್ಟರೆ ಕಣ್ಣಿಗೆ ಅಂದ, ನೋಡಲು ಚಂದ.
ಅದು ನಮ್ಮನ್ನು ಸುಟ್ಟರೆ ತಾಳಲಾರೆನೋ ಕಂದ, ಇದು ಯಾವ ಬಂಧ??

ಪಟಾಕಿಯು ಕೇವಲ ವಾತಾವರಣವನ್ನು ಮಾತ್ರ ಕಲುಷಿತ ಮಾಡದು; ಜೊತೆಯಲ್ಲಿ ಮಣ್ಣನ್ನೂ ಮಲಿನಗೊಳಿಸುತ್ತದೆ. ದೀಪಾವಳಿಯಲ್ಲಿ ಶೇ. 30ರಷ್ಟು ಹೆಚ್ಚಿಗೆ ಮಾಲಿನ್ಯ ಪಟಾಕಿಯನ್ನು ಸುಡುವುದರಿಂದ ಆಗುತ್ತದೆ. ಈ ಮಾಲಿನ್ಯದಿಂದ ನಮ್ಮ ಆರೋಗ್ಯವು ಹದಗೆಡುತ್ತ ಹೋಗುತ್ತದೆ. ನಮ್ಮ ಕೈಯಾರೇ ನಮ್ಮ ಆರೋಗ್ಯವನ್ನು ಹಾಳು ಮಾಡುವಂತಹ ವ್ಯವಸ್ಥೆಗೆ ನಮ್ಮನ್ನು ನಾವು ಒಗ್ಗಿಕೊಳ್ಳಬೇಕೇ..?

ಆರೋಗ್ಯದ ಮೇಲೆ ಕೆಟ್ಟ ಪರಿಣಾಮ

ಒಂದು ಸಣ್ಣ ಕಿಡಿಯು ಎಷ್ಟೋ ದೊಡ್ಡದಾದಂತಹ ಅನಾಹುತವನ್ನೇ ಮಾಡಬಲ್ಲದು. ಜೀವವನ್ನೇ ಬಲಿತೆಗೆದುಕೊಳ್ಳಬಲ್ಲದು. ಇದರ ಪರಿಜ್ಞಾನ ನಮಗಿರಬೇಕಾದುದು ಅಗತ್ಯ. ಗರ್ಭಧರಿಸಿದಂತಹ ಸ್ತ್ರೀಯ ಆರೋಗ್ಯಕ್ಕೆ ಪಟಾಕಿ ಸುಟ್ಟಿರುವುದರಿಂದ ಆದ ವಾತಾವರಣ ವೈಪರೀತ್ಯವು ಅತ್ಯಂತ ಹಾನಿದಾಯಕವಾದುದು. ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ. ಶಬ್ದ ಮಾಲಿನ್ಯವೂ ಸಹ ತೊಂದರೆಗೆ ಕಾರಣ. ಸ್ಟ್ರೆಸ್‍ಗೆ ಮೂಲವಾಗಬಲ್ಲದು. ಇದು ಮಗುವಿನ ಜನನಕ್ಕೆ ತೊಂದರೆಯನ್ನು ಉಂಟುಮಾಡುತ್ತದೆ.

ಪಟಾಕಿಯು ತಾಮ್ರದಂಶ, ಕ್ಯಾಡ್ಮಿಯಂ, ಸಲ್ಫರ್, ಅಲ್ಯುಮಿನಿಯಂ ಹಾಗೂ ಬೇರಿಯಂನ್ನು ಹೊಂದಿರುತ್ತದೆ. ಪಟಾಕಿಯನ್ನು ಸಿಡಿಸಿದಾಗ ಬಣ್ಣ ಬಣ್ಣದ ಕಿರಣಗಳು ಹೊರಬರಬೇಕೆಂಬ ಕಾರಣಕ್ಕಾಗಿ ಈ ಅಂಶಗಳನ್ನು ಪಟಾಕಿಯಲ್ಲಿ ಬಳಸಲಾಗುತ್ತದೆ. ಆದರೆ ನಾವು ಪಟಾಕಿಯನ್ನು ಸುಟ್ಟಾಗ ಹೊರ ಸೂಸಿದಂತಹ ಈ ಎಲ್ಲ ಅಂಶಗಳ ಸೇವನೆಯನ್ನು ಮಾಡಿದಾಗ ಅದು ಅಸ್ತಮಾ ಹೆಚ್ಚಾಗಲು, ಕ್ರೋನಿಕ್ ಬ್ರಾಂಕೈಟಿಸ್ ಬರಲು ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಲು ಕಾರಣವಾಗುತ್ತದೆ. ಆದ್ದರಿಂದ ಇದರ ಬಗೆಗೆ ಎಚ್ಚರಿಕೆ ಹಾಗೂ ತಿಳುವಳಿಕೆ ಅಗತ್ಯ.

ಕಣ್ಣಿಗೆ ಹಾನಿಯಾಗುವ ಸಾಧ್ಯತೆ

ಪಟಾಕಿಯನ್ನು ಸಿಡಿಸಿದಾಗ ಕಣ್ಣಿಗೆ ಹಾನಿಯಾಗುವ ಸಾಧ್ಯತೆಗಳು ಹೆಚ್ಚು. ತೊಂದರೆಗಳಾದಲ್ಲಿ ಮೊದಲು ಕಣ್ಣನ್ನು ಶುದ್ಧವಾದ ತಂಪು ನೀರಿನಲ್ಲಿ 15 ನಿಮಿಷಗಳ ಕಾಲ ತೊಳೆಯಬೇಕು. ಸರಿಯಾಗಿ ನೋವು, ತೊಂದರೆಯಾಗದ ರೀತಿಯಲ್ಲಿ ಕಣ್ಣನ್ನು ಆದಷ್ಟು ಅಗಲವಾಗಿ ತೆರೆದಿಟ್ಟುಕೊಂಡು ನೀರನ್ನು ಹಾಯಿಸುವುದು ಅಗತ್ಯ. ನಂತರ ಸ್ವಚ್ಛವಾದ, ಮೃದುವಾದ ಬಟ್ಟೆಯಲ್ಲಿ ನಿಧಾನವಾಗಿ ಕಣ್ಣನ್ನು ಒರೆಸಿಕೊಳ್ಳುವುದು. ತಜ್ಞ ಕಣ್ಣಿನ ವೈದ್ಯರ ಬಳಿಗೆ ಕರೆದುಕೊಂಡು ಹೋಗುವುದು. ವಿನಃ ಯಾವುದೇ ಔಷಧಗಳನ್ನು ವೈದ್ಯರ ಸಲಹೆ ಇಲ್ಲದೇ ಕಣ್ಣಿನಲ್ಲಿ ಹಾಕಬಾರದು.

ಪಟಾಕಿ ಸಿಡಿಸುವಾಗ ಸುಟ್ಟ ಗಾಯಗಳಾದಲ್ಲಿ ತಕ್ಷಣಕ್ಕೆ ಸುಟ್ಟ ಜಾಗವನ್ನು ತಣ್ಣನೆಯ ನೀರಿನಲ್ಲಿ 10 ನಿಮಿಷಗಳ ಕಾಲ ತೊಳೆಯುವುದು. ಆಭರಣಗಳನ್ನು ಆ ಭಾಗದಲ್ಲಿ ಧರಿಸಿಕೊಂಡಿದ್ದಲ್ಲಿ ತೆಗೆದು ಮೃದುವಾದ ಹತ್ತಿ ಬಟ್ಟೆಯಲ್ಲಿ ಒರೆಸಿ ನಂತರ ಅದರ ಮೇಲೆ ಅಲೋವೆರಾ ಜೆಲ್‍ನ್ನು ಅಥವಾ ಜೇನುತುಪ್ಪವನ್ನು ಹಚ್ಚಿಕೊಳ್ಳುವುದು. ಇದು ಗಾಯಗಳು ಕಡಿಮೆಯಾಗಲು ಸಹಾಯ ಮಾಡುತ್ತದೆ. ಇಂತಹ ತುರ್ತು ಪರೀಸ್ಥಿತಿಯನ್ನು ನಿಭಾಯಿಸುವ ಪ್ರಜ್ಞೆಯೂ ನಮಗೆ ಇರಬೇಕು.

ವಾತಾವರಣವನ್ನು ಕಲುಷಿತ ಮಾಡಿ, ಸಮಾಜವನ್ನು ಹಾಳು ಮಾಡುವ, ನಮ್ಮ ಆರೋಗ್ಯವನ್ನು ಬಲಿಕೊಡುವ ವ್ಯವಸ್ಥೆಯನ್ನು ಬದಿಗಿರಿಸಿ ಜ್ಞಾನದ ಬೆಳಕನ್ನು ಹೊತ್ತಿಸುವ ಆರೋಗ್ಯದಾಯಕ ಹಬ್ಬವನ್ನು ಆಚರಣೆ ಮಾಡುವ ವಿವೇಚನೆ ನಮ್ಮದಾಗಲಿ. ಸರ್ವರಿಗೂ ಸನ್ಮಂಗಳವಾಗಲಿ ಎಂದು ಆ ಭಗವಂತನಲ್ಲಿ ಮನಸಾರೆ ಪ್ರಾರ್ಥಿಸಿಕೊಳ್ಳೋಣ.

Also Read: ದೀಪಾವಳಿ ಹಬ್ಬದ ಸಮಯದಲ್ಲಿ ಕಣ್ಣಿನ ಆರೈಕೆ – ಪಟಾಕಿಗಳನ್ನು ಹಚ್ಚುವಾಗ ಸುರಕ್ಷತಾ ಕ್ರಮ ಅಳವಡಿಸಿ 

ಆರೋಗ್ಯಯುತ ಅಗಸೇ ಬೀಜದ ಲಡ್ಡು

ಬೇಕಾಗಿರುವ ಸಾಮಗ್ರಿಗಳು: ಹುರಿದ ಅಗಸೆ ಬೀಜದ ಪುಡಿ, ತುಪ್ಪ, ಗೋಡಂಬಿ, ಒಣದ್ರಾಕ್ಷಿ, ಚೆರ್ರಿ, ಏಲಕ್ಕಿ, ಪಾಮ್ ಶುಗರ್ ಸಿರಪ್
ಮಾಡುವ ವಿಧಾನ: 250 ಗ್ರಾಂ ಹುರಿದ ಅಗಸೇ ಬೀಜದ ಪುಡಿ, 300 ಗ್ರಾಂ ಪಾಕ ಬರಿಸಿದ ಪಾಮ್ ಶುಗರ್‍ನ್ನು 100 ಗ್ರಾಂ ತುಪ್ಪದ ಜೊತೆ ಸೇರಿಸಿ, ತುಪ್ಪದಲ್ಲಿ ಹುರಿದ ಗೋಡಂಬಿ, ಒಣದ್ರಾಕ್ಷಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿ ಲಡ್ಡು ಮಾಡಿ.
ಮಹತ್ವ: ಅಗಸೆ ಬೀಜವು ಅನೇಕ ಆರೋಗ್ಯ ಸಹಕಾರಿ ಗುಣಗಳನ್ನು ಹೊಂದಿದ್ದು, ಬ್ರೆಸ್ಟ್ ಕ್ಯಾನ್ಸರ್ ವಿರುದ್ಧ ಹೋರಾಡುವ ವಿಶಿಷ್ಟ ಗುಣದಿಂದ ಕೂಡಿದೆ. ಅಗಸೇ ಬೀಜದಲ್ಲಿ ಒಮೆಗಾ-3 ಮೇದಾಮ್ಲವಿದ್ದು, ಆಮವಾತವನ್ನು ನಿಗ್ರಹಿಸಲು ಇದು ಸಹಾಯಕಾರಿ. ಅಗಸೆ ಬೀಜದಲ್ಲಿರುವ ಸಸ್ಯಮೂಲ ಹಾರ್ಮೋನ್‍ಗಳು ಮಹಿಳೆಯರಲ್ಲಿ ಉಂಟಾಗುವ ಹಾರ್ಮೋನ್ ವ್ಯತ್ಯಾಸದ ವಿರುದ್ಧ ಹೋರಾಡುವಲ್ಲಿ ಶೇ. 75ರಷ್ಟು ಸಹಕಾರಿ ಎಂದು ಅಧ್ಯಯನಗಳು ಸಾಬೀತು ಮಾಡಿವೆ. ಪ್ರತಿನಿತ್ಯ ಅಗಸೆ ಬೀಜದ ಸೇವನೆಯು ಕೊಲೆಸ್ಟ್ರಾಲ್ ಹತೋಟಿಗೆ ಅನುಕೂಲಕಾರಿ. ಅಗಸೇ ಬೀಜದಲ್ಲಿನ ಎ.ಎಲ್.ಎ. ಹಾಗೂ ಲಿಗ್ನನ್ಸ್ ಉರಿಯೂತವನ್ನು (ಇನ್‍ಪ್ಲಮೇಶನ್‍ನ್ನು) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತುಪ್ಪ ಹಾಗೂ ಗೋಡಂಬಿಯು ಒಳ್ಳೆಯ ಕೊಬ್ಬಿನಾಂಶವನ್ನು ಹೊಂದಿದ್ದು, ಆರೋಗ್ಯಕ್ಕೆ ಹೆಚ್ಚು ಅನುಕೂಲಕಾರಿ.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗ ಆಸ್ಪತ್ರೆ, ಶಿರಸಿ, ಉ.ಕ.
9243772444, ದೂ.: 08384-225414

Share this: