Vydyaloka

ಅಸಿಡಿಟಿಗೆ ಬೆಲ್ಲ ನೀರು ಒಳ್ಳೆಯ ಔಷಧ

ಅಸಿಡಿಟಿಗೆ ಬೆಲ್ಲ ನೀರು ಒಳ್ಳೆಯ ಔಷಧ, ಮನೆ ಮದ್ದು. ಕರಾವಳಿಯಾಗಿರಲಿ, ಮಲೆನಾಡಾಗಿರಲಿ, ಬಯಲು ಸೀಮೆಯೇ ಆಗಿರಲಿ ಇಲ್ಲಿ ಗದ್ದೆಯಲ್ಲಿ, ತೋಟದಲ್ಲಿ ಕೆಲಸ ಮಾಡುವವರಿಗೆ, ಬಿಸಿಲಿನಲ್ಲಿ ನಡೆದು ಬಂದ ಅತಿಥಿಗಳಿಗೆ ಬೆಲ್ಲ ನೀರಿನಿಂದಲೇ ಸ್ವಾಗತ.

ಮಳೆಗಾಲ ಬಂತೆಂದರೆ ಕರಾವಳಿಯಾಗಿರಲಿ, ಮಲೆನಾಡಾಗಿರಲಿ ಬಯಲು ಸೀಮೆಯೇ ಆಗಿರಲಿ ಎಲ್ಲೆಲ್ಲೂ ಭೂದೇವಿ ಹಸಿರು ಸೀರೆ ಉಟ್ಟಂತೆ ಕಂಗೊಳಿಸುತ್ತಾಳೆ. ಎಲ್ಲೆಂದರಲ್ಲಿ ನೀರಿನ ಚಿಕ್ಕ ಚಿಕ್ಕ ತೊರೆಗಳು, ಝರಿಗಳು, ಒರತೆಗಳು ಕಾಣುತ್ತವೆ. ಅವು ನಯನ ಮನೋಹರ. ದಕ್ಷಿಣ ಕನ್ನಡದ ಮನೆ ಮನೆಗಳಲ್ಲಿ ಹಲಸಿನ ಕಾಯಿ ಹಪ್ಪಳ, ಹಲಸಿನ ತೊಳೆ ಚಿಪ್ಸ್, ಹಲಸಿನ ತೊಳೆ ಹುಳಿ, ಪಲ್ಯ, ದೋಸೆ, ಕಡುಬು, ಗೆಣಸಲೆ (ಎಲೆಅಡೆ) ರೊಟ್ಟಿ ಇವು ಸರ್ವೇ ಸಾಮಾನ್ಯ. ತಿಂದನವೇ ಬಲ್ಲ ಅದರ ಸವಿ ರುಚಿಯ!! ಶಾಂತಾಣಿಯಂತು ಬಾಯಿಗೆ ಹಾಕಿ ಜಗಿಯುತ್ತಿದ್ದರೆ. ವ್ಹಾ.. ಒಂಥರಾ ಮಜಾ. ಹಲಸಿನ ಕಾಯಿ ಬೀಜದ ಹೋಳಿಗೆಯಂತೂ ಚಪ್ಪರಿಸಿ ಚಪ್ಪರಿಸಿ ತಿನ್ನುವಷ್ಟು ರುಚಿ. ನಗರಗಳಲ್ಲಿ ನೆಲೆಸಿದವರಿಗೆ ಇದರ ರುಚಿಯೆಲ್ಲ ಕನಸಿನ ಮಾತು. ರಜೆ ಎಂದು ಊರಿಗೆ ಬಂದರೆ ಇದರ ರುಚಿ ಸವಿಯಲು ಸಾಧ್ಯ.

ಸಂಧ್ಯ ಕಾಸರಗೋಡಿನ ಹತ್ತಿರದ ಒಂದು ಹಳ್ಳಿಯಲ್ಲ ಹುಟ್ಟಿ ಬೆಳೆದವಳು. ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಳು. ಸಂಧ್ಯಳ ಗಂಡ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು ನಗರವಾಸಿ. ಅವನಿಗೆ ಹಳ್ಳಿವಾಸ, ತಿಂಡಿ, ಸಂಪ್ರದಾಯ ಒಂದೂ ಗೊತ್ತಿರಲಿಲ್ಲ. ಸಂಧ್ಯ ಬಿಡುವಾದಾಗ, ಹರಟೆ ಮಾತನಾಡುವಾಗ ಗಂಡನಿಗೆ ತನ್ನ ಊರಿನ ಬಗ್ಗೆ ವಿವರಿಸುತ್ತಿದ್ದಳು. ಹಾಗೆ ಸಂತೋಷ್‍ಗೂ ಸಂಧ್ಯಳ ತವರು ಮನೆ ಅರ್ಧಾತ್ ಮಾವನ ಮನೆಯಲ್ಲಿ ಒಂದು ವಾರ ಉಳಿದುಕೊಂಡು ನಿಸರ್ಗದ ರಮಣೀಯತೆಯನ್ನು ಕಣ್ತುಂಬಿಕೊಳ್ಳ ಬೇಕೆಂಬ ಆಸೆ ಆಯಿತು. ಯಾವಾಗ ಸಂತೋಷ್ ಆಫೀಸಿಗೆ ರಜೆ ಹಾಕಿ ಊರಿಗೆ ಹೋಗೋಣ ಎಂದು ಹೇಳಿದನೋ. ಸಂಧ್ಯಳಿಗೆ ಅವನ ಮಾತನ್ನು ನಂಬಲಾಗಲಿಲ್ಲ.

ಪ್ರತಿಸಲ ನನ್ನನ್ನು ಮಾತ್ರ ಕಳುಹಿಸುತ್ತಿದ್ರಿ. ನಿಜವಾಗ್ಲೂ.. ನನ್ನಾಣೆಗೂ ನನ್ನ ಜೊತೆ ಬರ್ತೀರಾ ಎಂದು ಕಣ್ಣಗಲ ಮಾಡಿ ಕೇಳಿದಳು ಸಂಧ್ಯ. ಹೂಂ ಮಾರಾಯ್ತಿ ಬರುತ್ತಿದ್ದೇನೆ ಎಂದು ಹೇಳಿ ಸಂಧ್ಯಳ ಮೂಗನ್ನು ಎಳೆದ ಸಂತೋಷ. ಸಂಧ್ಯಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಸಂಧ್ಯ ತನ್ನ ಅಣ್ಣಂದಿರಿಗೆ, ಅಮ್ಮನಿಗೆ, ಅಪ್ಪನಿಗೆ ಪ್ರತ್ಯೇಕ ಪ್ರತ್ಯೇಕ ಪೋನಾಯಿಸಿ ಹೇಳಿದಳು. ಊರಲ್ಲೂ ಎಲ್ಲರೂ ಸಂಭ್ರಮಿಸಿದರು. ನಿಗದಿ ಪಡಿಸಿದ ದಿನಕ್ಕೆ ಸಂತೋಷ ಮತ್ತು ಸಂಧ್ಯ  ಊರಿಗೆ ಹೊರಟರು.

ಅಳಿಯ ಬರುತ್ತಿದ್ದಾರೆಂದು ಹಲಸಿನ ಕಾಯಿಯ ಬಗೆ ಬಗೆ ತಿಂಡಿಯನ್ನು ಮಾಡಿಟ್ಟರು. ಒಂದಕ್ಕಿಂತ ಒಂದು ಬಹಳ ರುಚಿ. ತಿಂಡಿ ತಿನ್ನುವುದು, ಕೊಡೆ ಹಿಡಿದುಕೊಂಡು ಗದ್ದೆ, ತೋಟ, ಗುಡ್ಡ, ಹೊಳೆ ಕೆರೆ ಸುತ್ತುವುದು. ಸಂಧ್ಯ ಮತ್ತು ಸಂತೋಷ ಪ್ರತಿಯೊಂದು ಕ್ಷಣವನ್ನು ಮಕ್ಕಳಂತೆ ಸಂಭ್ರಮಿಸುತ್ತ ಕಳೆದರು. ಬೆಂಗಳೂರಿನಲ್ಲಿ ಫಾರಂ ಕೋಳಿ ತರಹ ಇದ್ದ ಸಂತೋಷಗೆ ವಿವಿಧ ಹಲಸಿನಕಾಯಿ ತಿಂಡಿ ತಿಂದು ಹೊಟ್ಟೆಯಲ್ಲಿ ಅಸಿಡಿಟಿ, ಗ್ಯಾಸ್, ಹೊಟ್ಟೆ ಉಬ್ಬರ. ತನ್ನ ಕಷ್ಟವನ್ನು ಸಂಧ್ಯಳಲ್ಲಿ ತೋಡಿಕೊಂಡ ಸಂತೋಷ.

ಸಂತೋಷ್ ಅನುಭವಿಸುತ್ತಿರುವ ತೊಂದರೆಯನ್ನು ಸಂಧ್ಯ ತನ್ನ ತಾಯಿಗೆ ತಿಳಿಸಿದಳು. ಸಂಧ್ಯಳ ತಾಯಿ ಅಯ್ಯೋ ಅಷ್ಟೇನಾ? ಅದು ಒಂದು ಸಮಸ್ಯೆಯೇ ಅಲ್ಲ. ದಿನಾ ಬೆಳಿಗ್ಗೆ ಮದ್ಯಾಹ್ನ ರಾತ್ರಿ ಊಟಕ್ಕಿಂತ 10 ನಿಮಿಷ ಮೊದಲು ನಿಂಬೆಹಣ್ಣಿನ ಗಾತ್ರದ ಬೆಲ್ಲ ಬಾಯಿಗೆ ಹಾಕಿ, 2 ಗ್ಲಾಸ್ ಹೂ ಬಿಸಿ ನೀರನ್ನು ಕುಡಿಯಲು ಕೊಡು. ಎಂತಹ ಅಸಿಡಿಟಿ ಸಮಸ್ಯೆ ಆದರೂ ಕಡಿಮೆ ಆಗುತ್ತದೆ ಎಂದು ಹೇಳಿದರು. ಸಂಧ್ಯ ತಾಯಿ ಹೇಳಿದಂತೆ ಮಾಡಿದಳು. ಒಂದೇ ದಿನದಲ್ಲಿ ಸಂತೋಷ್‍ನ ಅಸಿಡಿಟಿ ಸಮಸ್ಯೆ ಮಂಗ ಮಾಯ.

ಅತ್ತೇ.. ಎಂದು ಸಂತೋಷ ಅತ್ತೆಯನ್ನು ಕರೆದ. ನಿಮ್ಮ ಬೆಲ್ಲ ನೀರು ಅಸಿಡಿಟಿಗೆ ಇಷ್ಟು ಒಳ್ಳೆಯ ಔಷಎಂದು ಗೊತ್ತಿರಲಿಲ್ಲ. ನಾನು ಈ ಮನೆ ಮದ್ದನ್ನು ನನ್ನ ಗೆಳೆಯರಿಗೂ ತಿಳಿಸುತ್ತೇನೆ ಎಂದು ಹೇಳಿದ ಸಂತೋಷ. ಅಷ್ಟರಲ್ಲಿ ಬಳಿಗೆ ಬಂದ ಸಂಧ್ಯ ನನ್ನ ಅಮ್ಮನಿಗೆ ಹಲವಾರು ಮನೆ ಔಷಧ ಗೊತ್ತಿದೆ. ಚಿಕ್ಕ ಪುಟ್ಟ ಸಮಸ್ಯೆಗೆ ನಾವು ಮಾತ್ರೆ ತಿನ್ನುವುದೇ ಇಲ್ಲ. ವೈದ್ಯರ ಬಳಿಗೆ ಹೋಗುವುದೇ ಇಲ್ಲ ಎಂದಳು.

Also Read: ಆಸಿಡಿಟಿಗೆ ಆಯುರ್ವೇದದ ಪರಿಹಾರ

ಇಲ್ಲಿ ಗದ್ದೆಯಲ್ಲಿ, ತೋಟದಲ್ಲಿ ಕೆಲಸ ಮಾಡುವವರಿಗೆ, ಬಿಸಿಲಿನಲ್ಲಿ ನಡೆದು ಬಂದ ಅತಿಥಿಗಳಿಗೆ ಬೆಲ್ಲ ನೀರಿನಿಂದಲೇ ಸ್ವಾಗತ. ಬೆಲ್ಲ ನೀರಿನ ಸೇವನೆ ಆದ ನಂತರವೇ ಕಾಫಿ, ತಿಂಡಿ, ಉಪಚಾರ ಎಂದು ಹೇಳಿದಳು ಸಂಧ್ಯ. ಸರಿ.. ಸರಿ.. ಹಾಗಾದರೆ ಬೆಂಗಳೂರಿನಲ್ಲಿ ಮನೆ ಔಷದೋಪಚಾರಕ್ಕೆ ಭೇಟಿ ನೀಡಿ ಡಾ|| ಸಂಧ್ಯಾ ಎಂದು ಬೋರ್ಡ್ ಹಾಕೋಣ ಎಂದು ತಮಾಷೆ ಮಾಡಿದ ಸಂತೋಷ್. ಅಳಿಯ ಮಗಳ ಮಾತುಕತೆ ಆಲಿಸಿದ ಸಂಧ್ಯಳ ತಾಯಿ ಮನಸ್ಸಿನಲ್ಲೇ ನಕ್ಕು ಅಡುಗೆ ಮನೆಗೆ ತೆರಳಿದರು.

 

Share this: