ಝಿಂಕ್ ಎನ್ನುವುದು ನಮ್ಮ ದೇಹಕ್ಕೆ ಅತೀ ಅಗತ್ಯವಾಗಿದ್ದು, ದೇಹದ ಹೆಚ್ಚಿನ ಜೈವಿಕ ಕ್ರಿಯೆಗಳಿಗೆ ಅತೀ ಅವಶ್ಯವಾಗಿರುತ್ತದೆ. ಈ ಕೋವಿಡ್ ಸಂಕಷ್ಟದ ದಿನಗಳಲ್ಲಿ ನಿಮ್ಮ ದೇಹಕ್ಕೆ ಸಾಕಷ್ಟು ‘ಸತು’ವಿರುವ ಆಹಾರವನ್ನು ಹೆಚ್ಚು ಸೇವಿಸಿಕೊಳ್ಳಿ. ಆ ಮೂಲಕ ದೇಹದ ರಕ್ಷಣಾ ವ್ಯವಸ್ಥೆಯನ್ನು ಸಾಕಷ್ಟು ಸದೃಡಗೊಳಿಸಿ.
ಒಬ್ಬ ಆರೋಗ್ಯವಂತ ಪುರುಷನಿಗೆ ದಿನವೊಂದಕ್ಕೆ 10 ರಿಂದ 12 mg ಸತುವಿನ ಅಗತ್ಯವಿರುತ್ತದೆ. ಮಹಿಳೆಗೆ ಸುಮಾರು 8-10 mg ಸತುವಿನ ಅಗತ್ಯವಿರುತ್ತದೆ. ಗರ್ಭಾವಸ್ಥೆ ಮತ್ತು ಮಗುವಿಗೆ ಹಾಲುಣಿಸುವ ಸಮಯದಲ್ಲಿ ದಿನವೊಂದಕ್ಕೆ 12 mg ಸತುವಿನ ಅಗತ್ಯ ಇರುತ್ತದೆ. ಈ ಸತುವಿನ ವಿಶೇಷತೆ ಏನೆಂದರೆ ನಾವು ಅಗತ್ಯಕ್ಕಿಂತ ಜಾಸ್ತಿ ಸೇವಿಸಿದರೆ ನೇರವಾಗಿ ದೇಹದಿಂದ ಹೊರಹಾಕಲ್ಪಡುತ್ತದೆ. ನಾವು ಸಮತೋಲಿತ ಆಹಾರ ಸೇವಿಸಿದಲ್ಲಿ ನಮ್ಮ ದೇಹಕ್ಕೆ ಸತುವಿನ ಕೊರತೆ ಉಂಟಾಗುವುದಿಲ್ಲ. ಆದರೆ ಚಿಕ್ಕ ಮಕ್ಕಳಲ್ಲಿ, ಮಹಿಳೆಯರಲ್ಲಿ (ಗರ್ಭಾವಸ್ಥೆ ಮತ್ತು ಹಾಲುಣಿಸುವ ಸಂದರ್ಭಗಳಲ್ಲಿ) ಮತ್ತು ವಯಸ್ಕರಲ್ಲಿ ಸರಿಯಾದ ಆಹಾರ ಸೇವನೆ ಮಾಡದಿದ್ದಲ್ಲಿ ‘ಸತು’ವಿನ ಕೊರತೆ ಉಂಟಾಗುವ ಸಾಧ್ಯತೆ ಇರುತ್ತದೆ. ಸತುವಿನ ಕೊರತೆ ಉಂಟಾದಲ್ಲಿ ರಕ್ಷಣಾ ವ್ಯವಸ್ಥೆ ಹದಗೆಟ್ಟು, ಬೇಗನೆ ಸೋಂಕು ಉಂಟಾಗಬಹುದು. ದೇಹದ ಗಾಯ ವಾಸಿಯಾಗಲೂ ಕೂಡಾ ‘ಸತು’ವೇ ಅಗತ್ಯವಾಗಿರುತ್ತದೆ.
‘ಸತು’ ಯಾಕೆ ಅಗತ್ಯವಿರುತ್ತದೆ?
1. ನಮ್ಮ ದೇಹದಲ್ಲಿನ ಸುಮಾರು 300ಕ್ಕೂ ಹೆಚ್ಚು ‘ಕಿಣ್ವ’ಗಳ ಕಾರ್ಯಕ್ಷಮತೆಗೆ ಸತು ಅತೀಅಗತ್ಯವಾಗಿರುತ್ತದೆ.
2. ನಮ್ಮ ದೇಹದ ಬಹುತೇಕ ಜೈವಿಕ ಕ್ರಿಯೆಗಳ ಪರಿಪೂರ್ಣತೆಗೆ ‘ಸತು’ ಬಹಳ ಅನಿವಾರ್ಯವಾಗಿರುತ್ತದೆ.
3. ದೇಹದ ರಕ್ಷಣಾ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ‘ಸತು’ ಬಹು ಮುಖ್ಯ ಭೂಮಿಕೆ ವಹಿಸುತ್ತದೆ.
4. ದೇಹದ ಕಳೆದು ಹೋದ ಜೀವಕೋಶಗಳ ಪುನರುತ್ಪತ್ತಿ ಮತ್ತು ಗಾಯ ವಾಸಿಯಾಗಲು ‘ಸತು’ ಸಾಕಷ್ಟು ಪ್ರಮಾಣದಲ್ಲಿ ಬೇಕಾಗುತ್ತದೆ.
5. ನಾವು ಸೇವಿಸುವ ಪೋಷಕಾಂಶಗಳ ನಿರ್ವಹಣೆಗೆ, ಜೀರ್ಣ ಪ್ರಕ್ರಿಯೆಗೆ ಮತ್ತು ದೇಹದ ಪರಿಪೂರ್ಣ ಬೆಳವಣಿಗೆಗೆ ‘ಸತು’ವೇ ಅಗತ್ಯವಿರುತ್ತದೆ.
7. ನಮ್ಮ ದೇಹದಲ್ಲಿನ ಜೀವಕೋಶಗಳ ಪುನರುತ್ಪತ್ತಿ, ಬೆಳವಣಿಗೆಗೆ ಸತು ಅತೀ ಅಗತ್ಯವಾಗಿರುತ್ತದೆ.
8. ನಾವು ಸೇವಿಸುವ ಕಾರ್ಬೊಹೈಡ್ರೇಟ್ (ಶರ್ಕರ ಪಿಷ್ಠ)ಗಳ ಜೀರ್ಣಕ್ರಿಯೆಗೆ ಸತು ಅತೀ ಅಗತ್ಯ ವಿರುತ್ತದೆ.
9. ದೇಹದಲ್ಲಿ ಉತ್ಪಾದಿಸಲ್ಪಡುವ ಸೆಕ್ಸ್ ಹಾರ್ಮೋನ್‍ಗಳ ಉತ್ಪಾದನೆಗೆ ಸತು ಅತೀ ಅಗತ್ಯ. ಟೆಸ್ಟೊಸ್ಟಿರಾನ್ ಮತ್ತು ಪ್ರೊಲ್ಯಾಕ್ಟಿನ್ ರಸದೂತದ ಉತ್ಪಾದನೆಗೆ ಸತು ಅಗತ್ಯವಿರುತ್ತದೆ.
10. ದೇಹಕ್ಕೆ ಬರುವ ಬ್ಯಾಕ್ಟೀರಿಯಾ ಮತ್ತು ವೈರಾಣು ಸೋಂಕಿನ ವಿರುದ್ಧ ಹೋರಾಡಲು ಸತು ಅತೀ ಅಗತ್ಯ. ಜೀವಕೋಶಗಳ ಒಳಗೆ ಆಓಂ ಮತ್ತು ಪ್ರೊಟೀನ್ ಉತ್ಪಾದನೆಗೆ ಸತು ಬೇಕೇಬೇಕು.
ಯಾವ ಆಹಾರಗಳಲ್ಲಿ ಸತುವಿನ ಪ್ರಮಾಣ ಹೆಚ್ಚು ಇರುತ್ತದೆ?
1. ಮಾಂಸಗಳಲ್ಲಿ ‘ಸತು’ ಅಧಿಕ ಪ್ರಮಾಣದಲ್ಲಿರುತ್ತವೆ. ರೆಡ್‍ಮೀಟ್, ಬೀಪ್(ದನ), ಲ್ಯಾಂಬ್(ಕುರಿ) ಮತ್ತು ಹಂದಿ ಮಾಂಸಗಳಲ್ಲಿ ಹೆಚ್ಚಿರುತ್ತದೆ.
2. ಶೆಲ್ ಫಿಶ್‍ಗಳು ಆರೋಗ್ಯಪೂರ್ಣ ಮತ್ತು ಕಡಿಮೆ ಕ್ಯಾಲೊರಿ ಇರುತ್ತದೆ. ‘ಸತು’ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ಓಸ್ಟರ್(ಸಿಂಪಿ) ಗಳಲ್ಲಿಯೂ ಸತು ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
3. ಬಟಾಣಿ ಕಾಳು, ಬೀನ್ಸ್, ಲೆಂಟಿಲ್ಸ್(ಮಸೂರ) ಮುಂತಾದ ದ್ವಿದಳ ಧಾನ್ಯಗಳಲ್ಲಿ ‘ಸತು’ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
4. ತರಕಾರಿಗಳ ಬೀಜಗಳಲ್ಲಿ ಹೆಚ್ಚು ‘ಸತು’ ಇರುತ್ತದೆ. ಕುಂಬಳಕಾಯಿ ಬೀಜ, ಅಗಸೆ ಬೀಜ, ಸೆಣಬಿನ ಬೀಜ, ಎಳ್ಳುಗಳಲ್ಲಿ ಸತು ಜಾಸ್ತಿ ಇರುತ್ತದೆ.
5. ಗೋಡಂಬಿ, ಬಾದಾಮಿ, ಕಡಲೇ ಬೀಜಗಳಲ್ಲಿ ‘ಸತು’ ಹೇರಳವಾಗಿರುತ್ತದೆ.
6. ಡೈರಿ ಉತ್ಪನ್ನಗಳಾದ ಚೀಸ್(ಗಿಣ್ಣು), ಹಾಲು, ಮೊಸರುಗಳಲ್ಲಿ ಸತು ಹೆಚ್ಚು ಇರುತ್ತದೆ.
7. ಮೊಟ್ಟೆಯಲ್ಲಿ ಹಿತಮಿತವಾದ ‘ಸತು’ ಇದೆ.
8. ಧಾನ್ಯಗಳಾದ ಗೋಧಿ, ಅಕ್ಕಿ, ಓಟ್ಸ್‍ಗಳಲ್ಲಿಯೂ ಅಲ್ಪಪ್ರಮಾಣದಲ್ಲಿ ‘ಸತು’ ಇರುತ್ತದೆ.
9. ಹಣ್ಣು ತರಕಾರಿಗಳಲ್ಲಿ ‘ಸತು’ ಕಡಿಮೆ ಇರುತ್ತದೆ.
10. ಬಟಾಟೆ, ಗೆಣಸುಗಳಲ್ಲಿ ಅಲ್ಪಪ್ರಮಾಣದಲ್ಲಿ ‘ಸತು’ ಇರುತ್ತದೆ.
11. ಡಾರ್ಕ್ ಚಾಕೋಲೆಟ್‍ನಲ್ಲಿಯೂ ‘ಸತು’ ಇರುತ್ತದೆ.
ಹೇಗೆ ಸೇವಿಸಬಹುದು?
ಕೊನೆಮಾತು:
ಪ್ರಾಣಿಜನ್ಯ ಮತ್ತು ಸಮುದ್ರ ಜನ್ಯ ಆಹಾರಗಳಲ್ಲಿ ಸತುವಿನ ಪ್ರಮಾಣ ಹೇರಳವಾಗಿರುತ್ತದೆ. ಆದರೆ ಕೆಲವೊಂದು ಈ ಆಹಾರಗಳು ಹೃದಯಕ್ಕೆ ಪೂರಕವಾಗಿಲ್ಲದ ಕಾರಣ ಸಮತೋಲಿತ ಆಹಾರ ಸೇವನೆ ಮಾಂಸಾಹಾರಿಗಳಿಗೆ ಅತೀ ಅಗತ್ಯ. ಸಸ್ಯಾಹಾರಿಗಳಿಗೆ ಡೈರಿ ಉತ್ಪನ್ನಗಳಲ್ಲಿ ಅತೀ ಹೆಚ್ಚು ಸತು ಇರುತ್ತದೆ. ಹಣ್ಣು, ತರಕಾರಿಗಳಲ್ಲಿ ಸತುವಿನ ಅಂಶ ಕಡಿಮೆ ಇದ್ದರೂ, ಇತರ ಧಾನ್ಯಗಳಲ್ಲಿ ಸತು ಇರುವ ಕಾರಣ ಯಾವುದೇ ತೊಂದರೆ ಉಂಟಾಗುವುದಿಲ್ಲ. ಒಟ್ಟಿನಲ್ಲಿ ಕೋವಿಡ್-19 ರೋಗ, ರಕ್ಷಣಾ ಶಕ್ತಿ ಕಡಿಮೆ ಇರುವವವರಿಗೆ ಉಗ್ರವಾಗಿ ಕಾಡುವ ಕಾರಣದಿಂದ, ದೇಹದ ರಕ್ಷಣಾ ಶಕ್ತಿಯನ್ನು ವೃದ್ಧಿಸುವ ಆಹಾರ ಸೇವನೆ ಅತೀ ಅಗತ್ಯ. ಈ ನಿಟ್ಟಿನಲ್ಲಿ ‘ಸತು’ ಒಂದು ರೀತಿಯಲ್ಲಿ ನಮ್ಮ ದೇಹದಲ್ಲಿನ ರಕ್ಷಣಾ ವ್ಯವಸ್ಥೆಯು ಕೋವಿಡ್ ವಾರಿಯರ್ಸ್ ಎಂದರೂ ತಪ್ಪಲ್ಲ. ನಿಮ್ಮ ವೈದ್ಯರು ಮತ್ತು ಆಹಾರ ತಜ್ಞರ ಬಳಿ ಸಮಾಲೋಚನೆ ಮಾಡಿ, ಈ ಕೋವಿಡ್ ಸಂಕಷ್ಟದ ದಿನಗಳಲ್ಲಿ ನಿಮ್ಮ ದೇಹಕ್ಕೆ ಸಾಕಷ್ಟು ‘ಸತು’ವಿರುವ ಆಹಾರವನ್ನು ಹೆಚ್ಚು ಸೇವಿಸಿಕೊಳ್ಳಿ. ಆ ಮೂಲಕ ದೇಹದ ರಕ್ಷಣಾ ವ್ಯವಸ್ಥೆಯನ್ನು ಸಾಕಷ್ಟು ಸದೃಡಗೊಳಿಸಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಇರುವ ಕಾರಣದಿಂದ, ಆಹಾರವನ್ನೇ ಔಷಧಿಯ ರೀತಿಯಲ್ಲಿ ಸೇವಿಸಿದರೆ ಔಷಧಿಯನ್ನು ಆಹಾರದಂತೆ ಸೇವಿಸುವುದನ್ನು ಖಂಡಿತವಾಗಿಯೂ ತಪ್ಪಿಸಬಹುದಾಗಿದೆ.
ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ, ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111 ಮೊ.: 9845135787
www.surakshadental.com