ಯಾವ ಸೋಪು ಬಳಸಬೇಕು? ಮಾಮೂಲಿ ಸಾಬೂನು ಹಾಗೂ ನೀರು, ಕೈ ತೊಳೆಯುವುದಕ್ಕೆ ಆದ್ಯತೆ ಪಡೆಯಲಿ. ನೀರು ಹಾಗೂ ಸಾಬೂನು ಲಭ್ಯ ಇರದೇ ಇದ್ದ ಪಕ್ಷದಲ್ಲಿ ಜೆಲ್ ಸ್ಯಾನಿಟೈಸರ್ ಬಳಸಿ.ರಾಸಾಯನಿಕದ ದೀರ್ಘಕಾಲೀನ ಬಳಕೆಯಿಂದ ಆಗುವ ಪ್ರಯೋಜನಕ್ಕಿಂತ ಅಪಾಯಗಳೇ ಹೆಚ್ಚು.
ಆದರೆ ಆಟವಾಡಿ ಬಂದ ಮಕ್ಕಳ ಕೈಗಳನ್ನು ಸಾಬೂನಿನಿಂದ ಅಥವಾ ಸ್ಯಾನಿಟೈಸರ್ ನಿಂದ ತೊಳೆಯುವ ಅಗತ್ಯ ಖಂಡಿತ ಇಲ್ಲ. ಆಹಾರ ಸೇವನೆಗೆ ಮೊದಲು ಮಾತ್ರ ಅವರ ಕೈಗಳನ್ನು ತೊಳೆಯುವ ಅಗತ್ಯ ಇದೆ. ಏಕೆಂದರೆ ಹೊರಗಡೆಯ ಪರಿಸರಕ್ಕೆ ತೆರೆದುಕೊಳ್ಳುವ ಮಕ್ಕಳ ರೋಗನಿರೋಧಕ ಶಕ್ತಿಯು ಪರಿಸರದ ಸೂಕ್ಷ್ಮಾಣುಗಳ ಸಂಪರ್ಕದಿಂದ ವೃದ್ಧಿಗೊಳ್ಳುವುದು ಎಂಬುದು ವಿಜ್ಞಾನ ಜಗತ್ತು ಇಂದು ಕಂಡುಕೊಂಡ ಸತ್ಯ. ಆದಕಾರಣ ಮಕ್ಕಳು ಹೊರಗಡೆಗೆ ಮಣ್ಣಿನಲ್ಲಿ ಆಟವಾಡಬೇಕು, ಕೊಳೆ ಧೂಳಿಗೆ ತಮ್ಮನ್ನು ಒಡ್ಡಿಕೊಳ್ಳಬೇಕು.
ಮಾಮೂಲಿ ಸಾಬೂನು ಹಾಗೂ ನೀರು ಬಳಸಿ:
ಒಂದು ವಿಚಾರ ಮಾತ್ರ ನಾವು ಗಮನದಲ್ಲಿಟ್ಟುಕೊಳ್ಳಬೇಕು. ಆಂಟಿ ಬ್ಯಾಕ್ಟೀರಿಯಾ ಅಥವಾ ಬ್ಯಾಕ್ಟೀರಿಯಾ ನಾಶಕ ಸಾಬೂನುಗಳ ಬಳಕೆ ದಿನನಿತ್ಯದಲ್ಲಿ ಎಲ್ಲರಿಗೂ ಖಂಡಿತ ಅಗತ್ಯವಿಲ್ಲ. ಹಾಗೆ ಉಪಯೋಗಿಸಬಾರದು ಕೂಡ. ಔಷಧ ನಿಯಂತ್ರಕ ಸಂಸ್ಥೆ ಎಫ್. ಡಿ. ಎ. ಮಾರ್ಗಸೂಚಿಯಂತೆ ಆಂಟಿ ಬ್ಯಾಕ್ಟೀರಿಯ ಸಾಬೂನುಗಳು ಮಾಮೂಲಿ ಸಾಬುನಿಗಿಂತ ಹೆಚ್ಚು ಪ್ರಯೋಜನ ನೀಡುವುದಿಲ್ಲ. ಆಸ್ಪತ್ರೆಗಳಲ್ಲಿ ಹಾಗೂ ಹೆಚ್ಚಿನ ಆರೋಗ್ಯ ರಕ್ಷಣೆಯ ಅಗತ್ಯವಿರುವ ಸ್ಥಳಗಳನ್ನು ಬಿಟ್ಟರೆ, ಇತರ ಜಾಗಗಳಲ್ಲಿ ಅವುಗಳ ಅಗತ್ಯ ಕಂಡುಬರುವುದಿಲ್ಲ. ಬ್ಯಾಕ್ಟೀರಿಯ ನಾಶಕ ಸ್ಯಾನಿಟೈಸರ್ ಗಳಿಗೂ ಇದೇ ನಿಯಮ ಅನ್ವಯಿಸುತ್ತದೆ. ಆದಕಾರಣ ಮಾಮೂಲಿ ಸಾಬೂನು ಹಾಗೂ ನೀರು, ಕೈ ತೊಳೆಯುವುದಕ್ಕೆ ಆದ್ಯತೆ ಪಡೆಯಲಿ. ನೀರು ಹಾಗೂ ಸಾಬೂನು ಲಭ್ಯ ಇರದೇ ಇದ್ದ ಪಕ್ಷದಲ್ಲಿ ಜೆಲ್ ಸ್ಯಾನಿಟೈಸರ್ ಬಳಸಿ.
ಬಹುತೇಕ ಆಂಟಿ ಬ್ಯಾಕ್ಟೀರಿಯಾ ಇಲ್ಲದ ಸಾಬೂನುಗಳನ್ನು, ಸ್ಯಾನಿಟೈಸರ್ ಗಳನ್ನು ಇಂದಿನ ಸ್ಥಿತಿಯಲ್ಲಿ ಕಲ್ಪಿಸುವುದು ಕೂಡ ಅಸಾಧ್ಯ. ಅದರಲ್ಲೂ ದ್ರವರೂಪದ ಸಾಬೂನು ಗಳಲ್ಲಿ ಖಂಡಿತವಾಗಿಯೂ ಅದು ಇದ್ದೇ ಇರುತ್ತದೆ. ಸಾಬೂನು ಗಳಲ್ಲಿ ಬಳಕೆಯಾಗುವ ಅತ್ಯಂತ ಪ್ರಮುಖ ಬ್ಯಾಕ್ಟೀರಿಯಾ ನಾಶಕ ರಾಸಾಯನಿಕ ವೆಂದರೆ ಟ್ರಿಕ್ಲೊಸಾನ್ . ಇದನ್ನು ದುರ್ಗಂಧ ನಾಶಕಗಳಲ್ಲಿ, ಟೂತ್ಪೇಸ್ಟ್ ಗಳಲ್ಲಿ, ಶುಚಿಗೊಳಿಸುವ ದ್ರಾವಣಗಳಲ್ಲಿ, ಸೌಂದರ್ಯವರ್ಧಕಗಳಲ್ಲಿ ಅಧಿಕವಾಗಿ ಬಳಸುತ್ತಾರೆ. 60 ವರ್ಷಗಳಿಂದಲೂ ಇದರ ಬಳಕೆ ಚಾಲ್ತಿಯಲ್ಲಿದೆ. ಆದರೆ ಇಂದು ಅಧ್ಯಯನಗಳು ಇದರ ಮಾರಕ ಪರಿಣಾಮಗಳನ್ನು ಗುರುತಿಸಿದೆ. ಅದರಲ್ಲೂ ನಮ್ಮ ದೇಹದ ಒಳಗಿನ ಹಾರ್ಮೋನುಗಳಲ್ಲಿ ಅತೀವ ಏರುಪೇರು ಉಂಟುಮಾಡುವ ಸಾಮರ್ಥ್ಯ ಈ ರಾಸಾಯನಿಕಕ್ಕೆ ಇದೆ. ಔಷಧಗಳಿಗೆ ರೋಗಕಾರಕ ಸೂಕ್ಷ್ಮಾಣುಗಳು ನಿರೋಧಕತೆಯನ್ನು ಬೆಳೆಸಿಕೊಳ್ಳುವುದಕ್ಕೆ ಇದು ಕಾರಣವಾಗುತ್ತಿದೆ.
ಟ್ರಿಕ್ಲೊಸಾನ್ ಬಳಕೆಯಿಂದ ಅಪಾಯಗಳೇ ಹೆಚ್ಚು:
ಕೆನಡಿಯನ್ ಮೆಡಿಕಲ್ ಅಸೋಸಿಯೇಷನ್ ಈ ರಾಸಾಯನಿಕದ ನಿಷೇಧಕ್ಕೆ ಅಂತರ್ರಾಷ್ಟ್ರೀಯ ಔಷಧ ನಿಯಂತ್ರಣ ಮಂಡಳಿಯ ಮೇಲೆ ಒತ್ತಡ ಹೇರಿದೆ. ಎಫ್. ಡಿ. ಎ. ಹೇಳಿಕೆಯ ಪ್ರಕಾರ ಟ್ರಿಕ್ಲೊಸಾನ್ ರಾಸಾಯನಿಕದ ದೀರ್ಘಕಾಲೀನ ಬಳಕೆಯಿಂದ ಆಗುವ ಪ್ರಯೋಜನಕ್ಕಿಂತ ಅಪಾಯಗಳೇ ಹೆಚ್ಚು ಎಂಬುದನ್ನು ಹೇಳಿದೆ. ಆದರೂ ಬಹಳಷ್ಟು ಪ್ರದೇಶಗಳಲ್ಲಿ ಇದರ ಬಳಕೆ ಸುರಕ್ಷಿತ ಎಂಬ ಭ್ರಾಂತಿ ಕಂಡುಬರುತ್ತಿದೆ. ಆದರೆ ಈ ರಾಸಾಯನಿಕ ಇರುವ ಉತ್ಪನ್ನಗಳನ್ನು ದಿನನಿತ್ಯ ಬಳಸಬೇಕೇ ಬೇಡವೇ ಎಂಬುದು ಜನತೆಯ ನಿರ್ಧಾರಕ್ಕೆ ಬಿಟ್ಟದ್ದು.
ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ.
ಆಯುರ್ವೇದ ತಜ್ಞ ವೈದ್ಯರು
ಅಸಿಸ್ಟೆಂಟ್ ಪ್ರೊಫೆಸರ್, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು, ಸುಳ್ಯ.
ಪ್ರಸಾದ್ ಕ್ಲಿನಿಕ್& ಹೆಲ್ತ್ ಕೇರ್ ಸೆಂಟರ್
ಪುರುಷರಕಟ್ಟೆ ,ಪುತ್ತೂರು.
rpbangaradka@gmail.com.
ಮೊಬೈಲ್: 97405 45979