Vydyaloka

ವ್ಯಾಯಾಮದಿಂದ ಆರೋಗ್ಯವರ್ಧನೆ

ವ್ಯಾಯಾಮದಿಂದ ಆರೋಗ್ಯವರ್ಧನೆ ಸಹಜ. ಖಾಯಿಲೆಗಳು ಬರದಂತೆ ತಡೆಗಟ್ಟಲು  ವ್ಯಾಯಾಮ ಉಪಯುಕ್ತ, ಅತ್ಯಂತ ಸಹಕಾರಿ. ವಾಕಿಂಗ್ ಮತ್ತು ವ್ಯಾಯಾಮ ಕೋವಿಡ್ ಕಾಯಿಲೆಯ ಈ ಸಮಯದಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಹಳ ಅವಶ್ಯಕ.

ಇಂದಿನ ವ್ಯಸ್ಥ ಜೀವನ ವ್ಯವಸ್ಥೆಯು ಅನೇಕ ಜೀವನಶೈಲಿ ಖಾಯಿಲೆಗಳನ್ನು ತಂದೊಡ್ಡಿದೆ. ಯಂತ್ರಗಳ ಮುಂದೆ ಯಂತ್ರದಂತೆ ಕುಳಿತು ಕೇವಲ ತಂತ್ರಗಳಿಂದ ಮಾಡುವ ಕಾರ್ಯಗಳ ಪ್ರಭಾವದಿಂದ ಮನೋದೈಹಿಕ ಸಮಸ್ಯೆಗಳು ಹೆಚ್ಚಾಗುತ್ತಲಿವೆ. ಒಂದೇ ತೆರನಾದ ಕೆಲಸವು ದೇಹದ ಕೆಲವು ಅವಯವಗಳಿಗೆ ಹೆಚ್ಚು ಕೆಲಸವನ್ನೂ ಇನ್ನು ಕೆಲವಕ್ಕೆ ಕಡಿಮೆ ಕೆಲಸವನ್ನು ನೀಡಿ, ಒತ್ತಡ ಉಂಟುಮಾಡುತ್ತಿದೆ. ದೈಹಿಕ ಒತ್ತಡದ ಜೊತೆಗೆ ಮಾನಸಿಕ ಒತ್ತಡದಿಂದ ಮಾನವನ ನೆಮ್ಮದಿಯ ಜೊತೆಗೆ ದೈಹಿಕ ಆರೋಗ್ಯವು ಸಹ ಹಾಳಾಗುತ್ತಲಿದೆ. ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಸೂಕ್ತವಾದ ಪರಿಹಾರ ಕ್ರಮ ವ್ಯಾಯಾಮ.

ಹಳ್ಳಿಯಲ್ಲಿನ ರೈತಾಪಿ ವರ್ಗದ ಜನರು ಹೆಚ್ಚಾಗಿ ಮಧುಮೇಹ, ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಬೊಜ್ಜು ಸಮಸ್ಯೆ,  ಮಲಬದ್ಧತೆ, ನಿದ್ರಾಹೀನತೆ, ನರದೌರ್ಬಲ್ಯ ಮುಂತಾದ ಸಮಸ್ಯೆಗಳಿಂದ ದೂರವಿರುತ್ತಾರೆ. ಕಾರಣ ಅವರು ಸಹಜ, ಪರಿಶುದ್ಧ ಪ್ರಕೃತಿಯಲ್ಲಿ ದೇಹ ದಣಿಯುವಂತಹ ಕಾರ್ಯಮಾಡುವುದರಿಂದಾಗಿ ತಿಂದ ಆಹಾರ ಪದಾರ್ಥವು ಸರಿಯಾಗಿ ಜೀರ್ಣವಾಗಿ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ದೇಹದಲ್ಲಿ ಕೆಟ್ಟ ಕೊಬ್ಬು ಶೇಖರಣೆಯಾಗದೇ ತೊಂದರೆಗಳಿಂದ ಬಳಲುವಂತಹ ಪರಿಸ್ಥಿತಿ ವಿರಳ.

ಪ್ರತಿನಿತ್ಯ ಒಂದು ಗಂಟೆ ವ್ಯಾಯಾಮ ಮಾಡುವದು ಅತ್ಯುತ್ತಮ:

ಆದರೆ ನಗರದಲ್ಲಿನ ತಂತ್ರಗಾರಿಕಾ ಕಾರ್ಯದಿಂದಾಗಿ ಹಾಗೂ ತಪ್ಪು ಜೀವನಶೈಲಿ ಆಹಾರಶೈಲಿ ವಿಧಾನಗಳಿಂದಾಗಿ ಆರೋಗ್ಯವು ಸಮತೋಲನ ಕಳೆದುಕೊಳ್ಳುವುದು. ಅಜೀರ್ಣ, ಗ್ಯಾಸ್ಟ್ರಿಕ್, ಮಲಬದ್ಧತೆಯಂತಹವುಗಳ ಜೊತೆಯಲ್ಲಿ ಮಧುಮೇಹ, ಪಿ.ಸಿ.ಒ.ಡಿ., ಮುಟ್ಟಿನ ಸಮಸ್ಯೆ, ಬೊಜ್ಜು, ಬಿ.ಪಿ., ಕೊಲೆಸ್ಟ್ರಾಲ್‍ಗಳೂ ಕಾಡುವುದು. ಇದೆಲ್ಲವನ್ನು ಹತೋಟಿ ಮಾಡಲು ದೇಹವು ಸರಿಯಾಗಿ ದಣಿಯುವಂತಹ ಕಾರ್ಯ ಮಾಡಬೇಕು. ಅದಕ್ಕಾಗಿಯೇ ಪ್ರತಿನಿತ್ಯ ಒಂದು ಗಂಟೆ ವ್ಯಾಯಾಮ ಮಾಡುವದು ಅತ್ಯುತ್ತಮ. ಇದರಿಂದಾಗಿ ದೇಹದ ಎಲ್ಲ ಮಾಂಸಖಂಡಗಳಿಗೂ ಸರಿಯಾಗಿ ರಕ್ತಸಂಚಾರವಾಗಿ ನಾವು ಆರೋಗ್ಯಯುತವಾಗಿರಲು ಸಹಾಯಕವಾಗುತ್ತದೆ.

ವ್ಯಾಯಾಮದಿಂದ ಆಹಾರವು ಸರಿಯಾಗಿ ಜೀರ್ಣವಾಗುತ್ತದೆ. ಮತ್ತು ಪುಪ್ಪಸಗಳು ವಿಕಾಸ ಹೊಂದಿ ಅವುಗಳಲ್ಲಿ ಶುದ್ಧವಾಗುತ್ತದೆ. ವ್ಯಾಯಾಮದಿಂದ ದೇಹದ ಎಲ್ಲ ಅವಯವಗಳು ಬಲಯುತವಾಗುತ್ತದೆ. ‘ವಿಭಕ್ತಘನಗಾತ್ರತ್ವಂ ವ್ಯಾಯಾಮದುಪಜಾಯತೆಎಂದು ವಾಗ್ಭಟ ಎಂಬ ಸುಪ್ರಸಿದ್ಧ ವೈದ್ಯ ಶಾಸ್ತ್ರಜ್ಞನು ಹೇಳಿದ್ದಾನೆ. ನಾವು ಯಾವ ಅವಯವವನ್ನು ಕೆಲಸಕ್ಕೆ ಹಚ್ಚುವುದಿಲ್ಲವೋ ಅದು ದಿನೇ ದಿನೇ ನಿರ್ಬಲವಾಗುತ್ತ ಹೋಗುತ್ತದೆ. ಆದುದರಿಂದ ಸಕಲಾವಯವಗಳೂ ಸರಿಯಾಗಿ ಬೆಳೆದು ಅವು ಗಟ್ಟಿಯಾಗಬೇಕಾದರೆ ವ್ಯಾಯಾಮವನ್ನು ಮಾಡಲೇ ಬೇಕು.

ವ್ಯಾಯಾಮದಿಂದ ಸಕಲಾವಯವಗಳಿಗೂ ಶ್ರಮವುಂಟಾಗಿ ಅವುಗಳಲ್ಲಿಯ ದೋಷವು ಹೊರಬಿದ್ದು ಆ ಭಾಗಗಳು ಚೆನ್ನಾಗಿ ಬೆಳೆಯುತ್ತದೆ. ಜೊತೆಯಲ್ಲಿ ಒಂದು ಗಂಟೆ ಪ್ರತಿನಿತ್ಯ ವೇಗವಾಗಿ ನಡೆಯುವುದರಿಂದಾಗಿ ಅಥವಾ ಜಾಗಿಂಗ್ ಮಾಡುವುದರಿಂದಾಗಿಯೂ ಸಹ ದೇಹವು ಆರೋಗ್ಯ ಪೂರ್ಣವಾಗುವುದು ಬಂದಂತಹ ತೊಂದರೆಗೆ ತಕ್ಕ ವ್ಯಾಯಾಮವನ್ನು ತಜ್ಞ ವೈದ್ಯರ ಸಲಹೆ ಪಡೆದು ಮಾಡುವುದರಿಂದ ಅದನ್ನು ಬಗೆಹರಿಸಲು, ನಿರ್ವಹಿಸಲು ನೆರವಾಗುವುದು. ಹಾಗಾಗಿ ವ್ಯಾಯಾಮ ಆರೋಗ್ಯವರ್ಧನೆಗೆ ಅತ್ಯಂತ ಸಹಕಾರಿ.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.com; nisargamane6@gmail.com
www.nisargamane.com
Share this: