ವೃದ್ಧಾಪ್ಯದಲ್ಲಿ ಆರೋಗ್ಯಕರವಾಗಿ ಬದುಕುವುದು ಹೇಗೆ? ವಿವಿಧ ರೀತಿಯ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರು ವವಯೋವೃದ್ಧರಿಗೆ ಆರೋಗ್ಯ ಸಲಹೆ, ಮಾಡಬೇಕಾದ ಮತ್ತು ಮಾಡಬಾರದ ಸಂಗತಿಗಳ ಕುರಿತು ಮಾಹಿತಿ ಇಲ್ಲಿದೆ. ಅನುಸರಿಸುವುದನ್ನು ಮರೆಯಬೇಡಿ.
ವಯಸ್ಸಾಗುತ್ತಿದ್ದಂತೆ ತಲೆ ಕೂದಲು ಉದುರುತ್ತಾ ಬೆಳ್ಳಗಾಗುತ್ತದೆ. ದೇಹ ಕೃಶವಾಗಿ ಕಾಂತಿಹೀನವಾಗುತ್ತದೆ. ಚರ್ಮ ಸುಕ್ಕುಗಟ್ಟುತ್ತದೆ. ಅನೇಕ ರೋಗಗಳು ಅಮರಿಕೊಳ್ಳುತ್ತವೆ. ವೃದ್ಧಾಪ್ಯ ಆವರಿಸಿದಂತೆ ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯ ನಶಿಸಿ ಹೋಗುತ್ತವೆ. ವಯೋವೃದ್ಧರನ್ನು ಹೆಚ್ಚಾಗಿ ಕಾಡುವ ಸಮಸ್ಯೆ ಎಂದರೆ ನೇತ್ರದೋಷ ಮತ್ತು ಶ್ರವಣದೋಷ. ಕ್ಯಾಟರ್ಯಾಕ್ಟ್ ಅಥವಾ ಕಣ್ಣಿನ ಪೊರೆಯಿಂದ ರೆಟಿನಾ ಮೇಲೆ ದುಷ್ಪರಿಣಾಮ ಉಂಟಾಗಿ ದೃಷ್ಟಿ ಮಂದವಾದರೆ, ಶ್ರವಣ ಸಮಸ್ಯೆ ವಯಸ್ಸಾದವರಲ್ಲಿ ಗಂಭೀರ ತೊಂದರೆ ತಂದೊಡ್ಡುತ್ತವೆ. ವಿವಿಧ ರೀತಿಯ ಅನಾರೋಗ್ಯ ಸಮಸ್ಯೆಗಳಿಂದ ನರಳುತ್ತಿರುವ ಹಿರಿಯರು ಮಾಡಬೇಕಾದ ಮತ್ತು ಮಾಡಬಾರದ ಸಂಗತಿಗಳ ಕುರಿತು ಮಾಹಿತಿ ಇಲ್ಲದೆ. ಅನುಸರಿಸುವುದನ್ನು ಮರೆಯಬೇಡಿ.
ವೃದ್ಧಾಪ್ಯದಲ್ಲಿ ಆರೋಗ್ಯಕರವಾಗಿ ಬದುಕುವುದು ಹೇಗೆ?
1. ವೃದ್ಧರು ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕು. ಅದು ಉತ್ತಮ ಪೋಷಕಾಂಶ, ವೈಯಕ್ತಿಕ ಸ್ವಚ್ಚತೆ, ಸೂಕ್ತ ವ್ಯಾಯಾಮ, ವಿಶ್ರಾಂತಿ, ಸಾಧಾರಣ ಪ್ರಮಾಣದ ಆಹಾರ ಸೇವನೆಯ ಹವ್ಯಾಸವನ್ನು ಒಳಗೊಂಡಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಸಕಾರಾತ್ಮಕ ಮಾನಸಿಕ ಧೋರಣೆಯನ್ನು ಹೊಂದಿರಬೇಕು.
2. ಆರೋಗ್ಯಕ್ಕೆ ಸಂಬಂಧಪಟ್ಟ ಯಾವುದೇ ಅಸಾಮಾನ್ಯ ಮತ್ತು ಶಂಕಾಸ್ಪದ ಲಕ್ಷಣಗಳು ಮತ್ತು ಚಿಹ್ನೆಗಳನ್ನು ನಿರ್ಲಕ್ಷಿಸಬಾರದು. ಆರೋಗ್ಯವಾಗಿ ಇರುವುದಾಗಿ ಕಂಡುಬಂದರೂ ಆಗಾಗ ವೈದ್ಯರ ಬಳಿ ತಪಾಸಣೆ ಮಾಡಿಸುತ್ತಿರಬೇಕು.
3. ಒಬ್ಬರು ಕುಟುಂಬ ವೈದ್ಯರನ್ನು ಹೊಂದಬೇಕು. ಪದೇ ಪದೇ ವೈದ್ಯರ ಬದಲಾವಣೆಯನ್ನು ತಪ್ಪಿಸಬೇಕು. ಸ್ವಯಂ ಔಷಧ ಸೇವನೆ ಮತ್ತು ಸ್ವ ಚಿಕಿತ್ಸೆ ಸರಿಯಲ್ಲ.
4. ಆರೋಗ್ಯಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳಿರುವ ಕಡತವನ್ನು ಇಟ್ಟುಕೊಳ್ಳಿ. ಅಗತ್ಯವಿದ್ದಾಗ ಕುಟುಂಬದವರು ಇದನ್ನು ಮಾಹಿತಿಗಾಗಿ ನೀಡಬಹುದು.
5. ನಿಮ್ಮ ಹೆಸರು, ವಿಳಾಸ, ಸಂಪರ್ಕಿಸಬೇಕಾದ ವ್ಯಕ್ತಿಗಳ ದೂರವಾಣಿ ಸಂಖ್ಯೆಗಳು ಮತ್ತು ವೈದ್ಯರ ಮೊಬೈಲ್ ನಂಬರ್ ಜೊತೆಗೆ ನೀವು ತೆಗೆದುಕೊಳ್ಳುವ ಔಷಧಿಗಳ ವಿವರಗಳನ್ನು ಒಳಗೊಂಡ ಕಾರ್ಡ್ ಸದಾ ನಿಮ್ಮೊಂದಿಗೆ ಇರಲಿ.
6. ವೈದ್ಯರ ಸಲಹ ಇಲ್ಲದೇ ಔಷಧಿಗಳನ್ನು ದಿಢೀರ್ ನಿಲ್ಲಿಸಬೇಡಿ.
7. ಸೋಂಕು ತಡೆಗಟ್ಟುವ ಉತ್ತಮ ರೀತಿಯ ಬಾಯಿ ರಕ್ಷಣೆ ವಿಧಾನಗಳನ್ನು ಅನುಸರಿಸಿ. ಕೃತಕ ದಂತಪಂಕ್ತಿ ಅಳವಡಿಸಿಕೊಳ್ಳಲು ಹಿಂಜರಿಯಬೇಡಿ. ಇದು ಆಹಾರ ಸೇವನೆ, ಜೀರ್ಣಶಕ್ತಿ, ಮಾತನಾಡುವ ಸ್ಪಷ್ಟತೆ ಮತ್ತು ಮುಖ ಲಕ್ಷಣವನ್ನು ವೃದ್ಧಿಸುತ್ತದೆ.
8. ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಸಕ್ರಿಯರಾಗಿರಿ. ಸಮರ್ಪಕ ಬೆಳಕಿನ ವ್ಯವಸ್ಥೆಯಲ್ಲಿ ಓದುವುದು ಮತ್ತು ಬರೆಯುವ ಚಟುವಟಿಕೆಗಳನ್ನು ಮಾಡಿ.
9. ವೃದ್ಧರಿಗೆ ನಿರ್ದಿಷ್ಟ ಆಹಾರ ಕ್ರಮದ ನಿಯಮವಿಲ್ಲ. ಆರೋಗ್ಯಕರ ಆಹಾರ ಸೇವಿಸಿ ಮತ್ತು ಅತಿಯಾಗಿ ತಿನ್ನುವುದನ್ನು ನಿಯಂತ್ರಿಸಿ. ನಾರಿನಾಂಶ ಅಧಿಕವಾಗಿರುವ, ಪಾಣಿ ಜನ್ಯ ಕೊಬ್ಬು ಮತ್ತು ಉಪ್ಪು ಕಡಿಮೆ ಇರುವ ಆಹಾರ ಸೇವಿಸಿ.
10. ಉತ್ತಮ ಮತ್ತು ಪುಷ್ಠಿದಾಯಕ ಉಪಾಹಾರ, ಸಾಧಾರಣ ಪ್ರಮಾಣದ ಮಧ್ಯಾಹ್ನದ ಊಟ ಮತ್ತು ಹಗುರ ರಾತ್ರಿ ಊಟ ಸೇವಿಸಿ. ಆಹಾರದಲ್ಲಿ ಅಧಿಕ ಹಣ್ಣು ಮತ್ತು ತರಕಾರಿಗಳಿರಲಿ. ಸಾಧ್ಯವಾದಷ್ಟು ಕೊಬ್ಬು ಮತ್ತು ಸಾಂಬಾರ ಪದಾರ್ಥಗಳು ಹೆಚ್ಚಾಗಿರುವ ಆಹಾರವನ್ನು ನಿಯಂತ್ರಿಸಿ. ಪ್ರತಿದಿನ 6 ರಿಂದ 8 ಲೀಟರ್‍ಗಳಷ್ಟು ನೀರು ಕುಡಿಯಿರಿ.
11. ಬೀಟ್‍ರೂಟ್ ರಸ ಕುಡಿಯುವುದರಿಂದ ವಯಸ್ಸಾದವರಲ್ಲಿ ಉತ್ಸಾಹ ಮತ್ತು ದೈಹಿಕ ಸಾಮಥ್ರ್ಯ ವೃದ್ಧಿಯಾಗುತ್ತದೆ. ಬೀಟ್‍ರೂಟ್ ರಸ ರಕ್ತನಾಳವನ್ನು ಹಿಗ್ಗಿಸುತ್ತದೆ ಮತ್ತು ಕೆಲಸ ಮಾಡಲು ಬೇಕಾಗುವ ಆಮ್ಲಜನಕದ ಅವಶ್ಯಕತೆಯನ್ನು ತಗ್ಗಿಸುತ್ತದೆ. ಈ ಕೆಂಪು ತರಕಾರಿಯಲ್ಲಿ ಶೋಧಿಸಿರುವ ರಸಕ್ಕಿಂತ ನೈಟ್ರೇಟ್ ಅಧಿಕವಾಗಿರುವ ರಸ ಕುಡಿದವರು ಹೆಚ್ಚು ಕ್ರಿಯಾಶೀಲರಾಗಿರುವುದು ಕಂಡುಬಂದಿದೆ. ವಯೋವೃದ್ಧರಿಗೆ ಬೀಟ್‍ರೂಟ್ ಟಾನಿಕ್‍ನಂತೆ ಕೆಲಸ ಮಾಡಿ ಅವರಲ್ಲಿ ಚೈತನ್ಯ ತುಂಬುವಲ್ಲಿ ನೆರವಾಗುತ್ತದೆ.
12. ನಿಮ್ಮ ಆರೋಗ್ಯಕ್ಕಾಗಿ ಫೋಲಿಕ್ ಆಮ್ಲ ಪೂರೈಕೆಗಾಗಿ ಪ್ರತಿದಿನ ಮಲ್ಟಿ ವಿಟಮಿನ್ ಮಾತ್ರೆಗಳನ್ನು ಸೇವಿಸಿ. ವಿಟಮಿನ್ ಬಿ12, ಡಿ ಮತ್ತು ಇ ಗುಳಿಗೆಗಳ್ನು ಸೇವಿಸುವುದನ್ನು ಮರೆಯದಿರಿ.
13. ಕಠಿಣ ಪರಿಶ್ರಮದ ವ್ಯಾಯಾಮ ಮಾಡಬೇಡಿ. ವಾಕಿಂಗ್‍ನಂಥ ವ್ಯಾಯಾಮ ಉತ್ತಮ. ಯಾವಾಗಲೂ ವಿಶ್ರಾಂತಿ ಅಥವಾ ವಿರಾಮಕ್ಕೆ ಮೊರೆ ಹೋಗಬೇಡಿ. ಸದಾ ಚುರುಕಾಗಿರಲೂ ಪ್ರಯತ್ನಿಸಿ.
14. ಸಾಧ್ಯವಾದಷ್ಟು ಮಟ್ಟಿಗೆ ಹತಾಶೆ, ಖಿನ್ನತೆ, ಯೋಚನೆ, ಆತಂಕ, ಚಿಂತೆ, ಕೋಪ, ಭಯ, ದು:ಖ, ಅಸೂಯೆ, ದ್ವೇಷಗಳಂಥ ಉದ್ವೇಗಗಳನ್ನು ನಿಯಂತ್ರಿಸಿ. ಏಕೆಂದರೆ ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ, ದೈಹಿಕ ಅಸಾಮಥ್ರ್ಯ ತಂದೊಡ್ಡುತ್ತದೆ. ನೆನಪಿರಲಿ ಉದ್ವೇಗ ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟು ಮಾಡುತ್ತದೆ.
ಡಾ. ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್,
82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 080-28413381/2/3/4 ಮೊ.: 97422 74849
www.vims.ac.in