ವಿಟಮಿನ್-ಡಿ ಕೋವಿಡ್-19 ರೋಗ ಸಮುದಾಯದಲ್ಲಿ ತೀವ್ರವಾಗಿ ಹರಡುತ್ತಿರುವ ಈ ಕಾಲಘಟ್ಟದಲ್ಲಿ, ನಮ್ಮ ದೇಹದ ರಕ್ಷಣಾ ವ್ಯವಸ್ಥೆಗೆ ಶಕ್ತಿ ತುಂಬುವ ಕಾರಣದಿಂದಾಗಿ, ವಿಟಮಿನ್ ‘ಡಿ’ ಗೆ ಬಹಳ ಬೇಡಿಕೆ ಮತ್ತು ಮೌಲ್ಯ ಬಂದಿರುವುದಂತೂ ನಿಜವಾಗಿದೆ. ದೇಹದ ಎಲುಬಿನ ಆರೋಗ್ಯ ಕಾಪಾಡಲು ಮತ್ತು ರಕ್ಷಣಾ ವ್ಯವಸ್ಥೆ ಸದೃಢಗೊಳ್ಳಲು ವಿಟಮಿನ್ ‘ಡಿ’ ಅತೀ ಅವಶ್ಯಕ.
ವಿಟಮಿನ್ ‘ಡಿ’ ಎನ್ನುವುದು ಹೆಸರಿಗೆ ಮಾತ್ರ ವಿಟಮಿನ್. ಆದರೆ ಈ ವಿಟಮಿನ್ ಮಾಡುವ ಕೆಲಸ ಕಾರ್ಯಗಳು ಊಹೆಗೂ ನಿಲುಕದ್ದು. ಈ ಕಾರಣದಿಂದ ಈ ವಿಟಮಿನ್ ಅನ್ನು ಹಾರ್ಮೋನುಗಳಿಗೆ ಹೋಲಿಸಲಾಗುತ್ತದೆ. ವಿಟಮಿನ್-ಡಿ ಕೊಬ್ಬಿನಲ್ಲಿ ಕರಗುವ ವಿಟಮಿನ್ ಆಗಿದ್ದು, ನೀರಿನಲ್ಲಿ ಕರಗುವುದಿಲ್ಲ ಮತ್ತು ದೇಹದಲ್ಲಿ ಶೇಖರಣೆಯಾಗುತ್ತದೆ. ದೇಹದಲ್ಲಿ ಕ್ಯಾಲ್ಸಿಯಂನ್ನು ಹೀರಿಕೊಳ್ಳಲು ವಿಟಮಿನ್-ಡಿ ಅತೀಅವಶ್ಯಕ. ಅದೇ ರೀತಿ ದೇಹದ ಎಲುಬಿನ ಆರೋಗ್ಯ ಕಾಪಾಡಲು ಮತ್ತು ರಕ್ಷಣಾ ವ್ಯವಸ್ಥೆ ಸದೃಢಗೊಳ್ಳಲು ವಿಟಮಿನ್ ‘ಡಿ’ ಅತೀ ಅವಶ್ಯಕ.
ವಿಟಮಿನ್ ಡಿ ಎರಡು ರೂಪಗಳಲ್ಲಿ ಕಂಡುಬರುತ್ತದೆ. ವಿಟಮಿನ್ D2 (ಎರ್ಗೊಕ್ಯಾಲ್ಸಿಫೆರಾಲ್) ಮತ್ತು ವಿಟಮಿನ್ D3 (ಕೊಲೆಕ್ಯಾಲ್ಸಿಫೆರಾಲ್) ಎಂಬ ಎರಡು ರೂಪದಲ್ಲಿ ಇರುತ್ತದೆ. ವಿಟಮಿನ್ D3 ಪ್ರಾಣಿಜನ್ಯ ವಿಟಮಿನ್ ಡಿ ಮತ್ತು ವಿಟಮಿನ್ D2 ಸಸ್ಯಜನ್ಯ ವಿಟಮಿನ್ ಡಿ ಆಗಿರುತ್ತದೆ. ನಾವು ಸೂರ್ಯನ ಕಿರಣಗಳಿಗೆ ತೆರೆದುಕೊಂಡಾಗ, ಸೂರ್ಯನ ಕಿರಣಗಳಲ್ಲಿನ ಅಲ್ಟ್ರಾವಯೋಲೆಟ್ ಕಿರಣಗಳ ಸಹಾಯದಿಂದ ನಮ್ಮ ಚರ್ಮ ನೇರವಾಗಿ ವಿಟಮಿನ್ D3 ಯ ಉತ್ಪಾದನೆ ಮಾಡುವ ಸಾಮಥ್ರ್ಯ ಮಾಡುತ್ತದೆ. ಕನಿಷ್ಠ 30 ನಿಮಿಷಗಳ ಕಾಲ ಸೂರ್ಯನ ಎಳೆ ಬಿಸಿಲಿಗೆ ಮೈಯೊಡ್ಡಿದ್ದಲ್ಲಿ ಸಾಕಾಗುತ್ತದೆ. ವಿಟಮಿನ್ ಆ3 ಮತ್ತು ಆ2 ಗಳಲ್ಲಿ ಬಹಳ ವ್ಯತ್ಯಾಸವಿದ್ದು, ವಿಟಮಿನ್ D3 ಹೆಚ್ಚು ಶಕ್ತಿಶಾಲಿಯಾಗಿರುತ್ತದೆ ಮತ್ತು ದೇಹದ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿಸುವಲ್ಲಿ ವಿಟಮಿನ್ D3 ಹೆಚ್ಚು ಪರಿಣಾಮಕಾರಿ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ವಿಟಮಿನ್ ಡಿ ಯಾಕೆ ದೇಹಕ್ಕೆ ಅವಶ್ಯಕ?
‘ವಿಟಮಿನ್’ ಎಂದರೆ ನಮ್ಮ ದೇಹದಲ್ಲಿ ಉತ್ಪಾದನೆ ಆಗದಂತ ಶಕ್ತಿವರ್ಧಕ ವಸ್ತುವಾಗಿರುತ್ತದೆ. ಆದರೆ ವಿಟಮಿನ್ ‘ಡಿ’ ನಮ್ಮ ದೇಹದಲ್ಲಿ ಉತ್ಪಾದನೆಯಾಗುತ್ತದೆ. ಈ ಕಾರಣದಿಂದ ಕೆಲವರು ವಿಟಮಿನ್ ‘ಡಿ’ಯನ್ನು ರಸದೂತ ಎಂದು ವಾದಿಸುತ್ತಾರೆ.
1) ನಮ್ಮ ದೇಹದ ಎಲುಬಿನ ಆರೋಗ್ಯ ಮತ್ತು ಹಲ್ಲಿನ ಆರೋಗ್ಯಕ್ಕೆ ವಿಟಮಿನ್ ಡಿ ಅತೀಅವಶ್ಯಕ. ರಕ್ತದಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ಪ್ರಮಾಣ ನಿಯಂತ್ರಿಸುವಲ್ಲಿ ವಿಟಮಿನ್ ಡಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ. ಮಕ್ಕಳಲ್ಲಿ ವಿಟಮಿನ್ ಡಿ ಕೊರತೆ ಉಂಟಾದಲ್ಲಿ ಬಿಲ್ಲಿನಂತೆ ಬಾಗಿದ ಮೂಳೆಗಳುಳ್ಳ ‘ರಿಕೆಟ್ಸ್’ ಎಂಬ ರೋಗಕ್ಕೆ ಕಾರಣವಾಗುತ್ತದೆ. ವಯಸ್ಕರಲ್ಲಿ ವಿಟಮಿನ್ ಡಿ ಕೊರತೆ ಉಂಟಾದಲ್ಲಿ ಎಲುಬುಗಳು ಮೃದುವಾಗಿ ಬಾಗಿಕೊಂಡು ಎಲುಬಿನ ಸಾಂದ್ರತೆ ಕಡಿಮೆಯಾಗಿ ‘ಆಸ್ಟಿಯೋಮಲೇಷಿಯಾ’ ಎಂಬ ರೋಗಕ್ಕೆ ಕಾರಣವಾಗುತ್ತದೆ. ಅದೇ ರೀತಿ ವಿಟಮಿನ್ ಡಿ ಕೊರತೆಯಿಂದ ‘ಆಸ್ಟಿಯೋಪೊರೋಸಿಸ್’ ಎಂಬ ಟೊಳ್ಳು ಮೂಳೆ ರೋಗಕ್ಕೂ ಕಾರಣವಾಗುತ್ತದೆ. ಒಟ್ಟಿನಲ್ಲಿ ಎಲುಬಿನ ಸಾಂದ್ರತೆಗೆ, ಗಟ್ಡಿತನಕ್ಕೆ ಮತ್ತು ಶಕ್ತವರ್ಧನೆಗೆ ವಿಟಮಿನ್ ಡಿ ಅತೀಅವಶ್ಯಕವಾಗಿರುತ್ತದೆ.
2) ವಿಟಮಿನ್ ಡಿ ದೇಹದ ರಕ್ಷಣಾ ವ್ಯವಸ್ಥೆಯನ್ನು ಸದೃಢಗೊಳಿಸುತ್ತದೆ. ಇನ್‍ಪ್ಲುಯೆಂಜಾ ವೈರಾಣು ಸೋಂಕು ಬರದಂತೆ ತಡೆಯುತ್ತದೆ ಎನ್ನಲಾಗಿದೆ. ಈ ಕಾರಣದಿಂದ ಕೋವಿಡ್-19 ಹಾವಳಿ ಸಂದರ್ಭದಲ್ಲಿ ವೈರಾಣು ಸೋಂಕು ಬರದಂತೆ ತಡೆಯಲು ಎಲ್ಲರಿಗೂ ವಿಟಮಿನ್ ‘ಡಿ’ ಯನ್ನು ಮುಂಜಾಗ್ರತಾ ಕ್ರಮವಾಗಿ ನೀಡುತ್ತಾರೆ.
3) ನಮ್ಮ ದೇಹದ ಕೇಂದ್ರೀಯ ನರಮಂಡಲ ಮತ್ತು ನರವ್ಯೂಹಗಳ ಆರೋಗ್ಯವನ್ನು ಹೆಚ್ಚುತ್ತದೆ.
4) ದೇಹದಲ್ಲಿನ ‘ಇನ್ಸುಲಿನ್’ ರಸದೂತದ ಪ್ರಮಾಣವನ್ನು ನಿಯಂತ್ರಿಸುತ್ತದೆ. ಮತ್ತು ಮಧುಮೇಹ ನಿಯಂತ್ರಣದಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ.
5) ನಮ್ಮ ಶ್ವಾಸಕೋಶ ಮತ್ತು ಹೃದಯದ ಕಾರ್ಯಕ್ಷಮತೆಯನ್ನು ವಿಟಮಿನ್ ‘ಡಿ’ ಹೆಚ್ಚಿಸುತ್ತದೆ.
ವಿಟಮಿನ್ ಡಿ ಕೊರತೆಯ ಲಕ್ಷಣಗಳೇನು?
ವಿಟಮಿನ್ ’ಡಿ’ ಬಹಳ ಉಪಯುಕ್ತ ವಿಟಮಿನ್ ಆಗಿದ್ದು, ದೇಹದ ಬಹುತೇಕ ಜೈವಿಕ ಕ್ರಿಯೆಗಳ ಮೇಲೆ ನೇರವಾದ ನಿಯಂತ್ರಣ ಹೊಂದಿದೆ. ವಿಟಮಿನ್ ’ಡಿ’ ಬೇರೆ ವಿಟಮಿನ್‍ಗಳಂತೆ ಬರೀ ವಿಟಮಿನ್ ಆಗಿ ಕೆಲಸ ಮಾಡುವುದಿಲ್ಲ. ಇದೊಂದು ರಸದೂತದಂತೆ ಅಂದರೆ ಹಾರ್ಮೋನಿಯಂನ ರೀತಿಯಲ್ಲಿ ಕೆಲಸ ಮಾಡುತ್ತದೆ. ದೇಹದ ಪ್ರತಿಯೊಂದು ಜೀವಕೋಶಗಳಲ್ಲಿಯೂ ವಿಟಮಿನ್ ‘ಡಿ’ ಜೋಡಣೆಯಾಗುವ ರಿಸೆಪ್ಟರ್ ಅಥವಾ ವಾಹಕ ಇದೆ. ವಾರ್ಷಿಕವಾಗಿ ವಿಶ್ವದಾದ್ಯಂತ ಸುಮಾರು 1 ಬಿಲಿಯನ್ ಮಂದಿ ವಿಟಮಿನ್ ‘ಡಿ’ ಕೊರತೆಯಿಂದ ಬಳಲುತ್ತಾರೆ. ಕಪ್ಪು ವರ್ಣೀಯರು, ವಯಸ್ಕರು, ಸ್ಥೂಲಕಾಯದವರು, ಸಮುದ್ರಜನ್ಯ ಮತ್ತು ಡೈರಿ ಉತ್ಪನ್ನ ಸೇವಿಸದವರು, ಮನೆಯೊಳಗೆ ಕೆಲಸ ಮಾಡುವವರು, ಸೂರ್ಯನ ಬೆಳಕಿಗೆ ಮೈಯೊಡ್ಡದವರು ಮುಂತಾದವರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚು ಕಂಡು ಬರುತ್ತದೆ.
1) ಬಹಳ ಬೇಗನೆ ಸೋಂಕಿಗೆ ತುತ್ತಾಗುತ್ತಾರೆ. ವಿಟಮಿನ್ ಡಿ ದೇಹದ ರಕ್ಷಣಾ ವ್ಯವಸ್ಥೆಗೆ ಅತೀ ಅವಶ್ಯವಾಗಿದ್ದು, ಅದರ ಕೊರತೆ ಉಂಟಾದಲ್ಲಿ ವೈರಾಣು ಮತ್ತು ಬ್ಯಾಕ್ಟಿರಿಯಾ ಸೋಂಕಿಗೆ ತುತ್ತಾಗುತ್ತಾರೆ. ವಿಟಮಿನ್ ಡಿ ಕೊರತೆ ಇರುವವರು ಹೆಚ್ಚಾಗಿ ಶೀತ, ಕೆಮ್ಮು, ಶ್ವಾಸಕೋಶ ಸಂಬಂಧಿ ಸೋಂಕು, ನ್ಯುಮೋನಿಯಾಗೆ ತುತ್ತಾಗುತ್ತಾರೆ ಎಂದು ತಿಳಿದು ಬಂದಿದೆ. ದಿನವೊಂದಕ್ಕೆ 4000IU ವಿಟಿಮಿನ್ ಡಿ ಸೇವಿಸಿದಲ್ಲಿ ಶ್ವಾಸಕೋಶದ ಸೋಂಕು ತಡೆಗಟ್ಟಬಹುದು ಎಂದು ಅಧ್ಯಯನಗಳಿಂದ ಸಾಬೀತಾಗಿದೆ.
2) ವಿಟಮಿನ್ ಡಿ ಕೊರತೆಯಿಂದ ದಣಿವು, ಸುಸ್ತು, ಆಯಾಸ ಉಂಟಾಗುತ್ತದೆ. ಒಬ್ಬ ವ್ಯಕ್ತಿಯ ದೇಹದಲ್ಲಿ 20ng/ml ಗಿಂತ ಕಡಿಮೆ ವಿಟಮಿನ್ ಡಿ ಇದ್ದಲ್ಲಿ ಅದನ್ನು ಕೊರತೆ ಎಂದು ತಿಳಿಯಲಾಗುತ್ತದೆ.
3) ದೇಹದ ಎಲುಬಿನ ಆರೋಗ್ಯಕ್ಕೆ ವಿಟಮಿನ್ ಡಿ ಅತೀಅವಶ್ಯಕ. ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳಲು ವಿಟಮಿನ್ ಡಿ ಅತ್ಯವಶ್ಯಕ. ದೇಹದಲ್ಲಿ ವಿಟಮಿನ್ ಡಿ ಕೊರತೆ ಇದ್ದಲ್ಲಿ ಬೆನ್ನುನೋವು, ಎಲುಬುನೋವು ಬರುತ್ತದೆ. ಕಾಲುಗಳ ಎಲುಬುಗಳ ನೋವು, ಎದೆಯ ಪಕ್ಕೆಲುಬು ನೋವು ಮತ್ತು ಗಂಟು ನೋವು ಕಂಡು ಬರುತ್ತದೆ.
4) ಖಿನ್ನತೆ, ಬದುಕಿನಲ್ಲಿ ನಿರಾಸಕ್ತಿ ಮತ್ತು ಋಣಾತ್ಮಕ ಮನೋಭಾವ ವಿಟಮಿನ್ ಡಿ ಕೊರತೆಯಿಂದ ಕಂಡು ಬರುತ್ತದೆ.
5) ದೇಹದ ಗಾಯ ಒಣಗುವ ಶಕ್ತಿ ಕುಂಠಿತವಾಗುತ್ತದೆ. ಗಾಯ ಒಣಗಲು, ವಾಸಿಯಾಗಲು, ವಿಟಮಿನ್ ಡಿ ಅತೀ ಅವಶ್ಯಕ.
6) ಎಲುಬಿನ ಸವಕಳಿ ಮತ್ತು ಸವೆತ: ವಿಟಮಿನ್ ಡಿ ಕೊರತೆಯಿದ್ದಲ್ಲಿ ಎಲುಬಿನ ಸಾಂದ್ರತೆ ಕಡಿಮೆಯಾಗಿ ಸರಿಯಾಗಿ ಕ್ಯಾಲ್ಸಿಯಂ ದೊರಕದೆ ಹೋಗಿ ಟೊಳ್ಳು ಮೂಳೆ ರೋಗ ಉಂಟಾಗಬಹುದು. ವಿಟಮಿನ್ ಡಿ ನೇರವಾಗಿ ಎಲುಬಿನ ಸಾಂದ್ರತೆ ಮೇಲೆ ಪರಿಣಾಮ ಬೀರುತ್ತದೆ.
7) ಕೂದಲು ಉದುರುವಿಕೆ ಕೂಡಾ ವಿಟಮಿನ್ ಡಿ ಕೊರತೆಯಿಂದ ಉಂಟಾಗಬಹುದು. ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು ಕಂಡು ಬರುತ್ತದೆ. ಖಿನ್ನತೆ ಕೂಡಾ ಕೂದಲು ಉದುರುವಿಕೆಗೆ ಪರೋಕ್ಷವಾಗಿ ಕಾರಣವಾಗಬಹುದು.
8) ವಿಟಮಿನ್ ಡಿ ಕೊರತೆಯಿಂದ ಸ್ನಾಯುಸೆಳೆತ ಮತ್ತು ನೋವು ಬರುವ ಸಾಧ್ಯತೆ ಇದೆ. ವಿಟಮಿನ್ ಡಿ ಕೊರತೆ ಪತ್ತೆಹಚ್ಚುವುದು ಬಹಳ ಸುಲಭ ಮತ್ತು ಚಿಕಿತ್ಸೆ ಕೂಡಾ ಬಹಳ ಸರಳ. ವಿಟಮಿನ್ ‘ಡಿ’ ಮಾತ್ರೆಗಳು ಮತ್ತು ವಿಟಮಿನ್ ಡಿ ಜಾಸ್ತಿ ಇರುವ ಆಹಾರ ಸೇವಿಸಬೇಕು. ಬಹಳಷ್ಟು ಬಾರಿ ಈ ಕಾಯಿಲೆ ಗೋಚರಿಸದೆ ಇರಬಹುದು ಮತ್ತು ನಿಧಾನವಾಗಿ ಈ ಲಕ್ಷಣಗಳು ಗೋಚರಿಸುತ್ತದೆ.
ಎಷ್ಟು ಬೇಕು?
ವಿಟಮಿನ್ ‘ಡಿ’ ಕೊಬ್ಬಿನಲ್ಲಿ ಕರಗುವ ವಿಟಮಿನ್ ಆಗಿದ್ದು, ದೇಹದಿದ ಬಹಳ ಸುಲಭವಾಗಿ ಹೊರಗೆ ಹೋಗುವುದಿಲ್ಲ. ಅಗತ್ಯಕ್ಕಿಂತ ಜಾಸ್ತಿ ಸೇವನೆ ಮಾಡಿದಲ್ಲಿ ದೇಹದೆಲ್ಲೆಡೆ ಶೇಖರಣೆಯಾಗುತ್ತದೆ. ಅಗತ್ಯಕ್ಕಿಂತ ಜಾಸ್ತಿ ವಿಟಮಿನ್ ಡಿ ದೇಹದಲ್ಲಿ ಸೇರಿಕೊಂಡರೆ ತೊಂದರೆ ಉಂಟಾಗಬಹುದು. ಇದನ್ನು ಹೈಪರ್ ವಿಟಮಿನೋಸಿನ್ ಡಿ ಎನ್ನುತ್ತಾರೆ. ವಿಟಮಿನ್ ‘ಡಿ’ ದೇಹದಲ್ಲಿ ಸ್ಟಿರಾಯ್ಡ್ ಹಾರ್ಮೋನಿನಂತೆ ಕೆಲಸ ಮಾಡುತ್ತದೆ. ಜೀವಕೋಶದೊಳಗೆ ಸೇರಿಕೊಂಡು ವರ್ಣತಂತುಗಳ ಮೇಲೆ ನಿಯಂತ್ರಣ ಸಾಧಿಸುತ್ತದೆ. ದೇಹದಲ್ಲಿ ವಿಟಮಿನ್ ಡಿ ಜಾಸ್ತಿಯಾದಂತೆ ಕ್ಯಾಲ್ಸಿಯಂ ಕೂಡಾ ಜಾಸ್ತಿಯಾಗುತ್ತದೆ. ಒಬ್ಬ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ 20-30ng/ml ವಿಟಮಿನ್ ಡಿ ಇರುತ್ತದೆ. 60ng/ml ಗಿಂತ ಜಾಸ್ತಿಯಾದಲ್ಲಿ ವಿಟಮಿನ್ ಡಿ ಜಾಸ್ತಿ ಇದೆ ಎಂದರ್ಥ. 150ng/ml ಗಿಂತ ಜಾಸ್ತಿ ಇದ್ದಲ್ಲಿ ವಿಪರೀತ ತೊಂದರೆಗಳು ಕಂಡು ಬರುತ್ತದೆ. ಒಬ್ಬ ವ್ಯಕ್ತಿಗೆ ದಿನವೊಂದಕ್ಕೆ 1000 ದಿಂದ 4000 IU ಅಥವಾ 25 ರಿಂದ 100 ಮೈಕ್ರೋಗ್ರಾಂನಷ್ಟು ವಿಟಮಿನ್ ಡಿ ಅವಶ್ಯಕತೆ ಇರುತ್ತದೆ.
ಎಲ್ಲಿ ದೊರಕುತ್ತದೆ?
1) ಸಾಲ್ಮನ್ ಎಂಬ ಮೀನಿನಲ್ಲಿ ಅತ್ಯಧಿಕ ವಿಟಮಿನ್ ಡಿ ಇರುತ್ತದೆ. ಹೆಚ್ಚಿನ ಎಲ್ಲಾ ಮೀನುಗಳಲ್ಲಿ ವಿಟಮಿನ್ ಡಿ ಇರುತ್ತದೆ.
2) ಕಾಡ್‍ಲಿವರ್ ಆಯಿಲ್‍ನಲ್ಲಿ (ಮೀನಿನ ಎಣ್ಣೆ) ಹೇರಳವಾಗಿ ವಿಡಮಿನ್ ಡಿ, ವಿಟಮಿನ್ ಎ ಮತ್ತು 3-ಓಮೆಗಾ ಪ್ಯಾಟಿ ಆಸಿಡ್ ಇರುತ್ತದೆ. ಹೆಚ್ಚಿನ ಎಲ್ಲಾ ಸಮುದ್ರ ಜನ್ಯ ಪದಾರ್ಥಗಳಲ್ಲಿ ವಿಟಮಿನ್ ಡಿ ಹೇರಳವಾಗಿರುತ್ತದೆ.
3) ಮೊಟ್ಟೆ ಬಹಳ ಒಳ್ಳೆಯ ವಿಟಮಿನ್ ಡಿ ಯುಕ್ತ ಆಹಾರವಾಗಿರುತ್ತದೆ. ಮೊಟ್ಟೆಯ ಬಿಳಿಯಭಾಗದಲ್ಲಿ ಹೆಚ್ಚಿನ ಪ್ರೊಟೀನ್ ಇದ್ದಲ್ಲಿ ಹಳದಿ ಭಾಗದಲ್ಲಿ ವಿಟಮಿನ್ ಮಿನರಲ್ ಮತ್ತು ಕೊಬ್ಬು ಇರುತ್ತದೆ.
4) ಅಣಬೆ ಅಥವಾ ಮಶ್ರೂಮ್‍ಗಳಲ್ಲಿಯೂ ವಿಟಮಿನ್ ‘ಡಿ’ ಹೇರಳವಾಗಿದೆ. ಅಣಬೆಗಳು ಕೂಡಾ ಮನುಷ್ಯರಂತೆ ಸೂರ್ಯನ ಕಿರಣಗಳಿಂದ ವಿಟಮಿನ್ ಡಿ ಉತ್ಪಾದಿಸುತ್ತದೆ. ಪ್ರಾಣಿಗಳಲ್ಲಿ ವಿಟಮಿನ್ ಡಿ3 ಇದ್ದಲ್ಲಿ ಮಶ್ರೂಮ್ ಗಳಲ್ಲಿ ವಿಟಮಿನ್ ಡಿ2 ಇರುತ್ತದೆ. ಕಾಡುಗಳಲ್ಲಿ ಬೆಳೆದ ಮಶ್ರೂಮ್‍ಗಳಲ್ಲಿ ಹೆಚ್ಚು ವಿಟಮಿನ್ ಡಿ ಇರುತ್ತದೆ.
5) ದನದ ಹಾಲಿನಲ್ಲಿ ಕೂಡಾ ಹಿತಮಿತವಾದ ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ರೈಬೋಪಾವಿನ್ ಇರುತ್ತದೆ. ಇದಕ್ಕೆ ವಿಟಮಿನ್ ಡಿ ಸೇರಿಸಲಾಗುತ್ತದೆ. ಅದೇ ರೀತಿ ಕಿತ್ತಳೆ ಹಣ್ಣಿನ ರಸಕ್ಕೆ ವಿಟಮಿನ್ ಡಿ ಸೇರಿಸಿ ಸಸ್ಯಾಹಾರಿಗಳಿಗೆ ವಿಟಮಿನ್ ಡಿ ಕೊರತೆ ಉಂಟಾಗದಂತೆ ಮಾಡಲಾಗುತ್ತದೆ.
ಹೇಗೆ ದೊರಕುತ್ತದೆ?
ವಿಟಮಿನ್ ಡಿ3 ಮಾತ್ರೆಯ ರೂಪದಲ್ಲಿ, ನೀರಿನಲ್ಲಿ ಕರಗಿಸಿ ಕುಡಿಯಬಹುದಾದ ಪೌಡರ್ ರೂಪದಲ್ಲಿ ಕೂಡಾ ಲಭ್ಯವಿದೆ. ವಿಟಮಿನ್ ಡಿ3 ಕ್ಯಾಪ್ಸೂಲ್ ರೂಪದಲ್ಲಿಯೂ ಲಭ್ಯವಿದೆ. ಮಕ್ಕಳಿಗೆ ಮತ್ತು ವಯಸ್ಕರಿಗೆ ದಿನವೊಂದಕ್ಕೆ 1000 IU ವಿಟಮಿನ್ ಡಿ ಅವಶ್ಯವಿರುತ್ತದೆ. 70 ವರ್ಷ ದಾಟಿದವರಿಗೆ ದಿನವೊಂದಕ್ಕೆ 1500 IU ನಷ್ಟು ವಿಟಮಿನ್ ಡಿ ಅವಶ್ಯವಿರುತ್ತದೆ. ದೇಹದ ಆರೋಗ್ಯ, ದೇಹದ ತೂಕ ಇವೆಲ್ಲವನ್ನೂ ತಾಳೆ ಹಾಕಿ ವೈದ್ಯರು ದಿನವೊಂದಕ್ಕೆ ನಿಮಗೆ ಎಷ್ಟು ವಿಟಮಿನ್ ಡಿಯ ಅವಶ್ಯಕತೆ ಇದೆ ಎಂದು ನಿರ್ಧರಿಸುತ್ತಾರೆ. ನಿಮ್ಮ ಕುಟುಂಬ ವೈದ್ಯರ ಸಲಹೆಯಂತೆ ವಿಟಮಿನ್ ಡಿ ಔಷಧಿ ಸೇವಿಸತಕ್ಕದ್ದು. ಈಗೆ ಕೋವಿಡ್ -19 ಹಾವಳಿಯ ಸಂದರ್ಭದಲ್ಲಿ ವಿಟಮಿನ್ ಡಿ, ವಿಟಮಿನ್ ಸಿ ಮತ್ತು ಸತು ಇರುವ ಔಷಧಿಗಳು ಲಭ್ಯವಿದ್ದು ವೈದ್ಯರ ಸಲಹೆಯಂತೆ ಸೇವಿಸಬಹುದಾಗಿದೆ.
ಕೊನೆಮಾತು:
ವಿಟಮಿನ್ ಡಿ ಎನ್ನುವುದು ಬಹಳ ವಿಶಿಷ್ಟವಾದ ವಿಟಮಿನ್ ಆಗಿದ್ದು, ದೇಹದ ಬಹಳಷ್ಟು ಜೈವಿಕ ಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಕಾರ್ಯಕ್ಷಮತೆಯಲ್ಲಿ ರಸದೂತದಂತೆ ವರ್ತಿಸುವ ಈ ವಿಟಮಿನ್ ದೇಹದ ಬಹಳಷ್ಟು ಅಂಗಾಂಗಗಳ ಆರೋಗ್ಯಕ್ಕೆ ಬಹಳ ಅವಶ್ಯಕವಾಗಿರುತ್ತದೆ. ಕೋವಿಡ್-19 ರೋಗ ಸಮುದಾಯದಲ್ಲಿ ತೀವ್ರವಾಗಿ ಹರಡುತ್ತಿರುವ ಈ ಕಾಲಘಟ್ಟದಲ್ಲಿ, ವಿಟಮಿನ್ ಡಿ ನಮ್ಮ ದೇಹದ ರಕ್ಷಣಾ ವ್ಯವಸ್ಥೆಗೆ ಶಕ್ತಿ ತುಂಬುವ ಕಾರಣದಿಂದಾಗಿ, ವಿಟಮಿನ್ ‘ಡಿ’ ಗೆ ಬಹಳ ಬೇಡಿಕೆ ಮತ್ತು ಮೌಲ್ಯ ಬಂದಿರುವುದಂತೂ ನಿಜವಾಗಿದೆ.
ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ, ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111 ಮೊ.: 9845135787
www.surakshadental.com