Vydyaloka

ಉದರ ಕ್ಯಾನ್ಸರ್-ನಿಯಂತ್ರಣ ಹೇಗೆ?

ಉದರ ಕ್ಯಾನ್ಸರ್ ವಿಶ್ವದ ಭಯಾನಕ ರೋಗಗಳಲ್ಲಿ  ಒಂದು. ಅಮೆರಿಕ ಮತ್ತು ಪಶ್ಚಿಮ ಯುರೋಪ್‍ನಲ್ಲಿ ಕಳೆದ 60 ವರ್ಷಗಳಲ್ಲಿ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿದ್ದರೂ, ಪ್ರಪಂಚದ ವಿವಿಧ ಭಾಗಗಳಲ್ಲಿ ಈ ಮಾರಕ ರೋಗವು ಒಂದು ಗಂಭೀರ ಸಮಸ್ಯೆಯಾಗಿಯೇ ಉಳಿದಿದ್ದು, ಅಲ್ಲಿ  ಸಾವಿಗೆ ಪ್ರಮುಖ ಕಾರಣವಾಗಿದೆ.

ಉದರ ಕ್ಯಾನ್ಸರ್‍ಗೆ ಕಾರಣವಾಗುವ ಎರಡು ಪ್ರಮುಖ ಅಂಶಗಳಿಗೂ ಮತ್ತು ಜಾಗತಿಕ ಏರಿಳಿತಗಳಿಗೂ ಒಂದಕ್ಕೊಂದು ಸಂಬಂಧವಿದೆ. ಹೆಲಿಕೊಬ್ಯಾಕ್ಟರ್ ಪೈಲೊರಿ-ಎಚ್ ಪೈಲೊರಿ ಸೋಂಕು ಬ್ಯಾಕ್ಟೀರಿಯಾ ಹಾಗೂ ಆಹಾರ ಕ್ರಮ ಇವು ಉದರ ಕ್ಯಾನ್ಸರ್‍ಗೆ ಬಹು ಮುಖ್ಯ ಕಾರಣಗಳು. ಆಹಾರಗಳನ್ನು ಸಂರಕ್ಷಿಸಿಡುವ ರೆಫ್ರಿಜೇಷನ್ ಕೊರತೆ ಇರುವ ಪ್ರದೇಶಗಳಲ್ಲಿ ಬಳಸುವ ಆಹಾರಗಳಲ್ಲಿ ಅಧಿಕ ಉಪ್ಪು ಮತ್ತು ಖಾರ, ಮಸಾಲೆ ಪದಾರ್ಥಗಳು ಯಥೇಚ್ಚವಾಗಿರುವುದರಿಂದ ಹೊಟ್ಟೆಯ ಅರ್ಬುದ ರೋಗಕ್ಕೆ ಕಾರಣವಾಗಬಹುದು.

ಉದರ ಕ್ಯಾನ್ಸರ್ ಆರಂಭದಲ್ಲೇ ಪತ್ತೆಯಾದರೆ ಚಿಕಿತ್ಸೆ ಸುಲಭ. ದುರದೃಷ್ಟವಶಾತ್, ಆ ವೇಳೆಗಾಗಲೇ ಉದರ ಕ್ಯಾನ್ಸರ್ ಗಂಭೀರ ಸ್ವರೂಪದ ರೋಗ ಲಕ್ಷಣಗಳನ್ನು ಹೊರಗೆಡವಿರುತ್ತದೆ. ಬಹುತೇಕ ಎಲ್ಲ ಕ್ಯಾನ್ಸರ್‍ನಂತೆ ಉದರ ಕ್ಯಾನ್ಸರ್ ಕೂಡ ಮುಂದುವರಿದ ಹಂತದಲ್ಲಿ ಪತ್ತೆಯಾಗಿ ಉದರವನ್ನು ಮೀರಿ ದೇಹದ ಇತರ ಸ್ಥಳಗಳನ್ನು ವ್ಯಾಪಿಸಿರುತ್ತದೆ. ಆದರೂ, ಇಲ್ಲೊಂದು ಸಮಾಧಾನಕರ ಸುದ್ದಿ ಇದೆ. ನಿಮ್ಮ ಜೀವನ ಶೈಲಿಯಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡರೆ ಉದರ ಕ್ಯಾನ್ಸರ್ ಗಂಡಾಂತರದಿಂದ ಪಾರಾಗಬಹುದು.

ರೋಗ ಲಕ್ಷಣಗಳು ಮತ್ತು ಚಿಹ್ನೆಗಳು :

ಉದರ ಕ್ಯಾನ್ಸರ್‍ನ ಆರಂಭಿಕ ಲಕ್ಷಣವೆಂದರೆ ಸೂಕ್ಷ್ಮದರ್ಶಕದಲ್ಲಿ ಕಂಡುಬರುವ ಆಂತರಿಕ ರಕ್ತಸ್ರಾವ. ಮಲ ವಿಸರ್ಜನೆಯಲ್ಲಿ ರಕ್ತಸ್ರಾವ ಕಂಡುಬಂದಾಗ, ಇದನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಮಾತ್ರ ಇದು ಗೋಚರಿಸುತ್ತದೆ. ರಕ್ತಸ್ರಾವದಿಂದ ಆರೋಗ್ಯಕರ ಕೆಂಪುರಕ್ತ ಕಣಗಳು ತುಂಬಾ ಸಂಖ್ಯೆಯಲ್ಲಿ ನಷ್ಟವಾದಾಗ ನಿಮಗೆ ತುಂಬಾ ಆಯಾಸದ ಅನುಭವವಾಗುತ್ತದೆ. ಎದೆ ಉರಿ ಮತ್ತು ಹೊಟ್ಟೆ ನೋವು ಉದರ ಕ್ಯಾನ್ಸರ್‍ನ ಆರಂಭಿಕ ಲಕ್ಷಣಗಳು. ಅನೇಕರು ಈ ಎರಡು ಬಾಧೆಯನ್ನು ಸಾಮಾನ್ಯ ಸಮಸ್ಯೆಗಳು ಎಂದು ತಪ್ಪಾಗಿ ಭಾವಿಸುವುದರಿಂದ ಉದರ ಕ್ಯಾನ್ಸರ್ ಉಲ್ಬಣಗೊಂಡು ಅಪಾಯಕಾರಿ ಹಂತಕ್ಕೆ ಕೊಂಡೊಯ್ಯತ್ತದೆ.

ಉದರ ಕ್ಯಾನ್ಸರ್‍ನ ತೀವ್ರತೆ ಹೆಚ್ಚಾದಾಗ ಈ ಕೆಳಗೆ ಸೂಚಿಸಲಾದ ಚಿಹ್ನೆ ಮತ್ತು ಲಕ್ಷಣಗಳು ಗೋಚರಿಸುತ್ತವೆ. ಹೊಟ್ಟೆಯ ಮೇಲ್ಭಾಗ ಮತ್ತು ಮಧ್ಯ ಭಾಗದಲ್ಲಿ ಕಿರಿಕಿರಿ ಉಂಟಾಗುತ್ತದೆ. ಆಹಾರ ಅಥವಾ ಹೊಟ್ಟೆನೋವು ಶಮನ ಮಾಡುವ ಔಷಧಿಗಳಿಂದ ಈ ಸಮಸ್ಯೆ ನಿವಾರಣೆಯಾಗದು (ಆರಂಭಿಕ ಹಂತದ ಉದರ ಕ್ಯಾನ್ಸರ್ ಪ್ರಕರಣದಲ್ಲಿ ಆಹಾರ ಅಥವಾ ಹೊಟ್ಟೆನೋವು ಶಮನ ಮಾಡುವ ಔಷಧಿಗಳಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ).

1. ಕಪ್ಪು ಮಿಶ್ರ್ರಿತ ಮಲ ವಿಸರ್ಜನೆ

2. ರಕ್ತವಾಂತಿ

3. ಊಟದ ನಂತರ ವಾಕರಿಕೆ, ವಾಂತಿ

4. ದುರ್ಬಲತೆ ಮತ್ತು ಮಾನಸಿಕ ಖಿನ್ನತೆ

5. ವಿನಾಕಾರಣ ದೇಹತೂಕ ಇಳಿಕೆ

6. ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಿದರೂ ಹೊಟ್ಟೆ ತುಂಬಿದ ಭಾವನೆ

ಈ ಮೇಲೆ ತಿಳಿಸಲಾದ ಒಂದು ಅಥವಾ ಎರಡಕ್ಕಿಂತ ಹೆಚ್ಚು ಚಿಹ್ನೆ ಮತ್ತು ಲಕ್ಷಣಗಳನ್ನು ಉದರ ಕ್ಯಾನ್ಸರ್ ಎಂದು ವ್ಯಾಖ್ಯಾನಿಸಲಾಗದು. ವಿಶೇಷವಾಗಿ ಪೆಪ್ಟಿಕ್ ಅಲ್ಸರ್ (ಪಾಚಕ ಹೊಟ್ಟೆ ಹುಣ್ಣು) ರೋಗದಲ್ಲೂ ಇದೇ ರೀತಿಯ ಸಮಸ್ಯೆಗಳು ಕಂಡುಬರುತ್ತವೆ.

ಉದರ ಕ್ಯಾನ್ಸರ್‍ಗೆ ಕಾರಣಗಳು :

ನಿಮ್ಮ ಹೊಟ್ಟೆಯು ಮಾಂಸಪುಷ್ಟಿಯುಳ್ಳ ಭಾಗವಾಗಿದ್ದು, ಉದರವು ಪಕ್ಕೆಲುಬುಗಳ ಕೆಳಗೆ ಇರುತ್ತದೆ. ಹೊಟ್ಟೆಯು ಮೂರು ಬಲಿಷ್ಠ ಮಾಂಸಖಂಡಗಳ ಪದರಗಳನ್ನು ಹೊಂದಿದ್ದು, ಹೊಟ್ಟೆಯ ಒಳಭಾಗದಲ್ಲಿನ ಗ್ರಂಥಿಗಳು ಉತ್ಪಾದಿಸುವ ಕಿಣ್ವ ಮತ್ತು ಆಮ್ಲದ ಜೊತೆ ಅಹಾರವನ್ನು ಮಿಶ್ರಣ ಮಾಡುತ್ತದೆ. ಇವು ಹೊಟ್ಟೆಯ ಸೂಕ್ಷ್ಮ ಜೀವಕೋಶವಾಗಿದ್ದು ದಪ್ಪ ಮತ್ತು ಜೆಲ್ಲಿಯಂಥ ಲೋಳೆಯಿಂದ ಈ ಆಮ್ಲ ಮಿಶ್ರಣವಾಗಿ ಪದರವನ್ನು ಲೇಪಿಸುವುದರಿಂದ ಅದು ಉದರಕ್ಕೆ ರಕ್ಷಾಕವಚವಾಗುತ್ತದೆ.

ಉದರ ಕ್ಯಾನ್ಸರ್‍ಗೆ ಹಲವಾರು ಕಾರಣಗಳಿವೆ. ನಮ್ಮ ದೇಹದ ಶಕ್ತಿಕೇಂದ್ರವಾಗಿರುವ ಡಿಎನ್‍ಎಗೆ ಹಾನಿಯಾದಾಗ ವಂಶವಾಹಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಇದರಿಂದ ಕೋಶಗಳು ಹತೋಟಿ ಮೀರಿ ಬೆಳೆಯುತ್ತವೆ. ಹೀಗಾಗಿ ಉದರದಲ್ಲಿ ಗಡ್ಡೆಗಳು ವೃದ್ಧಿಯಾಗುತ್ತದೆ. ಉದರ ಕ್ಯಾನ್ಸರ್‍ಗೆ ಪ್ರಮುಖ ಕಾರಣ ಕಾರ್ಕ್ ಸ್ಕ್ರೂ ಆಕಾರದ ಬ್ಯಾಕ್ಟೀರಿಯಾ. ಈ ಬ್ಯಾಕ್ಟೀರಿಯಾಗೆ ಹೆಲಿಕೊಬ್ಯಾಕ್ಟರ್ ಪೈಲೊರಿ-ಎಚ್ ಪೈಲೊರಿ ಸೋಂಕು ಬ್ಯಾಕ್ಟೀರಿಯಾ ಎನ್ನುತ್ತಾರೆ. ಉದರ ಪದರವನ್ನು ರಕ್ಷಿಸುವ ಲೋಳೆಯ ಆಳದಲ್ಲಿ ಈ ಬ್ಯಾಕ್ಟೀರಿಯಾ ಕಂಡುಬರುತ್ತದೆ.

ಆಹಾರಕ್ಕೆ ಸೇರಿಸಲ್ಪಡುವ ನೈಟ್ರೋಜೆನ್ ಮೂಲದ ರಾಸಾಯನಿಕಗಳು ಉದರ ಕ್ಯಾನ್ಸರ್‍ಗೆ ಕಾರಣವಾಗುತ್ತದೆ. ಮಾಂಸ ಮತ್ತು ಇತರ ಕರಿದ-ಹುರಿದ ಪದಾರ್ಥಗಳಿಗೆ ನೈಟ್ರೋಜೆನ್ ಸೇರಲ್ಪಡುವುದರಿಂದ ಉದರದಲ್ಲಿ ರಾಸಾಯನಿಕ ಕ್ರಿಯೆಗೆ ಎಡೆ ಮಾಡಿಕೊಡುತ್ತದೆ. ಉಪ್ಪಿನಲ್ಲಿ ಸಂರಕ್ಷಿಸಲ್ಪಡಲಾದ ಆಹಾರ ಪದಾರ್ಥಗಳಲ್ಲೂ ನೈಟ್ರೋಜೆನ್ ಇರುವುದರಿಂದ ಕ್ಯಾನ್ಸರ್‍ಗೆ ದಾರಿಯಾಗುತ್ತದೆ. ತಂಬಾಕು ಮತ್ತು ಮದ್ಯಪಾನ ಮಾಡುವವರಿಗೂ ಉದರ ಕ್ಯಾನ್ಸರ್ ಅಮರಿಕೊಳ್ಳುತ್ತದೆ. ಉದರದ ಪದರಕ್ಕೆ ತಂಬಾಕು ಕಿರಿಕಿರಿ ಉಂಟು ಮಾಡುತ್ತದೆ. ಧೂಮಪಾನ ಮಾಡುವವರಿಗೆ ಉದರ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ. ಹಾಗೆಯೇ ಆಲ್ಕೋಹಾಲ್‍ಗೂ ಉದರ ಕ್ಯಾನ್ಸರ್‍ಗೂ ಒಂದಕ್ಕೊಂದು ಸಂಬಂಧವಿದೆ.

ಉದರ ಕ್ಯಾನ್ಸರ್ ವಿಧಗಳು :

1. ಅಡಿನೋ ಕಾರ್ಸಿನೊಮಸ್

2. ಲಿಂಥೋಮಸ್

3. ಕಾರ್ಸಿನೊಯಡ್ ಟ್ಯುಮರ್ಸ್

4. ಗ್ಯಾಸ್ಟ್ರೋ ಇನ್ ಟೆಸ್ಟಾನಲ್ ಸ್ಟ್ರೋಮಲ್ ಟ್ಯುಮರ್ಸ್

ಗಂಡಾಂತರಕಾರಿ ಅಂಶಗಳು :
ಉದರ ಕ್ಯಾನ್ಸರ್‍ಗೆ ಕಾರಣವಾಗುವ ಇತರ ಅಂಶಗಳೆಂದರೆ

1. ಲಿಂಗ : ಮಹಿಳೆಯರಿಗಿಂತ ಪುರುಷರಲ್ಲಿ ಉದರ ಕ್ಯಾನ್ಸರ್‍ನ ಸಂಭವಾಂಶ ಎರಡು ಪಟ್ಟು ಹೆಚ್ಚಾಗಿರುತ್ತದೆ.

2. ವಯೋಮಾನ : 50 ವರ್ಷಗಳಿಗಿಂತ ಮೇಲ್ಪಟ್ಟವರಿಗೆ ಬಹುತೇಕ ಉದರ ಕ್ಯಾನ್ಸರ್ ಬರಬಹುದು.

3. ಆಹಾರ : ನಾವು ಸೇವಿಸುವ ಆಹಾರಕ್ಕೂ ಮತ್ತು ಉದರ ಕ್ಯಾನ್ಸರ್‍ಗೂ ನೇರ ನಂಟಿದೆ. ಆಹಾರದಲ್ಲಿನ ರಾಸಾಯನಿಕ ವಸ್ತುಗಳು ಉದರ ಕ್ಯಾನ್ಸರ್‍ಗೆ ಎಡೆ ಮಾಡಿಕೊಡುತ್ತವೆ.

4. ತಂಬಾಕು ಸೇವನೆ

5. ಈ ಹಿಂದೆ ಉದರ ಶಸ್ತ್ರಚಿಕಿತ್ಸೆಗೆ ಒಳಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿದ್ದರೆ ಅದು ಉದರ ಕ್ಯಾನ್ಸರ್‍ಗೆ ಕಾರಣವಾಗುತ್ತದೆ.

6. ಕೌಟುಂಬಿಕ ಹಿನ್ನೆಲೆ

7. ಟೈಪ್ ಎ ರಕ್ತ

8. ಸ್ಥೂಲಕಾಯ, ಬೊಜ್ಜು, ಅಧಿಕ ತೂಕ

ವೈದ್ಯರ ಸಲಹೆ :

ಉದರ ಕ್ಯಾನ್ಸರ್ ಆರಂಭದಲ್ಲೇ ಪತ್ತೆಯಾದರೆ ಚಿಕಿತ್ಸೆ ಸುಲಭ. ಆದರೆ ಎಲ್ಲ ಕ್ಯಾನ್ಸರ್‍ನಂತೆ ಈ ರೋಗವು ಪತ್ತೆಯಾಗುವುದು ಮುಂದುವರಿದ ಹಂತದಲ್ಲಿ. ಮೇಲೆ ತಿಳಿಸಲಾದ ರೋಗ ಚಿಹ್ನೆ ಮತ್ತು ಲಕ್ಷಣಗಳು ಗೋಚರಿಸಿದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸಲಹೆ, ಮಾರ್ಗದರ್ಶನ ಮತ್ತು ಸೂಚನೆ ಪಡೆದು ಚಿಕಿತ್ಸೆ ಪ್ರಾರಂಭಿಸಬೇಕು.

ರೋಗ ಪರೀಕ್ಷೆ ಮತ್ತು ಪ್ರಯೋಗಗಳು :
ಈ ಕೆಳಕಂಡ ರೋಗ ನಿರ್ಧಾರ ಪರೀಕ್ಷೆಗಲ ಮೂಲಕ ಉದರ ಕ್ಯಾನ್ಸರ್‍ನನ್ನು ಪತ್ತೆ ಮಾಡಬಹುದು.

ಎಂಡೋಸ್ಕೋಪಿ, ಉದರ ಎಕ್ಸ್-ರೇ, ಎಂಡೋಸ್ಕೋಪಿಕ್ ಆಲ್ಟ್ರಾಸೌಂಡ್, ಸಿ ಟಿ ಸ್ಕ್ಯಾನ್, ಮ್ಯಾಗ್ನೇಟಿಕ್ ರಿಸೋನನಸ್ ಇಮೇಜಿಂಗ್ (ಎಂಆರ್‍ಐ), ಎದೆ ಎಕ್ಸ್-ರೇ.

ಚಿಕಿತ್ಸೆ ಮತ್ತು ಔಷಧಿಗಳು :

ಉದರ ಕ್ಯಾನ್ಸರ್‍ಗೆ ವೈದ್ಯರ ಸಲಹೆ ಮತ್ತು ಮಾರ್ಗದರ್ಶನದ ಮೇರೆಗೆ ಚಿಕಿತ್ಸೆ ಮತ್ತು ಔಷಧಿಗಳನ್ನು ಪಡೆಯಬೇಕು

1. ಶಸ್ತ್ರಚಿಕಿತ್ಸೆ

2. ಕೆಮೋಥೆರಪಿ

3. ರೇಡಿಯೇಷನ್ ಥೆರಪಿ (ವಿಕಿರಣ ಚಿಕಿತ್ಸೆ)

4. ಆಂಟಿಬಯೋಟಿಕ್ (ರೋಗನಾಶಕಗಳು)

5. ಡ್ರಗ್ ಥೆರಪಿ (ಔಷಧಿ ಚಿಕಿತ್ಸೆ)

ಉದರ ಕ್ಯಾನ್ಸರ್ ನಿಯಂತ್ರಣ:

1. ತಾಜಾ ಹಣ್ಣು-ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು.

2. ನೈಟ್ರೋಜೆನ್‍ಯುಕ್ತ ಆಹಾರ ಪದಾರ್ಥಗಳಿಂದ ಸಾಧ್ಯವಾದಷ್ಟೂ ದೂರವಿರಬೇಕು.

3. ಉಪ್ಪಿನಲ್ಲಿ ಸಂರಕ್ಷಿಸಿದ ಆಹಾರ ಸೇವನೆ ಕಡಿಮೆ ಮಾಡಬೇಕು.

4. ಧೂಮಪಾನ ನಿಲ್ಲಿಸಬೇಕು.

5. ಆಲ್ಕೋಹಾಲ್ ಪ್ರಮಾಣವನ್ನು ಕಡಿಮೆ ಮಾಡಬೇಕು.

6. ಕೆಂಪು ಮಾಂಸವನ್ನು ವರ್ಜಿಸಬೇಕು.

7. ಹೊಟ್ಟೆಯಲ್ಲಿ ಹುಣ್ಣುಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಕಾಣಬೇಕು.

ಡಾ. ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066

ಫೋನ್ : +91-80-49069000, +91-80-28413382, +91-80-28410871/2/3/4 

 www.vims.ac.in

Share this: